ಇಂದಿನ ಬಹಳಷ್ಟು ಯಶಸ್ವಿ ಮಹಿಳೆಯರು ಮದುವೆಯ ಬಂಧನದಲ್ಲಿ ಸಿಲುಕದೆ ಅವಿವಾಹಿತರಾಗಿ ಅಂದರೆ ಸಿಂಗಲ್ ಆಗಿರಲು ಇಷ್ಟಪಡುತ್ತಾರೆ. ಅವರ ಭವಿಷ್ಯದ ಯೋಜನೆಗಳಲ್ಲಿ ಮದುವೆ ಎಂಬ ಶಬ್ದಕ್ಕೆ ಯಾವುದೇ ಮಹತ್ವವಿಲ್ಲ. ಈ ಮೂಲಕ ಹುಡುಗಿಯರು ತಮ್ಮ ಸಕ್ಸೆಸ್‌, ಪವರ್‌, ಹಣ ಹಾಗೂ ಸ್ವಾತಂತ್ರ್ಯವನ್ನು ಯಥೇಚ್ಛವಾಗಿ ಅನುಭವಿಸಬಹುದು.

ಸಿಂಗಲ್ ಆಗಿರುವುದರಿಂದ ಅನೇಕ ಲಾಭಗಳಿವೆ. ನಿಮಗೆ ನಂಬಿಕೆ ಬರದಿದ್ದರೆ ಈ ಕೆಳಕಂಡ ಸಂಗತಿಗಳನ್ನು ನೋಡಿ.

ಕೆರಿಯರ್‌ನಲ್ಲಿ ಉನ್ನತ ಗುರಿ

ನಿಮ್ಮ ರಿಲೇಶನ್‌ಶಿಪ್‌ನ್ನು ಕಾಯ್ದುಕೊಂಡು ಹೋಗಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ಎನರ್ಜಿ ಮತ್ತು ಹಣ ಕೂಡ ಖರ್ಚಾಗುತ್ತದೆ. ಒಂದು ವೇಳೆ ನೀವು ಸಿಂಗಲ್ ಆಗಿದ್ದರೆ ಇದೆಲ್ಲ ಸಂಕಷ್ಟ ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ನಿಮ್ಮೆಲ್ಲ ಶಕ್ತಿ, ಸ್ಛೂರ್ತಿ, ಸಮಯ, ಗಮನವನ್ನು ವೃತ್ತಿಜೀವನದ ಮೇಲೆ ಕೇಂದ್ರೀಕರಿಸಬಹುದು. ಇದರಿಂದಾಗಿ ನಿಮ್ಮ ಪ್ರಾಡಕ್ಟಿವಿಟಿ ಹೆಚ್ಚುತ್ತದೆ. ಇದರ ಜೊತೆ ಜೊತೆಗೆ ಲೇಟ್‌ನೈಟ್‌ ಮೀಟಿಂಗ್‌, ಬಿಸ್‌ನೆಸ್‌ ಡಿನ್ನರ್‌ ಹಾಗೂ ಅಫೀಶಿಯಲ್ ಟೂರ್‌ಗೆ ಸದಾ ಸನ್ನದ್ಧರಾಗಿರಬಹುದು. ಇಷ್ಟ ಬಂದದ್ದನ್ನು ಮಾಡಬಹುದು.

ನಿಮ್ಮ ಪಾರ್ಟನರ್‌ಗೆ ಯಾವುದು ಇಷ್ಟವಾಗುತ್ತದೆ. ಯಾವುದು ಇಷ್ಟವಾಗುವುದಿಲ್ಲ ಎಂದು ಯೋಚಿಸಬೇಕಾದ ಪ್ರಸಂಗವೇ ನಿಮಗೆ ಉದ್ಭವಿಸುವುದಿಲ್ಲ. ನಿಮಗೆ ಏನು ಅನಿಸುತ್ತೋ, ಹೇಗೆ ಮಾಡಬೇಕು ಅನಿಸುತ್ತೋ ಹಾಗೆ ಮಾಡಬಹುದು. ಜೀವನದ ಪ್ರತಿಯೊಂದು ಕ್ಷಣಗಳನ್ನು ನಿಮಗಿಷ್ಟವಾದ ರೀತಿಯಲ್ಲಿ ಜೀವಿಸಬಹುದು. ಅದೂ ಕೂಡ ಯಾವುದೇ ಅಪರಾಧಪ್ರಜ್ಞೆ ಇಲ್ಲದೆಯೇ! ನೀವು ಕಾಲೇಜು ಹುಡುಗಿಯರ ಹಾಗೆ ಗರ್ಲ್ ಗ್ಯಾಂಗ್‌ನ್ನು ಮನೆಗೆ ಕರೆಯಿಸಿಕೊಂಡು ಪಾರ್ಟಿ ಮಾಡಬಹುದು, ಡ್ಯಾನ್ಸ್ ಮಾಡಬಹುದು. ಯಾವುದೇ ಬಗೆಯ ಡ್ರೆಸ್‌ ಧರಿಸಬಹುದು. ನೀವು ನಿಮ್ಮ ಪೋಷಕರನ್ನು, ಸಂಬಂಧಿಕರನ್ನು ಯಾವಾಗ ಬೇಕಾದಾಗ ಕರೆಯಿಸಿಕೊಳ್ಳಬಹುದು. ಫಿಟ್‌, ಯಂಗ್‌  ಬ್ಯೂಟಿ ನಿಮ್ಮ ಮೇಲೆ ಹೆಚ್ಚು ಗಮನ ಕೊಡಬಹುದು. ನಿಮ್ಮ ಬಗ್ಗೆ ಕಾಳಜಿ ತೋರಿಸುವವರು ಯಾರೂ ಇರದೇ ಇರುವುದರಿಂದ ನಿಮ್ಮ ಡಯೆಟ್‌, ಹೆಲ್ತ್ ಬ್ಯೂಟಿ ಬಾಡಿ ಕೇರ್‌ ಇವೆಲ್ಲವುಗಳ ಹೊಣೆ ಸಂಪೂರ್ಣವಾಗಿ ನಿಮ್ಮದೇ ಆಗಿರುತ್ತದೆ. ವೃತ್ತಿಪರ ಯುವತಿಯರು, ಮಹಿಳೆಯರು ಫಿಟ್‌  ಗ್ಲಾಮರಸ್‌ ಹಾಗೂ ಪ್ಲೆಸೆಂಟೆಬಲ್ ಆಗಿರುವುದು ಅತ್ಯವಶ್ಯ. ಅದು ಲಾಭಕರ ಕೂಡ. ಹೀಗಾಗಿ ಸಿಂಗಲ್ ಗರ್ಲ್ ತನ್ನ ವ್ಯಕ್ತಿತ್ವವನ್ನು ಪ್ರಭಾವಶಾಲಿಯಾಗಿಸುತ್ತಾಳೆ.

ಪರಿಪೂರ್ಣ ಸ್ವತಂತ್ರ

ಯಾವುದೇ ರಿಲೇಶನ್‌ಶಿಪ್‌ನಲ್ಲಿ ಇಲ್ಲದೇ ಇರುವುದರ ಅರ್ಥ ನೀವು ನಿಮ್ಮ ಜೀವನದ ಪ್ರತಿಯೊಂದೂ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಅವಶ್ಯಕತೆ ಇದೆ. ನೀವು ಯಾವುದೇ ಪುರುಷನನ್ನು ಅವಲಂಬಿಸದೆ ಇರುವುದರಿಂದ ನಿಮಗೆ ಸಾಕಷ್ಟು ಕಲಿಯುವ ಅವಕಾಶ ಲಭಿಸುತ್ತದೆ. ಪರಿಸ್ಥಿತಿಯ ನಿರ್ವಹಣೆ ಮಾಡುವುದನ್ನು ನೀವು ಇತರ ಮಹಿಳೆಯರಿಗೆ ಹೋಲಿಸಿದಲ್ಲಿ ಬಹಳ ಚೆನ್ನಾಗಿ ಮಾಡುತ್ತೀರಿ. ಈ ಸ್ವಾವಲಂಬನೆ ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಪ್ರತಿಯೊಂದೂ ಸವಾಲನ್ನೂ ಎದುರಿಸಬಹುದು

ಸಿಂಗಲ್ ಹುಡ್‌ ನಿಮ್ಮನ್ನು ಮಾನಸಿಕವಾಗಿ ಬಲಪಡಿಸುತ್ತದೆ. ಒತ್ತಡದ ಸ್ಥಿತಿ ಹಾಗೂ ಆಕಸ್ಮಿಕವಾಗಿ ಬಂದೊದಗುವ ಎಮರ್ಜೆನ್ಸಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನೀವು ಚೆನ್ನಾಗಿ ಕಲಿತುಕೊಳ್ಳುವಿರಿ. ಬೇರೆ ಬೇರೆ ಸ್ವಭಾವದ, ಕಾಂಪ್ಲೆಕ್ಸ್ ಪರ್ಸನಾಲಿಟಿಯ ವ್ಯಕ್ತಿಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕೆನ್ನುವುದು ನಿಮಗೆ ಚೆನ್ನಾಗಿ ಮನವರಿಕೆಯಾಗುತ್ತದೆ.

ಮನಸೋಕ್ತ ಬ್ಯೂಟಿ ಸ್ಲೀಪ್

ನಿಮ್ಮ ಬಳಿ ಸಾಕಷ್ಟು ಸಮಯವಿರುತ್ತದೆ. ಸಮಯದ ಕೊರತೆಯೆಂದು ವಿವಾಹಿತ ಮಹಿಳೆಯರು ಪರಿತಪಿಸುತ್ತಿರುತ್ತಾರೆ. ನೀವು ನಿಮ್ಮ ದೈನಂದಿನ ರುಟೀನ್‌, ನಿದ್ರೆಯ ರುಟೀನ್‌ ನಿಮ್ಮ ಕೆಲಸ ಹಾಗೂ ಅಗತ್ಯಕ್ಕನುಗುಣವಾಗಿ ಸೆಟ್‌ ಮಾಡಿಕೊಳ್ಳಬಹುದು. ಸಂಗಾತಿಯ ಮುನಿಸು, ಮಕ್ಕಳ ಪಾಲನೆ, ಪೋಷಣೆ ಅತ್ತೆ ಮನೆಯ ಜವಾಬ್ದಾರಿ, ಚಿಂತೆ ನಿಮಗೆ ಯಾವುದೂ ಇರುವುದಿಲ್ಲ. ಹೀಗಾಗಿ ನಿಶ್ಚಿಂತ, ಬ್ಯೂಟಿ ಸ್ಲೀಪ್‌ನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರಾತ್ರಿಯಿಡೀ ನಿದ್ದೆ ನಿಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಫಿಟ್‌ ಆಗಿಡಲು ನೆರವಾಗುತ್ತದೆ. ಇದರಿಂದ ನಿಮ್ಮ ಮೆದುಳು ಕೂಡ ಸಕ್ರಿಯವಾಗಿರುತ್ತದೆ. ಕಾರ್ಯ ಸಾಮರ್ಥ್ಯ, ಏಕಾಗ್ರತೆ, ಕೌಶಲ ಇವುಗಳಲ್ಲಿ ಪ್ರಗತಿ ಕಂಡುಬರುತ್ತದೆ.

ನಿಮ್ಮದೇ ಆದ ಜೀವನಶೈಲಿ

ನಿಮ್ಮ ಮೇಲೆ ಯಾರ ಜವಾಬ್ದಾರಿಯೂ ಇಲ್ಲ. ಈ ಕಾರಣದಿಂದ ನಿಮ್ಮ ಬಳಿ ಸಾಕಷ್ಟು ಸಮಯಾವಕಾಶವಿದೆ. ಶಕ್ತಿ, ಸ್ಛೂರ್ತಿ, ಸಂಪನ್ಮೂಲ ಎಲ್ಲ ಇದೆ. ಹೀಗಾಗಿ ನೀವು ಆರೋಗ್ಯಕರ ಜೀವನಶೈಲಿ ಅನುಸರಿಸಬಹುದು. ಊಟ ಉಪಾಹಾರದ ಅಭ್ಯಾಸಗಳು, ವ್ಯಾಯಾಮದ ಶೆಡ್ಯೂಲ್ ‌ಗಳಲ್ಲಿ ಬದಲಾವಣೆ ತಂದುಕೊಳ್ಳಬಹುದು. ಜೀವನ ಬೇಸರದ ಗೂಡಾಗದಂತೆ ನೋಡಿಕೊಳ್ಳಬಹುದು.

ಹಣಕಾಸು ಸಮಸ್ಯೆ ಸೀಮಿತ

ಇಂದಿನ ಉದ್ಯೋಗಸ್ಥ ದಂಪತಿಗಳಲ್ಲಿ ನನ್ನ ಹಣ, ನಿನ್ನ ಹಣ ಎಂಬ ವಾದವಿವಾದಗಳು ಬಹಳಷ್ಟು ಸಮಸ್ಯೆಗಳನ್ನು ತರುತ್ತಿವೆ. ಅದು ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಪುರುಷರು ಹೆಂಡತಿ ಹಣವನ್ನು ಹೇಗೆ ಖರ್ಚು ಮಾಡುತ್ತಾಳೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನೀವು ಅವಿವಾಹಿತೆಯಾಗಿರುವ ಕಾರಣದಿಂದ ಹಣವನ್ನು ನಿಮಗೆ ಇಷ್ಟಬಂದ ರೀತಿಯಲ್ಲಿ ಖರ್ಚು ಮಾಡಬಹುದು, ಅದೇ ರೀತಿ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಕೂಡ ಮಾಡಬಹುದು. ನಿಮ್ಮ ಹಣ ಪೂರ್ತಿ ನಿಮ್ಮದೇ. ನೀವು ಎಲ್ಲಿಯಾದರೂ ಶಾಪಿಂಗ್‌ ಮಾಡಬಹುದು, ಸ್ಪಾಗೆ ಹೋಗಬಹುದು, ಬೇರೆಲ್ಲಾದರೂ ಹಣ ಹೂಡಿಕೆ ಮಾಡಬಹುದು.

ವಿಶಿಷ್ಟ ಗುರುತು

ವೃತ್ತಿ ಜೀವನದಲ್ಲಿ ಸೆಟಲ್ ಆದ ಬಳಿಕ ನಿಮ್ಮ ಹವ್ಯಾಸಗಳಿಗೆ ಮತ್ತೆ ಜೀವ ಕೊಡಬಹುದು. ಸಮಯದ ಕೊರತೆ ಹಾಗೂ ಹಣದ ಕೊರತೆಯಿಂದ ಅವು ತೆರೆಯ ಹಿಂದೆ ಸರಿದು ಹೋಗಿದ್ದವು. ಆಫೀಸಿನಿಂದ ಮನೆಗೆ ಮರಳಿದ ಬಳಿಕ ಥಿಯೇಟರ್‌, ಸ್ಕ್ರಿಪ್ಟ್ ರೈಟಿಂಗ್‌, ಕ್ಲೇ ಪೇಂಟಿಂಗ್‌ ಅಥವಾ ಸಂಗೀತದ ಕುರಿತಾದ ನಿಮ್ಮ ಒಲವಿಗೆ ಹೊಸ ಸ್ಪರ್ಶ ಕೊಡಬಹುದು. ಯಾವುದೇ ಬಗೆಯ ಕ್ರಿಯಾಶೀಲ ಚಟುವಟಿಕೆ ನಿಮ್ಮ ಮನಸ್ಸು ಮೆದುಳಿಗೆ ಖುಷಿಯ ಸಿಂಚನ ಮೂಡಿಸಬಹುದು.

ಇಷ್ಟ ಬಂದಾಗ ಹಾಲಿಡೇ ಪ್ಲಾನ್

ಸಿಂಗಲ್ ಆಗಿರುವುದರ ಮತ್ತೊಂದು ಲಾಭವೆಂದರೆ ನೀವು ನಿಮ್ಮ ಮೂಡ್‌, ಆಸಕ್ತಿಗನುಗುಣವಾಗಿ ಯಾವಾಗ ಬೇಕೆಂದಾಗ ಹಾಲಿಡೇ ಪ್ಲಾನ್‌ ಮಾಡಬಹುದು. ನಿಮಗೆ ಬಹಳ ಇಷ್ಟವಾದ ಜಾಗಕ್ಕೆ ಹೋಗಿ ನಿಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಬಹುದು. ಸಂಗಾತಿಯ ಅಪೇಕ್ಷೆಯಂತೆ ಹೊಂದಾಣಿಕೆ ಮಾಡಿಕೊಳ್ಳುವುದು, ತಮ್ಮ ಇಚ್ಛೆಯನ್ನು ಸೀಮಿತಗೊಳಿಸುವುದನ್ನು ಬಹಳಷ್ಟು ವಿವಾಹಿತ ಮಹಿಳೆಯರು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ. ಆದರೆ ನೀವು ಯಾವುದೇ ಸುಂದರ ಗಿರಿಧಾಮ, ತೀರಪ್ರದೇಶ ಎಲ್ಲೆಂದರಲ್ಲಿ ಹೋಗಿ ನಿಮ್ಮ ಎನರ್ಜಿಯನ್ನು ಮತ್ತಷ್ಟು ತಾಜಾಗೊಳಿಸಿಕೊಳ್ಳಬಹುದು.

– ಎಸ್‌. ಲಾವಣ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ