ಮಗು ತುಂಟತನ ಮಾಡಿದರೆ ತಂದೆ ತಾಯಂದಿರು ಏನು ಮಾಡುವರು? ಗದರಿಸುತ್ತಾರೆ, ಒಂದರೆಡು ಏಟು ಕೊಡುತ್ತಾರೆ ಅಥವಾ ಹೆಚ್ಚೆಂದರೆ ಒಂದು ಹೊತ್ತಿನ ಊಟ ತಪ್ಪಿಸುತ್ತಾರೆ.

ಆದರೆ ಜಪಾನ್‌ ದೇಶದ ಟೋಕಿಯೋ ನಗರದಲ್ಲಿ 7 ವರ್ಷ ವಯಸ್ಸಿನ ಒಂದು ಮಗುವಿನ ತಂದೆ ತಾಯಿ ಮಗುವಿಗೆ ಶಿಕ್ಷೆ ನೀಡುವ ಸಲುವಾಗಿ ಅದನ್ನು ಸ್ವಲ್ಪ ಹೊತ್ತು ಒಂದು ದಟ್ಟವಾದ ಕಾಡಿನಲ್ಲಿ ಬಿಟ್ಟುಬಿಟ್ಟರು. 5 ನಿಮಿಷಗಳ ನಂತರ ಮಗುವನ್ನು ಕರೆತರಲು ಆ ಸ್ಥಳಕ್ಕೆ ಹೋದಾಗ ಅವರಿಗೆ ಮಗು ಸಿಗಲಿಲ್ಲ. 1 ವಾರ ಕಾಲ ಇತರರ ಜೊತೆಗೂಡಿ ಕಾಡಿನಲ್ಲೆಲ್ಲಾ ಹುಡುಕಿದರೂ ಮಗು ಸಿಗದಿದ್ದಾಗ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಇಡೀ ವಿಶ್ವದಲ್ಲೇ ಈ ಸುದ್ದಿ ಹರಡಿ ತಂದೆತಾಯಿಗೆ ನಿಂದೆಯ ಸುರಿಮಳೆಯಾಯಿತು.

ಜೂನ್‌ 3, 2016ರಂದು ಯಾಮತೊ ತಾಮರಾ ಎಂಬ ಹೆಸರಿನ ಈ ಮಗು ಒಂದು ಮಿಲ್ಟ್ರಿ ಕ್ಯಾಂಪ್‌ನಲ್ಲಿ ಸಿಕ್ಕಿತು. ಖಾಲಿ ಬಿದ್ದಿದ್ದ ಆ ಗುಡಿಸಲಿನಲ್ಲಿ ಮಗು ರಕ್ಷಣೆ ಪಡೆದಿತ್ತು. ನೀರು ಕುಡಿದು, ನೆಲದ ಮೇಲೆ ಮಲಗಿ ಅದು ತನ್ನ ಜೀವ ಉಳಿಸಿಕೊಂಡಿತ್ತು.

ಮೀಡಿಯಾದವರು ಮಗುವಿನ ತಂದೆಯನ್ನು ಸಂದರ್ಶನ ಮಾಡಿದಾಗ ಆತ ಗದ್ಗದ ಸ್ವರದಿಂದ ತಾನು ಮಗುವಿನ ಕ್ಷಮೆ ಕೇಳಿದುದಾಗಿ ಹೇಳಿದರು.

ಕೆಲವು ತಂದೆತಾಯಿಯರು ತಮ್ಮ ಮಕ್ಕಳನ್ನು ಪರ್ಫೆಕ್ಷನಿಸ್ಟ್ ಮಾಡಲು ಅತಿಯಾದ ಕಠೋರತೆಯನ್ನು ತೋರುತ್ತಾರೆ. ಇದಕ್ಕಾಗಿ ಅವರು ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಎಮಿ ಚುವಾ ಎಂಬ ಹೆಸರಿನ ಪ್ರೊಫೆಸರ್‌ ಒಬ್ಬರು 2011ರಲ್ಲಿ ತಮ್ಮ `ಬ್ಯಾಟ್‌ ಹೈಮ್ ಆಫ್‌ ದಿ ಟೈಗರ್‌ ಮದರ್‌’ ಎಂಬ ಪುಸ್ತಕದಲ್ಲಿ ಟೈಗರ್‌ ಮಾಮ್ ಗಳ ಸ್ವಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. ಟೈಗರ್‌ ಮಾಮ್ ಪೇರೆಂಟ್ಸ್ ಎಂದರೆ ಅತಿಯಾದ ಸ್ಟ್ರಿಕ್ಟ್ ಮತ್ತು ಡಿಮ್ಯಾಂಡಿಂಗ್‌ ಪೇರೆಂಟ್ಸ್ ಎಂದರ್ಥ. ಇವರು ತಮ್ಮ ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಪರ್ಫಾರ್ಮೆನ್ಸ್ ನೀಡಬೇಕೆಂದು ಒತ್ತಡ ಹೇರುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಸುರಕ್ಷಿತ ಸ್ಥಾನದಲ್ಲಿರಲಿ ಎಂಬ ಅಪೇಕ್ಷೆಯಿಂದ ಇರುವ ತಮ್ಮ ಮಕ್ಕಳು ಚೆನ್ನಾಗಿ ಓದುವುದರ ಜೊತೆಗೆ ಇತರೆ ಅವಾರ್ಡ್‌ ವಿನಿಂಗ್‌ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರಿಸಲು ಅಪಾರ ಪ್ರಯತ್ನ ಪಡುತ್ತಾರೆ.

ಈ ಟೈಗರ್‌ ಪೇರೆಂಟ್ಸ್ ನ ಮಕ್ಕಳು ತಂದೆತಾಯಿಯ ಅಪೇಕ್ಷೆಗೆ ತಕ್ಕಂತಹ ಪ್ರದರ್ಶನ ನೀಡದಿದ್ದರೆ, ಮಕ್ಕಳನ್ನು ಬೆದರಿಸುವುದರ ಜೊತೆಗೆ ಶಾರೀರಿಕ ಶಿಕ್ಷೆಯನ್ನೂ ನೀಡುತ್ತಾರೆ. ಮಕ್ಕಳು ಸ್ವತಃ ತಮ್ಮ ತೀರ್ಮಾನ ತೆಗೆದುಕೊಳ್ಳಲು ಇವರು ಎಂದೂ ಅನುಮತಿ ನೀಡುವುದಿಲ್ಲ.

ಮಕ್ಕಳ ಸಫಲ ಜೀವನ ಅವರ ತಂದೆತಾಯಂದಿರ ಕೌಶಲ್ಯವನ್ನು ತೋರಿಸುತ್ತದೆ ಮತ್ತು ಮಕ್ಕಳ ಯಶಸ್ಸು ತಂದೆ ತಾಯಂದಿರ ಹೆಮ್ಮೆಗೆ ಗರಿ ಮೂಡಿಸುತ್ತದೆ ಎಂದು ಎಮಿಚುವಾ ಅಭಿಪ್ರಾಯಪಡುತ್ತಾರೆ. ಆದರೆ ಕೆರಿಯರ್‌ನ ದೃಷ್ಟಿಯಿಂದ ಮಕ್ಕಳು ಉತ್ತಮ ಸ್ಥಾನಕ್ಕೇರಿದರೂ, ಅತಿಯಾದ ಕಾಠಿಣ್ಯದಿಂದ ಮಕ್ಕಳು ಶಾಲಾ ಜೀವನದಲ್ಲಿ ಹೊಂದಾಣಿಕ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅವರ ಆತ್ಮವಿಶ್ವಾಸ ಕುಂದುತ್ತದೆ ಮತ್ತು ಅವರು ನಿರುತ್ಸಾಹಿಗಳಾಗುವ ಸಂಭವ ಹೆಚ್ಚಾಗಿರುತ್ತದೆ.

ಚೀನಾ ದೇಶದ ಹ್ಯಾಂಡ್‌ರೋಂಉ ಎಂಬ ಸ್ಥಳದಲ್ಲಿ 589 ಮಂದಿ ಮಿಡಲ್ ಸ್ಕೂಲ್‌ ಮತ್ತು ಹೈಸ್ಕೂಲ್‌ ಮಕ್ಕಳಿಗೆ ನಡೆಸಿದ ಒಂದು ಸರ್ವೆಯ ಪ್ರಕಾರ ಟೈಗರ್‌ ಮಾಮ್ ಟೈಪ್‌ ಪೇರೆಂಟಿಂಗ್‌ ಪ್ರಯೋಜನಕಾರಿಯಲ್ಲ ಎಂದು ತಿಳಿದುಬಂದಿದೆ. ಅವಶ್ಯಕತೆಗಿಂತ ಹೆಚ್ಚು ಹತೋಟಿಯು ಮಕ್ಕಳಲ್ಲಿ ಹತಾಶೆಯನ್ನು ಹುಟ್ಟಿಸಬಹುದಾಗಿದೆ.

ಸರೋಜ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸಂದೀಪ್‌ ಗೊಯೆಲ್‌ ಈ ಬಗ್ಗೆ ಹೀಗೆ ಹೇಳುತ್ತಾರೆ, ಸರ್ವಾಧಿಕಾರಿಯಂತೆ ಮಕ್ಕಳ ಮೇಲೆ ತಮ್ಮ ಇಚ್ಛೆ ಆದೇಶಗಳನ್ನು ಹೇರುವ ಮತ್ತು ಮಕ್ಕಳಿಗೆ ಮಾತನಾಡುವ ಅವಕಾಶವನ್ನೇ ನೀಡದಿರುವ ತಂದೆತಾಯಿಯರು ಹೀಗೆ ಮಾಡುವುದರಿಂದ ತಮ್ಮ ಮಕ್ಕಳ ಆತ್ಮವಿಶ್ವಾಸವನ್ನು ಕಳೆಯುತ್ತಿದ್ದೇವೆಂದು ತಿಳಿದುಕೊಂಡಿರುವುದಿಲ್ಲ. ಮಕ್ಕಳನ್ನು ಶಿಸ್ತಿನಲ್ಲಿರಿಸುವುದು ಸರಿಯೇ. ಆದರೆ ಅವರಿಗೆ ನಿಮ್ಮ ಪ್ರೀತಿ ಮತ್ತು ಸಾಂಗತ್ಯದ ಅವಶ್ಯಕತೆ ಇದ್ದಾಗ ಅವು ದೊರೆಯುವಂತಿರಬೇಕು. ಪ್ರೀತಿ ಅಥವಾ ಶಿಸ್ತು ಯಾವುದಕ್ಕೂ ಒಂದು ಎಲ್ಲೆಯಿರಬೇಕು. ಯಾವುದೇ ವಿಷಯ ಎಲ್ಲೆ ಮೀರಿದರೆ ಅದರಿಂದ ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಮಕ್ಕಳಲ್ಲಿ ಏನಾದರೂ ಬಿಹೇವಿಯರ್‌ ಪ್ರಾಬ್ಲಮ್ ಕಂಡುಬಂದರೆ, ನಿಮ್ಮ ಮಗುವಿನ ಜೊತೆಗೆ ನಿಮ್ಮ ಸಂಬಂಧ ಹೇಗಿದೆಯೆಂಬ ಕಡೆ ನೀವು ಗಮನ ನೀಡಬೇಕು. ಒಳ್ಳೆಯ ಪೋಷಣೆಯ ಲಕ್ಷಣವೆಂದರೆ ಅದರಲ್ಲಿ ಸಹಾನುಭೂತಿ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಆತ್ಮನಿಯಂತ್ರಣ, ಕರುಣೆ, ಸಹಕಾರ, ಮನುಷ್ಯತ್ವ ಮುಂತಾದ ಗುಣಗಳು ಅಡಕವಾಗಿರಬೇಕು. ಇಂತಹ ಪೋಷಣೆಯು ಮಗುವನ್ನು ವ್ಯಾಕುಲತೆ, ಖಿನ್ನತೆ, ಈಟಿಂಗ್‌ ಡಿಸ್‌ ಆರ್ಡರ್‌, ವಿಭಿನ್ನ ನಡವಳಿಕೆ, ಅಮಲು ಮುಂತಾದವುಗಳಿಗೆ ಬಲಿಯಾಗುವುದನ್ನು ತಪ್ಪಿಸುತ್ತದೆ.

ಒಳ್ಳೆಯ ಪೋಷಕರಾಗಲು ಈ ವಿಷಯಗಳನ್ನು ಗಮನದಲ್ಲಿಡಿ

ಅತಿಯಾದ ಶಿಸ್ತಿನಿಂದ ಸಮಸ್ಯೆಗಳು : ಡಾ. ಸಂದೀಪ್‌ ಗೋಯೆಲ್‌ರ ಪ್ರಕಾರ, ಮಕ್ಕಳನ್ನು ಅತ್ಯಧಿಕ ಶಿಸ್ತಿನಿಂದ ಬೆಳೆಸುವ ತಂದೆತಾಯಂದಿರು ಪ್ರತಿಯೊಂದು ವಿಷಯದಲ್ಲಿಯೂ ಕಠಿಣ ನಿಯಮವನ್ನು ರೂಪಿಸುತ್ತಾರೆ. ವಿದ್ಯಾಭ್ಯಾಸ ಮತ್ತು ರಕ್ಷಣೆಯ ವಿಷಯದಲ್ಲಿ ಶಿಸ್ತಿನಲ್ಲಿಡುವುದು ಸರಿ. ಆದರೆ ನಿಮ್ಮ ಮಕ್ಕಳ ಜೀವನದ ಪ್ರತಿಯೊಂದು ಹೆಜ್ಜೆಗೂ ನಿಯಮವನ್ನು ರೂಪಿಸುತ್ತಾ ಹೋದರೆ, ಈ ಸಮಸ್ಯೆಗಳು ಎದುರಾಗುತ್ತವೆ.

ಬಂಡಾಯ : ಅತಿ ಹೆಚ್ಚು ಶಿಸ್ತಿನಲ್ಲಿ ಬೆಳೆಯುವ ಮಕ್ಕಳಿಗೆ ಅವರು ಮುಂದೆ ಜವಾಬ್ದಾರಿಯುತ ವ್ಯಕ್ತಿಯಾಗಲು ಅಗತ್ಯವಾದ ಸ್ವಾತಂತ್ರ್ಯ ದೊರೆಯುವುದಿಲ್ಲ. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದೇ ತಿಳಿಯುವುದಿಲ್ಲ. ಅವರಿಗೆ ಕೇವಲ ನಿಯಮಪಾಲನೆಯನ್ನು ಮಾತ್ರ ಕಲಿಸಲಾಗುವುದೇ ಹೊರತು ಸ್ವನಿಯಂತ್ರಣವನ್ನು ಹೇಳಿಕೊಟ್ಟಿರುವುದಿಲ್ಲ. ಹೀಗಾಗಿ ಅವರಲ್ಲಿ ಆ ಗುಣವೇ ವಿಕಸಿತವಾಗುವುದಿಲ್ಲ. ಇದರಿಂದಾಗಿ ಅಂತಹ ಮಕ್ಕಳಲ್ಲಿ ಬಂಡಾಯದ ಪ್ರವೃತ್ತಿ ತಲೆದೋರುವ ಸಂಭವಿರುತ್ತದೆ.

ಭಯ : ಪೇರೆಂಟ್ಸ್ ಅತಿ ಶಿಸ್ತಿನವರಾದರೆ ಮಕ್ಕಳು ಅವರೊಡನೆ ಮಾತನಾಡಲು ಭಯಪಡುತ್ತಾರೆ. ತಮ್ಮ ಮನಸ್ಸಿನ ಭಾವನೆ, ವಿಚಾರ ಅಥವಾ ಕೆಲಸದ ಬಗ್ಗೆ ತಂದೆ ತಾಯಿಯೊಡನೆ ಮಾತನಾಡಲು ಹೊರಟರೆ ಅವರಿಂದ ಬೈಗಳು ಅಥವಾ ಹೊಡೆತ ತಿನ್ನಬೇಕಾಗುವುದೆಂದು ಹೆದರಿ ಮಕ್ಕಳು ವಿಷಯವನ್ನು ತಮ್ಮಲ್ಲೇ ಮುಚ್ಚಿಟ್ಟುಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಯಾವುದಾದರೂ ಸಮಸ್ಯೆ ಎದುರಾದಾಗ, ತಾವೇ ಅದನ್ನು ಪರಿಹರಿಸಲು ಸಾಧ್ಯವಾಗದಿದ್ದರೂ, ತಂದೆತಾಯಿಯೊಡನೆ ಅದನ್ನು ಹಂಚಿಕೊಳ್ಳಲು ಹೋಗುವುದಿಲ್ಲ.

ಅನುಕರಣೆ: ಮಕ್ಕಳಿಗೆ ಅತಿ ಬಿಗಿ ನಿಯಮಗಳನ್ನು ಹೇರುವ ಮತ್ತು ಅವರಿಗೆ ಸ್ವತಃ ತೀರ್ಮಾನ ತೆಗೆದುಕೊಳ್ಳಲು ಬಿಡದಿರುವ ತಂದೆತಾಯಂದಿರ ದೆಸೆಯಿಂದಾಗಿ ಆ ಮಕ್ಕಳು ದೊಡ್ಡವರಾದ ಮೇಲೂ ತಾವೇ ಯಾವುದೇ ನಿರ್ಣಯ ತೆಗೆದುಕೊಳ್ಳಲು ಅಸಮರ್ಥರಾಗುತ್ತಾರೆ. ಒಂದು ವೇಳೆ ಒಂದು ನಿರ್ಣಯ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುವುದಿಲ್ಲ. ಅವರು ಯಾವಾಗಲೂ ತಮಗಿಂತ ದೃಢಮನಸ್ಕರಾದವರನ್ನು ಅನುಕರಣೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ.

ಮಾದರಿಯಾಗಿರಿ : ಮಕ್ಕಳು ತಮ್ಮ ತಂದೆತಾಯಂದಿರನ್ನು ನೋಡಿಯೇ ಕಲಿಯುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ನುಡಿಗಿಂತ ನಡೆಯೇ ಹೆಚ್ಚು ಪ್ರಭಾವಯುತವಾಗಿರುತ್ತದೆ. ಮೊದಲು ನಿಮ್ಮ ಒಳ್ಳೆಯ ನಡತೆಯಿಂದ ಮಾದರಿಯಾಗಿ ನಿಲ್ಲಿ. ನಂತರವೇ ಮಕ್ಕಳಿಂದ ಒಳ್ಳೆಯ ನಡತೆಯನ್ನು ಅಪೇಕ್ಷಿಸಿ.

ಅತಿ ಸಲಿಗೆ ಬೇಡ : ಮಕ್ಕಳಿಗೆ ಹೆಚ್ಚು ಸಲಿಗೆಯನ್ನೂ ಕೊಡಬೇಡಿ. ಅವರ ಪ್ರತಿಯೊಂದು ಮಾತಿಗೂ ಒಪ್ಪಿಗೆ ನೀಡುತ್ತಿರಬೇಡಿ. ಏಕೆಂದರೆ ಅವರಿಗೆ ಸರಿತಪ್ಪುಗಳ ವಿವೇಚನೆ ಇನ್ನೂ ವಿಕಸಿತಗೊಂಡಿರುವುದಿಲ್ಲ.

ಸಾಮೀಪ್ಯದ ಅನುಭವ ಮೂಡಿಸಿ : ಮಕ್ಕಳಿಗೆ ನಿಮ್ಮ ಅಗತ್ಯವಿರುವ ಸಮಯದಲ್ಲಿ ನೀವು ಶಾರೀರಿಕ ಹಾಗೂ ಮಾನಸಿಕವಾಗಿ ಅವರಿಗೆ ನಿಮ್ಮ ಸಾಮೀಪ್ಯದ ಅನುಭವ ಮೂಡಿಸಿ. ಹಾಗೆಂದ ಮಾತ್ರಕ್ಕೆ ನೀವು ಸದಾ ನೆರಳಿನಂತೆ ಅವರ ಜೊತೆಯಲ್ಲಿರುವುದು ಸರಿಯಲ್ಲ. ನಡುವೆ ಅಂತರವನ್ನು ಕಾಯ್ದುಕೊಳ್ಳಿ.

ಪಾಲನೆಯಲ್ಲಿ ಬದಲಾವಣೆ : ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ನೀವು 3 ವರ್ಷ ಮತ್ತು 13 ವರ್ಷದ ಮಕ್ಕಳೊಡನೆ ಒಂದೇ ಬಗೆಯ ವ್ಯವಹಾರ ಮಾಡಲಾರಿರಿ. ಮಕ್ಕಳ ನಡವಳಿಕೆ ಬದಲಾದಂತೆಲ್ಲ ಅದಕ್ಕೆ ತಕ್ಕಂತೆ  ಪರಸ್ಪರ ವ್ಯವಹಾರದಲ್ಲಿ ಬದಲಾವಣೆ ತನ್ನಿ.

ಸ್ವಾತಂತ್ರ್ಯ ನೀಡಿ : ಮಕ್ಕಳೊಡನೆ ವ್ಯವಹರಿಸುವಾಗ ಪ್ರೀತಿಯೊಡನೆ ಶಿಸ್ತೂ ಇರಬೇಕು. ಆದರೆ ಕಠಿಣ ನಿಯಮಗಳನ್ನು ರೂಪಿಸಬೇಡಿ. ಬಾಲ್ಯದಿಂದಲೇ ಅವರಲ್ಲಿ ಜವಾಬ್ದಾರಿಯುತ ಭಾವನೆ ಮೂಡಲಿ. ಅವರಿಗೆ ಆತ್ಮ ನಿಯಂತ್ರಣದ ವಿಧಾನವನ್ನು ಕಲಿಸಿಕೊಡಿ. ನಿಮ್ಮ ಇಷ್ಟಾನಿಷ್ಟಗಳನ್ನು ಅವರ ಮೇಲೆ ಹೇರಬೇಡಿ. ಅವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯ ನೀಡಿ.

ಪ್ರೀತಿಯೊಡನೆ ವ್ಯವಹರಿಸಿ : ಮಕ್ಕಳೊಂದಿಗೆ  ಮೃದುವಾಗಿ ಮಾತನಾಡಿ. ಅವರ ಮಾತುಗಳನ್ನು ಕಿವಿಗೊಟ್ಟು ಕೇಳಿ. ಅವರೊಡನೆ ಪ್ರೀತಿಯೊಂದಿಗೆ ವ್ಯವಹರಿಸಿ. ನೀವು ಮಕ್ಕಳೊಡನೆ ವ್ಯವಹರಿಸುವ ರೀತಿಯೇ ಅವರು ಇತರರೊಂದಿಗಿನ ವ್ಯವಹಾರಕ್ಕೆ ಆಧಾರಪ್ರಾಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

– ಜಿ. ಪಂಕಜಾ

ಮಕ್ಕಳೊಂದಿಗೆ ಹೀಗೆ ಮಾತನಾಡದಿರಿ

– ತಂದೆ ತಾಯಂದಿರು ಮಕ್ಕಳೊಂದಿಗೆ ಆಡುವ ಕೆಲವು ಮಾತುಗಳು ಅವರಿಗೆ ಕೀಳರಿಮೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಅವರೊಂದಿಗೆ ಅಂತಹ ಮಾತುಗಳನ್ನಾಡಬೇಡಿ.

– ನಿನ್ನ ವಯಸ್ಸಿನಲ್ಲಿ ನಾನು ಇನ್ನೂ ಜವಾಬ್ದಾರಿಯಿಂದಿರುತ್ತಿದ್ದೆ.

– ನೀನು ಯಾವಾಗಲೂ ತಪ್ಪು ತೀರ್ಮಾನವನ್ನೇ ತೆಗೆದುಕೊಳ್ಳುತ್ತೀಯ.

– ನಿನ್ನ ಅಕ್ಕ/ಅಣ್ಣನ ತರಹ ಯಾಕೆ ಇರುವುದಿಲ್ಲ. ಹೀಗಿರೋದಕ್ಕೆ ನಿನಗೆ ನಾಚಿಕೆ ಆಗಬೇಕು!

– ನಿನ್ನಂಥ ಮಗ/ಮಗಳು ಇರೋದಕ್ಕಿಂತ ಇಲ್ಲದೆ ಇರೋದೇ ವಾಸಿ.

– ನಿನ್ನ ಆ ಕೆಟ್ಟ ಸ್ನೇಹಿತರ ಜೊತೆ ಬಿಟ್ಟುಬಿಡು.

Tags:
COMMENT