ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತಿದ್ದೇನೆ! ದೇವರೇ.. ನನ್ನ ಅಪ್ಪನಂತ ಅಪ್ಪನನ್ನು ಯಾವ ಮಕ್ಕಳಿಗೂ ಕೊಡಬೇಡ, ನನ್ನ ತಂದೆಗೆ ನನ್ನ ದೇಹ ಮುಟ್ಟಲು ಬಿಡಬೇಡಿ1 ಎಂಬೆಲ್ಲಾ ವಾಕ್ಯವುಳ್ಳ ಡೆತ್ ನೋಟ್ ಬರೆದಿಟ್ಟು ಕಳೆದವರ್ಷವಷ್ಟೇ ತನ್ನ ವಿದ್ಯಾಭ್ಯಾಸ ಮುಗಿಸಿ ವಕೀಲೀ ವೃತ್ತಿಯನ್ನು ಆರಂಭಿಸಿದ್ದ 23 ವರ್ಷದ ಪ್ರಿಯಾಂಶು ಶ್ರೀವಾಸ್ತವ ಎಂಬ ಯುವಕ, ಕಾನ್ಪುರದ ನ್ಯಾಯಾಲಯದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾನ್ಪುರ ನ್ಯಾಯಾಲಯದ ಐದನೇ ಮಹಡಿಯಿಂದ ಜಿಗಿಯುವ ಮುನ್ನ ತನ್ನ ಆತ್ಮೀಯರೊಂದಿಗೆ ಫೋನ್‌ನಲ್ಲಿ ಮಾತನಾಡಿ ಮುಗಿಸುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ಅಲ್ಲಿಂದ ಕೆಳಕ್ಕೆ ಜಿಗಿದು ನೆಲಕ್ಕೆ ಅಪ್ಪಳಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಆಷ್ಟು ಪ್ರತಿಭಾವಂತ ಇಂತಹ ಕಟು ನಿರ್ಧಾರವನ್ನೇಕೆ ತೆಗೆದುಕೊಂಡ? ಎಂದರೆ, ಆತನ ಡೆತ್ ನೋಟ್ ನಲ್ಲಿ ಇರುವಂತೆ ಮಾನಸಿಕ ಕಿರುಕುಳ. ತನ್ನ ತಂದೆಯ ಕಟ್ಟುನಿಟ್ಟಿನ ಜೀವನ ಶೈಲಿ ಮತ್ತು ಅವರ ಮಾತುಗಳು ಆ ಹುಡುಗನಿಗೆ ಮಾನಸಿಕ ಹಿಂಸೆಯಂತೆ ಪರಿಣಮಿಸಿದ್ದು ಹಾಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾಗಿ ಉಲ್ಲೇಖಿಸಿದ್ದಾನೆ. ಅದಕ್ಕೆ ಪುಷ್ಟಿ ಕೊಡುವಂತೆ ಆತ ತಿಳಿಸಿರುವ ಕಾರಣಗಳು ಸಹಾ ಅತ್ಯಂತ ಆಘಾತಕಾರಿ ಎನಿಸಿದೆ. ಆತ 6 ವರ್ಷದವನಿದ್ದಾಗ, ಯಾರಿಗೂ ಹೇಳದೆ ಕೇಳದೆ ಫ್ರಿಡ್ಜ್‌ನಿಂದ ಮಾವಿನ ಹಣ್ಣಿನ ಜ್ಯೂಸ್ ಕುಡಿದ್ದದ್ದಕ್ಕೆ. ಆತನ ತಂದೆ ಶಿಕ್ಷೆ ನೀಡಿದ್ದರಂತೆ. ಅದೇ ರೀತಿಯಲ್ಲಿ ಆತನಿಗೆ ಆಸಕ್ತಿ ಇಲ್ಲದಿದ್ದರೂ 9ನೇ ತರಗತಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಲು ಒತ್ತಾಯಿಸಿದ್ದಕ್ಕೆ ಆತ ಮನೆಯನ್ನು ಬಿಟ್ಟು ಹೋಗಿದ್ದನಂತೆ. ಇನ್ನು ಪಿಯೂಸಿ ಓದುವಾಗ ತನ್ನ ತಂದೆಗೆ ಆರ್ಥಿಕವಾಗಿ ಹೊಣೆ ಆಗಬಾರದೆಂದು ತನ್ನ ಖರ್ಚುಗಳನ್ನು ತಾನೇ ನಿಭಾಯಿಸಿಕೊಳ್ಳುವ ಸಲುವಾಗಿ ಮನೆ ಪಾಠ ಹೇಳಿಕೊಡುವುದು ಮತ್ತು ಕೆಲವು ಆನ್‌ಲೈನ್ ಕೆಲಸ ಮಾಡಿ ಹಣ ಸಂಪಾದಿಸಿದ್ದಕ್ಕೂ ಆತನ ತಂದೆ ಬೈದಿದ್ದರಂತೆ. ಆದೇ ರೀತಿಯಲ್ಲಿ ತಾನು ಕಾನೂನು ಪದವಿ ಮುಗಿಸಿದ ನಂತರ ತನ್ನ ತಂದೆಯ ಕಾನೂನು ಕೆಲಸದಲ್ಲಿ ಸಹಾಯ ಮಾಡಿದ್ದರೂ ಆತನ ತಂದೆ ಆತನನ್ನು ಪ್ರಶಂಸಿರಲಿಲ್ಲವಂತೆ. ಇಂದು ನನಗೆ ಸ್ವಂತ ಮನೆ ಇಲ್ಲ, ಕಚೇರಿ ಇಲ್ಲ ಪ್ರತಿದಿನ ಅವಮಾನ, ಬೆದರಿಕೆ ಎದುರಿಸುತ್ತಿದ್ದೇನೆ. ಹಾಗಾಗಿ ನಾನು ಸಾಯುವ ನಿರ್ಧಾರಕ್ಕೆ ಬಂದಿದ್ದೇನೆ. ತನ್ನ ತಾಯಿ ಮತ್ತು ತಂಗಿಯ ಜೀವನಕ್ಕೆ ತೊಂದರೆ ಆಗುವುದರಿಂದ ದಯವಿಟ್ಟು ತನ್ನ ತಂದೆ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಮನವಿಯನ್ನೂ ಸಹಾ ಆತ ಮಾಡಿರುವುದು ಅಚ್ಚರಿ ಮೂಡಿಸಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ ಹೇಗಿರಬೇಕು ಎಂಬ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದು. ಬಹುತೇಕರು ಶಿಸ್ತಿನ ಹೆಸರಿನಲ್ಲಿ ಮಕ್ಕಳ ಮೇಲೆ ಪೋಷಕರು ಹೇರುವ ಅತಿಯಾದ ಒತ್ತಡ, ಮಕ್ಕಳ ಬದುಕನ್ನೇ ಕಸಿದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸ್ವಲ್ಪ ಗಂಭೀರವಾಗಿ ಈ ಸಮಸ್ಯೆಯನ್ನು ಗಮನಿಸಿದರೆ, ಈ ರೀತಿಯಾಗಿ ಫೋಷಕರ ಕಾಳಜಿ ಈ ಹಿಂದೆಯೂ ಇತ್ತಾದರೂ, ಆಗ ಇರದಿದ್ದ ಈ ರೀತಿಯ ಸಮಸ್ಯೆ ಈಗ ಏಕೆ ಎಂದು ಗಮನಿಸಿದರೆ, ಇಂದಿನ ಮಕ್ಕಳ ಮಾನಸಿಕ ದೌರ್ಬಲ್ಯತೆ ಎದ್ದು ಕಾಣುತ್ತಿದ್ದು ಇದೇ ರೀತಿಯ ಮತ್ತಷ್ಟು ಪ್ರಕರಣಗಳನ್ನು ನೋಡಿ ನಂತರ ಈ ಕುರಿತಂತೆ ಅವಲೋಕಿಸಿಸೋಣ ಬನ್ನಿ





