ಯಾವುದೇ ಒಬ್ಬ ಹುಡುಗಿಗೆ ಜೀವನದಲ್ಲಿ ಅತಿ ದೊಡ್ಡ ಖುಷಿಯೆಂದರೆ ಆಕೆಯ ಮದುವೆಯೇ ಆಗಿರುತ್ತದೆ. ಮದುವೆಯಿಂದಾಗಿ ಆಕೆಯ ಹೊಸ ಜೀವನ ಆರಂಭವಾಗುತ್ತದೆ. ಹುಡುಗಿ ಯಾವುದೇ ಹುಡುಗನನ್ನು ಮದುವೆಯಾಗುವ ಮುನ್ನ ಅವನ ಕುರಿತಾಗಿ ಎಲ್ಲ ಮಗ್ಗಲುಗಳ ಬಗ್ಗೆ ಗಂಭೀರವಾಗಿ, ಧೈರ್ಯ ಮಾಡಿ ವಿಚಾರಿಸದೆ ಹೋದರೆ, ಮದುವೆಯ ಬಳಿಕ ಪಶ್ಚಾತ್ತಾಪ ಪಡಬೇಕಾಗಿ ಬರಬಹುದು. ಇಂತಹದರಲ್ಲಿ ಆಕೆ ಇಡೀ ಜೀವನ ಉಸಿರುಗಟ್ಟುವ ವಾತಾರಣದಲ್ಲಿ ಜೀವಿಸಬೇಕಾಗಿ ಬರಬಹುದು. ಇಲ್ಲಿ ಕೆಲವು ವರ್ಷಗಳ ಬಳಿಕ ವಿಚ್ಛೇದನದ ಸ್ಥಿತಿ ಉದ್ಭವಿಸಬಹುದು. ಈ ಎರಡೂ ಪರಿಸ್ಥಿತಿಗಳು ಆಕೆಯ ಪರವಾಗಿರುವುದಿಲ್ಲ. ಇಂತಹದರಲ್ಲಿ ಯಾವುದಾದರೂ ಸಂಬಂಧಕ್ಕೆ ಒಪ್ಪಿಗೆ ಸೂಚಿಸುವ ಮುಂಚೆ ಹುಡುಗಿ ಕೆಲವೊಂದು ಸಂಗತಿಗಳ ಬಗ್ಗೆ ಗಮನಹರಿಸಿದರೆ ಆಕೆ ಮದುವೆಯ ಬಳಿಕ ಯಾವುದೇ ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರದು. ಅದರ ಬದಲಿಗೆ ಅವಳ ವೈವಾಹಿಕ ಜೀವನ ಖುಷಿಯಿಂದ ನಳನಳಿಸುವುದು.

ಕೆಲವೊಂದು ಸಂಗತಿಗಳ ಬಗ್ಗೆ ಮದುವೆಗೂ ಮುಂಚೆಯೇ ಚೆರ್ಚ ಮಾಡುವುದು ನಿಮ್ಮ ಹಿತದೃಷ್ಟಿಯಿಂದ ಒಳ್ಳೆಯದು. ಏಕೆಂದರೆ ದಾಂಪತ್ಯದ  ಅಡಿಪಾಯ ಎಲ್ಲ ಸಂಗತಿಗಳನ್ನು ಅವಲಂಬಿಸಿದೆ. ವಿವಾದಗಳು ಹಾಗೂ ವಿಚ್ಛೇದನ ಕೂಡ ಇವೆ ಸಂಗತಿಗಳನ್ನು ಅವಲಂಬಿಸಿರುತ್ತವೆ.

– ಮದುವೆ ಎನ್ನುವುದು ಗೊಂಬೆಗಳ ಆಟವಲ್ಲ. ಹೀಗಾಗಿ ಮದುವೆಗೆ ಮುನ್ನ ಭಾವಿ ವರನ ಜೊತೆ ಕೆಲವು ಸಂಗತಿಗಳ ಬಗ್ಗೆ ಭೇಟಿ ಮಾಡಿ ಮಾತನಾಡುವುದು ಅತ್ಯವಶ್ಯ. ಏಕೆಂದರೆ ಇಬ್ಬರೂ ಪರಸ್ಪರರ ಬಗ್ಗೆ ಅರಿತುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಹುಡುಗನಲ್ಲಿ ನೀವು ಇಷ್ಟಪಟ್ಟ ಗುಣವಿಶೇಷತೆಗಳು ಇಲ್ಲ ಎಂದು ಗೊತ್ತಾದರೆ, ಮದುವೆಯ ಬಳಿಕ ಪಶ್ಚಾತ್ತಾಪ ಪಡುವುದಕ್ಕಿಂತ ಆತನ ಜೊತೆ ಮದುವೆ ಆಗದಿರುವುದೇ ಉತ್ತಮ. ಮದುವೆಗೆ ಮುಂಚೆಯೇ ನೀವು ನಿರಾಕರಿಸಿದರೆ ಮದುವೆಯ ಬಳಿಕ ವಿಚ್ಛೇದನ ಪಡೆದ ಹಣೆಪಟ್ಟಿಯಂತೂ ನಿಮಗೆ ಅಂಟಿಕೊಳ್ಳಲಾರದು.

– ಮದುವೆಗೆ ಮುಂಚೆಯೇ ನೀವು ಹುಡುಗನ ಭವಿಷ್ಯದ ಯೋಜನೆಗಳ ಬಗ್ಗೆ ಅರಿತುಕೊಳ್ಳಿ. ಅದರ ಜೊತೆಗೆ ನೀವು ಎಂತಹ ಸಂಗತಿಯನ್ನು ಬಯಸುತ್ತಿದ್ದೀರಿ ಎಂಬುದನ್ನು ತಿಳಿಸಿ. ಒಂದು ವೇಳೆ ಆ ವ್ಯಕ್ತಿ ನಿಮ್ಮ ಭಾವನೆಗೆ ಸ್ಪಂದಿಸಿದರೆ ಮದುವೆಯಾಗಲು ಸಮಸ್ಯೆ ಏನಿಲ್ಲ.

– ಸಾಮಾನ್ಯವಾಗಿ ಕಂಡುಕೊಂಡ ಒಂದು ಸಂಗತಿ ಎಂದರೆ, ಹುಡುಗಿ ಅಥವಾ ಅವರ ಮನೆಯವರು ಕೆರಿಯರ್‌ ಪ್ಲ್ಯಾನಿಂಗ್‌ ಬಗ್ಗೆ ಅಂದರೆ ಮದುವೆಯ ಬಳಿಕ ಆಕೆ ಉದ್ಯೋಗ ಮಾಡುತ್ತಾಳೋ ಇಲ್ಲವೋ ಎಂಬ ಬಗ್ಗೆ ಹೇಳುವುದಿಲ್ಲ. ಒಂದುವೇಳೆ ಅವಳು ಮದುವೆಯ ಬಳಿಕ ಉದ್ಯೋಗಕ್ಕೆ ಹೋಗದೆ ಇರಲು ಅಥವಾ ಹೋಗಲು ಇಚ್ಛಿಸಿದರೆ, ಆ ಬಗ್ಗೆ ವರನ ಕುಟುಂಬದವರಿಗೆ ಹೇಳಿಬಿಡುವುದು ಒಳ್ಳೆಯದು. ಮದುವೆಯ ಬಳಿಕ ಅವರು ನಿಮಗೆ ಉದ್ಯೋಗ ಮಾಡಲು ಅಡ್ಡಿಯುಂಟು ಮಾಡಬಾರದು. ಇದಕ್ಕೆ ತದ್ವಿರುದ್ಧ ಎಂಬಂತೆ ನೀವು ಸದ್ಯ ಉದ್ಯೋಗ ಮಾಡುತ್ತಿದ್ದು, ಮದುವೆಯ ಬಳಿಕ ಉದ್ಯೋಗ ಮಾಡಲು ಇಚ್ಛಿಸುವುದಿಲ್ಲ ಎಂದಾದರೆ ಆ ಬಗ್ಗೆಯೂ ವರನ ಮನೆಯವರಿಗೆ ತಿಳಿಸಿಬಿಡಿ. ಇಲ್ಲದಿದ್ದರೆ ಮದುವೆಯ ಬಳಿಕ ಅವರು ಉದ್ಯೋಗಕ್ಕೆ ಹೋಗಲು ಒತ್ತಡ ಹೇರಬಹುದು. ಉದ್ಯೋಗ ಮಾಡುವ ಅಥವಾ ಮಾಡದೇ ಇರುವ ನಿರ್ಧಾರದ ಬಗ್ಗೆ ಮದುವೆಯ ಬಳಿಕ ಯಾವುದೇ ವಿವಾದ ಉಂಟಾಗಬಾರದು. ಅದಕ್ಕಾಗಿ ನಿಮ್ಮ ಕೆರಿಯರ್‌ ಪ್ಲಾನಿಂಗ್‌ನ್ನು ಮದುವೆಗೂ ಮುಂಚೆಯೇ ತಿಳಿಸಿಬಿಡುವುದು ಒಳ್ಳೆಯದು.

– ನೀವು ಉದ್ಯೋಗಸ್ಥ ವ್ಯಕ್ತಿಯನ್ನು ಮದುವೆಯಾಗಲು ಹೊರಟಿದ್ದರೆ, ನೀವು ಆ ವ್ಯಕ್ತಿಯ ಜಾಬ್‌, ಒಂದು ಊರಿನಿಂದ ಮತ್ತೊಂದು ಊರಿಗೆ ಟ್ರಾನ್ಸ್ ಫರ್‌ ಆಗುವಂಥದಾ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ಅವರ ಉದ್ಯೋಗ ಟ್ರಾನ್ಸ್ ಫರ್‌ ಆಗುವಂಥದ್ದು ಎಂದಾದರೆ ಆ ಕ್ಷೇತ್ರ ಎಲ್ಲಿಯವರೆಗೆ ಇದೆ, ಕೇವಲ ಕರ್ನಾಟಕದಲ್ಲಷ್ಟೇನಾ ಅಥವಾ ಭಾರತದ ಯಾವುದೇ ರಾಜ್ಯದಲ್ಲಿ ಟ್ರಾನ್ಸ್ ಫರ್‌ ಆಗುತ್ತಾ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ನೀವು ಉದ್ಯೋಗಲ್ಲಿದ್ದು, ಪ್ರಸ್ತುತ ಗಂಡ ಕೂಡ ಒಂದೇ ನಗರದಲ್ಲಿದ್ದೀರಿ. ಗಂಡನಿಗೆ ಬೇರೆ ಕಡೆಗೆ ವರ್ಗಾವಣೆ ಆದಾಗ ನೀವು ಅವರ ಜೊತೆ ಹೋಗಲೇಬೇಕಾಗುತ್ತದೆ. ಹಾಗಂತ ನಿಮ್ಮ ಉದ್ಯೋಗದ ಕಂಪನಿ ಪತಿ ಇರುವ ಕಡೆಯೇ ವರ್ಗಾವಣೆ ಮಾಡುತ್ತದೆಂದು ಹೇಳಲಾಗದು. ಇಂತಹ ಸ್ಥಿತಿಯಲ್ಲಿ ನೀವು ಅಥವಾ ನಿಮ್ಮ ಪತಿ ಯಾರಾದರೊಬ್ಬರು ಉದ್ಯೋಗ ತೊರೆಯಲೇಬೇಕಾಗಿ ಬರುತ್ತದೆ. ಇಲ್ಲದಿದ್ದರೆ ಗಂಡ ಒಂದು ಕಡೆ, ನೀವು ಒಂದು ಕಡೆ ಇರಬೇಕಾಗಿ ಬರುತ್ತದೆ.

– ಒಂದು ವೇಳೆ ನಿಮಗೆ ಒಟ್ಟು ಕುಟುಂಬದ ಹುಡುಗನ ಜೊತೆ ಮದುವೆಯಾಗುವ ಇಚ್ಛೆ ಇರದೇ ಇದ್ದರೆ ಅಂತಹ ಸಂಬಂಧವನ್ನು ನಿರಾಕರಿಸುವುದರಲ್ಲಿಯೇ ನಿಮ್ಮ ಹಿತ ಅಡಗಿದೆ. ನೀವು ಒಪ್ಪಿಗೆ ಸೂಚಿಸಿ ಮದುವೆಯಾದರೆ, ಗಂಡನ ಮೇಲೆ ತಂದೆ ತಾಯಿಯನ್ನು ಬಿಟ್ಟು ಇರುವ ಬಗ್ಗೆ ಒತ್ತಡ ಹೇರಿದರೆ ಅದು ನಿಮ್ಮ ಸಮಂಜಸ ನಡೆ ಎನಿಸುವುದಿಲ್ಲ. ಇದು ಕುಟುಂಬದಲ್ಲಿ ಕಲಹಕ್ಕೆ ದಾರಿ ಮಾಡಿಕೊಡಬಹುದು. ಆಗ ನಿಮ್ಮ ವೈವಾಹಿಕ ಸಂಬಂಧ ವಿಚ್ಛೇದನದತ್ತ ಸಾಗಬಹುದು. ನಿಮಗೆ ಕುಟುಂಬದ ಯಾವ ಸಂಬಂಧಗಳೂ ಬೇಕಿಲ್ಲವೆಂದರೆ, ಕುಟುಂಬದ ಬಂಧನದಿಂದ ದೂರ ಏಕಾಂಗಿಯಾಗಿ ವಾಸಿಸುವ ಹುಡುಗನನ್ನೇ ಆಯ್ಕೆ ಮಾಡಿಕೊಳ್ಳಿ.

– ನೀವು ಯಾವ ಕುಟುಂಬದ ಹುಡುಗನನ್ನು ಮದುವೆಯಾಗಲು ಹೊರಟಿದ್ದೀರೊ, ಆ ಕುಟುಂಬದ ಸಂಸ್ಕಾರ, ರೀತಿನೀತಿ, ಕೌಟುಂಬಿಕ ಹಿನ್ನೆಲೆ ಈ ಎಲ್ಲವುಗಳನ್ನೂ ಮೊದಲೇ ತಿಳಿದುಕೊಳ್ಳುವುದು ಅತ್ಯವಶ್ಯ. ಏಕೆಂದರೆ ಆ ಕುಟುಂಬದ ವಾತಾವರಣಕ್ಕೆ, ರೀತಿ ನೀತಿಗೆ ನೀವು ಹೊಂದಾಣಿಕೆಯಾಗುತ್ತೀರೊ ಇಲ್ಲವೋ ಎಂದು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ನೀವು ಆ ಕುಟುಂಬದ ವಾತಾವರಣಕ್ಕೆ ಹೊಂದಾಣಿಕೆಯಾದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇಲ್ಲದಿದ್ದರೆ `ಎತ್ತು ಏರಿಗೆ, ಕೋಣ ನೀರಿಗೆ’ ಎಂಬಂತಹ ಸಮಸ್ಯೆ ಉದ್ಭವಿಸುತ್ತದೆ.

– ಮದುವೆಗೂ ಮುಂಚೆಯೇ ಹುಡುಗನ ಹವ್ಯಾಸಗಳ ಬಗ್ಗೆ ಕೂಡ ತಿಳಿದುಕೊಳ್ಳುವುದು ಅತ್ಯವಶ್ಯ. ಅವನ ಯಾವುದೋ ಒಂದು ಹವ್ಯಾಸ ನಿಮಗೆ ಇಷ್ಟ ಆಗದಿದ್ದರೆ, ಮದುವೆಯ ಬಳಿಕ ನಿಮ್ಮಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಬಹುದು. ಅದು ವಿಚ್ಛೇದನಕ್ಕೂ ದಾರಿ ಮಾಡಿಕೊಡಬಹುದು. ನೀವು ಸಸ್ಯಾಹಾರಿಯಾಗಿದ್ದು, ಗಂಡ ಹಾಗೂ ಅವನ ಕುಟುಂಬದವರು ಸಂಪೂರ್ಣ ಸಸ್ಯಾಹಾರಿಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಹಾರಭೇದ ಮುಂದೆ ನಿಮ್ಮಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಬಾರದು. ಗಂಡನ ಮನೆಯವರು ನಿಮಗೆ ಮಾಂಸಹಾರಿಯಾಗಲು ಒತ್ತಡ ಹೇರಬಹುದು. ಅದು ವಿಚ್ಛೇದನಕ್ಕೂ ದಾರಿ ಮಾಡಿಕೊಡಬಹುದು. ನಿಮ್ಮನ್ನು ಮದುವೆಯಾಗ ಬಯಸುವ ಹುಡುಗ ಆಗಾಗ ಮದ್ಯ ಸೇವನೆ ಮಾಡುತ್ತಾನೆಂದು ತಿಳಿದರೆ, ಅದು ನಿಮಗೆ ಇಷ್ಟವಿಲ್ಲ ಎಂದಾದರೆ ಮೊದಲೇ ಆ ವ್ಯಕ್ತಿಯನ್ನು ನಿರಾಕರಿಸಬಹುದು. ಇಲ್ಲದಿದ್ದರೆ, ಕೊನೆಯವರೆಗೆ ನೀವು ಪಶ್ಚಾತ್ತಾಪ ಪಡಬೇಕಾಗಿ ಬರಬಹುದು.

– ಮದುವೆಗೂ ಮುನ್ನ ನಿಮಗೆ ಯಾರಾದರೂ ಬಾಯ್‌ಫ್ರೆಂಡ್‌ಗಳಿದ್ದರೆ, ಯಾರ ಜೊತೆಗಾದರೂ ಸಂಬಂಧ ಇದ್ದಿದ್ದರೆ ಆ ಬಗ್ಗೆ ನೀವು ನಿಮ್ಮನ್ನು ನೋಡಲು ಬಂದ ಹುಡುಗನಿಗೆ ಹೇಳಿಬಿಡುವುದು ಉತ್ತಮ. ಆದರೆ ಅರೆಬರೆ ಮಾಹಿತಿ ಅಷ್ಟಿಷ್ಟು ಬಚ್ಚಿಟ್ಟು ಹೇಳಿದರೆ ಮುಂದೆ ಅವನಿಗೆ ನಿಮ್ಮ ಅಫೇರ್‌ ತಿಳಿದು ಸಂಬಂಧದಲ್ಲಿ  ಬಿರುಕು ಉಂಟಾಗಬಹುದು. ನಿಮ್ಮನ್ನು ಸಂದೇಹದ ದೃಷ್ಟಿಯಿಂದ ಕಾಣಬಹುದು. ಅಪನಂಬಿಕೆ ಉಂಟಾದರೆ ಕುಟುಂಬದ ಬುನಾದಿಯೇ ಹೊರಟುಹೋಗಬಹುದು.

– ಒಂದು ವೇಳೆ 3-4 ಸಲದ ಭೇಟಿಯ ಬಳಿಕ ನೀವು ಆ ಹುಡುಗ ನಿಮಗೆ ಫಿಟ್‌ ಆಗುತ್ತಾನೋ ಇಲ್ಲವೋ ಎಂದು ನಿರ್ಧರಿಸುವಲ್ಲಿ ವಿಫಲವಾದರೆ ನೀವು ಒಬ್ಬ ಕೌನ್ಸೆಲರ್‌ ಸಲಹೆ ಪಡೆಯಬಹುದು. ಆಗ ನಿಮಗೆ ತೀರ್ಮಾನ ತೆಗೆದುಕೊಳ್ಳಲು ಸಹಕಾರಿಯಾಗಬಹುದು.

– ಜಿ.ಆರ್‌. ವಿಮಲಾ 

Tags:
COMMENT