ಸಂಗಾತಿ ಈಗ ಮೊದಲಿನಂತೆ ಇಲ್ಲ ಎನ್ನುವುದು ಗಂಡ ಅಥವಾ ಹೆಂಡತಿಗೆ ತಿಳಿಯಲು ಬಹಳ ಹೊತ್ತು ಹಿಡಿಯುವುದಿಲ್ಲ. ಅಂದಹಾಗೆ ಈ ಮನಸ್ತಾಪಕ್ಕೆ ಏನು ಕಾರಣ? ಹೆಚ್ಚಿನ ಪ್ರಕರಣಗಳಲ್ಲಿ ಗಂಡ ಹೆಂಡತಿಯ ಜಗಳಕ್ಕೆ ಮುಖ್ಯ ಕಾರಣ ಅತೃಪ್ತ ಸೆಕ್ಸ್ ಸಂಬಂಧ. ವೈವಾಹಿಕ ಜೀವನದಲ್ಲಿ ಸೆಕ್ಸ್ ಎನ್ನುವುದು ಇಬ್ಬರ ನಡುವಿನ ಗಾಢ ಸಂಬಂಧಕ್ಕೆ ಕಾರಣವಾಗುತ್ತದೆ.
ಮಹಿಳೆಯರಿಗೆ ಆರಂಭದಿಂದಲೇ ಲಜ್ಜೆ, ಸಂಕೋಚ ಇವು ಸಹಜವಾಗಿಯೇ ಬಂದಿರುತ್ತವೆ. ವಿವಾಹದ ಬಳಿಕ ಆಕೆ ಸೆಕ್ಸ್ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಾರಳು.
ಪರಪುರುಷರ ಬಗ್ಗೆ ಆಸಕ್ತಿ
``ನಾನು ಮೊದಲ ಬಾರಿ ಪರಪುರುಷನ ಜೊತೆ ಸಂಬಂಧ ಬೆಳೆಸಿದಾಗ ಅದರ ನಿಜವಾದ ಖುಷಿ ಏನು ಏನ್ನುವುದು ಅರ್ಥವಾಯಿತು. ಗಂಡ ಎನ್ನುವ ಪ್ರಾಣಿ ನನ್ನ ಖುಷಿಯ ಬಗ್ಗೆ ಒಂದು ದಿನ ವಿಚಾರಿಸುತ್ತಿರಲಿಲ್ಲ. ನಾನೊಂದು ಆಟದ ಗೊಂಬೆ ಎಂದಷ್ಟೇ ಅವರು ಭಾವಿಸಿದ್ದರು,'' ಇದು ನನ್ನ ಗೆಳತಿಯ ಹೇಳಿಕೆ.
``ನಿನಗೆ ಹೆದರಿಕೆ ಆಗುವುದಿಲ್ಲವೇ?'' ಎಂದು ಕೇಳಿದರೆ, ``ಇದರಲ್ಲಿ ಹೆದರಿಕೆಯ ಮಾತೇನಿದೆ?'' ಎಂದು ನನ್ನನ್ನೇ ಪ್ರಶ್ನೆ ಮಾಡುತ್ತಾಳೆ.
ಕೆಲವು ಮಹಿಳೆಯರು ಹೇಗಿರುತ್ತಾರೆಂದರೆ, ಅವರು ತಮ್ಮ ದೇಹದ ಹಸಿವು ನೀಗಿಸಿಕೊಳ್ಳಲು ತಮ್ಮ ಸುಖ ಸಮೃದ್ಧಿಯ ಜೀವನವನ್ನು ಒದ್ದು, ಸೆಕ್ಸ್ ಅಭಿಲಾಷೆ ಈಡೇರಿಸುವ ಪರಪುರುಷನ ಹಿಂದೆ ಬೀಳುತ್ತಾರೆ.
ಸ್ವಪ್ನಾ ಮಾಡಿದ್ದು ಹೀಗೆಯೇ. ಶ್ರೀಮಂತ ಮತ್ತು ವಿದ್ಯಾವಂತ ಧರ್ಮರಾಜ ಜೊತೆ ಮದುವೆಯಾಗಿದ್ದ ಅವಳು ಅವನಿಂದ ಸಮಾಗಮದ ಸುಖ ಪಡೆಯಲು ವಿಫಲಳಾಗಿದ್ದಳು. ಗಂಡ ಯಾವಾಗಲೂ ತನ್ನ ವ್ಯಾಪಾರ ವಹಿವಾಟು, ಹಣದ ಬಗ್ಗೆ ಯೋಚಿಸುತ್ತಿದ್ದನೆ ಹೊರತು ಹೆಂಡತಿಯ ಖುಷಿಯ ಬಗ್ಗೆ ಯೋಚಿಸುತ್ತಿರಲಿಲ್ಲ. ಗಂಡನಿಂದ ದೈಹಿಕ ತೃಪ್ತಿ ದೊರೆಯದಿದ್ದಾಗ ಅವಳು ಮಾನಸಿಕವಾಗಿ ಬಹಳ ಕಸಿವಿಸಿಗೊಂಡಳು. ಅವಳು ಮನೆಯಲ್ಲಿ ಏಕಾಂಗಿಯಾಗಿಯೇ ಇರಬೇಕಾಗುತ್ತಿತ್ತಲ್ಲದೆ, ಅವಳಿಗೆ ಮಾಡಲು ಯಾವುದೇ ಕೆಲಸ ಇರುತ್ತಿರಲಿಲ್ಲ. ಹೀಗಾಗಿ ಅವಳು ಪಕ್ಕದ ಮನೆಯ ಹುಡುಗನ ಆಕರ್ಷಣೆಗೆ ಒಳಗಾಗಿ ಅವನನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವನಿಂದ ದೈಹಿಕ ಸುಖ ಪಡೆದುಕೊಂಡಳು.
ಕ್ರಮೇಣ ಇಬ್ಬರಲ್ಲೂ ಲೈಂಗಿಕ ಅಭಿಲಾಷೆ ಹೆಚ್ಚತೊಡಗಿತು. ಅದೊಂದು ದಿನ ಸ್ವಪ್ನಾ ಮನೆಬಿಟ್ಟು ಆ ಯುವಕನ ಜೊತೆ ಹೋಗಲು ನಿರ್ಧರಿಸಿದಳು. ಅವಳು ಹೋಗುವಾಗ ಮನೆಯಿಂದ ಚಿನ್ನಾಭರಣ ಮತ್ತು ಸಾಕಷ್ಟು ಹಣವನ್ನು ತನ್ನ ಬ್ಯಾಗಿಗೆ ಹಾಕಿಕೊಂಡಳು. ಆ ಯುವಕ ತೋರಿಸಿದ ಆಸೆ ಆಮಿಷದಲ್ಲಿ ಅವಳಿಗೆ ಒಳ್ಳೆಯದು, ಕೆಟ್ಟದರ ಗಮನ ಬರಲೇ ಇಲ್ಲ.
ಅದೊಂದು ದಿನ ಆ ಯುವಕ ಸ್ವಪ್ನಾ ತಂದಿದ್ದ ಹಣ ಮತ್ತು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿಬಿಟ್ಟ. ಈಗ ಅವಳ ಬಳಿ ಏನೇನೂ ಇರಲಿಲ್ಲ. ಅವಳು ತನ್ನ ಗಂಡನ ಮನೆಗೆ ಹೋಗಲು ನಿರ್ಧರಿಸಿದಳು. ಆದರೆ ಅವನು ಅವಳನ್ನು ಮನೆಯೊಳಗೆ ಕರೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿಬಿಟ್ಟ.
ಲೈಂಗಿಕ ಅರಿವು
ಸೆಕ್ಸ್ ಬಗ್ಗೆ ಪುರುಷರ ಮಾನಸಿಕತೆ ವಿಚಿತ್ರವಾಗಿರುತ್ತದೆ. ಪುರುಷರು ಕೇವಲ ತಮ್ಮ ಸುಖದ ಬಗ್ಗೆ ಯೋಚಿಸುತ್ತಾರೆಯೇ ಹೊರತು, ಹೆಂಡತಿಗೂ ಅದರ ಖುಷಿ ದೊರಕಿತಾ ಎನ್ನುವುದರ ಬಗ್ಗೆ ಖಂಡಿತಾ ಯೋಚಿಸುದಿಲ್ಲ.