ಶಂಕರ್‌ ಹಾಗೂ ಅವರ ಪತ್ನಿ ಸೀತಾಬಾಯಿ ಊಟ ಮಾಡಿ ಇನ್ನೇನು ತಮ್ಮ ರೂಮಿಗೆ ಹೋಗಬೇಕು ಎನ್ನುವಷ್ಟರಲ್ಲಿ ಫೋನ್‌ ಗಂಟೆ ಹೊಡೆದುಕೊಳ್ಳಲಾರಂಭಿಸಿತು. ಫೋನ್‌ ಅವರಿದ್ದ ಮೈಸೂರು ನಗರದಿಂದಲೇ ಬಂದಿತ್ತು. ಫೋನ್‌ ಮಾಡಿದವರು ಮಗಳ ಮಾವ ಸುರೇಶ್‌. ಅತ್ಯಂತ ಗಾಬರಿಯ ಧ್ವನಿಯಲ್ಲಿ, ”ಸುಜಾತಾಳಿಗೆ ಹೊಟ್ಟೆಯಲ್ಲಿ ತುಂಬಾ ನೋವು ಕಾಣಿಸಿಕೊಂಡಿದೆ. ನಾವು ಆಸ್ಪತ್ರೆಗೆ ಹೊರಟಿದ್ದೇವೆ,” ಎಂದರು.

ಶಂಕರ್‌ ತಕ್ಷಣವೇ ಸ್ಕೂಟರ್‌ ತೆಗೆದು ಪತ್ನಿ ಸೀತಾರೊಂದಿಗೆ ಆಸ್ಪತ್ರೆಗೆ ಹೊರಟೇಬಿಟ್ಟರು. ಸುರೇಶ್‌ ಆಗಷ್ಟೇ ಆಸ್ಪತ್ರೆಗೆ ತಲುಪಿದ್ದರು. ಅವರ ಪತ್ನಿಯನ್ನು ವೈದ್ಯರು ಒಳಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡುವುದರಲ್ಲಿ ಮಗ್ನರಾಗಿದ್ದರು. ಇತ್ತ ಸುರೇಶ್‌ ಆ ಕಡೆ ಈ ಕಡೆ ಹೆಜ್ಜೆ ಹಾಕುತ್ತಾ ವೈದ್ಯರು ಏನು ಹೇಳುತ್ತಾರೊ ಎಂದು ಚಡಪಡಿಸುತ್ತಿದ್ದರು. ಎದುರಿಗೆ ಬೀಗರಾದ ಶಂಕರ್‌ ಹಾಗೂ ಸೀತಾಬಾಯಿಯವರನ್ನು ನೋಡಿ ಸಾಕಷ್ಟು ನಿರಾಳ ಎನಿಸಿತು. ವೈದ್ಯರು ಸುರೇಶ್‌ರನ್ನು ಒಳ ಬರಲು ಹೇಳಿದರು. ಆಗ ಶಂಕರ್‌ ಹಾಗೂ ಸೀತಾಬಾಯಿ ಕೂಡ ಅವರ ಜೊತೆಗೆ ಒಳಗೆ ಹೋದರು. ವೈದ್ಯರು ಸ್ವಲ್ಪ ಗಂಭೀರ ಸ್ವರದಲ್ಲಿ, “ನೋಡಿ, ನಿಮ್ಮ ಪತ್ನಿಗೆ ಹೊಟ್ಟೆನೋವು  ಬರುತ್ತಿರುವುದು ಹರ್ನಿಯಾದಿಂದ. ಅವರಿಗೆ ತಕ್ಷಣವೇ ಆಪರೇಶನ್‌ ಮಾಡಬೇಕು,” ಎಂದರು.

ವೈದ್ಯರ ಮಾತುಗಳನ್ನು ಕೇಳಿ ಸುರೇಶ್‌ ಗಾಬರಿಗೊಳಗಾದರು. ಆದರೆ ಶಂಕರ್‌ ಮತ್ತು ಸೀತಾಬಾಯಿ ಸುರೇಶ್‌ಗೆ, “ಈ ಆಪರೇಶನ್‌ಗೆ ನೀವು ಅಷ್ಟೊಂದು ಹೆದರುವುದೇಕೆ? ವೈದ್ಯಕೀಯ ಜಗತ್ತು ಇಂದು ಬಹಳ ಮುಂದುವರಿದಿದೆ. ಒಂದೆರಡು ಗಂಟೆಯಲ್ಲಿಯೇ ಆಪರೇಶನ್‌ ಮಾಡಿ ಮುಗಿಸುತ್ತಾರೆ. 2-3 ದಿನಗಳಲ್ಲಿಯೇ ಮನೆಗೆ ಹೋಗಬಹುದು 1-2 ವಾರಗಳಲ್ಲಿ ಮಾಮೂಲಿ ಯಂತಾಗುತ್ತದೆ,” ಎಂದು ಧೈರ್ಯ ತುಂಬಿದರು. ಆ ಬಳಿಕ ಸುರೇಶ್‌ ಆಪರೇಶನ್‌ಗೆ ಒಪ್ಪಿಗೆ ಸೂಚಿಸಿದರು. ಆಪರೇಶನ್‌ ಯಶಸ್ವಿಯಾಗಿ ಮುಗಿಯಿತು. ಶಂಕರ್‌ ಮತ್ತು ಸೀತಾಬಾಯಿ ದಂಪತಿಗಳು ಅವತ್ತೊಂದೇ ದಿನ ಜೊತೆಗಿರದೆ, ಸುಜಾತಾ ಆಸ್ಪತ್ರೆಯಲ್ಲಿದ್ದ 3 ದಿನಗಳೂ ಅವರ ಬೇಕುಬೇಡಗಳನ್ನು ಗಮನಿಸಿದರು. ಸಕಾಲಕ್ಕೆ ಔಷಧಿ ಕುಡಿಸಿದರು, ಮಾತ್ರೆ ನುಂಗಿಸಿದರು. ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗುವವರೆಗೂ ಜೊತೆಗಿದ್ದರು.

ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಬಳಿಕ ತಮ್ಮ ಮನೆಗೆ ಆಟೋದಲ್ಲಿ ಹೋಗುತ್ತೇವೆಂದು ಸುರೇಶ್‌ ಮತ್ತು ಸುಜಾತಾ ಎಷ್ಟೇ ಹೇಳಿದರೂ ಕೇಳದೆ, ಅವರನ್ನು ತಮ್ಮ ಕಾರಿನಲ್ಲೇ ಕೂರಿಸಿ ಕೊಂಡ ಶಂಕರ್‌ ಮತ್ತು ಸೀತಾಬಾಯಿ ದಂಪತಿ ಹೊರಟರು. ಸ್ವಲ್ಪ ಹೊತ್ತಿನಲ್ಲಿಯೇ ಕಾರು ತಮ್ಮ ಮನೆ ಕಡೆ ಹೋಗದೆ, ಬೀಗರ ಮನೆ ಕಡೆ ಹೋಗುತ್ತಿರುವುದು ಸುರೇಶ್‌ ಗಮನಕ್ಕೆ ಬಂದು ಯಾಕೆಂದು ಕೇಳಿದರು.

“ನೀವು ಕೆಲವು ದಿನ ನಮ್ಮ ಮನೆಯಲ್ಲಿಯೇ ಇರಬೇಕು. ಮಗಳು ಹಾಗೂ ಅಳಿಯ ಬರೋವರೆಗೆ ನಾವೇ ನಿಮ್ಮನ್ನು ನೋಡಿಕೊಳ್ಳುತ್ತೇವೆ,” ಎಂದರು ಶಂಕರ್‌ ಮತ್ತು ಸೀತಾಬಾಯಿ ದಂಪತಿಗಳು.

ಅವರ ಮಾತಿಗೆ ಯಾವುದೇ ವಿರೋಧ ವ್ಯಕ್ತಪಡಿಸದೆ ಸುರೇಶ್‌ ಮತ್ತು ಸುಜಾತಾ ದಂಪತಿಗಳು ಬೀಗರ ಮನೆಯಲ್ಲಿ ಉಳಿದರು. ಸುರೇಶ್‌ರ ಮಗ ಸೊಸೆ ಇಬ್ಬರೂ 4-5 ದಿನಗಳ ಬಳಿಕ ಮೈಸೂರಿಗೆ ವಾಪಸ್‌ ಬಂದರು. ಅವರು ಬಂದ ಬಳಿಕ ಸುರೇಶ್‌ ಮತ್ತು ಸುಜಾತಾ ಇನ್ನೂ 15 ದಿನಗಳ ಕಾಲ ಅವರ ಮನೆಯಲ್ಲಿ ಉಳಿದರು.

ಆ ಬಳಿಕ ಸುಜಾತಾರನ್ನು ಅವರ ಮನೆಗೆ ಕಳಿಸಲು ಸೀತಾಬಾಯಿ ಒಪ್ಪಿರಲಿಲ್ಲ. ಬಹಳ ಒತ್ತಾಯದಿಂದಲೇ ತಮ್ಮ ಮನೆಗೆ ಹೊರಟರು. ಈ ಮಧ್ಯೆ  ಬೀಗರಿಂದ ಸಿಕ್ಕ ಪ್ರೀತಿ ಗೌರವ ಹಾಗೂ ಉಪಚಾರವನ್ನು ಈಗಲೂ ಸುಜಾತಾ ಹಾಗೂ ಸುರೇಶ್‌ ಮರೆತಿಲ್ಲ. ಎಲ್ಲರ ಮುಂದೆ ಅದನ್ನು ಹೇಳುತ್ತಲೇ ಇರುತ್ತಾರೆ.

ಎಲ್ಲರೂ ಗೌರವಕ್ಕೆ ಅರ್ಹರು

ಭಾರತೀಯ ಸಮಾಜ ಪುರುಷ ಪ್ರಧಾನ. ಬಹಳ ಹಿಂದಿನ ಕಾಲದಿಂದಲೇ ಹೆಣ್ಣಿನ ತಂದೆತಾಯಿಯನ್ನು ಗಂಡಿನ ತಂದೆತಾಯಿಗಿಂತ ಕಡಿಮೆ ಎಂದೇ ಭಾವಿಸಲಾಗುತ್ತದೆ. ಆದರೆ ಈಗ ಆ ನಂಬಿಕೆಗಳು ಬದಲಾಗಿವೆ. ಹುಡುಗಿಯರನ್ನು ಈಗ ಹುಡುಗರ ಹಾಗೆಯೇ ಪಾಲನೆಪೋಷಣೆ ಮಾಡಿಕೊಂಡು ಬರಲಾಗುತ್ತಿದೆ. ಹುಡುಗಿಯರು ಇಂದು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಾವೇನೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹುಡುಗರ ಸರಿಸಮಾನ ಅಷ್ಟೇ ಏಕೆ, ಕೆಲವೊಮ್ಮೆ ಅವರಿಗಿಂತ ಹೆಚ್ಚು ವೇತನ ಪಡೆಯುವ ಹುಡುಗಿಯರು ತಮ್ಮ ತಂದೆತಾಯಿಯರನ್ನು ಯಾರೇ ಆಗಲಿ, ಯಾವುದೇ ಹಂತದಲ್ಲಾಗಲಿ ಕೀಳಾಗಿ ಕಾಣುವುದನ್ನು ಇಷ್ಟಪಡುವುದಿಲ್ಲ.

ಇಂದು ಹೆಚ್ಚಿನ ದಂಪತಿಗಳಿಗೆ ಒಂದು ಅಥವಾ ಎರಡು ಮಕ್ಕಳು ಮಾತ್ರ ಇರುತ್ತವೆ. ಮಗನ ಹಾಗೆ ಕೆಲವು ಹೆಣ್ಣು ಮಕ್ಕಳು ತಮ್ಮ ತಂದೆತಾಯಿ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಆರ್ಥಿಕವಾಗಿ ಸಬಲರಾದ ಬಳಿಕ ಹುಡುಗಿಯರು ತಮ್ಮ ತಂದೆ ತಾಯಿಗೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾರೆ. ಮಗ ಅಥವಾ ಮಗಳ ಮದುವೆಯ ಬಳಿಕ ನಮಗೆ ಹೊಸ ಸಂಬಂಧಿಕರು ದೊರೆಯುತ್ತಾರೆ. ಅವರು ಕೂಡ ನಮ್ಮ ಹಾಗೆಯೇ ಗೌರವಕ್ಕೆ ಪಾತ್ರರಾಗಿರುತ್ತಾರೆ. ನಾವು ಸ್ವಾರ್ಥ, ಅಹಂ ತೊರೆದು ಅವರನ್ನು ಪ್ರೀತಿ ವಿಶ್ವಾಸದಿಂದ ಸ್ನೇಹಿತರೆಂಬಂತೆ ಕಾಣಬೇಕು. ಆಗ ನೋಡಿ ಆ ಸಂಬಂಧ ಅದೆಷ್ಟು ಮೌಲ್ಯವುಳ್ಳದ್ದು ಎಂಬುದು ಸಾಬೀತಾಗುತ್ತದೆ.

ಯಾವ ಕುಟುಂಬದಲ್ಲಿ ಸೊಸೆಯ ತಂದೆ ತಾಯಿಗೆ ಸೂಕ್ತ ಗೌರವ ಕೊಡಲಾಗುದಿಲ್ಲವೋ, ಆ ಮನೆಯಲ್ಲಿ ಸೊಸೆ ಕೂಡ ತನ್ನ ಅತ್ತೆಮಾವನಿಗೆ ಅಷ್ಟೊಂದು ಗೌರವ ಕೊಡುವುದಿಲ್ಲ. ರಶ್ಮಿಯ ತಾಯಿ ಯಾವಾಗಾದರೂ ಮನೆಗೆ ಬಂದರೆ, ಅವಳ ಅತ್ತೆ ಮನೆಗೆಲಸ ಬಿಟ್ಟು ಸುಮ್ಮನೆ ಕುಳಿತುಬಿಡುತ್ತಾರೆ. ಇಲ್ಲವೇ ತರಾತುರಿಯಲ್ಲಿ ಎಲ್ಲಿಯಾದರೂ ಹೊರಟುಬಿಡುತ್ತಾರೆ. ತಾಯಿ-ಮಗಳು ಇಡೀ ದಿನ ಮನೆಗೆಲಸ ಮಾಡುತ್ತಾ ಇರಬೇಕಾಗುತ್ತದೆ. ಅವಳ ಅತ್ತೆಯ ವರ್ತನೆ ಹೇಗಿರುತ್ತದೆಂದರೆ, ಸೊಸೆಯ ತಾಯಿಯಾಗಿ ಅವರೇನೋ ತಪ್ಪು ಮಾಡಿದ್ದಾರೆ ಎಂಬಂತಿರುತ್ತದೆ. ಹೀಗಾಗಿ ತನ್ನ ನಾದಿನಿಯವರೇನಾದರೂ ತವರಿಗೆ ಬಂದರೆ, ಮನೆಗೆಲಸವನ್ನು ಬಿಟ್ಟು ರಶ್ಮಿ ಅನಾರೋಗ್ಯಪೀಡಿತಳಂತೆ ಹಾಸಿಗೆ ಹಿಡಿಯುತ್ತಾಳೆ.

ಈ ಕುರಿತಂತೆ ರಶ್ಮಿ ಹೇಳುವುದು ಹೀಗೆ, “ನನ್ನ ತಾಯಿ ಇಲ್ಲಿಗೆ ಬಂದರೆ ನಾವಿಬ್ಬರೇ ಮನೆಗೆಲಸ ಮಾಡಬೇಕು. ಅದೇ ನಾದಿನಿಯರು ಬಂದರೆ ಅವರೇಕೆ ವಿಶ್ರಾಂತಿ ಪಡೆಯಬೇಕು. ಎಲ್ಲ ಕೆಲಸವನ್ನು ಅವರೂ ಮಾಡಲಿ?”ಸಾಮಾನ್ಯವಾಗಿ ಹುಡುಗನ ತಂದೆತಾಯಿ ಹುಡುಗಿಯ ತಂದೆತಾಯಿಗಿಂತ ಶ್ರೇಷ್ಠ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ಅದಕ್ಕೆ ತದ್ವಿರುದ್ಧ  ದೃಶ್ಯ ಕಂಡುಬರುತ್ತದೆ.

ದೀಪ್ತಿಯ ಮಗಳ ಅತ್ತೆ ಶಕುಂತಲಾ ಗ್ರಾಮೀಣ ಭಾಗದವರು, ಅಷ್ಟೇನೂ ಓದಿದವರಲ್ಲ. ಯಾವಾಗಾದರೂ ಶಕುಂತಲಾ ತನ್ನ ಸೊಸೆಯ ಮನೆಗೆ ಬಂದಾಗ, ಸೊಸೆಯ ತಾಯಿ ನಾವು ನಿಮಗಿಂತ ಎಲ್ಲದರಲ್ಲೂ ಸ್ಟಾಂಡರ್ಡ್‌, ಮಾಡರ್ನ್‌ ಹಾಗೂ ಸುಶಿಕ್ಷಿತರು ಎಂಬುದನ್ನು ಒತ್ತಿ ಒತ್ತಿ ಹೇಳಿದಂತೆ ಭಾಸವಾಗುತ್ತಿತ್ತು.

ಶಕುಂತಲಾಗೂ ಸೊಸೆಯ ತಾಯಿ ಹೇಳಿದ ಮಾತುಗಳು ಅರ್ಥವಾಗುತ್ತಿದ್ದವು. ಆದರೆ ಅವರು ಏನೂ ಪ್ರತಿಕ್ರಿಯೆ ಕೊಡದೆ ಸುಮ್ಮನಾಗುತ್ತಿದ್ದರು. ಎರಡು ದಿನಗಳ ಬಳಿಕ ಊರಿಗೆ ಹೋಗಲು ಸಿದ್ಧರಾದಾಗ ಬೀಗಿತ್ತಿಯನ್ನು ಉದ್ದೇಶಿಸಿ, “ನಾನು ಹಳ್ಳಿಯ ಮಹಿಳೆಯೇ ಇರಬಹುದು. ಆದರೆ ನನ್ನ ಮಗನನ್ನು ಹೇಗೆ ಬೆಳೆಸಿ ಓದಿಸಿದ್ದೇನೆಂದರೆ, ನೀವು ಅವನನ್ನು ಅಳಿಯನನ್ನಾಗಿ ಪಡೆದು ಧನ್ಯರೆಂಬಂತೆ ಭಾವಿಸುತ್ತಿದ್ದೀರಿ,” ಎಂದರು.  ಬೀಗತ್ತಿಯ ಮಾತುಗಳನ್ನು ಕೇಳಿ ದೀಪ್ತಿಗೆ ಮುಂದೆ ಏನು ಮಾತನಾಡಬೇಕೆಂದೇ ತೋಚಲಿಲ್ಲ. ಆ ರೀತಿಯ ವರ್ತನೆ ಮನಸ್ಸಿನಲ್ಲಿ ಕಹಿ ಭಾವನೆ ತುಂಬಿಬಿಡುತ್ತದೆ. ಅಷ್ಟೇ ಅಲ್ಲ, ನೀವು ಮಾಡಿದ ತಪ್ಪಿಗೆ ನಿಮ್ಮ ಮಗಳು ಅದರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮಗಳ ಅತ್ತೆ ಮನೆಯವರು ಹೇಗೇ ಇರಲಿ, ಅವರ ಬಗ್ಗೆ ಕಹಿ ಭಾವನೆ ಹೊಂದದೆ, ಆದರದ ಭಾವನೆ ಇಟ್ಟುಕೊಳ್ಳಿ. ಸಂಬಂಧದಲ್ಲಿ ಸೌಹಾರ್ದದ ವಾತಾವರಣ ಉಳಿಸಿಕೊಳ್ಳಿ.

ನಿಮ್ಮ ಬೀಗಿತ್ತಿ ಮನೆಗೆ ಬಂದಾಗ, ಅವರಿಗೆ ತಮ್ಮ ಮನೆಯಲ್ಲಿ ಯಾವ ಗೌರವ ಆದರದ ಭಾವನೆ ಇದೆಯೋ, ಅಷ್ಟೇ ಗೌರವ ನಿಮ್ಮ ಮನೆಯಲ್ಲಿ ದೊರಕಬೇಕು. ಯಾವುದೇ ಸಂದರ್ಭದಲ್ಲೂ ಅವರನ್ನು ಕೀಳಾಗಿ ಕಾಣಲು ಪ್ರಯತ್ನಿಸಬೇಡಿ. ಸೊಸೆಯ ತಂದೆತಾಯಿ ಜೊತೆ ನೀವು ತೋರಿದ ವರ್ತನೆ ಸೊಸೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ.

ಶ್ರೀದೇವಿ ಈ ಕುರಿತಂತೆ ಹೀಗೆ ಹೇಳುತ್ತಾರೆ, “ನನ್ನ ಅತ್ತೆ ನನ್ನ ಅಮ್ಮನ ಜೊತೆ ಹೇಗೆ ವರ್ತಿಸುತ್ತಾರೆಂದರೆ, ಹಿರಿಯ ಸೊಸೆ ಕಿರಿಯ ಸೊಸೆ ಜೊತೆ ಮಾತನಾಡಿದಂತಿರುತ್ತದೆ. ಅವರ ಮಾತಿನಲ್ಲಿ ಅಹಂ ಆಗಲಿ, ಪ್ರತಿಷ್ಠೆ ತೋರಿಸಿಕೊಳ್ಳುವುದು ಗೋಚರಿಸುವುದೇ ಇಲ್ಲ. ಇಂತಹ ಅತ್ತೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ…..”

ಅವರಿಗೂ ಉಡುಗೊರೆ ಕೊಡಿ

ಭಾರತೀಯ ಸಮಾಜದಲ್ಲಿ ಅನೇಕ ರೀತಿ ರಿವಾಜುಗಳಿವೆ. ಅದರಲ್ಲಿ ಹುಡುಗಿಯ ಮನೆಯವರು ಏನಾದರೊಂದು ಕೊಡುತ್ತಲೇ ಇರಬೇಕಾಗುತ್ತದೆ. ಮದುವೆಯ ನಂತರ ಹಬ್ಬಗಳಿಗೆ, ಬಳಿಕ ಗರ್ಭಿಣಿಯಾದ ನಂತರ, ಮಗು ಹುಟ್ಟಿದ ಬಳಿಕ ಹೀಗೆ ಒಂದಿಲ್ಲೊಂದು ಉಡುಗೊರೆಯನ್ನು ಕೊಡಬೇಕಾಗುತ್ತದೆ. ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ಯಾವಾಗಾದರೂ ಏನನ್ನಾದರೂ ಸಾಂದರ್ಭಿಕ ಉಡುಗೊರೆ ಕೊಡಬೇಕು. ಇದರಿಂದ ಸಂಬಂಧದಲ್ಲಿ ಕಹಿ ಉಂಟಾಗುವುದಿಲ್ಲ.

ಅನಿತಾಳ ಅತ್ತೆ-ಮಾವ ಮುಕ್ತ ಸ್ವಭಾವದವರು. ಅನಿತಾಳಿಗೆ ಮಗುವಾದಾಗ ಅನಿತಾಳ ಕುಟುಂಬದವರಿಂದ ಅವಳ ಅತ್ತೆ ಮನೆಯವರಿಗೆ ಬಟ್ಟೆ-ಸಿಹಿ ತಿಂಡಿಗಳನ್ನು ಕಳಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಅನಿತಾಳ ಅತ್ತೆ ಅವಳ ತವರುಮನೆಯ ಪ್ರತಿಯೊಬ್ಬ ಸದಸ್ಯರಿಗೂ ಬಟ್ಟೆಗಳನ್ನು ಹಾಗೂ ಸಿಹಿ ತಿಂಡಿಗಳನ್ನು ಕಳಿಸಿಕೊಟ್ಟರು. “ನಮ್ಮ ಮನೆಗೆ ಮೊಮ್ಮಗಳು ಬಂದಿದ್ದಾಳೆ. ಆ ಖುಷಿಯನ್ನು ನಾವು ಸೆಲೆಬ್ರೇಟ್‌ ಮಾಡಬೇಕು ಅಲ್ವಾ?” ಎಂದು ಅವರು ಪ್ರತಿಯಾಗಿ ಹೇಳಿದರು.

ಶಶಿಕಲಾ ತನ್ನ ಮಗ-ಸೊಸೆಯ ಜೊತೆ ಸುತ್ತಾಡಲು ಸಿಂಗಾಪುರಕ್ಕೆ ಹೋಗಬೇಕಿತ್ತು. ಆಗ ಅವರು ತಮ್ಮ ಸೊಸೆಯ ತಾಯಿತಂದೆಯರನ್ನು ಕೂಡ ಕರೆದುಕೊಂಡು ಹೋದರು. ಇದು ಅವರ ಬೀಗರ ಬಗೆಗಿನ ಪ್ರೀತಿವಿಶ್ವಾಸವನ್ನು ತೋರಿಸಿಕೊಡುತ್ತದೆ.

ಶಶಿಕಲಾ ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಬೀಗರು ನಮ್ಮ ಜೊತೆಗೆ ಇರುವುದರಿಂದ ನಮಗೆ ಖುಷಿಯಾಗುತ್ತದೆ. ಜೊತೆಗೆ ಸೊಸೆಗೆ ಅವರ ಅಮ್ಮ ಅಪ್ಪನ ಜೊತೆಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಸಿಗುವುದರಿಂದ ಖುಷಿ ಹೆಚ್ಚುತ್ತದೆ. ನನ್ನ ಮಗ ಹೇಗೆ ತನ್ನ ತಂದೆತಾಯಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಬೇಕೆಂದು ಕನಸು ಕಂಡಿರುತ್ತಾನೊ, ಅದೇ ರೀತಿ ಸೊಸೆ ಕೂಡ ತನ್ನ ತಾಯಿತಂದೆಯರನ್ನು ಇಂತಿಂಥ ಸ್ಥಳಕ್ಕೆ ಕರೆದುಕೊಂಡು ಹೋಗಬೇಕೆಂದು ಕನಸು ಕಂಡಿರಬಹುದಲ್ಲವೇ?”

ಇತ್ತೀಚಿನ ವರ್ಷಗಳಲ್ಲಿ ಗಂಡ-ಹೆಂಡತಿ ಇಬ್ಪರೂ ಉದ್ಯೋಗಸ್ಥರು. ಇಂತಹ ಸ್ಥಿತಿಯಲ್ಲಿ ಮಕ್ಕಳ ಪಾಲನೆ ಪೋಷಣೆ ಕಷ್ಟವಾಗುತ್ತದೆ. ನನಗೆ ಮಗುವಾದಾಗ ನನ್ನ ಮಾವ ಹಾಗೂ ಅಪ್ಪ ಇಬ್ಬರೂ ಸೇರಿ ಒಂದು ಉಪಾಯ ಮಾಡಿದರು. ನನ್ನ ಮಗಳನ್ನು ಕ್ರೀಚ್‌ಗೆ ಸೇರಿಸೋದು ಬೇಡ. ನನ್ನ ಮೊಮ್ಮಗಳು ಯಾರದೋ ಆಶ್ರಯದಲ್ಲಿ ಬೆಳೆಯೋದು ಬೇಡ. ಅದಕ್ಕಾಗಿ ನಿನ್ನ ಅಪ್ಪ ಅಮ್ಮ ಕೆಲವು ತಿಂಗಳು ಇಲ್ಲಿಯೇ ಬಂದಿರಲಿ ಎಂದು ಅತ್ತೆ ಹೇಳಿದರು. ಅಮ್ಮ ಇಲ್ಲಿಗೆ ಬಂದು ಅನೇಕ ತಿಂಗಳು ಮೊಮ್ಮಗಳ ಯೋಗಕ್ಷೇಮ ನೋಡಿಕೊಂಡರು. ಇಬ್ಬರು ಅಜ್ಜಿ-ತಾತಂದಿರ ಆಶ್ರಯದಲ್ಲಿ ಮಗುವಿಗೆ ಸಿಕ್ಕ ಪಾಲನೆ-ಪೋಷಣೆಯನ್ನು ನಾನು ಖಂಡಿತ ಕೊಡುವುದು ಸಾಧ್ಯವಿರುತ್ತಿರಲಿಲ್ಲ. ನಾಲ್ಕೂ ಜನ ಸೇರಿಕೊಂಡು ನಮ್ಮ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಬಗೆಹರಿಸಿದರು.

ಮಗಳ ತಂದೆ-ತಾಯಂದಿರಿಗೂ ಒಂದು ಜವಾಬ್ದಾರಿ ಇರುತ್ತದೆ. ಅವರು ತಮ್ಮ ಮಗಳಿಗೆ ಗಂಡನ ಜೊತೆ ಜೊತೆಗೆ ಅವನ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊ ಎನ್ನುವ ತಿಳಿವಳಿಕೆ ಕೊಡಬೇಕು.

ಚಂದ್ರಿಕಾ ತನ್ನ ಮಗಳ ಮದುವೆಯ ಬಳಿಕ ಮೊದಲ ಬಾರಿ ತಮ್ಮ ಬೀಗರನ್ನು ಭೇಟಿಯಾದಾಗ, “ನೀವು ಆಗಾಗ ಮಗ-ಸೊಸೆಯನ್ನು ಭೇಟಿಯಾಗಲು ಹೋಗುತ್ತಾ ಇರಿ. ಅವರು ನಿಮ್ಮೊಂದಿಗೆ ಇರುವ ಅಭ್ಯಾಸ ಮಾಡಿಕೊಳ್ಳಬೇಕು. ನೀವು ವರ್ಷಾನುಗಟ್ಟಲೇ ಅವರ ಬಳಿ ಹೋಗದೇ ಇದ್ದರೆ ಅವರು ಏಕಾಂಗಿಯಾಗಿರುವುದನ್ನು ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ. ಕೆಲವು ವರ್ಷಗಳ ಬಳಿಕ ಅವರ ಬಳಿ ಹೋದರೆ ನಿಮ್ಮ ಜೊತೆ ಇರಲು ಅವರಿಗೆ ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ಅವರು ಏಕಾಂಗಿಯಾಗಿ ವಾಸಿಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಹಾಗಾಗಿ ನಿಮ್ಮೊಂದಿಗೆ ಇರಲು ಕಷ್ಟಪಡುತ್ತಾರೆ,” ಎಂದು ಹೇಳಿದರು.

ನೀವು ನಿಮ್ಮ ಬೀಗರ ಸ್ಥಿತಿಗತಿ ವಿವಶತೆಯನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು. ನಂದಿನಿ ಪ್ರಕಾಶ್‌ ಒಂದು ಸಲ ಮೈಸೂರು ಪ್ರವಾಸ ಹೋದಾಗ ತನ್ನ ಮಗನ ಮಾವನ ಮನೆಗೆ ಹೋದರು. ಇವರ ಜೊತೆಗೆ ಇನ್ನೂ 3 ಜನರಿದ್ದರು. ಮಗನ ಮಾವನ ಮನೆಯಲ್ಲಿ ಅವರ ವೃದ್ಧ ತಂದೆತಾಯಿಗಳೂ ಇದ್ದರು. ಹೀಗಾಗಿ ಮಗನ ಅತ್ತೆ-ಮಾವಂದಿರು ನಂದಿನಿ ಪ್ರಕಾಶ್‌ರಿಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಉಪಚರಿಸಿದರು. ನಂದಿನಿ ಪ್ರಕಾಶ್‌  ಊರಿಗೆ ವಾಪಸ್‌ ಬಂದ ಬಳಿಕ ಸೊಸೆಗೆ ನಿನ್ನ ತಂದೆತಾಯಿ ನಮಗೆ ಸರಿಯಾಗಿ ಉಪಚಾರವನ್ನೇ ಮಾಡಲಿಲ್ಲ ಎಂದು ಹೇಳಿಕೊಂಡರು.

ಅಂದಹಾಗೆ ನಂದಿನಿ ಪ್ರಕಾಶ್‌ ಅವರು ಯಾವುದೇ ಮುನ್ಸೂಚನೆ ಇಲ್ಲದೆ ಅವರ ಮನೆಗೆ ಹೋಗಿದ್ದರು. ಹೀಗಾಗಿ ಸೊಸೆಯ ಮನೆಯವರು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಬೀಗರನ್ನು ಉಪಚರಿಸಿದ್ದರು. ಹೀಗಾಗಿ ನಾವು ಅವರ ವಿವಶತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

– ಪ್ರತಿಭಾ   

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ