ಇದು ಹತ್ತು ವರ್ಷಗಳ ಹಿಂದೆ ನನ್ನ ಅಕ್ಕನ ಮದುವೆಯಲ್ಲಿ ನಡೆದ ಪ್ರಸಂಗ. ಆಗ ನನ್ನ ಮತ್ತು ಅಕ್ಕನ ಗೆಳತಿಯರು ಎಲ್ಲಾ ಸೇರಿ ಬೀಗರನ್ನು ಗೋಳುಹೊಯ್ದುಕೊಳ್ಳಲು ಚೆನ್ನಾಗಿ ಮೋಜು ಮಾಡಿದೆವು. ಮದುವೆ ಸಾಂಗವಾಗಿ ನಡೆಯುತ್ತಿತ್ತು. ಆಗ ಸಪ್ತಪದಿಯ ಸಮಯ. ಒಂದು ಗುಂಪಿನಲ್ಲಿ ಹೆಣ್ಣಿನ ಕಡೆಯವರಾದ ನಾವೆಲ್ಲ ಕುಳಿತಿದ್ದೆವು. ನಮ್ಮ ಮುಂದಿನ ಗುಂಪಿನಲ್ಲಿ ಗಂಡಿನ ತಮ್ಮ ತಮ್ಮವರೊಡನೆ ಕುಳಿತಿದ್ದ.
ಆಗ ಆತ ನನ್ನ ಕಡೆ ಬೆರಳು ತೋರುತ್ತಾ, ``ಎಲ್ಲಿ ನೀವು ಹೇಳಿ, ನಿಮ್ಮ ಲೈನ್ ಈಗ ಕ್ಲಿಯರ್ ಆಯ್ತು. ಮುಂದೆ ನಿಮ್ಮದೇ ಮದುವೆ. ನಿಮಗೆ ಎಂಥ ಗಂಡು ಬೇಕು?''
ಆಗ ನಾನು ತಕ್ಷಣ ಹೇಳಿದೆ, ``ದಾಡಿ ಮೀಸೆ ಇಲ್ಲದ ಗಂಡು ಬೇಕು!''
ಅದಕ್ಕೆ ಆತ ಥಟ್ಟನೆ, ``ಯಾಕ್ರೀ.... ನನ್ನ ತರಹ ದಾಡಿ ಮೀಸೆ ಬಿಟ್ಟಿರುವ ಗಂಡು ಬೇಡ ಅಂತೀರಾ? ಅದರಲ್ಲೇನು ತಪ್ಪು?''
ಯಾವುದೋ ಯೋಚನೆಯಲ್ಲಿದ್ದ ನಾನು ಎಲ್ಲಿದ್ದೇನೆ ಎಂಬುದನ್ನೂ ಮರೆತು, ``ಅದು... ತುಂಬಾ ಚುಚ್ಚುತ್ತೆ,'' ಎಂದುಬಿಟ್ಟೆ.
``ಓ.... ನಿಮಗೆ ಅದರ ಅನುಭವ ಆಗಿದೆ ಅನ್ಸುತ್ತೆ!'' ಆತ ಹೇಳಿದಾಗ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು.
ಆಗ ನಾನು ಎಂಥ ತಪ್ಪು ಮಾಡಿದ್ದೆ ಎಂದು ಅರಿವಾಗಿ ಮುಖ ಮುಚ್ಚಿಕೊಂಡು ಅಲ್ಲಿಂದ ಎದ್ದು ಓಡಿಹೋಗಿದ್ದೆ. ಇಂದು ಅದೇ ದಾಡಿ ಮೀಸೆಯವರು ನನ್ನ ಪತಿ! ನಮ್ಮ ನೆಂಟರ ಮದುವೆಗೆ ಹೋದಾಗೆಲ್ಲ ಎಲ್ಲರೂ ನಮ್ಮನ್ನು ಆ ಬಗ್ಗೆ ಈಗಲೂ ರೇಗಿಸುತ್ತಿರುತ್ತಾರೆ. - ರಜನಿ ರವೀಂದ್ರ, ದಾವಣಗೆರೆ.
ಒಮ್ಮೆ ನಮ್ಮ ಪರಿಚಿತರ ಮದುವೆಗೆಂದು ತುಮಕೂರಿಗೆ ಹೋಗಿದ್ದೆವು. ಅಲ್ಲಿ ಹುಡುಗಿಯ ಕಡೆಯವರಾಗಿ ನಾನು ವಧುವಿಗೆ ಬರುತ್ತಿದ್ದ ಉಡುಗೊರೆಗಳನ್ನೆಲ್ಲ ಎತ್ತಿರಿಸುತ್ತಾ, ಅದನ್ನು ಜೋಪಾನ ಮಾಡುತ್ತಿದ್ದೆ. ಆಗ ಮದುವೆಗೆ ಬಂದಿದ್ದ ಹಲವು ಪರಿಚಿತರು, ``ನೀವೇನೂ ಹುಡುಗಿ ಕಡೆಯವರಿಗೆ ತುಂಬಾ ಬೇಕಾದ ನೆಂಟರಲ್ಲ. ಆದರೂ ಅವರು ಹೇಗೆ ನಿಮ್ಮನ್ನು ಇಷ್ಟು ನಂಬಿ ಈ ಜವಾಬ್ದಾರಿ ವಹಿಸಿದ್ದಾರೆ?'' ಎಂದು ವ್ಯಂಗ್ಯವಾಗಿ ಕೇಳಿದರು. ಆಗ ನಾನು ನಸುನಗುತ್ತಾ, ``ನಾನು ಹುಡುಗಿಯ ತಂದೆಗೆ ಮಾತ್ರವಲ್ಲ.... ಹುಡುಗಿಗೂ ಬೆಸ್ಟ್ ಫ್ರೆಂಡ್,'' ಎಂದೆ. ಅವರು ಸುಮ್ಮನಾದರು.
ಮದುವೆಯ ಕಲಾಪಗಳೆಲ್ಲ ಮುಗಿದು ವಧು ಅತ್ತೆಮನೆಗೆ ಹೊರಟು ನಿಂತಳು. ತವರಿನ ಕಡೆಯವರಿಗೆಲ್ಲ ವಿದಾಯ ಕೋರುತ್ತಾ ನನ್ನ ಬಳಿ ಬಂದು, ನನಗೆ ನಮಸ್ಕಾರ ಮಾಡಿ, ತೋಳಲ್ಲಿ ಮುಖಮರೆಸಿ ಅತ್ತುಬಿಟ್ಟಳು. ನನ್ನ ಮಗಳ ವಯಸ್ಸಿನವಳಾದ ಆಕೆ ಹೀಗೆ ನನ್ನ ಬಳಿ ಅತ್ತಿದ್ದು ಗಮನಿಸಿ ಆಗ ಪ್ರಶ್ನೆ ಕೇಳಿದವರು `ಬೆಸ್ಟ್ ಫ್ರೆಂಡ್' ಹೀಗೂ ಇರುತ್ತಾರೆ ಎಂದು ಅರಿತರು.
``ಸಾರಿ ಅಂಕಲ್, ನಿಮ್ಮನ್ನು ಏನೇನೋ ಪ್ರಶ್ನೆ ಕೇಳಿದೆ,'' ಎಂದು ಆ ಹುಡುಗಿಯರು ಹೇಳಿದಾಗ ನಾನೇ ಅವರನ್ನು ಸಮಾಧಾನಪಡಿಸಿದೆ.
- ಸತೀಶ್ ರಾವ್, ಕೋಲಾರ.