ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ದೀಪ ಬೆಳಗಿಸುತ್ತಾರೆ. ಸಿಹಿ ತಿಂಡಿ ಮಾಡಿ ಮನೆ ಮಂದಿಗೆಲ್ಲ ಹಂಚಿ ಸಂತೋಷಪಡುತ್ತಾರೆ. ಇದು ಸರಿಯೇ...., ಆದರೆ ನೀವು ಎಂದಾದರೂ ಇತರರ ಮನೆಯ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದ್ದೀರಾ? ದೀಪಾವಳಿಯಂದು ಹೀಗೆ ಮಾಡುವುದರಿಂದ ಅದೆಂತಹ ಆನಂದ ದೊರೆಯುವುದೆಂಬುದನ್ನು ಅನುಭವಿಸಿ ನೋಡಿ.
ದೀಪಾವಳಿಯನ್ನು ಜೊತೆಗೂಡಿ ಆಚರಿಸಿ : ಇಂದಿನ ಕಾಲದಲ್ಲಿ ನಮ್ಮ ಮಹಾನಗರಗಳಲ್ಲಿನ ಗೌಜು ಗದ್ದಲದಲ್ಲಿಯೂ ಅದೆಷ್ಟು ಜನರು ಒಂಟಿಯಾಗಿ ಬೇಸರದಿಂದ ಇರುತ್ತಾರೆ ಗೊತ್ತೇ.....? ದೀಪಾವಳಿಯಂದು ಜೊತೆಯಾಗಿ ಹಬ್ಬವನ್ನಾಚರಿಸಿ ಸಂತೋಷಪಡಲು ಅವರಿಗೆ ಯಾರೂ ಇರುವುದಿಲ್ಲ. ಕೆಲವು ಕಡೆ ವಯಸ್ಸಾದ ತಂದೆ ತಾಯಿಯರು ಒಂಟಿಯಾಗಿರುತ್ತಾರೆ. ಮತ್ತೆ ಕೆಲವೆಡೆ ಯುವಕ ಯುವತಿಯರು ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ತಂದೆ ತಾಯಿಯರಿಂದ, ಮನೆಯಿಂದ ದೂರದಲ್ಲಿ ವಾಸಿಸುತ್ತಿರುತ್ತಾರೆ. ಕೆಲವರು ಅವಿವಾಹಿತರಾಗಿ ಒಂಟಿಯಾಗಿದ್ದರೆ, ಮತ್ತೆ ಕೆಲವರು ಜೀವನ ಸಂಗಾತಿಯ ಅಗಲಿಕೆ, ಸಾವಿನಿಂದಾಗಿ ಒಂಟಿಯಾಗಿರುತ್ತಾರೆ.
ನಗರಗಳಲ್ಲಿನ ಆಫೀಸ್, ಕಂಪನಿ, ಇನ್‌ಸ್ಟಿಟ್ಯೂಟ್‌ಗಳಲ್ಲಿ ದೀಪಾವಳಿ ಹಬ್ಬಕ್ಕಾಗಿ ರಜೆ ಕೊಡಲಾಗುವುದರಿಂದ ಅಲ್ಲೆಲ್ಲ ಒಂದು ದಿನ ಮೊದಲೇ ಹಬ್ಬವನ್ನಾಚರಿಸಲಾಗುತ್ತದೆ. ಸಹೋದ್ಯೋಗಿಗಳು ಒಟ್ಟಾಗಿ ಸೇರಿರುವುದರಿಂದ ಆನಂದದ ವಾತಾವರಣವಿರುವುದು ಸಹಜ. ಆದರೆ ಹಬ್ಬದ ದಿನ ಯಾರು ಮನೆಯಲ್ಲಿ ಒಂಟಿಯಾಗಿರುತ್ತಾರೋ ಅವರ ಪಾಲಿಗೆ ಬೆಳಕಿನ ಹಬ್ಬದಲ್ಲಿಯೂ ಅಂಧಕಾರ ಹರಡಿರುತ್ತದೆ. ಇಂತಹ ಒಬ್ಬಂಟಿಗ ವ್ಯಕ್ತಿಯೊಡನೆ ಸೇರಿ ಅವರ ಜೀವನದಲ್ಲಿ ಜ್ಯೋತಿ ಬೆಳಗುವಂತೆ ಮಾಡುವುದು ನಮ್ಮ ಹೊಣೆಯಾಗಿರುತ್ತದೆ.
ಇಂದು ಒಟ್ಟು ಕುಟುಂಬಗಳು ಕಡಿಮೆಯಾಗಿರುವುದರಿಂದ ಜನರು ಕೇವಲ ತಮ್ಮ ಸಂಸಾರದೊಡಗೂಡಿ ಹಬ್ಬವನ್ನು ಆಚರಿಸಬೇಕಾಗಿದೆ. ಹೀಗಿರುವಾಗ 2-3 ಕುಟುಂಬಗಳು ಕೂಡಿದರೆ ಹಬ್ಬದ ಸಂಭ್ರಮ ಖಂಡಿತ ಹೆಚ್ಚುವುದು.
ನಿಮ್ಮ ಅಕ್ಕಪಕ್ಕದ ಒಂಟಿಯಾದ ಹಿರಿಯರು ಅಥವಾ ಯುವಜನರನ್ನು ಹಬ್ಬಕ್ಕಾಗಿ ನಿಮ್ಮ ಮನೆಗೆ ಆಮಂತ್ರಿಸಬಹುದು. ನಿಮ್ಮ ನೆರೆಮನೆಯವರಿಗೆ ಸಿಹಿತಿಂಡಿ, ಪಟಾಕಿಗಳನ್ನು ನೀಡಿ ಶುಭ ಹಾರೈಸಬಹುದು. ಅವರ ಮಕ್ಕಳನ್ನು ನಿಮ್ಮ ಮನೆಗೆ ಕರೆತಂದು ಮನೆಯಲ್ಲಿ ಆಟ ಆಡಿಸಿ ನಗುವಿನ ಹರ್ಷದ ಹೊನಲು ಹರಿಯುವಂತೆ ಮಾಡಬಹುದು.
ನಿಮ್ಮನ್ನು ಯಾರಾದರೂ ಹಬ್ಬಕ್ಕಾಗಿ ತಮ್ಮ ಮನೆಗೆ ಆಮಂತ್ರಿಸಿದರೆ, ಅವರಿಗಾಗಿ ಮಿಠಾಯಿ, ಪಟಾಕಿಗಳನ್ನು ಮರೆಯದೆ ಕೊಂಡೊಯ್ಯಿರಿ. ಅವರ ಮನೆಗೆ ಹೋಗಿ ಮನೆಯ ಅಲಂಕಾರ ಮತ್ತು ಹಬ್ಬದ ಇತರೆ ಕೆಲಸದಲ್ಲಿ ಸಹಾಯ ಮಾಡಿ.
ಹಿರಿಯರೊಡನೆ ಸಂಭ್ರಮ : ಪತ್ರಕರ್ತೆ ಪ್ರಿಯಾ ಹೀಗೆ ಹೇಳುತ್ತಾರೆ, ನಾನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಮೊದಲ ಬಾರಿ ಬಂದಾಗ 3 ವರ್ಷಗಳು ಒಂದು ಪಿಜಿ ಹಾಸ್ಟೆಲ್‌ನಲ್ಲಿದ್ದೆ. ಪಕ್ಕದಲ್ಲಿ ಅದಕ್ಕೇ ಸೇರಿದ ಒಂದು ವೃದ್ಧಾಶ್ರಮವಿತ್ತು. ಅಲ್ಲಿ ವೃದ್ಧ ಮಹಿಳೆಯರಿರುತ್ತಿದ್ದರು. ನನ್ನ ಬಿಡುವಿನ ಸಮಯದಲ್ಲಿ ನಾನು ಆಗಾಗ ಅಲ್ಲಿಗೆ ಹೋಗಿ ಅವರೊಡನೆ ಮಾತನಾಡಿಸಿ, ಕಾಲ ಕಳೆಯುತ್ತಿದ್ದೆ. ಅವರೊಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆ. ಅವರೊಡನೆ ನನಗೆ ಒಳ್ಳೆಯ ಸಂಪರ್ಕ ಏರ್ಪಟ್ಟಿತ್ತು. ಕಳೆದ ವರ್ಷ ನಾನು ಮನೆ ಮಾಡಿದ ಮೇಲೆ ದೀಪಾವಳಿಯ ಸಂದರ್ಭದಲ್ಲಿ ಅವರ ನೆನಪಾಯಿತು. ಆಗ ನಾನು ಹೂ, ಹಣ್ಣು, ಸಿಹಿ ತಿಂಡಿಗಳೊಂದಿಗೆ ಅಲ್ಲಿಗೆ ಹೋದೆ. ನನ್ನನ್ನು ನೋಡಿ ಅವರೆಲ್ಲರ ಮುಖದಲ್ಲಿ ಬೇಸರ ಮಾಯವಾಗಿ ಸಂತಸ ಹರಡಿತು. ನಾನು ಕೊಂಡೊಯ್ದಿದ್ದ ಹೂ ಮತ್ತು ಅಲಂಕಾರಿಕ ವಸ್ತುಗಳಿಂದ ವೃದ್ಧಾಶ್ರಮದ ಮುಖ್ಯದ್ವಾರವನ್ನು ಸೊಗಸಾಗಿ ಅಲಂಕರಿಸಿದೆ. ಅವರಿಗೆಲ್ಲ ಸಿಹಿ ತಿನ್ನಿಸಿದೆ. ನಿಜವಾಗಿ ಬಹಳ ಸಂತೋಷವಾಯಿತು.