ಆರತಿ ಕೈಯಲ್ಲಿ ಪುಸ್ತಕ ಹಿಡಿದು ಕಡೆ ಗಳಿಗೆಯ ಪರೀಕ್ಷಾ ಸಿದ್ಧತೆ ನಡೆಸಿದ್ದಳು. ಅವಳ ಸಿ.ಎ ಫೈನಲ್ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಇತ್ತು. ಡೋರ್‌ಬೆಲ್‌ ಸದ್ದು ಮಾಡಿತು. ಅಡುಗೆಮನೆಯಲ್ಲಿದ್ದ ಅವಳ ತಾಯಿ ರೋಹಿಣಿ ಹೋಗಿ ಬಾಗಿಲು ತೆರೆದಳು.

ಪಕ್ಕದ ಮನೆಯ ಅಂಬಿಕಾ ಬಾಗಿಲಲ್ಲಿ ನಿಂತಿದ್ದಳು. “ನಮ್ಮ ಟಿ.ವಿ ಕೇಬಲ್ ಕನೆಕ್ಷನ್‌ ಬರುತ್ತಿಲ್ಲ. ನಿಮ್ಮದು ಸರಿ ಇದೆಯಾ?” ಎಂದು ಕೇಳಿದಳು.

“ಗೊತ್ತಿಲ್ಲ. ನೋಡುತ್ತೇನೆ,” ಎಂದ ರೋಹಿಣಿ ಟಿ.ವಿ ಆನ್‌ ಮಾಡಿದಳು. ಕೇಬಲ್ ಕನೆಕ್ಷನ್‌ ಇರಲಿಲ್ಲ.

“ಇಲ್ಲ ಅಂಬಿಕಾ,” ಎಂದಳು.

“ಅಯ್ಯೋ, ನನ್ನ ಸೀರಿಯಲ್ ಮಿಸ್‌ ಆಗಿಬಿಟ್ಟಿತು,” ಎಂದ ಅಂಬಿಕಾ ಓದುತ್ತಿದ್ದ ಆರತಿಯತ್ತ ನೋಡಿ, “ಪರೀಕ್ಷೆ ಶುರುವಾಗಿದೆಯಲ್ಲವೇ? ಇವತ್ತೂ ಇದೆಯಾ?” ಎಂದು ಪ್ರಶ್ನಿಸಿದಳು.

“ಹೌದು ಆಂಟಿ ಇದೆ.”

“ಆರತಿ, ಸಿಎ ಫೈನಲ್ ಒಂದೇ ಸಲಕ್ಕೆ ಪಾಸ್‌ ಆಗುವುದು ಬಹಳ ಕಷ್ಟ. 3-4 ಸಲ ಆದರೂ ಪ್ರಯತ್ನ ಪಡಬೇಕಾಗುತ್ತದೆ. ನನ್ನ ಕಸಿನ್‌ ಒಬ್ಬ 6 ಸಲ ಕಟ್ಟಿದರೂ ಪಾಸ್‌ ಮಾಡೋದಕ್ಕೆ ಆಗಲಿಲ್ಲ. ಅವನೂ ನಿನ್ನ ಹಾಗೇ ಬಹಳ ಬುದ್ಧಿವಂತನೇ,” ಎಂದಳು.

ಆರತಿಯ ಮುಖ ಮುದುಡಿತು, ಅವಳೇನೂ ಹೇಳಲಿಲ್ಲ.

ಅಂಬಿಕಾ ಮಾತು ಮುಂದುವರಿಸುತ್ತಾ ಪ್ರಶ್ನಿಸಿದಳು, “ಇದಾದ ಮೇಲೆ ಏನು ಮಾಡುತ್ತೀಯಾ?”

“ಎಂ.ಬಿ.ಎ.”

“ಮತ್ತೆ ಮದುವೆ…..?”

“ಆ ಬಗ್ಗೆ ಯೋಚಿಸಿಲ್ಲ,” ಆರತಿ ಒರಟಾಗಿ ಹೇಳಿದಳು.

ಪರೀಕ್ಷೆಗಾಗಿ ಓದುತ್ತಿರುವಾಗ ಇಂತಹ ಮಾತುಗಳನ್ನು ಕೇಳಿ ಅವಳಿಗೆ ಸಿಟ್ಟು ಬಂದಿತು. ಅದನ್ನು ಗಮನಿಸಿದ ರೋಹಿಣಿ, “ಅಂಬಿಕಾ, ಕಿಚನ್‌ಗೇ ಬಾ. ಅಲ್ಲೇ ಮಾತನಾಡೋಣ,” ಎಂದು ಅವಳ ಗಮನವನ್ನು ತನ್ನತ್ತ ಸೆಳೆದಳು.

ಅಂಬಿಕಾ ಅಡುಗೆಮನೆಯಲ್ಲಿ ನಿಂತುಕೊಂಡೇ ಆರತಿಯ ಮದುವೆಯ ಬಗ್ಗೆ ಹತ್ತು ಹಲವು ಪ್ರಶ್ನೆ ಕೇಳಿದಳು.

ಕಾಫಿ ಮಾಡುತ್ತೇನೆ ಎಂದ ರೋಹಿಣಿಗೆ, “ಈಗ ಬೇಡ, ನನಗೆ ಕೆಲಸ ಇದೆ. ಇನ್ನೊಮ್ಮೆ ಬರುತ್ತೇನೆ,” ಎಂದು ಹೇಳಿ ಹೊರನಡೆದಳು.

ಅಂಬಿಕಾ ಹೋದ ನಂತರ ಆರತಿ, “ಮಮ್ಮಿ, ನೀವು ಇಂಥ ಆಂಟಿ ಆಗಬೇಡಿ. ಅವರಿಗೆ ಯಾವಾಗ ಏನು ಮಾತನಾಡಬೇಕು ಅನ್ನುವುದೇ ಗೊತ್ತಿಲ್ಲ,” ಎಂದಳು.

ಯುವಜನರ ಅಭಿಪ್ರಾಯ

ಇಂದಿನ ಯುವಜನರು ಹಾಳಾಗಿಬಿಟ್ಟಿದ್ದಾರೆ. ಇಂದಿನ ಮಕ್ಕಳು ಹಾಗೆ, ಹೀಗೆ ಎಂದು ಮಹಿಳೆಯರು ದೂರುವುದನ್ನು ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಯುವಜನರು ಆಂಟಿಯರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಮಹಿಳೆಯರು ಯೋಚಿಸುತ್ತಿರುವರೋ? ಆಂಟಿಯರ ನಡೆನುಡಿ ವ್ಯವಹಾರಗಳಿಂದ ಮಕ್ಕಳು ಸಾಕಷ್ಟು ಬೇಸತ್ತಿದ್ದಾರೆ. ಅವರ ಯಾವ ವಿಷಯ ನಿಮಗೆ ಇಷ್ಟವಿಲ್ಲ ಎಂದು ಯುವಜನರನ್ನು ಪ್ರಶ್ನಿಸಿದಾಗ, ಅವರು ತಮ್ಮ ಮನಸ್ಸಿನ ಮಾತನ್ನು ಮುಕ್ತವಾಗಿ ತಿಳಿಸಿದರು. ಅದೇನೆಂದು ತಿಳಿಯೋಣ ಬನ್ನಿರಿ :

ಲೆಕ್ಚರ್‌ ಆಂಟಿ : 24 ವರ್ಷದ ವಾಣಿ ಒಬ್ಬ ಆಂಟಿಯ ಬಗ್ಗೆ ಹೀಗೆ ಹೇಳುತ್ತಾಳೆ, “ಮಂಜುಳಾ ಆಂಟಿ ಮನೆಗೆ ಬಂದರೆ ನಾನು ರೂಮಿನಿಂದ ಹೊರಗೇ ಬರುವುದಿಲ್ಲ. ಅವರು ಬಂದಾಗೆಲ್ಲ ಲೆಕ್ಚರ್‌ ಶುರು ಮಾಡುತ್ತಾರೆ. ಕೋಪ ಮಾಡಿಕೊಳ್ಳಬಾರದು. ಪೌಷ್ಟಿಕ ಆಹಾರ ತಿನ್ನಬೇಕು, ಸಿಂಪಲ್ ಆಗಿರಬೇಕು. ಇತ್ಯಾದಿ…. ”

ಮಮ್ಮಿಯ ಆರೋಗ್ಯ ಕೆಟ್ಟು ಮಲಗಿದರೆ ಅವರಿಗೂ ಉಪದೇಶ ಕೊಡುತ್ತಾರೆ, “ಜೀವನ ಶಾಶ್ವತ ಅಲ್ಲ. ಯಾರ ಬಗೆಯೂ ಮೋಹ ಇಟ್ಟುಕೊಳ್ಳಬೇಡ. ಮಕ್ಕಳ ಜೊತೆ ತುಂಬ ಅಂಟಿಕೊಳ್ಳಬೇಡ. ಇಂದಿನ ಮಕ್ಕಳು ಸ್ವಾರ್ಥಿಗಳು,” ಅಂತ ಹೇಳುತ್ತಾರೆ. ಆದರೆ ತಾವು ಇದನ್ನು ಫಾಲೋ ಮಾಡುವುದಿಲ್ಲ. ವೀಕೆಂಡ್‌ ಬಂತೆಂದರೆ ಮಕ್ಕಳ ಜೊತೆ ಮೂವಿ, ಶಾಪಿಂಗ್‌, ಡಿನ್ನರ್‌ ಎಂದು ಹೊರಡುತ್ತಾರೆ. `ತಾವು ಮಾಡದೆ ಇದ್ದ ಮೇಲೆ ಬೇರೆಯವರಿಗೆ ಯಾಕೆ ಉಪದೇಶ ಕೊಡಬೇಕು? ಎಲ್ಲರನ್ನೂ ಅವರ ಪಾಡಿಗೆ ಬಿಡಲಿ.’

ಶೌಟಿಂಗ್‌ ಆಂಟಿ : ಆಂಟಿಯರ ಬಗ್ಗೆ ಯುವಜನರೆಲ್ಲರ ದೂರೆಂದರೆ ಸ್ನೇಹಿತರ ಎದುರಿಗೆ ಅವರು ತಮ್ಮ ಮಕ್ಕಳ ಮೇಲೆ ಕೂಗಾಡುವುದು ಸರಿಯಲ್ಲ ಎಂಬುದು.

ಇಂತಹ ಒಂದು ಪ್ರಸಂಗನ್ನು ಕುರಿತು ರಾಹುಲ್ ಹೀಗೆ ಹೇಳುತ್ತಾನೆ, “ನಮ್ಮ ಗ್ರೂಪ್‌ನವರೆಲ್ಲ ನಮ್ಮ ಮನೆಯಲ್ಲಿ ಸೇರಿ ಪ್ರಾಜೆಕ್ಟ್ ವರ್ಕ್‌ನ ಸಿದ್ಧತೆ ನಡೆಸುತ್ತಿದ್ದೆವು. ಬಹಳ ಹೊತ್ತಿನವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಅಮ್ಮ ನಮಗೆಲ್ಲರಿಗೂ ತಿಂಡಿ ಮಾಡಿದ್ದರು. ನಾವು ಕೆಲಸ ಮಾಡುತ್ತಾ ತಿಂಡಿ ತಿಂದೆವು.

ಶೀಲಾ ಸಹ ನಮ್ಮ ಗ್ರೂಪ್‌ನಲ್ಲಿದ್ದಳು. ಅವಳ ತಾಯಿ ಮತ್ತು ನನ್ನ ತಾಯಿ ಗೆಳತಿಯರು. ರಾತ್ರಿ ತಡವಾದುರಿಂದ ಅಮ್ಮ ಹೇಳಿದರು, “ಶೀಲಾಳನ್ನು ಮನೆಗೆ ಬಿಟ್ಟು ಬಾ.”

ಶೀಲಾಳ ಜೊತೆ ನಾನು ಅವಳ ಮನೆಗೆ ಹೋದೆ. ಶೀಲಾ ಒಳಗೆ ಹೋಗುತ್ತಿದ್ದಂತೆ ಅವಳ ತಾಯಿ ನಿರ್ಮಲಾ ಆಂಟಿ, “ಬಹಳ ತಡ ಮಾಡಿಬಿಟ್ಟೆ ಬಾ. ಊಟ ಮಾಡು,” ಎಂದರು.

“ಮಮ್ಮಿ, ಆಂಟಿ ನಮಗೆಲ್ಲ ತಿಂಡಿ ಮಾಡಿಕೊಟ್ಟರು. ಅಷ್ಟು ಹೊತ್ತಿನಿಂದ ಕುಳಿತು ಕೆಲಸ ಮಾಡಿ ಸಾಕಾಗಿದೆ. ನಾನು ಮಲಗುತ್ತೇನೆ,” ಎಂದಳು ಶೀಲಾ.

ನಾನಿನ್ನೂ ಬಾಗಿಲ ಬಳಿಯೇ ನಿಂತಿದ್ದೆ. ನಿರ್ಮಲಾ ಆಂಟಿ ಜೋರಾಗಿ ಬಯ್ಯತೊಡಗಿದರು. “ತಿಂಡಿ ತಿಂದುಕೊಂಡು ಬಂದಿದ್ದೀಯಾ? ಮತ್ತೆ ಒಂದು ಫೋನ್‌ ಮಾಡಿ ಹೇಳುವುದಕ್ಕೆ ಆಗಲಿಲ್ವಾ? ನಾನೂ ಇಷ್ಟು ಹೊತ್ತು ಕಿಚನ್‌ನಲ್ಲಿ ಅಡುಗೆ ಮಾಡಿಕೊಂಡು ಕುಳಿತಿದ್ದೇನೆ.”

ಅಲ್ಲಿ ನಿಲ್ಲಲಾರದೆ ನಾನು ಹಿಂತಿರುಗಿ ಬಂದೆ.

ಶೀಲಾ ಒಬ್ಬಳೇ ಇರುವಾಗ ಆಂಟಿ ಅವಳನ್ನು ಗದರಿಸಬಹುದಿತ್ತು ಅಥವಾ ಒಳ್ಳೆಯ ಮಾತಿನಲ್ಲಿ ತಿಳಿಹೇಳಬಹುದಾಗಿತ್ತು. ಆದರೆ ಸ್ನೇಹಿತರ ಎದುರಿಗೆ ಹೀಗೆ ಕೂಗಾಡಿದರೆ ಎಂತಹ ಮುಜುಗರ.

ಇಂದಿನ ಯುವ ಪೀಳಿಗೆ ಅತ್ಯಂತ ಜಾಗರೂಕವಾಗಿದೆ. ಇಂದು ಮಕ್ಕಳೊಡನೆ ಮಾತನಾಡುವ ಮುನ್ನ ಕೊಂಚ ಯೋಚಿಸಿ ನೋಡಬೇಕಿದೆ. ನಕಾರಾತ್ಮಕ ಮಾತುಗಳನ್ನು ಯಾರೂ ಇಷ್ಟಪಡುವುದಿಲ್ಲ. ಅವರ ಮಾತುಗಳನ್ನು ಗಮನದಿಂದ ಕೇಳಿ, ಸ್ನೇಹದಿಂದ ವ್ಯವಹರಿಸುವುದು ಒಳ್ಳೆಯದು.

ಎಕ್ಸ್ ರೇ ಆಂಟಿ : 23 ವರ್ಷ ವಯಸ್ಸಿನ ನಿವೇದಿತಾ ತನ್ನ ಮನಸ್ಸಿನ ಭಾವನೆಯನ್ನು ಹೀಗೆ ವ್ಯಕ್ತಪಡಿಸುತ್ತಾಳೆ, “ರೇಖಾ ಆಂಟಿ ನನ್ನ ತಾಯಿಯ ಕಿಟಿ ಫ್ರೆಂಡ್‌. ಅವರು ಮನೆಗೆ ಬಂದಾಗ ಅಥವಾ ಹೊರಗೆ ಮಾಲ್ ಅಥವಾ ಫಂಕ್ಷನ್‌ಗಳಲ್ಲಿ ಭೇಟಿಯಾದಾಗ ಸುಮ್ಮನೆ ಮಾತನಾಡಿಸುವುದಿಲ್ಲ. ಎಕ್ಸ್ ರೇ ಕಣ್ಣುಗಳಿಂದ ನಿರುಕಿಸುತ್ತಾರೆ. ಮಾತನಾಡುತ್ತಾ ಅವರ ದೃಷ್ಟಿ ನನ್ನ ತಲೆಯಿಂದ ಕಾಲಿನವರೆಗೂ ಹರಿದಾಡುತ್ತಿರುತ್ತದೆ. ಅವರು ಪ್ರತಿಯೊಬ್ಬರನ್ನೂ ಹೀಗೇ ದಿಟ್ಟಿಸಿ ನೋಡುತ್ತಿರುತ್ತಾರೆ. ಅವರ ಆ ನೋಟ ಹಿಂಸೆಯಾಗುತ್ತದೆ, ವಿಚಿತ್ರವಾಗಿ ಕಾಣುತ್ತದೆ.”

ಸೆಲ್ಛಿ ಆಂಟಿ : ಅಂಕಿತಾ ತನ್ನ ಒಬ್ಬ ಆಂಟಿಯ ಬಗ್ಗೆ ಹೇಳುತ್ತಾ  ನಕ್ಕು ಬಿಡುತ್ತಾಳೆ. “ನನ್ನ ಗೆಳತಿ ಶೀತಲ್ ತನ್ನ ಬರ್ತ್‌ಡೇಗೆ ಆಹ್ವಾನಿಸಿದಳೆಂದರೆ, ಅಲ್ಲಿ ಏನಾಗುವುದೆಂದು ನಮಗೆಲ್ಲ ಗೊತ್ತು. ಅವಳ ತಾಯಿ ನಳಿನಿ ಆಂಟಿಗೆ ಸೆಲ್ಛೀ ತೆಗೆದುಕೊಳ್ಳುವ ಹುಚ್ಚು. ನಮ್ಮೆಲ್ಲರ ಜೊತೆ ಸೆಲ್ಛಿ ತೆಗೆದುಕೊಳ್ಳುತ್ತಾರೆ. ಒಂದಲ್ಲ, ಬೇರೆ ಬೇರೆ ಪೋಸ್‌, ಬೇರೆ ಬೇರೆ ಫೇಶಿಯಲ್ ಎಕ್ಸ್ ಪ್ರೆಶನ್‌ ಕೊಟ್ಟು ತೆಗೆದುಕೊಳ್ಳುತ್ತಾರೆ. ನಾವು ಒಬ್ಬರ ಮುಖವನ್ನು ಒಬ್ಬರು ನೋಡಿ ಮುಗುಳ್ನಗುತ್ತೇವೆ.”

ಪಾಪದ ಆಂಟಿ : 20 ವರ್ಷ ವಯಸ್ಸಿನ ರೋಹಿತ್‌ ತಮಾಷೆಯಾಗಿ ಹೇಳುತ್ತಾನೆ, “ಮಾಲತಿ ಆಂಟಿ ನಮ್ಮ ಮನೆಗೆ ಬಂದಾಗೆಲ್ಲ ತಮ್ಮ ಪತಿಯನ್ನು ಬಯ್ದುಕೊಳ್ಳುತ್ತಾರೆ. ಅವರ ನಡವಳಿಕೆಯ ಬಗ್ಗೆ ದೂರುತ್ತಾರೆ. ಆದರೆ ನಾವು ಬಹಳ ವರ್ಷಗಳಿಂದ ಅಂಕಲ್ ನ್ನು ನೋಡಿದ್ದೇವೆ. ಅವರು ಒಳ್ಳೆಯ ಸ್ವಭಾವದವರು, ಹಸನ್ಮುಖಿ, ದೊಡ್ಡ ಉದ್ಯೋಗದಲ್ಲಿದ್ದಾರೆ. ಆಂಟಿಗೆ ಇತರರಿಂದ ಸಿಂಪತಿ ಪಡೆಯುವ ಆಸೆ. ಆದ್ದರಿಂದಲೇ ಪತಿ ಮತ್ತು ಮಕ್ಕಳಿಂದ ತಮಗೆ ಬಹಳ ಕಷ್ಟ ಎಂದು ಹೇಳುತ್ತಾ ಇರುತ್ತಾರೆ. ಆದ್ದರಿಂದ ನಾನು ಅವರಿಗೆ `ಪಾಪದ ಆಂಟಿ,’ ಎಂದು ತಮಾಷೆ ಮಾಡುತ್ತೇನೆ.”

ಪರಚಿಂತೆ ಏಕೆ ? : ಆರತಿ ಹೇಳುತ್ತಾಳೆ, “ಈ ಆಂಟಿಯರಿಗೆ ಪರರ ಮಕ್ಕಳ ಮದುವೆಯ ಚಿಂತೆ ಏಕೆ ಎಂದು ಅರ್ಥವಾಗುವುದಿಲ್ಲ. ಅದು ನಮ್ಮ ಜೀವನದ ಪ್ರಶ್ನೆ. ನಮ್ಮ ತಂದೆ ತಾಯಿಯರು ಯಾವಾಗ ಏನು ಮಾಡಬೇಕೆಂದು ಯೋಚಿಸುತ್ತಾರೆ. 10-15 ದಿನಗಳಿಗೊಮ್ಮೆ ಸಿಕ್ಕಾಗೆಲ್ಲ ಮದುವೆ ಯಾವಾಗ ಎಂದು ಕೇಳುತ್ತಿದ್ದರೆ ಏನು ಹೇಳಬೇಕು? ನಾವು ಮೊದಲು ನಮ್ಮ ಕಾಲ ಮೇಲೆ ನಿಲ್ಲಬೇಕಾಗಿದೆ. ಅವರು ಸದಾ ಇಂತಹ ಪ್ರಶ್ನೆ ಹಾಕುವುದು ಇಷ್ಟವಾಗುವುದಿಲ್ಲ.”

ಇಂದಿನ ಹುಡುಗಿಯರು ಗಂಡು ಮಕ್ಕಳಂತೆ ತಾವು ಜೀವನದಲ್ಲಿ ಸಾಧಿಸಬೇಕೆಂದು ಬಯಸುತ್ತಾರೆ. ಅವರೊಡನೆ ಮಾತನಾಡುವಾಗ ವಿವಾಹದ ಟಾಪಿಕ್‌ನ್ನೇ ಪುನರಾವರ್ತಿಸಬೇಡಿ. ಹಾಗೆ ಮಾಡಿದರೆ ಆರತಿಯಂತೆ ಇತರ ಹೆಣ್ಣು ಮಕ್ಕಳೂ ತಮ್ಮ ತಾಯಂದಿರ ಜೊತೆ ನಿಮ್ಮ ಬಗ್ಗೆ ಹೀಗೆ ಹೇಳಬಹುದು, “ಮಮ್ಮಿ, ನೀವು ಇಂಥ ಆಂಟಿ ಆಗಬೇಡಿ!”

– ಕವಿತಾ ಕೆ. ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ