ಟಿವಿ ಸೀರಿಯಲ್‌ಗಳಲ್ಲಿ ತೋರಿಸಲಾಗುವ ಘಾಟಿ ಅತ್ತೆ ಮತ್ತು ವಾಚಾಳಿ ಸೊಸೆಯರಿಗಿಂತ ಭಿನ್ನವಾಗಿ ಇಂದಿನ ಅತ್ತೆ ಸೊಸೆಯರು ಎಂತಹ ಸ್ನೇಹಮಯ ಸಂಬಂಧವನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿದಾಗ ನೀವು ಚಕಿತರಾಗುವಿರಿ.

ಆ ದಿನ ಭಾನುವಾರ. ವಿವೇಕ್‌ ಮತ್ತು ಅವನ ತಂದೆ ಸುಧಾಕರ್‌ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರಿಕೆಟ್‌ ಮ್ಯಾಚ್‌ನಲ್ಲಿ ತನ್ಮಯರಾಗಿದ್ದರು. ವಿವೇಕ್‌ ಟಿವಿ ಬಿಟ್ಟು ತನ್ನ ಜೊತೆ ಸಿನಿಮಾಗೆ ಬರಲಿ ಎಂದು ರೇಖಾ ಎಷ್ಟೋ ಪ್ರಯತ್ನಿಸಿದಳು. ಆದರೆ ಅವನು ಪತ್ನಿಯತ್ತ ತಿರುಗಲೂ ಇಲ್ಲ. ಮಧ್ಯೆ ಒಂದೊಂದು ಸಲ “ಮ್ಯಾಚ್‌ ಮುಗಿಯಲಿ ತಾಳು,” ಎನ್ನುತ್ತಿದ್ದ.

ಅಲ್ಲೇ ಪತ್ರಿಕೆ ಓದುತ್ತಾ ಕುಳಿತಿದ್ದ ಮಾಲತಿಗೆ ಮಗ ಸೊಸೆಯರ ನಡುವೆ ಆಗುತ್ತಿದ್ದ ಮಾತುಗಳನ್ನು ಕೇಳಿ ಒಳಗೇ ನಗು ಬಂದಿತು. ಜೊತೆಗೆ ತನ್ನ ಬದುಕಿನ ಹಿಂದಿನ ಅನುಭವ ನೆನಪಾಯಿತು. ಸುಧಾಕರ್‌ಗೂ ಕ್ರಿಕೆಟ್‌ ಮ್ಯಾಚ್‌ ಎಂದರೆ ಬಲು ಪ್ರೀತಿ. ಮಾಲತಿಗೆ ಸಿನಿಮಾದ ಗೀಳು. ಹಿಂಸೆ ಮಾಡಿ ಪತಿಯನ್ನು ಸಿನಿಮಾ ನೋಡಲು ಕರೆದೊಯ್ಯುತ್ತಿದ್ದಳು. ಎಷ್ಟೇ ಒಳ್ಳೆಯ ಸಿನಿಮಾ ನೋಡಿದ ಮೇಲೂ ಪತಿ ನಿರುತ್ಸಾಹಕರ ಪ್ರತಿಕ್ರಿಯೆ ಕಂಡು ಯಾಕಾದರೂ ಇವರನ್ನು ಕರೆತಂದೆನೋ ಎಂದು ಅವಳಿಗೆ ಬೇಸರವಾಗುತ್ತಿತ್ತು. ಮಾಲತಿ ಎದ್ದು ನಿಂತು ಒಳಗೆ ಹೋಗುವಂತೆ ಸೊಸೆಗೆ ಸನ್ನೆ ಮಾಡಿದಳು. ರೇಖಾ ಗಲಿಬಿಲಿಗೊಂಡು ಅತ್ತೆಯನ್ನು ಹಿಂಬಾಲಿಸಿ ರೂಮಿಗೆ ಬಂದಳು. ಅವಳ ಮುಖದ ತುಂಬಾ ಪ್ರಶ್ನಾರ್ಥಕ ಚಿಹ್ನೆ.

“ಯಾವ ಸಿನಿಮಾ ನೋಡಬೇಕು ನೀನು?” ಮಾಲತಿ ಕೇಳಿದಳು.

“ಕಾಫಿ ತೋಟ.”

“ಟಿಕೆಟ್‌ ಸಿಗುತ್ತಾ?”

“ಸಿಗಬಹುದು ಅಮ್ಮ. ಆದರೆ ವಿವೇಕ್‌ ಟಿವಿ ಬಿಟ್ಟು ಏಳಬೇಕಲ್ಲ…..”

“ಅವನನ್ನು ಬಿಡು. ಅವನು ಖಂಡಿತಾ ಏಳೋಲ್ಲ. ನೀನು ಹೋಗೋದಕ್ಕೆ ತಯಾರಾಗುವ.”

“ನಾನೊಬ್ಬಳೇ…..?”

“ನೀನೋಬ್ಬಳೇ ಅಲ್ಲ. ನಾನು ಬರ್ತೀನಿ…..”

“ನೀವು….?” ರೇಖಾ ಆಶ್ಚರ್ಯದಿಂದ ಕಣ್ಣರಳಿಸಿದಳು.

“ಹೌದು. ನನಗೂ ಸಿನಿಮಾ ನೋಡೋದಕ್ಕೆ ಬಹಳ ಇಷ್ಟ. ಈ ಅಪ್ಪ ಮಕ್ಕಳನ್ನು ಕಷ್ಟುಪಟ್ಟು ಮ್ಯಾಚ್‌ ನೋಡೋದು ತಪ್ಪಿಸಿ ಸಿನಿಮಾಗೆ ಕರೆದುಕೊಂಡು ಹೋದರೆ, ಅವರೂ ಅಲ್ಲಿ ಎಂಜಾಯ್‌ ಮಾಡೋಲ್ಲ, ನಮ್ಮ ಮೂಡನ್ನೂ ಹಾಳು ಮಾಡುತ್ತಾರೆ ಅಷ್ಟೇ. ನಡಿ, ನಾವು ಸಿನಿಮಾ ನೋಡಿ ಹಾಗೇ ಡಿನ್ನರ್‌ ಮುಗಿಸಿಕೊಂಡು ಬರೋಣ.

”ರೇಖಾಳಿಗೆ ಸಂತೋಷದಿಂದ ಕುಣಿಯುವಂತಾಯಿತು. ತನ್ನ ಅತ್ತೆಯ ಎರಡೂ ಕೈಗಳನ್ನು ಹಿಡಿದು, “ಥ್ಯಾಂಕ್ಸ್ ಅಮ್ಮಾ, ನನಗಂತೂ ಬೋರ್‌ ಆಗಿಬಿಟ್ಟಿತ್ತು. ಭಾನುವಾರ ಎಂದರೆ ವಿವೇಕ್‌ ಇಡೀ ದಿನ ಟಿವಿ ಬಿಟ್ಟು ಅಲ್ಲಾಡೋದಿಲ್ಲ,” ಎಂದಳು.

ಅತ್ತೆ ಸೊಸೆಯರಿಬ್ಬರೂ ಸಿಂಗರಿಸಿಕೊಂಡು ಬಂದದ್ದನ್ನು ನೋಡಿ ವಿವೇಕ್‌ ಕೇಳಿದ, “ಎಲ್ಲಿಗೆ ಹೊರಟಿರಿ?”

“ಸಿನಿಮಾಕ್ಕೆ ಹೋಗುತ್ತಾ ಇದ್ದೇವೆ,” ಮಾಲತಿ ಹೇಳಿದಳು.

ಪತಿರಾಯನಿಗೆ ಕರೆಂಟ್‌ ಹೊಡೆದಂತಾಯಿತು. “ಯಾರ ಜೊತೆ?” ಕೇಳಿದರು ಸುಧಾಕರ್‌.

“ಇನ್ಯಾರ ಜೊತೆ? ನನ್ನ ಸೊಸೆ ಜೊತೆ ಹೋಗ್ತಾ ಇದ್ದೀನಿ. ನಿಮ್ಮಿಬ್ಬರಿಗೂ ಅಡುಗೆ ತಯಾರಿದೆ. ನಾವು ಹೊರಗಡೆ ಡಿನ್ನರ್‌ ಮುಗಿಸಿಕೊಂಡು ಬರುತ್ತೇವೆ. ಬೈ….” ಎಂದು ಮುಗುಳ್ನಗುತ್ತಾ ಮಾಲತಿ ಸೊಸೆಯೊಂದಿಗೆ ಹೊರನಡೆದಳು.

ಅತ್ತೆ ಸೊಸೆಯರು ಗೆಳತಿಯರಂತೆ ಸಿನಿಮಾವನ್ನು ಎಂಜಾಯ್‌ ಮಾಡಿದರು. ನಾಯಕಿಯ ನಟನಾ ಕೌಶಲ್ಯದ ಬಗ್ಗೆ ಮಾತನಾಡಿದರು. ಹಾಸ್ಯ ಸನ್ನಿವೇಶಗಳನ್ನು ನೆನೆಸಿಕೊಂಡು ಮನಸಾರೆ ನಕ್ಕರು.  ಡಿನ್ನರ್‌ ಮುಗಿಸಿಕೊಂಡು ಇಬ್ಬರೂ ರಾತ್ರಿ 10 ಗಂಟೆಗೆ ಮನೆಗೆ ಬಂದರು.

ಆ ಹೊತ್ತಿಗೆ ಅಪ್ಪ ಮಗ ನೋಡುತ್ತಿದ್ದ ಮ್ಯಾಚ್‌ ಮುಗಿದುಹೋಗಿತ್ತು. ಮನೆಯಲ್ಲಿ ಹೆಂಗಳೆಯರ ಸದ್ದಿಲ್ಲದೆ ಇಬ್ಬರಿಗೂ ಬೋರ್‌ ಆಗಿತ್ತು.

ಇದಾದ ನಂತರ ಮಾಲತಿ ಮತ್ತು ರೇಖಾರ ಅತ್ತೆ-ಸೊಸೆಯ ಸಂಬಂಧ ಗೆಳತಿಯರ ಸ್ನೇಹ ಸಂಬಂಧದ ತಿರುವು ಪಡೆಯಿತು. ಎಲ್ಲಿಗಾದರೂ ಹೊರಡುವ ಬಗ್ಗೆ ಸುಧಾಕರ್‌ ಮತ್ತು ವಿವೇಕ್‌ ಕೊಂಚ ತಕರಾರು ಮಾಡಿದರೆ ಇವರಿಬ್ಬರೂ ಅವರನ್ನು ಮತ್ತೆ ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. ಇವರೇ ಜೊತೆಯಾಗಿ ಶಾಪಿಂಗ್‌ಗೆ ಹೊರಡುತ್ತಿದ್ದರು. ಏಕೆಂದರೆ ಪುರುಷರಿಬ್ಬರಿಗೂ ಲೇಡೀಸ್‌ ಶಾಪಿಂಗ್‌ ಎಂದರೆ ತಲೆಶೂಲೆ. ಈಗ ಅವರಿಗೆ ಬೇರೆ ಗೆಳತಿಯರ ಅಗತ್ಯವೇ ಇಲ್ಲವಾಗಿದೆ.

ವಿವೇಕ್‌ ಮತ್ತು ಸುಧಾಕರ್‌ ಇಬ್ಬರಿಗೂ ಕ್ರಿಕೆಟ್‌ ಹುಚ್ಚು. ರಜಾ ದಿನಗಳಲ್ಲಿ ಮ್ಯಾಚ್‌ ನೋಡುತ್ತಾ ಟಿವಿ ಮುಂದೆ ಕುಳಿತುಬಿಡುತ್ತಿದ್ದರು. ರಿಪೀಟ್‌ ಮ್ಯಾಚ್‌ಗಳನ್ನೂ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಅವರಿಗೆ ಸಿನಿಮಾ, ಶಾಪಿಂಗ್‌ ಬಗ್ಗೆ ಪ್ರೀತಿ ಇಲ್ಲ. ವಿವೇಕ್‌ ತನ್ನನ್ನು ಹೊರಗೆ ಕರೆದುಕೊಂಡು ಹೋಗದಿರುವ ಬಗ್ಗೆ ಈಗ ರೇಖಾಳಿಗೆ ಯಾವ ದೂರೂ ಇಲ್ಲ. ವಿವೇಕ್‌ ಮತ್ತು ಸುಧಾಕರ್‌ಗೆ ಟಿವಿ ನೋಡಲು ಹೆಂಗಸರ ಕಡೆಯಿಂದ ತೊಂದರೆಯೂ ಇಲ್ಲ. ನಾಲ್ಕು ಜನರೂ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲೂ ಕಲಿತಿದ್ದಾರೆ.

ಎಂದಾದರೂ ವಿವೇಕ್‌ ಬಿಡುವಾಗಿದ್ದರೂ ರೇಖಾ ಹೇಳುತ್ತಾಳೆ, “ಇರಲಿ ಬಿಡಿ. ಅಮ್ಮನ ಜೊತೆ ಹೋಗುತ್ತೇನೆ. ನೀವು ಸುಮ್ಮನೆ ಅಂಗಡಿಯ ಹೊರಗೆ ಫೋನ್‌ನಲ್ಲಿ ಮಾತಾಡಿಕೊಂಡು ನಿಂತಿರುತ್ತೀರಿ. ನಿಮಗೂ ಬೇಜಾರು ತಪ್ಪುತ್ತೆ.

”ರೇಖಾಳ ಈ ವರ್ತನೆ ವಿವೇಕ್‌ಗೆ ಅಚ್ಚರಿ ಹುಟ್ಟಿಸುತ್ತದೆ. ಸುಧಾಕರ್‌ಗೂ ಹೀಗೆಯೇ ಆಗುತ್ತಿದೆ. ಮಾಲತಿಗೆ ರೇಖಾಳ ಕಂಪನಿಯೇ ಇಷ್ಟವಾಗುತ್ತದೆ. ಅತ್ತೆ-ಸೊಸೆಯ ಹೊಂದಾಣಿಕೆಯನ್ನು ಕಂಡು ತಂದೆ ಮಗ ದಂದಾಗಿದ್ದಾರೆ.

“ನೀವಿಬ್ಬರೂ ಈಗ ನಮ್ಮನ್ನು ಮರೆತೇಬಿಟ್ಟಿದ್ದೀರಿ,” ಎಂದು ಕೆಲವೊಮ್ಮೆ ಅವರು ಹೇಳುವುದೂ ಉಂಟು.ಮನೆಯ ವಾತಾವರಣ ತಿಳಿಯಾಗಿ ಸಂತೋಷಮಯವಾಗಿರುತ್ತದೆ.

ಎಲ್ಲ ಮನೆಗಳಲ್ಲಿ ಅತ್ತೆ-ಸೊಸೆಯರು ಸ್ನೇಹಿತೆಯರಂತೆ ಆಗಿಬಿಟ್ಟರೆ ಬದುಕು ರಂಗೇರುತ್ತದೆ. ಇದಕ್ಕಾಗಿ ಇಬ್ಬರೂ ಪರಸ್ಪರರ ಕಷ್ಟ ಸುಖ, ಇಷ್ಟಾನಿಷ್ಟಗಳು ಮತ್ತು ಭಾವನೆಗಳನ್ನು ಗಮನಿಸಬೇಕು ಮತ್ತು ಗೌರವಿಸಬೇಕು. ಪತಿ-ಪತ್ನಿಯರ ಆಸಕ್ತಿ ಒಂದೇ ಬಗೆಯಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಒಬ್ಬರು ತಮ್ಮ ಆಸೆಯನ್ನು ಅದುಮಿಟ್ಟು ಬದುಕಬೇಕಿಲ್ಲ. ತಂದೆ ಮಗನ ಆಸಕ್ತಿ ಒಂದು ಬಗೆಯಾಗಿದ್ದು, ಅತ್ತೆ ಸೊಸೆಯರು ಪರಸ್ಪರ ಸಾಮರಸ್ಯದಿಂದಿರಲು ಸಾಧ್ಯವಾದರೆ ಮಾಲತಿ ಮತ್ತು ರೇಖಾರಂತೆ ಕೂಡಿ ಬಾಳುತ್ತಾ ಮನೆಯ ವಾತಾವರಣನ್ನು ಸುಖಮಯಗೊಳಿಸಬಹುದಲ್ಲವೇ?

ಮತ್ತೊಂದು ದೃಷ್ಟಾಂತವನ್ನು ನೋಡೋಣ. ಅನಿಲ್ ತನ್ನ ಸಹೋದ್ಯೋಗಿ ಸುಮಾಳನ್ನು ಮದುವೆ ಮಾಡಿಕೊಂಡ. ಅದೊಂದು ಅಂತರ್ಜಾತೀಯ ವಿವಾಹ. ಇಬ್ಬರ ಆಹಾರ, ಆಚಾರ ಪದ್ಧತಿಗಳು ವಿಭಿನ್ನ. ಅವರಿಬ್ಬರೂ ಕೆಲಸದ ಸಲುವಾಗಿ ಹೈದರಾಬಾದಿನಲ್ಲಿ ವಾಸಿಸುತ್ತಿದ್ದರು.

ರಜಾ ದಿನಗಳಲ್ಲಿ ಸೊಸೆಯೊಡನೆ ಮಗ ಮನೆಗೆ ಬಂದಾಗ, ಅನಿಲನ ತಾಯಿ ಪಾರ್ವತಮ್ಮ ಬಲು ಎಚ್ಚರಿಕೆಯಿಂದ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಸೊಸೆ ಕುಲೀನ ಬ್ರಾಹ್ಮಣ ಕುಟುಂಬದವಳು, ಶುದ್ಧ ಸಸ್ಯಾಹಾರಿ ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರಿರುವಷ್ಟು ದಿನ ಕೇವಲ ಸಸ್ಯಾಹಾರಿ ಅಡುಗೆಯನ್ನು ಮಾಡುತ್ತಿದ್ದರು. ಇದರಿಂದ ಸುಮಾಳಿಗೆ ಅತ್ತೆಯ ಬಗ್ಗೆ ಪ್ರೀತಿ ಗೌರವಗಳು ಮೂಡಿದವು. ಸಮಯ ಕಳೆದಂತೆ ಅವರಿಬ್ಬರ ಬಾಂಧವ್ಯದ ಬೆಸುಗೆ ಭದ್ರವಾಗುತ್ತಾ ಹೋಯಿತು. ಬೇರೆ ಬೇರೆ ಜಾತಿಗೆ ಸೇರಿದವರಾದ ಈ ಅತ್ತೆ ಸೊಸೆಯರ ಪ್ರೀತಿಯ ಸಂಬಂಧವನ್ನು ಕಂಡು ನೆರೆಹೊರೆಯವರು ಮತ್ತು ನೆಂಟರಿಷ್ಟರು ಬೆರಗಾದರು.

ಪಾರ್ತಮ್ಮ ಶಾಂತ ಮತ್ತು ಗಂಭೀರ ಸ್ವಭಾವದ ಮಹಿಳೆಯಾಗಿದ್ದರೂ ಸಹ ತಮಾಷೆ ಮತ್ತು ಹುಡುಗಾಟಿಕೆ ಮಾಡುವ ಸೊಸೆಯೊಡನೆ ನಗುನಗುತ್ತಾ ಮಾತನಾಡುತ್ತಿದ್ದರು. ಸಂತೋಷದಿಂದ ಅವಳೊಡನೆ ಹೊರಗೆ ಹೋಗುತ್ತಿದ್ದರು. ಅವರ ಈ ಪರಿಯನ್ನು ಕಂಡು ತಂದೆ ಮಗ ಬೆರಗಾಗಿ ನಿಲ್ಲುತ್ತಿದ್ದರು.

ಇಂದಿನ ಅತ್ತೆಯವರೆಲ್ಲರೂ ಹಿಂದಿನ ಸಿನಿಮಾಗಳಲ್ಲಿ ತೋರಿಸುತ್ತಿದ್ದ ರಮಾದೇವಿಯಂತಹ ಅತ್ತೆಯರಲ್ಲ. ಅವರೂ ಸೊಸೆಯರೊಂದಿಗೆ ಸಂತೋಷದಿಂದ ಬಾಳಲು ಇಚ್ಛಿಸುತ್ತಾರೆ. ತಾವು ಅದುವರೆಗಿನ ಜೀವನದಲ್ಲಿ ಪಡೆಯಲಾಗದ ಪ್ರೀತಿಯನ್ನು ಪೂರೈಸಿಕೊಳ್ಳಲಾಗದ ಇಚ್ಛೆಗಳನ್ನು ಸೊಸೆಯ ಪ್ರೀತ್ಯಾದರಗಳ ಸಾಂಗತ್ಯದಲ್ಲಿ ಅನುಭವಿಸಿ ಸುಖಿಸುತ್ತಾರೆ.

ಇಂದಿನ ಸೊಸೆಯರಲ್ಲಿ ಹೆಚ್ಚಿನವರೆಲ್ಲ ವಿದ್ಯಾವಂತೆಯರು ಮತ್ತು ಬುದ್ಧಿವಂತರು. ಅವರು ತಮ್ಮ ಕರ್ತವ್ಯ, ಹಕ್ಕು ಅಧಿಕಾರಗಳ ಬಗ್ಗೆ ತಿಳಿದವರಾಗಿದ್ದಾರೆ. ಉದ್ಯೋಗಸ್ಥೆಯರಾದ ಅವರು ತಮ್ಮ ರಜಾ ದಿನಗಳಲ್ಲಿ ಕೊಂಚ ವಿಶ್ರಮಿಸಲು ಬಯಸುತ್ತಾರೆ. ಅತ್ತೆಯ ಪ್ರೀತಿ, ಸ್ನೇಹದ ಜೊತೆ ಸಿಕ್ಕಿದಾಗ ಅವರೂ ಉತ್ಸಾಹಭರಿತರಾಗುತ್ತಾರೆ.

ಇಬ್ಬರೂ ಸಾಮರಸ್ಯದಿಂದ ಬಾಳಿದಾಗಲೇ ಜೀವನದಲ್ಲಿ ಆನಂದವನ್ನು ಅನುಭವಿಸಬಹುದು. ಜಗಳ ದೋಷಾರೋಪಣೆಯಿಂದ ತಮ್ಮ ಮತ್ತು ಇತರರ ಬಾಳನ್ನು ದುಸ್ತರ ಮಾಡುವುದರಿಂದ ಯಾವ ಪ್ರಯೋಜನ ಇಲ್ಲ ಎಂಬುದನ್ನು ಇಂದಿನ ಅತ್ತೆ ಸೊಸೆಯರು ಅರಿತಿದ್ದಾರೆ. ಅಂತೆಯೇ  ಅವರು ಗೆಳತಿಯರಂತೆ ನಡೆಯಲು ಪ್ರಾರಂಭಿಸಿದ್ದಾರೆ.

– ಪೂರ್ಣಿಮಾ ಆನಂದ್‌ 

ಅತ್ತೆ ಸೊಸೆಯರು ಜೊತೆ ಜೊತೆಯಾಗಿ ಮಾಡಬಹುದಾದ 10 ವಿಷಯಗಳು

  1. ಬ್ಯೂಟಿ ಪಾರ್ಲರ್‌ಗೆ ಹೋಗುವುದು.
  2. ಉಳಿತಾಯದ ಹಣವನ್ನು ಸರಿಯಾದ ರೀತಿಯಲ್ಲಿ ಬಳಸುವುದು.
  3. ಮನೆಯ ಸಿಂಗಾರದಲ್ಲಿ ಜೊತೆಯಾಗುವುದು.
  4. ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರೆ, ಆಗಾಗ ಹಗಲು ರಾತ್ರಿಗಳನ್ನು ಒಟ್ಟಾಗಿ ಕಳೆಯುವುದು.
  5. ಒಬ್ಬರ ಅತಿಥಿಗಳು ಮನೆಗೆ ಬಂದಾಗ ಇನ್ನೊಬ್ಬರು ಅವರನ್ನು ಸತ್ಕರಿಸುವುದು.
  6. ಒಂದೇ ಕಿಟಿ ಪಾರ್ಟಿಗೆ ಹೋಗುವುದು.
  7. ಕೆಲವೊಮ್ಮೆ ಒಂದೇ ಬಣ್ಣದ ಡ್ರೆಸ್‌ ತೊಡುವುದು.
  8. ಇಬ್ಬರೂ ತಮ್ಮ ಗೆಳತಿಯರನ್ನು ಒಂದೇ ದಿನ ಮನೆಗೆ ಆಹ್ವಾನಿಸುವುದು.
  9. ಪೇಂಟಿಂಗ್‌, ಕುಕಿಂಗ್‌ ಕ್ಲಾಸ್‌ಗಳಿಗೆ ಒಟ್ಟಿಗೆ ಹೋಗುವುದು.
  10. ಒಟ್ಟಾಗಿ ಸೇರಿ ತಮ್ಮ ಪತಿಯಂದಿರನ್ನು ತಮಾಷೆ ಮಾಡಿ ರೇಗಿಸುವುದು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ