ಮನೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಮಾಡ್ಯುಲರ್‌ ಕಿಚನ್‌ ಆಹಾರ ಸಿದ್ಧಪಡಿಸುವ ಅನುಭೂತಿಗೆ ಹೊಸತನ ನೀಡಿದೆ. ನಿಮ್ಮ  ಅಗತ್ಯಕ್ಕನುಗುಣವಾಗಿ ಸಿದ್ಧಪಡಿಸಲಾದ ಮಾಡರ್ನ್‌ ಆ್ಯಕ್ಸೆಸರೀಸ್‌ನಿಂದ ಕೂಡಿದ ಇಂತಹ ಅಡುಗೆಮನೆ ಸ್ವಚ್ಛ ಮತ್ತು ಅತ್ಯಂತ ವ್ಯವಸ್ಥಿತವಾಗಿ ಕಂಡುಬರುತ್ತದೆ. ಮೊದಲೇ ಸಿದ್ಧಪಡಿಸಿದ ಯೂನಿಟ್ಸ್ ಜೊತೆಗೆ ಅಡುಗೆಮನೆಗೆ ಎಂತಹ ರೂಪ ಕೊಡಲಾಗುತ್ತದೆ.

ಎಂದರೆ ಅದರಲ್ಲಿ ಸಾಕಷ್ಟು ಅನುಕೂಲದ ಜೊತೆಗೆ ಸ್ಥಳಾವಕಾಶದ ಸಂಪೂರ್ಣ ಉಪಯೋಗ ಆಗುತ್ತದೆ.

ಮಾಡ್ಯುಲರ್‌ ಕಿಚನ್‌ ಅನ್ವಯ ಫ್ಲೋರ್‌ನಿಂದ ಹಿಡಿದು ಗೋಡೆಗಳ ತನಕ ಪ್ರತಿಯೊಂದು ಮೂಲೆಗೂ ಹೊಸ ರೂಪ ದೊರೆಯುತ್ತದೆ. ಕ್ಯಾಬಿನೆಟ್‌ ಸ್ಟೋರೇಜ್‌ ಯೂನಿಟ್‌, ಕಿಚನ್‌ ಆ್ಯಕ್ಸೆಸರೀಸ್‌, ಲೈಟಿಂಗ್‌, ಫಿಟಿಂಗ್‌, ಡೆಕೋರೇಶನ್‌ ಮುಂತಾದವುಗಳ ಮುಖಾಂತರ ಅಡುಗೆಮನೆಗೆ ಆಧುನಿಕ ಮತ್ತು ಆಕರ್ಷಕ ರೂಪ ನೀಡಲಾಗುತ್ತದೆ.

ಇಂಟೀರಿಯರ್‌ ಕನ್ಸಲ್ಟೆಂಟ್‌ ಪ್ರೀತಿ ಹೀಗೆ ಹೇಳುತ್ತಾರೆ, “ಮಾಡ್ಯುಲರ್‌ ಕಿಚನ್‌ನ ಲೇಔಟ್‌ ಹಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುತ್ತದೆ. ಉದಾಹರಣೆಗೆ ಉಪಯೋಗದ ವಸ್ತುಗಳು, ಉಪಯೋಗವಿಲ್ಲದ ವಸ್ತುಗಳು, ಅಡುಗೆ ಸಿದ್ಧತೆ ಪಡಿಸುವುದು, ಬೇಯಿಸುವುದು, ಸ್ವಚ್ಛತೆ ಮುಂತಾದವುಗಳಿಗೆ ಒಂದು ನಿಶ್ಚಿತ ಸ್ಥಳ ನಿಗದಿ ಮಾಡಲಾಗಿರುತ್ತದೆ. ಅದನ್ನು 3 ಭಾಗಗಳಲ್ಲಿ ವಿಂಗಡಿಸಬಹುದು.

“ಕ್ಯಾಬಿನೆಟ್ಸ್ ಮತ್ತು ಸ್ಟೋರೇಜ್‌ ಯೂನಿಟ್‌ನ ಮೇಲ್ಭಾಗದಲ್ಲಿ ಎಂದಾದರೊಮ್ಮೆ ಉಪಯೋಗವಾಗುವ ವಸ್ತುಗಳನ್ನು ಇಡಲಾಗುತ್ತದೆ. ನಡು ಭಾಗದಲ್ಲಿ ದಿನಂಪ್ರತಿ ಉಪಯೋಗಕ್ಕೆ ಬರುವ ವಸ್ತುಗಳನ್ನು ಇಡಲಾಗುತ್ತದೆ. ಅತ್ಯಂತ ಕೆಳಭಾಗದಲ್ಲಿ ಕಡಿಮೆ ಉಪಯೋಗಕ್ಕೆ ಬರುವ ಸಲಕರಣೆಗಳನ್ನು ಇಡಲಾಗುತ್ತದೆ.”

ಮಾಡ್ಯುಲರ್‌ ಕಿಚನ್‌ ಹಳೆಯ ಅಡುಗೆಮನೆಗಿಂತ ಅದೆಷ್ಟು ಉತ್ತಮ ಎನ್ನುವುದರ ಬಗ್ಗೆ ಪ್ರೀತಿ ಹೀಗೆ ಹೇಳುತ್ತಾರೆ :

ಮಾಡ್ಯುಲರ್‌ ಕಿಚನ್‌ ನಿಮ್ಮ ಬಳಿ ಲಭ್ಯವಿರುವ ಪ್ರತಿಯೊಂದು ಸ್ಥಳಾವಕಾಶವನ್ನೂ ಸರಿಯಾಗಿ ಬಳಸಿಕೊಳ್ಳುತ್ತದೆ. ಅದನ್ನು ನಿಮ್ಮ ಅಗತ್ಯಕ್ಕನುಗುಣವಾಗಿ ಸಿದ್ಧಪಡಿಸಲಾಗುತ್ತದೆ.

ಇದು ನಿಮ್ಮ ಹಳೆಯ ಅಡುಗೆಮನೆಯನ್ನು ಸಂಪೂರ್ಣವಾಗಿ ಬದಲಿಸಿ ಅದಕ್ಕೆ ಹೊಸ ರೂಪ ಕೊಡುತ್ತದೆ.

ಈ ಅಡುಗೆಮನೆಯಲ್ಲಿ ಪ್ರತಿಯೊಂದು ಕೆಲಸ ಮತ್ತು ಪ್ರತಿಯೊಂದು ವಸ್ತುವಿಗೂ ಸ್ಥಳ ನಿರ್ಧಾರವಾಗಿರುವುದರಿಂದ, ಯಾವುದೇ ಕೆಲಸ ಸರಿಯಾದ ರೀತಿಯಲ್ಲಿ ಮತ್ತು ಕಡಿಮೆ ಸಮಯದಲ್ಲಿ ಆಗುತ್ತದೆ.

ಕಾರಣಾಂತರಗಳಿಂದ ನಿಮಗೆ ನಿಮ್ಮ ಮನೆಯನ್ನು ಬದಲಿಸಬೇಕಾಗಿ ಬಂದರೆ, ನೀವು ಇದನ್ನು ಸುಲಭವಾಗಿ ಶಿಫ್ಟ್ ಕೂಡ ಮಾಡಬಹುದು.

ಮಾಡ್ಯುಲರ್‌ ಕಿಚನ್‌ ಮಳಿಗೆಯೊಂದರ ಮಾಲೀಕ ಸುಮಿತ್‌ ಅವರ ಪ್ರಕಾರ ಮಾಡ್ಯುಲರ್‌ ಕಿಚನ್‌ `ಈಝಿ ಟೂ ಕ್ಯಾರಿ’ ಆಗಿರುತ್ತದೆ. ಮೊದಲು ಬಡಿಗರು ತಯಾರಿಸಿದ ಅಡುಗೆಮನೆಯ ಫರ್ನೀಚರ್‌ಗಳನ್ನು ಮೊಳೆಗಳ ಸಹಾಯದಿಂದ ಫಿಕ್ಸ್ ಮಾಡಲಾಗುತ್ತಿತ್ತು. ಆದರೆ ಈಗ ಹಾಗಲ್ಲ. ಬಾಕ್ಸ್ ರೂಪದಲ್ಲಿ ಫಿಕ್ಸ್ ಮಾಡಲಾಗುತ್ತದೆ. ಅವನ್ನು ಬಿಚ್ಚಿ ಪುನಃ ಪ್ಲೈನಲ್ಲಿ ಪರಿವರ್ತಿಸಿ ಸುಲಭವಾಗಿ ಬೇರೊಂದು ಕಡೆ ಸಾಗಿಸಬಹುದು.

ಮೊದಲಿನ ಡ್ರಾಯರ್‌ಗಳನ್ನು ಎಳೆಯಲು ಸಾಕಷ್ಟು ತೊಂದರೆ ಪಡಬೇಕಾಗುತ್ತಿತ್ತು. ಆದರೆ ಆಧುನಿಕ ಯುಗದ ಮಾಡ್ಯುಲರ್‌ಕಿಚನ್‌ನಲ್ಲಿ ಡ್ರಾಯರ್‌ಗಳನ್ನು ಸ್ವಲ್ಪ ಪುಶ್‌ ಮಾಡಿ, ಸುಲಭವಾಗಿ ತೆಗೆದು ಮುಚ್ಚಬಹುದು.

ಆರ್ಡರ್‌ ಕೊಟ್ಟು 15-20 ದಿನಗಳಲ್ಲಿ ಮಾಡ್ಯುಲರ್‌ ಕಿಚನ್‌ಗಳು ತಯಾರಾಗುತ್ತವೆ ಮತ್ತು 2-3 ದಿನಗಳಲ್ಲಿ ಫಿಟ್‌ ಆಗುತ್ತವೆ. ಈ ಅವಧಿಯಲ್ಲಿ ಮನೆಯಲ್ಲಿ ಯಾವುದೇ ಧೂಳು ಮಣ್ಣಿನ ತೊಂದರೆ ಆಗುವುದಿಲ್ಲ. ಏಕೆಂದರೆ ಇಡೀ ಅಡುಗೆಮನೆಯೇ ಹೊರಗೆ ತಯಾರಾಗಿ ಬರುತ್ತದೆ.

ಇದು ಪರಿಪೂರ್ಣವಾಗಿ ಕಸ್ಟಮೈಸ್ಡ್ ಆಗಿರುತ್ತದೆ. ನಿಮ್ಮ ಸೌಲಭ್ಯ ಹಾಗೂ ಅಗತ್ಯಕ್ಕನುಗುಣವಾಗಿ ಅಡುಗೆಮನೆ ಹಾಗೂ ಅದರ ಆ್ಯಕ್ಯೆಸರೀಸ್‌ ಸಿದ್ಧಪಡಿಸಬಹುದು.

ಮಾಡ್ಯುಲರ್‌ ಕಿಚನ್‌ನಲ್ಲಿ ಮುಖ್ಯವಾಗಿ 5 ರೀತಿಯ ಮೆಟೀರಿಯಲ್ಸ್ ಉಪಯೋಗಿಸಲಾಗುತ್ತದೆ.

ಪ್ಲೈ : ಮಾರುಕಟ್ಟೆಯಲ್ಲಿ ಪ್ಲೈ ಅತ್ಯಂತ ಸುಲಭವಾಗಿ ಲಭ್ಯವಾಗುತ್ತದೆ. ಇದು ಹಾಳಾದಾಗ ಅದೇ ತೆರನಾದ, ಅದೇ ಡಿಸೈನಿನ ಪ್ಲೈ ತಂದು ಅದನ್ನು ಬದಲಿಸಬಹುದು. ಅದರಲ್ಲೂ ವಿಶೇಷವಾಗಿ ಬಿಡಬ್ಲ್ಯೂಆರ್‌ ಪ್ಲೈ ಬಲಿಷ್ಠವಾಗಿರುವುದರ ಜೊತೆ ಜೊತೆಗೆ, ವಾಟರ್ ಪ್ರೂಫ್‌ ಮತ್ತು ಕೈಗೆಟುಕು ಬೆಲೆಯಲ್ಲಿ ಲಭಿಸುತ್ತದೆ.

ಆ್ಯಕ್ರೆಲಿಕ್‌ : ಇವು ಹೆಚ್ಚು ಗ್ಲಾಸಿ ಮತ್ತು ಸುಂದರವಾಗಿರುತ್ತವೆ. ರೆಡ್‌, ಗ್ರೀನ್‌, ಬ್ಲೂ ಮುಂತಾದ ಬೋಲ್ಡ್ ಕಲರ್‌ಗಳಲ್ಲಿಯೂ ದೊರೆಯುತ್ತವೆ. ಇದರಲ್ಲಿ ಗೆದ್ದಲು ಕೂಡ ಹಿಡಿಯುವುದಿಲ್ಲ. ಇವುಗಳ ಮೇಲೆ ಡಿಸೈನುಗಳು ಕೂಡ ಚೆನ್ನಾಗಿ ಎದ್ದುಕಾಣುತ್ತವೆ. ಇವು ಹೊರಗಿನಿಂದ ತಯಾರಾಗಿ ಬರುವುದರಿಂದ ಇವುಗಳ ಬೆಲೆ ಹೆಚ್ಚಾಗಿರುತ್ತದೆ. ಜೊತೆಗೆ ಇವು ಈಝಿ ಟು ಇನ್‌ಸ್ಟಾಲ್ ಆಗಿರುತ್ತವೆ.

ಅಲ್ಯುಮಿನಿಯಂ : ಇವು ನೀರಿನಿಂದ ಹಾಳಾಗುವುದಿಲ್ಲ. ಗೆದ್ದಲು ಹಿಡಿಯುವ ಅಪಾಯ ಇರುವುದಿಲ್ಲ.

ಸ್ಟೇನ್‌ ಲೆಸ್‌ ಸ್ಟೀಲ್ ‌: ಇದರಲ್ಲಿ ಗೆದ್ದಲು, ತುಕ್ಕು ಹಿಡಿಯುವ ಸಾಧ್ಯತೆ ಇರುವುದಿಲ್ಲ. ಯಾವುದೇ ಕಲರ್‌ನಲ್ಲಿ ದೊರೆಯುತ್ತವೆ ಹಾಗೂ ಯಾವುದೇ ಡಿಸೈನ್‌ನಲ್ಲಿ ಸಿದ್ಧಪಡಿಸಬಹುದು.

ಗ್ಲಾಸ್‌ : ವುಡನ್‌ ಮೇಲೆ ಗ್ಲಾಸ್‌ ಸೇರ್ಪಡೆ ಮಾಡಿ, ಮಾಡ್ಯುಲರ್‌ ಕಿಚನ್‌ಲ್ಲಿ ಉಪಯೋಗಿಸಬಹುದು. ಇದು ಒಳ್ಳೇಯದೇ, ಆದರೆ ಒಡೆಯುವ ಭೀತಿಯನ್ನು ತಳ್ಳಿಹಾಕಲಾಗದು.

ಮಾಡ್ಯುಲರ್‌ ಕಿಚನ್‌ ಹೇಗೆ ಸಿದ್ಧಗೊಳ್ಳುತ್ತದೆ?

ಡಿಸೈನ್‌ : ಎಲ್ಲಕ್ಕೂ ಮುಂಚೆ ಸ್ಥಳ ಮತ್ತು ಅಗತ್ಯಕ್ಕನುಗುಣವಾಗಿ ನೀವು ನಿಮ್ಮ ಅಡುಗೆಮನೆಯ ರೂಪುರೇಷೆ ಸಿದ್ಧಪಡಿಸಿ. ಈ ಕೆಲಸದಲ್ಲಿ ನೀವು ಇಂಟೀರಿಯರ್‌ ಡೆಕೋರೇಟರ್‌ ಅಥವಾ ಮಾಡ್ಯುಲರ್‌ ಕಿಚನ್‌ ಸಿದ್ಧಪಡಿಸುವವರನ್ನು ಸಂಪರ್ಕಿಸಬಹುದು.

ಮಾಡ್ಯುಲರ್‌ ಕಿಚನ್‌ ಮುಖ್ಯವಾಗಿ 5 ಬಗೆಯ ಶೇಪ್‌ನಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಅವುಗಳೆಂದರೆ ಎಲ್ ಶೇಪ್‌, ಸ್ಟ್ರೇಟ್‌ ಶೇಪ್‌, ಯು ಶೇಪ್‌, ಪ್ಯಾರಲ್‌ ಶೇಪ್‌ ಮತ್ತು ಐಲ್ಯಾಂಡ್‌ ಶೇಪ್‌.

ತಜ್ಞರ ಪ್ರಕಾರ, ಎಲ್ ಶೇಪ್‌ ಮಾಡ್ಯುಲರ್‌ ಕಿಚನ್‌ ಚಿಕ್ಕ ಜಾಗಗಳಿಗೆ ಹಾಗೂ ಐಲ್ಯಾಂಡ್‌ ಶೇಪ್‌ ಹೆಚ್ಚು ಸ್ಥಳಾವಕಾಶ ಇರುವ ಮನೆಗಳಿಗೆ ಉಪಯುಕ್ತ. ಐಲ್ಯಾಂಡ್‌ ಕಿಚನ್‌ನ ನಟ್ಟನಡುವೆ ಒಂದು ಪ್ಯಾನೆಲ್ ಇರುತ್ತದೆ. ಅದರಿಂದ ನೀವು ನಾಲ್ಕೂ ಬದಿಯಲ್ಲಿ ಅಡುಗೆ ಮಾಡಬಹುದು. ಅದು ಸೌಲಭ್ಯದಾಯಕವೂ ಹೌದು.

ಬಜೆಟ್‌ : ನೀವು ಫ್ಲೋರಿಂಗ್‌, ವಾಲ್ ‌ಕಲರ್‌, ಕಿಚನ್‌ ಟೈಲ್ಸ್, ಕ್ಯಾಬಿನೆಟ್ಸ್, ಡ್ರೈಯರ್ಸ್, ಸಿಂಕ್‌ ಮುಂತಾದವುಗಳ ಮೇಲೆ ಎಷ್ಟೆಷ್ಟು ಖರ್ಚು ಮಾಡಬಹುದು ಎಂಬುದರ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ಅದರ ಪ್ರಕಾರವೇ ಸಲಕರಣೆಗಳನ್ನು ನಿರ್ಧರಿಸಬಹುದು.

ಫ್ವೋರಿಂಗ್‌ : ಎಲ್ಲಕ್ಕೂ ಮುಂಚೆ ಅಡುಗೆಮನೆಯ ಫ್ಲೋರಿಂಗ್‌ ಸಿದ್ಧಗೊಳಿಸಲಾಗುತ್ತದೆ. ಫ್ಲೋರ್‌ನ ಟೈಲ್ಸ್ ಅಡುಗೆಮನೆಗೆ ಆಕರ್ಷಕ ಲುಕ್ಸ್ ನೀಡುತ್ತದೆ.

ಲೈಟಿಂಗ್‌ : ಮಾಡ್ಯುಲರ್‌ ಕಿಚನ್‌ನಲ್ಲಿ ಲೈಟಿಂಗ್‌ ಯಾವಾಗಲೂ ಪ್ರಖರವಾಗಿರಬೇಕು. ಏಕೆಂದರೆ ಕೆಲಸ ಮಾಡುವಾಗ ಸಾಕಷ್ಟು ಬೆಳಕಿನ ಅವಶ್ಯಕತೆ ಉಂಟಾಗುತ್ತದೆ. ಒಂದು ಸಂಗತಿ ನಿಮ್ಮ ಗಮನದಲ್ಲಿರಬೇಕು. ಅದೇನೆಂದರೆ, ಓವರ್‌ ಹೆಡ್‌ ಕ್ಯಾಬಿನೆಟ್ ಕಾರಣದಿಂದಾಗಿ ಕೌಂಟರ್‌ ಟಾಪ್‌ ಮೇಲೆ, ನಿಮ್ಮ ವರ್ಕ್‌ ಸ್ಪೇಸ್‌ ಮೇಲೆ ನೆರಳು ಬೀಳದಂತಿರಲಿ. ನೈಸರ್ಗಿಕ ಬೆಳಕಿನ ಜೊತೆ ಜೊತೆಗೆ ಡೆಕೋರೇಟಿವ್ ‌ಲೈಟ್‌ ಕೂಡ ಅಳವಡಿಸಬಹುದು.

ಸಿಂಕ್‌ ಮತ್ತು ನಲ್ಲಿ : ಹಳೆಯ ಕಾಲದ ಚಿಕ್ಕ ನಲ್ಲಿಗಳ ಬದಲು ಈಗ ಕಿಚನ್‌ ಸಿಂಕ್‌ ಉದ್ದನೆಯ ಹ್ಯಾಂಡ್‌ವುಳ್ಳ ಸ್ಟೈಲಿಶ್‌ ನಲ್ಲಿಗಳ ಡಿಸೈನುಗಳ ಜೊತೆ ಟ್ರೆಂಡ್‌ನಲ್ಲಿವೆ. ಒಂದು ವೇಳೆ ನೀವು ಮನೆಯ ಪ್ರತಿಯೊಂದು ಮೂಲೆಯಲ್ಲೂ ಸ್ಟೈಲ್‌ನ್ನು ಪ್ರತಿಷ್ಠಾಪಿಸಬೇಕಿದ್ದರೆ, ಮಾರುಕಟ್ಟೆಯಲ್ಲಿ ಇಂತಹ ಅನೇಕ ಪರ್ಯಾಯಗಳಿವೆ.

ಸ್ಟೇನ್‌ ಲೆಸ್‌ ಸ್ಟೀಲ್‌ನ ಸಿಂಕ್‌ಗಳು ಉತ್ತಮವಾಗಿರುತ್ತವೆ. ಅವು ಚೆನ್ನಾಗಿ ಬಾಳಿಕೆ ಬರುವುದರ ಜೊತೆಗೆ ಚೆನ್ನಾಗಿ ಸ್ವಚ್ಛ ಕೂಡ ಆಗಿರುತ್ತವೆ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ಅದೇನೆಂದರೆ ಸಿಂಕ್‌ ಮತ್ತು ರೆಫ್ರಿಜರೇಟರ್‌ ನಡುವಿನ ಅಂತರ ಕನಿಷ್ಠ 2-3 ಅಡಿ ದೂರ ಇರಬೇಕು.

ಟೈಲ್ಸ್ ಆನ್‌ ವಾಲ್ ‌: ಅಡುಗೆಮನೆಯ ಎಲ್ಲ ಗೋಡೆಗಳಿಗೂ ಟೈಲ್ಸ್ ಹಾಕಿಸಿರಲೇಬೇಕು ಎಂದೇನಿಲ್ಲ. ನೀವು ಅಡುಗೆ ಮಾಡುವ ಕಡೆಯಾದರೂ ಟೈಲ್ಸ್ ಹಾಕಿಸಿದ್ದರೆ ಅವು ಗೋಡೆಯನ್ನು ಹೊಗೆಯಿಂದ ರಕ್ಷಿಸುತ್ತವೆ. ಅವುಗಳ ಸ್ವಚ್ಛತೆ ಕೂಡ ಸುಲಭ. ಅಂದಹಾಗೆ ಕ್ಯಾಬಿನೆಟ್‌ಗಳ ಹಿಂಭಾಗ ಕಮರ್ಷಿಯಲ್ ಟೈಲ್ಸ್ ನಿಂದ ಕೆಲಸ ಪೂರೈಸಬಹುದು. ಇದರಿಂದ ಟೈಲ್ಸ್ ಗೆ ಹೆಚ್ಚು ಖರ್ಚು ಆಗುವುದಿಲ್ಲ.

ಕಿಚನ್‌ ಕ್ಯಾಬಿನೆಟ್ಸ್ : ಕಿಚನ್‌ ಕ್ಯಾಬಿನೆಟ್ಸ್ ಮನೆ ಸಲಕರಣೆಗಳನ್ನು ಕೇವಲ ವ್ಯವಸ್ಥಿತವಾಗಷ್ಟೇ ಇಡುವುದಿಲ್ಲ, ಅದು ಹೆಚ್ಚು ಸ್ಥಳಾವಕಾಶವನ್ನು ಕೂಡ ಮಾಡಿಕೊಡುತ್ತದೆ. ಕಿಚನ್‌ ಕ್ಯಾಬಿನೆಟ್‌ಗಳ ಮುಖಾಂತರ ನಾವು ಅಡುಗೆಮನೆಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಇಡಬಹುದಾಗಿದೆ.

ಡ್ರಾಯರ್‌ಗಳು : ಅಡುಗೆಮನೆಯ ಎಲ್ಲ ಪಾತ್ರೆಗಳು, ತವಾ, ಬಾಕ್ಸ್ ಗಳು, ಕ್ಯಾಸ್‌ ರೋಲ್ಸ್ ಮುಂತಾದವುಗಳನ್ನು ಸಹಜವಾಗಿ ಇಡು ಒಳ್ಳೆಯ ಉಪಾಯವೆಂದರೆ ಕಿಚನ್‌ ಡ್ರಾಯರ್ಸ್. 2-3 ಸ್ಪೈಡರ್‌ ಸೆಕ್ಷನ್‌ ಇರುವ ಡ್ರಾಯರ್‌ನಲ್ಲಿ ನೀವು ಸಾಕಷ್ಟು ಪಾತ್ರೆಗಳನ್ನು ಹಾಗೂ ಇತರೆ ಉಪಕರಣಗಳನ್ನೂ ಸಂಗ್ರಹಿಸಿಡಬಹುದು.

ಫರ್ನೀಚರ್‌ : ಅಡುಗೆಮನೆಯಲ್ಲಿ ನೀವು ಒಂದು ಪುಟ್ಟ ಬ್ರೇಕ್‌ ಫಾಸ್ಟ್ ಟೇಬಲ್ ಕೂಡ ಇಡಬಹುದು. ಮೆಟಲ್ ಟೇಬಲ್ ಇಡುವುದರಿಂದ ಅಡುಗೆಮನೆ ಹೆಚ್ಚು ವಿಸ್ತಾರವಾಗಿರುವಂತೆ ಕಂಡುಬರುತ್ತದೆ. ಕೆಲಸ ಮಾಡಿ ದಣಿದಾಗ ಕುಳಿತುಕೊಳ್ಳಬೇಕೆಂಬ ಮನಸ್ಸಾದರೆ ಅದಕ್ಕಾಗಿ ಒಂದು ಸ್ಟೂಲ್ ‌ಅಥವಾ ಚೇರ್‌ನ ವ್ಯವಸ್ಥೆ ಮಾಡಬಹುದು.

ಕೌಂಟರ್‌ ಟಾಪ್‌ : ಇದನ್ನು ಗ್ರಾನೈಟ್‌, ವುಡ್‌ ಕೊರಿಯನ್‌, ಬ್ಲ್ಯಾಕ್‌ ಲೈವ್ ಸ್ಟೋನ್‌ ಅಥವಾ ಕ್ವಾರ್ಟ್‌ನಿಂದ ತಯಾರಿಸಬಹುದು. ಗ್ರಾನೈಟ್‌ ಕೌಂಟರ್‌ ಟಾಪ್‌ ಸ್ವಲ್ಪ ದುಬಾರಿಯಾಗಬಹುದು. ಆದರೆ ಅದು ಬಾಳಿಕೆ ಬರುತ್ತದೆ ಮತ್ತು ಮಾಡ್ಯುಲರ್‌ ಲುಕ್ಸ್ ನೀಡುತ್ತದೆ. ವುಡನ್‌ ಕೌಂಟರ್‌ ಟಾಪ್‌ ಟ್ರೆಡಿಶನ್‌ ಲುಕ್ಸ್ ನೀಡುತ್ತದೆ. ಕ್ವಾರ್ಟ್‌ಝ ಸ್ಕ್ರಾಚ್‌ ಮತ್ತು ಹೀಟ್‌ ರೆಸಿಸ್ಟೆಂಟ್‌ ಆಗಿದೆ. ಬ್ಲ್ಯಾಕ್‌ ಲೈವ್‌ ಸ್ಟೋನ್‌ ಎಲ್ಲಕ್ಕೂ ಉತ್ತಮವಾಗಿರುತ್ತವೆ.

– ಗಿರಿಜಾ ಪೈ  

ಮಾಡ್ಯುಲರ್‌ ಕಿಚನ್‌ ಡೆಕೊರೇಟ್‌ ಮಾಡುವ ಸಲಕರಣೆಗಳು

ಮುಕ್ತವಾದ ಶೆಲ್ಫ್ ಗಳಲ್ಲಿ ಕಲರ್‌ ಫುಲ್ ಕ್ರಾಕರಿ

ಚಿಕ್ಕಪುಟ್ಟ ಹೂವಿನ ಕುಂಡಗಳು

ಗ್ಲಾಸ್‌ ಪೇಂಟಿಂಗ್‌/ ಫೋಟೋ ಫ್ರೇಮ್

ಮ್ಯಾಗ್ನೆಟಿಕ್‌ ನೈಫ್‌ ಹೋಲ್ಡರ್‌

ಪಿಲ್ಲರ್ಸ್ ಮತ್ತು ಫನ್‌ ಕಲರ್ಸ್‌

ಚಾಕ್‌ ಬೋರ್ಡ್‌ ಪೇಂಟ್ಸ್ ರೆಸಿಪೀಸ್‌, ಲಿಸ್ಟ್ ಅಥವಾ ನೋಟ್‌ ಫಾರ್‌ ಗೆಸ್ಟ್ ಮುಂತಾಗಿ ಏನನ್ನಾದರೂ ಬರೆಯಲು.

ಪೆಂಡೆಂಟ್‌ ಲ್ಯಾಂಪ್ಸ್/ ಸೀಲಿಂಗ್‌ ಲೈಟ್ಸ್ ಮನಿ ಪ್ಲ್ಯಾಂಟ್ಸ್ ಸ್ಟೇನ್‌ ಲೆಸ್‌ ಸ್ಟೀಲ್ ‌ಶೆಲ್ಫ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ