“ಮದುವೆಗೆ ಮೊದಲು ಏನೆಲ್ಲ ಪ್ರಾಮಿಸ್‌ ಮಾಡಿದ್ದಿರಿ, ನಿನ್ನನ್ನು ಕಣ್ಣುರೆಪ್ಪೆ ಹಾಗೆ ನೋಡಿಕೊಳ್ಳುತ್ತೇನೆ. ನಿನ್ನನ್ನು ಸುಖಸಂತೋಷದಲ್ಲಿ ಮುಳುಗಿಸುತ್ತೇನೆ. ನಿನ್ನನ್ನು ರಾಣಿ ಹಾಗೆ ಇಟ್ಟುಕೊಳ್ಳುತ್ತೇನೆ ಅಂತೆಲ್ಲ ಹೇಳಿದ್ದಿರಿ. ಎಲ್ಲಿ ಹೋದವು ಆ ಮಾತುಗಳು? ನಿಮಗಂತೂ ನನ್ನ ಫೀಲಿಂಗ್ಸ್ ಬಗ್ಗೆ ಗಮನವೇ ಇಲ್ಲ. ಹಾಲಿಡೇಸ್‌ಗೆ ನನ್ನ ಹೊರಗಡೆ ಕರೆದುಕೊಂಡು ಹೋಗಿ ಎಷ್ಟು ದಿನಗಳಾದವು ಹೇಳಿ. ಈಗ  ನಿಮಗೆ ನನ್ನ ಮೇಲೆ ಪ್ರೀತಿನೂ ಇಲ್ಲ, ಕಾಳಜಿನೂ ಇಲ್ಲ.”

“ಯಾವಾಗ ನೋಡಿದರೂ ನೀನು ದೂರು ಹೇಳೋದೇ ಆಗಿದೆ. ನಿನಗೆ ಪ್ರಾಮಿಸ್‌ ಮಾಡಿದ ಹಾಗೇ ನಡೆಯಬೇಕು ಅಂತ ನಾನೂ ಪ್ರಯತ್ನಪಡುತ್ತಾನೇ ಇದ್ದೀನಿ. ಅದು ನಿನಗೇಕೆ ಅರ್ಥವಾಗೋದಿಲ್ಲ? ಮೊದಲಿನ ಪರಿಸ್ಥಿತಿ ಬೇರೆ ಇತ್ತು. ಈಗಲೇ ಬೇರೆ ತರಹ ಇದೆ. ನಾವು ನಮ್ಮ ಭವಿಷ್ಯದ ಪ್ಲಾನಿಂಗ್‌ ಮಾಡಬೇಕಲ್ಲವೇ? ಅದು ಬಿಟ್ಟು ನಿನ್ನ ಜೊತೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ಇರಬೇಕೆಂದರೆ ನಾನು ಕೆಲಸ ಬಿಡಬೇಕಾಗುತ್ತದೆ. ನೀನು ಎಷ್ಟು ಬದಲಾಯಿಸಿದ್ದೀಯ ಅಂತ ನೋಡಿಕೊ. ಮದುವೆ ಆಗುವಾಗ ನೀನು ಪ್ರಾಮಿಸ್‌ ಮಾಡಿದ್ದೇನು? ಯಾವುದಕ್ಕೂ ದೂರು ಹೇಳೋದಿಲ್ಲ, ನನ್ನ ಜೊತೆ ಎಂಥ ಪರಿಸ್ಥಿತಿಯಲ್ಲೂ ಸಂತೋಷವಾಗಿರುತ್ತೇನೆ ಅಂತ ತಾನೇ? ಮತ್ತೆ ಈಗ ಯಾಕೆ ಈ ದೂರು? ನೀನು ಹೇಳಿದ ಹಾಗೆ ನಾನು ಮಾಡಬೇಕು ಅನ್ನುತ್ತೀಯ. ನಾವು ಲೈಫ್‌ ಪಾರ್ಟ್‌ನರ್ಸ್…… ನಾನು ನಿನ್ನ ಆಳಲ್ಲ!”

ಮದುವೆಯಾದ 1-2 ವರ್ಷದ ನಂತರ ಪತಿಪತ್ನಿಯರ ನಡುವೆ ಕಮಿಟ್‌ಮೆಂಟ್‌ ಬಗೆಗಿನ ವಾದ ವಿವಾದ ತಲೆಯೆತ್ತುತ್ತದೆ. ಹಾಗೆ ನೋಡಿದರೆ ವಿವಾಹದ ಶಾಸ್ತ್ರವಿಧಿಗಳು ನಡೆಯುವಾಗ, ವಧೂವರರು ಮಂತ್ರದ ಮೂಲಕ ವಚನಗಳನ್ನು ಪಠಿಸುವಾಗಲೇ  ಕಮಿಟ್‌ಮೆಂಟ್‌ ಪ್ರಾರಂಭವಾಗುತ್ತದೆ. ವಿವಾಹವೆಂದರೆ ಜವಾಬ್ದಾರಿಯನ್ನು ಹೊರುವುದು ಎಂದು ಅರ್ಥ. ವಿವಾಹದ ಬೇಸಿಕ್‌ ಕಾನ್ಸೆಪ್ಟ್ ಯಾವುದೆಂದರೆ ಪತಿಪತ್ನಿಯರು ಪರಸ್ಪರ ಯೋಗ್ಯತೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಒಂದಾಗಿ ಗಾಡಿಯ 2 ಚಕ್ರಗಳಂತೆ ಪ್ರಗತಿಪಥದಲ್ಲಿ ಮುಂದುವರಿಯುವುದು. ಆದರೆ ಕೆಲವು ಸಲ ವಿವಾಹದ ಸಂದರ್ಭದಲ್ಲಿ ಮಾಡಿದ ಕಮಿಟ್‌ಮೆಂಟ್ಸ್, ನಂತರದ ವರ್ಷಗಳಲ್ಲಿ ಇಬ್ಬರ ನಡುವೆ ವಿವಾದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮಾಗಿ ಕೊಲೆ, ಆತ್ಮಹತ್ಯೆ ಅಥವಾ ವಿಚ್ಛೇದನಗಳು ಜರುಗುತ್ತವೆ.

ಕಮಿಟ್‌ಮೆಂಟ್‌ ಸಮರ್ಪಣೆಯಲ್ಲ

ಗಂಡು-ಹೆಣ್ಣು ವಿವಾಹ ಬಂಧನಕ್ಕೊಳಗಾಗುವ ಸಮಯದಲ್ಲಿ ಪರಸ್ಪರ ಪ್ರಾಮಿಸ್‌ಗಳನ್ನು ಮಾಡಿಕೊಳ್ಳುತ್ತಾರೆ. `ಎಲ್ಲ ಸಂದರ್ಭಗಳಲ್ಲಿಯೂ ಸಂತೋಷದಿಂದಿರುತ್ತೇವೆ. ಎಲ್ಲ ಜವಾಬ್ದಾರಿಗಳನ್ನು ಹಂಚಿಕೊಂಡು ಬಾಳುತ್ತೇವೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರುತ್ತೇವೆ. ಎಂದಿಗೂ ನಂಬಿಕೆ ದ್ರೋಹ ಮಾಡುವುದಿಲ್ಲ,’ ಇತ್ಯಾದಿ. ಆದರೆ ವೈವಾಹಿಕ ಜೀವನದ ಕೆಲವು ವರ್ಷಗಳು ಕಳೆದು, ವಾಸ್ತವಿಕತೆಯ ಹಾದಿಯಲ್ಲಿ ನಡೆಯುವಾಗ ಕೊಟ್ಟ ಭಾಷೆ ಮರೆತುಹೋಗುತ್ತದೆ ಮತ್ತು ಪರಸ್ಪರ  ಟೇಕನ್‌ ಫಾರ್‌ ಗ್ರಾಂಟೆಡ್‌ ಎಂಬ ಭಾವನೆ ಆವರಿಸುತ್ತದೆ. ಆಗ ಪರಸ್ಪರರ ಮೇಲೆ ದೂರು ಮತ್ತು ಕಮಿಟ್‌ಮೆಂಟ್ಸ್ ಪೂರೈಸದ ಆರೋಪಗಳು ಆರಂಭಗೊಳ್ಳುತ್ತದೆ.

ಇಂದು ವೈವಾಹಿಕ ಸಂಬಂಧದ ರೂಪ ಬದಲಾಗುತ್ತಿದೆ. ಈಗ ಈ ಸಂಬಂಧದಲ್ಲಿ ಪರ್ಸನಲ್ ಸ್ಪೇಸ್‌, ಪ್ರೈವೆಸಿ, ಸೆಲ್ಫ್ ರೆಸ್ಪೆಕ್ಟ್ ನಂತಹ ಪದಗಳು ಪ್ರವೇಶ ಪಡೆಯುತ್ತವೆ. ಈ ಶಬ್ದಗಳ ಆಧಾರದಿಂದ ಸಂಬಂಧಗಳು ದೀರ್ಘಕಾಲ ಉಳಿಯಲು ಸಾಧ್ಯವಾಗುತ್ತಿಲ್ಲ. ಇಂದಿನ ಪತ್ನಿ ಟಿಪಿಕಲ್ ವೈಫ್‌ ಆಗಿ ಉಳಿದಿಲ್ಲ. ಹಿಂದಿನಂತೆ ಹೌಸ್‌ ವೈಫ್‌ನಂತೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಉಳಿದು ಗೃಹಕೃತ್ಯದ ಜವಾಬ್ದಾರಿಯನ್ನಷ್ಟೇ ನಿರ್ವಹಿಸುತ್ತಿಲ್ಲ. ಹಾಗೆಯೇ ಪತಿ ಸಹ ಹಣ ಸಂಪಾದಿಸಿ ತಂದು ಯಜಮಾನನಂತೆ ಕುಳಿತಿರದೆ ಮನೆಯ ಜವಾಬ್ದಾರಿಯಲ್ಲೂ  ಹೆಗಲು ಕೊಡುತ್ತಿದ್ದಾನೆ. ಇಂದು ವೈವಾಹಿಕ ಸಂಬಂಧ ಕಾನ್ಸೆಪ್ಟ್ ಪಾರ್ಟ್‌ನರ್‌ಶಿಪ್‌ ಆಧಾರದ ಮೇಲೆ ನಿಂತಿದೆ. ಪತಿ ಪತ್ನಿಯರು ಕಮಿಟ್‌ಮೆಂಟ್‌ ಮಾಡಿ, ಅದಕ್ಕೆ ಬದ್ಧರಾಗಿ ಪರಸ್ಪರ ತಲೆಬಾಗಲು ಇಷ್ಟಪಡುತ್ತಿಲ್ಲ. ಆದರೆ ಅವರು ಅರ್ಥ ಮಾಡಿಕೊಳ್ಳಬೇಕಾದುದೆಂದರೆ, ಕಮಿಟ್‌ಮೆಂಟ್‌ ಮಾಡಿದರೆ ಅದು ಸಮರ್ಪಣೆಯಲ್ಲ ಮತ್ತು ಅವರು ಗುಲಾಮರಾಗಬೇಕಿಲ್ಲ.

ಪರಿಸ್ಥಿತಿಗೆ ತಕ್ಕಂತೆ ಕಮಿಟ್‌ಮೆಂಟ್ಸ್ ವಿವಾಹದ ಸಮಯದಲ್ಲಿ ಎಲ್ಲರೂ ಸಂತೋಷದಲ್ಲಿರುವುದರಿಂದ, ಎಲ್ಲ ವಿಷಯ ಸುಸೂತ್ರವಾಗಿ ಕಳೆದುಹೋಗುತ್ತದೆ. ಆಗ ಪತಿಪತ್ನಿಯರು ಪರಸ್ಪರ ಬಹಳಷ್ಟು ಪ್ರಾಮಿಸ್‌ಗಳನ್ನು ಮಾಡಿಕೊಳ್ಳುತ್ತಾರೆ.  ಆದರೆ ಮುಂದೆ ಪರಿಸ್ಥಿತಿ ಬದಲಾಗಬಹುದೆಂಬ ಆಲೋಚನೆ ಅವರಿಗಿರುವುದಿಲ್ಲ. ಇಂದು ನೀವು ಒಂದು ದೊಡ್ಡ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿ ಇರಬಹುದು. ಆದರೆ ನಾಳೆ ಏನಾಗುವುದೋ ಯಾರಿಗೆ ಗೊತ್ತು? ಇಂದು ನಿಮ್ಮ ಬಿಸಿನೆಸ್‌ ಚೆನ್ನಾಗಿ ನಡೆಯುತ್ತಿರಬಹುದು. ಮುಂದೆಯೂ ಹಾಗೆ ನಡೆಯುತ್ತದೆ ಎಂದು ಹೇಳಲಾಗದು. ಇಂದು ನೀವು ಜಾಯಿಂಟ್‌ ಫ್ಯಾಮಿಲಿಯಲ್ಲಿ ಇರುತ್ತಿದ್ದು, ವೆಸ್ಟರ್ನ್‌ ಡ್ರೆಸ್‌ ಧರಿಸುವಂತಿಲ್ಲ ಎಂಬಂತಿರಬಹುದು. ಆದರೆ ನಾಳೆ ವಿದೇಶದಲ್ಲಿ ನೌಕರಿ ದೊರೆತರೆ, ಅಲ್ಲಿ ಕೇವಲ ವೆಸ್ಟರ್ನ್‌ ಡ್ರೆಸ್‌ ಧರಿಸುವಂತಾಗಬಹುದು. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ಕಮಿಟ್‌ಮೆಂಟ್ಸ್ ಬದಲಾಗುತ್ತವೆ. ಹೀಗೆ ಪರಿಸ್ಥಿತಿ ಬದಲಾಗಿ ನೀವು ನಿಮ್ಮ ಕಮಿಟ್‌ಮೆಂಟ್‌ನಂತೆ ನಡೆಯದಿದ್ದರೆ ನೀವು ಕೊಟ್ಟ ಭಾಷೆಗೆ ತಪ್ಪಿದ್ದೀರೆಂದು ಅರ್ಥವಲ್ಲ. ಇದಕ್ಕಾಗಿ ನಿಮ್ಮನ್ನು ದೂಷಿಸಬೇಕಾಗಿಲ್ಲ. ಆದ್ದರಿಂದ ಜೀವನ ಸಂಗಾತಿಗಳಾದ ನೀವು ಹಳೆಯ ಕಮಿಟ್‌ಮೆಂಟ್‌ಗಳನ್ನು ಹಿಂದೆ ಬಿಟ್ಟು ವರ್ತಮಾನ ಕಾಲಕ್ಕೆ ತಕ್ಕಂತೆ ಜೀವನ ನಡೆಸುವುದರಲ್ಲಿ ನಿಮ್ಮ ಒಳಿತಿದೆ.

ಕಮಿಟ್‌ಮೆಂಟ್‌ ಪ್ರೀತಿಯ ದ್ಯೋತಕ

ಪತಿ ಪ್ರತಿ ವರ್ಷ ಪ್ರವಾಸಕ್ಕೆ ಕರೆದೊಯ್ಯುವೆನೆಂದು ಮಾತು ಕೊಟ್ಟಿದ್ದಿರಬಹುದು. ಆದರೆ 1 ವರ್ಷ ಆರ್ಥಿಕ ತೊಂದರೆಯಿಂದಾಗಿ ಹೋಗಲು ಸಾಧ್ಯವಾಗದಿದ್ದರೆ, ಪತ್ನಿ ಅದನ್ನು ಕಮಿಟ್‌ಮೆಂಟ್‌ಗೆ ತಪ್ಪಿದನೆಂದು ತಿಳಿಯಬಾರದು. ಬದಲು ಪತಿಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡು, ಎಲ್ಲ ಸರಿಹೋದ ಮೇಲೆ ಹೋದರಾಯಿತು ಎಂದು ಸಮಾಧಾನದಿಂದಿರಬೇಕು.

ವಿವಾಹವೆನ್ನುವುದು ಗಂಡು ಹೆಣ್ಣಿನ ಮತ್ತು ಸಂಸಾರದ ಸುಖಕ್ಕಾಗಿ, ರಕ್ಷಣೆಗಾಗಿ ಮತ್ತು ಪರಸ್ಪರ ಸಾಂಗತ್ಯಕ್ಕಾಗಿ ಸಮಾಜ ನಿರ್ಮಿಸಿರುವ ಒಂದು ಸಂಸ್ಥೆ. ಇಲ್ಲಿ ಪತಿ ಪತ್ನಿಯರು ಪರಸ್ಪರ  ಅಸ್ತಿತ್ವವನ್ನು ಗುರುತಿಸಿ, ವ್ಯಕ್ತಿತ್ವವನ್ನು ಗೌರವಿಸುತ್ತಾ, ಕಮಿಟ್‌ಮೆಂಟ್‌ಗಳನ್ನು ನಿರ್ಧರಿಸಿಕೊಳ್ಳಬೇಕು. ಇದು ಇಬ್ಬರ ಸಮಾನತೆಯ ವಿಷಯ. ಕಮಿಟ್‌ಮೆಂಟ್‌ನ ಅರ್ಥ ಬಂಧನವಲ್ಲ, ಗುಲಾಮಗಿರಿಯೂ ಅಲ್ಲ, ಇಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ.

ಇದು ಪ್ರೀತಿಯ ಬಾಂಧವ್ಯ ಶಿಕ್ಷೆಯಲ್ಲ

ಕಮಿಟ್‌ಮೆಂಟ್‌ ಬಗ್ಗೆ ರಿಲೇಶನ್‌ಶಿಪ್‌ ಎಕ್ಸ್ ಪರ್ಟ್ಸ್ ವಿಶೇಷ ಸಲಹೆ ನೀಡುತ್ತಾರೆ. ವಿವಾಹದ ಸಮಯದಲ್ಲಿ ಪರಿಸ್ಥಿತಿ ಫೇವರೆಬಲ್ ಆಗಿರುವುದರಿಂದ ಪತಿ ಪತ್ನಿಯರಿಗೆ ಕಮಿಟ್‌ಮೆಂಟ್‌ ಮಾಡುವುದು ಸುಲಭವಾಗಿರುತ್ತದೆ. ಆದರೆ ಸಮಯ ಕಳೆದಂತೆ ಇದನ್ನು ನಡೆಸುವುದು ಕಷ್ಟವಾಗತೊಡಗುತ್ತದೆ ಎಂದು ಎಕ್ಸ್ ಪರ್ಟ್ಸ್ ಸಹ ಅಭಿಪ್ರಾಯಪಡುತ್ತಾರೆ.

ಹೀಗಾದಾಗ ಪತಿಪತ್ನಿಯರು ಪರಸ್ಪರ ಭಾಷೆಗೆ ತಪ್ಪಿದ ಆರೋಪ ಹೊರಿಸತೊಡಗುತ್ತಾರೆ. ಪರಿಣಾಮವಾಗಿ ನೀನು ತಾನು ಎಂಬ ಮಾತುಗಳು ಹುಟ್ಟಿ ಸಂಬಂಧ ಕಹಿಯಾಗತೊಡಗುತ್ತದೆ. ಇಂತಹ ಸಂದರ್ಭದಲ್ಲಿ ವಿಶ್ವಾಸದ ಜಾಗದಲ್ಲಿ ಸಂದೇಹ ತಲೆಯೆತ್ತುತ್ತದೆ. ಪತಿಪತ್ನಿಯರಲ್ಲಿ ಯಾರಾದರೊಬ್ಬರು ಫೋನ್‌ನಲ್ಲಿ ನಗುತ್ತಾ ಮಾತನಾಡುತ್ತಿದ್ದರೆ, ಚ್ಯಾಟಿಂಗ್‌ ಮಾಡುತ್ತಿದ್ದರೆ, ಆಫೀಸ್‌ನಿಂದ ತಡವಾಗಿ ಮನೆಗೆ ಬಂದರೆ, ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡುತ್ತದೆ, ಕಮಿಟ್‌ಮೆಂಟ್‌ ಮುರಿದರೆಂಬ ಭಾವನೆ ಬರುತ್ತದೆ. ಆದರೆ ಚ್ಯಾಟಿಂಗ್‌ ಅಥವಾ ಮೀಟಿಂಗ್‌ ಪ್ರೊಫೆಶನಲ್ ಸಹ ಇರಬಹುದಲ್ಲವೇ? ಆಫೀಸಿನ ಹೆಚ್ಚಿದ ಜವಾಬ್ದಾರಿಯೂ ಆಗಿರಬಹುದು. ಆದರೆ ಇಬ್ಬರಿಗೂ ಆ ಕಡೆ ಗಮನವಿರುವುದಿಲ್ಲ.

ಆದ್ದರಿಂದ ವಿವಾಹದ ಸಮಯದಲ್ಲಿ ಪತಿಪತ್ನಿಯರು ಕಮಿಟ್‌ಮೆಂಟ್‌ ಮಾಡುವಾಗ ಅದು ಅಂದಿನ ಪರಿಸ್ಥಿತಿಗೆ ಎಂದು ಸ್ಪಷ್ಟಪಡಿಸಬೇಕು. ಮುಂದೆ ಪರಿಸ್ಥಿತಿಗೆ ತಕ್ಕಂತೆ ತಮ್ಮ ಕಮಿಟ್‌ಮೆಂಟ್‌ ಅಥವಾ ಪ್ರಾಥಮಿಕತೆಗಳು ಬದಲಾದರೂ ಪ್ರೀತಿ ಎಂದಿಗೂ ಹಾಗೇ ಇರುತ್ತದೆ. ಜೊತೆಯಾಗಿ ಜವಾಬ್ದಾರಿಗಳನ್ನು ನಿರ್ವಹಿಸೋಣ ಎಂದು ಹೇಳಿಕೊಳ್ಳಬೇಕು.

ಕಮಿಟ್‌ಮೆಂಟ್‌ ಮತ್ತು ಸಬ್‌ಮಿಟ್‌ಮೆಂಟ್‌ ಬಗ್ಗೆ ವಿವರಿಸುತ್ತಾ, ತಜ್ಞರು ಹೀಗೆ ಹೇಳುತ್ತಾರೆ, ಪತಿ ಪತ್ನಿಯರಲ್ಲಿ ಒಬ್ಬರ ಸ್ವಭಾವ ಸಬ್‌ಮಿಸಿವ್ ಆಗಿರುತ್ತದೆ. ಕುಟುಂಬದ ಪರಿಸ್ಥಿತಿ, ಪಾಲನೆ ಪೋಷಣೆಯ ರೀತಿ ಮತ್ತು ಗುಣಸ್ವಭಾವದಿಂದ ವ್ಯಕ್ತಿ ಸಬ್‌ಮಿಸಿವ್‌ ಆಗಿ ಬೆಳೆಯುವುದುಂಟು. ವಿವಾಹ ನಂತರ ಸ್ವಭಾವ ಹಾಗೇ ಉಳಿಯುತ್ತದೆ. ಅಂತಹ ವ್ಯಕ್ತಿಗಳು ಸಂಬಂಧದಲ್ಲಿ ಉಂಟಾಗುವ ಜಗಳ ಮನಸ್ತಾಪಗಳನ್ನು ತಡೆಯಲು ಸ್ವತಃ ತಟಸ್ಥರಾಗಿ ಇದ್ದುಬಿಡುತ್ತಾರೆ. ಎಲ್ಲ ಸಂದರ್ಭಗಳಲ್ಲೂ ಪತ್ನಿಯೇ ಸಬ್‌ಮಿಸಿವ್ ಆಗಿರುತ್ತಾಳೆಂದೇನೂ ಅಲ್ಲ. ಕೆಲವು ಸಂಬಂಧಗಳಲ್ಲಿ ಪತಿಯೂ ಸಬ್‌ಮಿಸಿವ್ ಆಗಿ ಎಲ್ಲ ವಿಷಯಗಳಲ್ಲೂ ಬಾಗಿ ನಡೆಯುತ್ತಾನೆ.

ಪತಿಪತ್ನಿಯರು ಅರಿಯಬೇಕಾದ ವಿಷಯವೆಂದರೆ, ಕಮಿಟ್‌ಮೆಂಟ್‌ ಮಾಡಿರುವುದೆಂದರೆ ಯಾವುದೇ ಡೀಲ್‌‌ಗೆ ಸಹಿ ಹಾಕಿದ್ದಾರೆಂದಲ್ಲ, ಮತ್ತು ಎಂತಹ ಪರಿಸ್ಥಿತಿಯಲ್ಲೂ ಅದನ್ನು ಪೂರೈಸಬೇಕೆಂದಿಲ್ಲ. ಕಮಿಟ್‌ಮೆಂಟ್‌ ಎನ್ನುವುದು ಪತಿ ಪತ್ನಿಯರ ನಡುವಿನ ಪ್ರೀತಿಯ ಸಂಕೇತ, ಪ್ರೀತಿಯನ್ನು ಬೆಸೆಯುವ ಒಂದು ಕೋಮಲ ಹೂಬಳ್ಳಿ. ಅದೊಂದು ಒಪ್ಪಂದವಲ್ಲ, ಪರಸ್ಪರ ಹೊಂದಾಣಿಕೆಯ ಸಾಧನ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಾಲಕ್ಕೆ ತಕ್ಕಂತೆ ತಾವು, ಬದಲಾಗುತ್ತಾ ಪರಸ್ಪರ ಪ್ರೀತ್ಯಾದರಗಳನ್ನು ತೋರುವುದೇ ಸುಖೀ ಜೀವನದ ಸಾರ. ತಮ್ಮ ಸಲಹೆಯನ್ನು ಮುಂದುವರೆಸುತ್ತಾ ತಜ್ಞರು ಹೀಗೆ ಹೇಳುತ್ತಾರೆ, ಕಮಿಟ್‌ಮೆಂಟ್‌ ಮಾಡುವುದೇನೂ ತಪ್ಪಲ್ಲ. ಅದಕ್ಕಾಗಿ ಪತಿಪತ್ನಿಯರು ಹೆದರಬೇಕಿಲ್ಲ. ಆದರೆ ಕಮಿಟ್‌ಮೆಂಟ್‌ನ ಅರ್ಥ ಗುಲಾಮಗಿರಿಯಲ್ಲ! ಇದು ಸಂಬಂಧದಲ್ಲಿನ ಸಮಾನತೆ ಮತ್ತು ಹೊಂದಾಣಿಕೆಯ ಕುರುಹು.

– ಸುಮನಾ ಶೆಟ್ಟಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ