ಸುಖಮಯವಾಗಿರಲು, ಅವರು ತಮ್ಮ ಸಂಬಂಧದಲ್ಲಿ ಕೆಲವೊಂದು ಸಂಗತಿಗಳಿಗೆ ಅವಕಾಶ ಕೊಡಲೇಬಾರದು…..

ಗಂಡಹೆಂಡತಿಯ ಸಂಬಂಧ ವಿಶ್ವಾಸದ ಎಳೆಯ ಮೇಲೆ ನಿಂತಿರುತ್ತದೆ.  ಒಂದುವೇಳೆ ಈ ಸಂಬಂಧದಲ್ಲಿ ವಿಶ್ವಾಸವೆಂಬ ಚಕ್ರ ಸ್ವಲ್ಪ ಆ ಕಡೆ ಈ ಕಡೆ ಓಲಾಡಿದರೂ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇಡೀ ಕುಟುಂಬ ಎಲೆ ಉದುರಿದ ಹಾಗೆ ಚೆಲ್ಲಾಪಿಲ್ಲಿಯಾಗುತ್ತದೆ. ಹೀಗಾಗಿ ಪರಸ್ಪರರ ಬಗ್ಗೆ ಸಂದೇಹ ವ್ಯಕ್ತಪಡಿಸುವುದೆಂದರೆ ಮನೆಯ ಗೌರವ ಮಣ್ಣು ಪಾಲಾಗಲು ಆಹ್ವಾನ ಕೊಟ್ಟಂತೆ.

ಹೆಂಡತಿ ಉದ್ಯೋಗಿಯಾಗಿರುವ ಕಡೆಯೇ ಹೆಚ್ಚಿನ ಸಂದೇಹಗಳು ಕೇಳಿಬರುತ್ತವೆ. ಅದಕ್ಕೆ ಮುಖ್ಯ ಕಾರಣ ಆಫೀಸಿನ ಜನರ ಜೊತೆ ಮಾತುಕತೆ ಹಾಗೂ ಸ್ನೇಹ ಉಂಟಾಗುವುದು. ಸಂದೇಹ ವ್ಯಕ್ತಪಡಿಸುವ ಪತಿ, ಆಫೀಸಿನಲ್ಲಿ ತನಗೂ ಮಹಿಳಾ ಸಹೋದ್ಯೋಗಿಗಳಿದ್ದಾರೆ ಎನ್ನುವುದನ್ನು ಮರೆಯುತ್ತಾರೆ.

ಒಂದು ವೇಳೆ ಮಹಿಳೊಬ್ಬರು ಯಾರ ಜೊತೆಗಾದರೂ ನಗುನಗುತ್ತಾ ಮಾತನಾಡುತ್ತಿದ್ದರೆ ಬಹಳಷ್ಟು ಜನರ ಬೆರಳುಗಳು ಮೇಲೇಳುತ್ತವೆ. ಸಮಾಜದ ಗುತ್ತಿಗೆದಾರರು ಅವಳಿಗೆ ಏನೇನು ಹೆಸರು ಕೊಡಬಹುದು ಹೇಳಲಿಕ್ಕಾಗದು.

ಒಂದು ಸತ್ಯಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಿಗಳು. ಅವರ ಕುಟುಂಬದಲ್ಲಿ ಮೂಪರು ಮಕ್ಕಳೂ ಇದ್ದಾರೆ. ದೊಡ್ಡ ಮಗನ ವಯಸ್ಸು 27. ಸಾಕಷ್ಟು ವರ್ಷಗಳ ತನಕ ಎಲ್ಲ ಸರಿಯಾಗಿಯೇ ನಡೆದಿತ್ತು. ಆದರೆ ಒಂದು ದಿನ ಗಂಡನ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿತು. ಆ ಬದಲಾವಣೆ ಅವರ ಕುಟುಂಬವನ್ನು ಛಿದ್ರಛಿದ್ರ ಮಾಡಲು ಸಾಕಷ್ಟಿತ್ತು.

ಗಂಡ ಸರ್ಕಾರಿ ನೌಕರಿಯಲ್ಲಿದ್ದಾನೆ. ಹೆಂಡತಿ ಖಾಸಗಿ ಕಂಪನಿಯಲ್ಲಿದ್ದಾಳೆ. ಕೆಲವು ವರ್ಷಗಳ ಬಳಿಕ ಗಂಡ ಹೆಂಡತಿ ನಡುವೆ ಮನಸ್ತಾಪ ಶುರುವಾಯಿತು. ಈ ಮನಸ್ತಾಪಕ್ಕೆ ಕಾರಣ ಸಂದೇಹ ಆಗಿತ್ತು. ಗಂಡಹೆಂಡತಿಗೆ ಪ್ರತಿದಿನ ಜಗಳ ಆಗುತ್ತಿತ್ತು. ಆತ ಅವಳಿಗೆ ಕೆಟ್ಟ ಭಾಷೆಯಲ್ಲಿ ಬೈಯುತ್ತಿದ್ದ. ಹೆಂಡತಿ ಅವನು ಅಂದಿದ್ದನ್ನೆಲ್ಲಾ ಮೌನವಾಗಿ ಆಲಿಸಿ ಸುಮ್ಮನಾಗುತ್ತಿದ್ದಳು.

relation

ಗಂಡನಿಗೆ ಹೆಂಡತಿಯ ಆಫೀಸಿನ ಒಬ್ಬ ವ್ಯಕ್ತಿಯ ಮೇಲೆ ಸಂದೇಹವಿತ್ತು. ಹೆಂಡತಿ ತನ್ನ ನಿರಪರಾಧಿತ್ವವನ್ನು ಹೇಗೆ ತಾನೇ ಸಾಬೀತು ಮಾಡಬೇಕು? ಅದು ಆಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಕ್ಕಪಕ್ಕದವರಲ್ಲಿ, ಓಣಿಯವರಲ್ಲಿ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತಿತ್ತು. ಆದರೆ ಗಂಡನಿಗೆ ಇದರಿಂದ ಏನಾಗಬೇಕು? ಹೆಂಡತಿಯನ್ನು ಹೆಜ್ಜೆ ಹೆಜ್ಜೆಗೂ ಅವಮಾನ ಮಾಡುವ ಹುಚ್ಚು ಆವೇಶ ಅವನ ತಲೆ ತುಂಬಿಬಿಟ್ಟಿತ್ತು. ಗಂಡ ಮುಂಜಾನೆಯಿಂದ ಸಂಜೆತನಕ ಮಾಯವಾಗಿದ್ದರೆ ಆ ಬಗ್ಗೆ ಏನೂ ಪ್ರಶ್ನೆ ಮಾಡುವ ಹಾಗಿಲ್ಲ, ಅದೇ ಹೆಂಡತಿಗೆ ಯಾರಿಂದಾದರೂ ಫೋನ್‌ ಬಂದರೆ ಅದು ಯಾರ ಫೋನ್‌? ಯಾಕೆ ಬಂದಿತ್ತು? ಎಂಬೆಲ್ಲ ನೂರಾರು ಪ್ರಶ್ನೆಗಳು ಏಳುತ್ತಿದ್ದವು.

ಇಂತಹದೇ ಒಂದು ಘಟನೆ ಈ ಕುಟುಂಬದಲ್ಲಿ ಘಟಿಸಿತ್ತು. ಹೆಂಡತಿ ಅದೊಂದು ದಿನ ತನ್ನ ಸಹೊದ್ಯೋಗಿಯ ವಾಹನದಲ್ಲಿ ಕುಳಿತು ಆಫೀಸಿಗೆ ಹೊರಟಿದ್ದಳು. ಆ ದೃಶ್ಯವನ್ನು ನೋಡಿದ ಗಂಡನಿಗೆ ತಲೆಕೆಟ್ಟು ಹೋಯಿತು. ಪ್ರತಿದಿನ ಈ ಬಗ್ಗೆ ಅವರ ನಡುವೆ ವಾದವಿವಾದ ನಡೆಯುತ್ತಲ್ಲೇ ಇರುತ್ತಿತ್ತು. ಅವನು ಅವಳಿಗೆ ವೇಶ್ಯೆ ಎಂದು ಕೂಡ ಕರೆದುಬಿಟ್ಟ. ಮನೆಯಲ್ಲಿ ಒಂಥರ ಆತಂಕದ ವಾತಾವರಣ ಉಂಟಾಗಿತ್ತು.

57 ವರ್ಷದ ವಯಸ್ಸಿನಲ್ಲಿ ಗಂಡನ ಈ ರೀತಿಯ ವರ್ತನೆ ಹೆಂಡತಿ ಹಾಗೂ ಮಕ್ಕಳಿಗೆ ಕಸಿವಿಸಿಯನ್ನುಂಟು ಮಾಡಿತು. ಇಡೀ ಬೀದಿಯಲ್ಲಿ ಆ ಕುಟುಂಬದ ಬಗೆಗೆ ಹೆಚ್ಚು ಚರ್ಚೆಯಾಗುತ್ತಲಿತ್ತು. ಹೆಂಡತಿಯ ಮೇಲೆ ಸಂದೇಹ ತಾಳಿದ್ದರಿಂದ ಕುಟುಂಬಕ್ಕೆ ಅದೆಷ್ಟು ತೊಂದರೆಯಾಗಿತ್ತು ಎಂಬ ಬಗ್ಗೆ ಗಂಡನಿಗೆ ಯಾವುದೇ ನೋವು, ಖೇದ ಆಗಿರಲಿಲ್ಲ. ಮನೆಯಲ್ಲಿ ಬೆಳೆದ ಮಗ ಇದ್ದಾಗ ಅವನು ಅಪ್ಪನಿಗೆ ಸಮಾನ ಎಂದು ಭಾವಿಸಲಾಗುತ್ತದೆ. ಆದರೆ ಗಂಡನಾದವನಿಗೆ ಹೆಂಡತಿಯ ಬಗೆಗಾಗಲಿ, ಮಗನ ಬಗೆಗಾಗಲಿ ಎಳ್ಳಷ್ಟೂ ಕಾಳಜಿ ಇರಲಿಲ್ಲ.

ಗಂಡಹೆಂಡತಿಯ ಸಂಬಂಧ ನಂಬಿಕೆಯ ಮೇಲೆ ನಿಂತಿರುತ್ತದೆ. ಆ ನಂಬಿಕೆಗೆ ಭಂಗ ಬಂದರೆ ಸಂಬಂಧಕ್ಕೆ ಕುತ್ತು ಬರುತ್ತದೆ.

ಸಂಬಂಧದ ಬಗ್ಗೆ ನಂಬಿಕೆ

ಗಂಡಹೆಂಡತಿಯ ಸಂಬಂಧದ ಎಳೆ ನಂಬಿಕೆಯ ತತ್ವದ ಮೇಲೆ ನಿಂತಿದೆ. ಕುಟುಂಬದಲ್ಲಿ ಒಂದು ಸಲ ಜಗಳ ಎಂಟರ್‌ ಆಗಿಬಿಟ್ಟರೆ ಅದು ಹೊರಗೆ ಹೋಗುವ ಮಾತೇ ಇರುವುದಿಲ್ಲ. ಕ್ರಮೇಣ ಜಗಳ ಹೆಚ್ಚುತ್ತಾ ಹೋಗಿ ವಿಚ್ಛೇದನದ ಹಂತಕ್ಕೂ ತಲುಪುತ್ತದೆ. ಅದರಿಂದಾಗಿ ಇಡೀ ಕುಟುಂಬ ಛಿದ್ರಛಿದ್ರವಾಗುತ್ತದೆ. ಜೀವನಪೂರ್ತಿ ಸಂಬಂಧದ ಈ ರೈಲನ್ನು ಓಡಿಸಿಕೊಂಡು ಹೋಗಲು ನಂಬಿಕೆಯ ಇಂಧನ ಅತ್ಯಂತ ಅವಶ್ಯ.

ಅವರಿವರ ಮಾತುಗಳನ್ನು ನಂಬಬೇಡಿ

ಸಾಮಾನ್ಯವಾಗಿ ಗಂಡನಿಗೆ ಹೆಂಡತಿಯ ಬಗ್ಗೆ ಅವರಿವರಿಂದ ಮಾತುಗಳು ಕೇಳಲು ಸಿಗುತ್ತವೆ. ಹೆಚ್ಚಿನ ಪ್ರಕರಣಗಳಲ್ಲಿ ಆ ಮಾತುಗಳು ಖಾರಉಪ್ಪು ಬೆರೆತು ಕೇಳಿಸಲ್ಪಟ್ಟಿರುತ್ತವೆ. ಗಂಡನಿಗೆ ಆ ಮಾತುಗಳು ಆತಂಕ ಹುಟ್ಟಿಸುತ್ತವೆ, ಸಂದೇಹದ ಮೊಳಕೊಡೆಯುತ್ತದೆ. ಹೀಗಾಗಿ ಬೇರೆಯವರ  ಮಾತುಗಳಿಗೆ ಮಹತ್ವ ಕೊಡಬೇಡಿ. ಕಣ್ಣಾರೆ ಕಾಣದೆ ನಂಬಬೇಡಿ.

ಭಾವನೆಗಳನ್ನು ಗೌರವಿಸಿ

ಗಂಡಹೆಂಡತಿಯ ಸಂಬಂಧದಲ್ಲಿ ಪರಸ್ಪರರ ಭಾವನೆಗಳನ್ನು ಗೌರವಿಸುವುದು ಅತ್ಯಂತ ಅವಶ್ಯ. ಒಮ್ಮೊಮ್ಮೆ ಸಣ್ಣದೊಂದು ಮಾತು ದೊಡ್ಡ ರೂಪ ಪಡೆದುಕೊಳ್ಳುತ್ತದೆ. ಆಫೀಸಿನಿಂದ ಮನೆಗೆ ಮರಳಿದ ನಂತರ ಸಮಯ ಸಿಕ್ಕಾಗ ಇಬ್ಬರೂ ಜೊತೆಗೆ ಕಳೆಯಿರಿ. ಏಕೆಂದರೆ ಪರಸ್ಪರರ ಮನದ ಮಾತು ಆಲಿಸಲು ಇದು ಸಹಾಯಕವಾಗುತ್ತದೆ.

ಗಂಡಹೆಂಡತಿಯ ಸಂಬಂಧದಲ್ಲಿ ಸೆಕ್ಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಬಹಳಷ್ಟು ಸಂಬಂಧಗಳು ಈ ಕಾರಣದಿಂದಲೂ ಮುರಿದುಬೀಳುತ್ತವೆ. ಬಹಳಷ್ಟು ದಂಪತಿಗಳಿಗೆ ಅದಕ್ಕಾಗಿ ಸಮಯ ಹೊಂದಿಸುವುದು ಕಷ್ಟಕರವಾಗುತ್ತದೆ. ಇದರಿಂದ ಸಂದೇಹದ ಸ್ಥಿತಿ ಉದ್ಭವಿಸುತ್ತದೆ.

ಮಕ್ಕಳ ಭವಿಷ್ಯದ ಚಿಂತೆ

ಗಂಡಹೆಂಡತಿಯ ಸಂಬಂಧದಿಂದ ನೀವು ತಂದೆತಾಯಿಗಳಾದಾಗ, ಒಳ್ಳೆಯ ಪೋಷಕರಾಗಬೇಕೆಂದು ಇಚ್ಛಿಸುತ್ತೀರಿ. ನೀವು ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಯೋಚಿಸಿದರೆ ನಿಮಗೆ ಕ್ಷುಲ್ಲಕ ವಿಷಯಗಳ ಬಗ್ಗೆ ಗಮನ ಹೋಗಲಾರದು.

ಅಫೇರ್‌ನಿಂದ ದೂರ ಇರಿ

ಮದುವೆಗೆ ಮುಂಚೆ ನಿಮಗೆ ಯಾರೊಂದಿಗೆ ಸಂಬಂಧ ಇತ್ತು, ಯಾರೊಂದಿಗೆ ಅಫೇರ್‌ ಇತ್ತು ಎನ್ನುವುದರ ಬಗ್ಗೆ ಮದುವೆಯ ಬಳಿಕ ಮರೆತೇಬಿಡುವುದು ಒಳ್ಳೆಯದು. ಹಿಂದೊಮ್ಮೆ ಪ್ರೀತಿಸುತ್ತಿದ್ದರೆ ಮದುವೆ ಬೇರೆಯವರ ಜೊತೆ ಆದಾಗ, ಆ ವಿಷಯ ಗಂಡ ಅಥವಾ ಹೆಂಡತಿಗೆ ತಿಳಿದಾಗ ಸಂದೇಹ ಉತ್ಪನ್ನವಾಗುತ್ತದೆ.

ಅದರಿಂದ ಇಡೀ ಕುಟುಂಬ ಒಡೆದು ಚೂರು ಚೂರಾಗುತ್ತದೆ. ಹಾಗಾಗಿ ಒಂದು ಸಲ ಮದುವೆಯ ಬಂಧನದಲ್ಲಿ ಬಂಧಿಸಲ್ಪಟ್ಟಾಗ ನೀವು ನಿಮ್ಮ ಸಂಗಾತಿ ಹಾಗೂ ಕುಟುಂಬದ ಬಗೆಗೇ ಯೋಚಿಸಬೇಕು.

– ರತ್ನಾ ರವೀಂದ್ರ

COMMENT