ಪ್ರೀತಿಯನ್ನು ಮನಸೋಕ್ತವಾಗಿ ಹರಿಸುವ ಪತಿಯನ್ನು ಪಡೆದುಕೊಳ್ಳಲು ಯಾವ ಹೆಂಡತಿಗೆ ತಾನೇ ಇಷ್ಟವಾಗುವುದಿಲ್ಲ? ಗಂಡ ಒಂದು ಇತಿಮಿತಿಯಲ್ಲಿ, ರೀತಿ ರಿವಾಜುಗಳಿಗೆ ತಕ್ಕಂತೆ ಹೆಂಡತಿಯ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರೆ, ಹೆಂಡತಿಯ ಹೃದಯ ಬಡಿತ ಏರುವುದರಲ್ಲಿ ಸಂದೇಹವೇ ಇಲ್ಲ. ಹೆಂಡತಿಯ ಸೌಂದರ್ಯವನ್ನು ಹೊಗಳುವ ಗಂಡ ಖಂಡಿತವಾಗಿಯೂ ಅವಳ ಹೃದಯವನ್ನು ಗೆಲ್ಲುತ್ತಾನೆ. ಇದರಲ್ಲಿ ಕೆಲವು ಜನ ಹೆಂಡತಿಯರು ಕೆಲವು ವರ್ಷಗಳ ಬಳಿಕ ತಮ್ಮ ಗಂಡಂದಿರ ಹೊಗಳುವಿಕೆಯ ಬಗ್ಗೆ ದ್ವೇಷಿಸಲಾರಂಭಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಖಯಾಲಿ. ಗಂಡ ಹೊರಗಿನ ಮಹಿಳೆಯರ ಮೇಲೆ ಕಣ್ಣು ಹಾಕುವುದು.
ನನ್ನನೇಕೆ ಮದುವೆಯಾದ್ರಿ...?
ಮದುವೆಗೂ ಮುಂಚೆ ವಿನಯ್ ಹಾಗೂ ಶೋಭಾ ದಂಪತಿಯನ್ನು ಜನರು `ಮೇಡ್ ಫಾರ್ ಈಚ್ ಅದರ್' ಎಂದು ಹೇಳುತ್ತಿದ್ದರು. ಮದುವೆಯ ಬಳಿಕ ಆದರ್ಶ ದಂಪತಿಗಳೇ ಆಗಿದ್ದರು. ಆದರೆ ಕಾಲಕ್ರಮೇಣ ವಿನಯನ ಕಣ್ಣುಗಳಲ್ಲಿದ್ದ ಮುಗ್ಧತನ ಮಾಯವಾಗ ತೊಡಗಿತು. ದಾರಿಯಲ್ಲಿ ಯಾರಾದರೂ ಮಹಿಳೆಯರು ಕಂಡರೆ ಸಾಕು, ಅವನು ಅವರ ಕಡೆಯೇ ನೋಡುತ್ತ ನಿಂತುಬಿಡುತ್ತಿದ್ದ. ಶೋಭಾ ಅವನ ಈ ಸ್ವಭಾವದಿಂದ ಕೋಪಗೊಂಡು ಕೆಂಗಣ್ಣು ಬೀರುತ್ತಿದ್ದಳು. ಅವನ ಈ ವರ್ತನೆ ಸಹಿಸಲು ಆಗದೇ ಇದ್ದಾಗ ಅವಳು ಬಹಿರಂಗವಾಗಿಯೇ, ``ನೀವು ಇದನ್ನೇ ಮಾಡುವ ಹಾಗಿದ್ದಿದ್ದರೆ ನನ್ನನ್ನೇಕೆ ಮದುವೆಯಾದಿರಿ? ನನಗೆ ಮೋಸ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದಿರಾ?'' ಎಂದು ಕೇಳುತ್ತಾಳೆ.
ಅವಳ ಮಾತಿಗೆ ವಿನಯ್ ಹೇಳುತ್ತಿದ್ದ, ``ನಾನು ನಿನ್ನನ್ನು ಪ್ರೀತಿಸುವುದಿಲ್ಲ ಎಂದು ನೀನು ಅದ್ಹೇಗೆ ಹೇಳ್ತೀಯಾ? ನೀನು ಯಾವಾಗಲೂ ನನ್ನ ಹೃದಯದ ರಾಣಿ.''
ವಾಸ್ತವ ಸಂಗತಿ ಬೇರೆಯೇ ಆಗಿತ್ತು. ಆಫೀಸಿನ ಒಬ್ಬಳು ಹುಡುಗಿ ಮಂಜುಳಾ ಅವನನ್ನು ಆಕರ್ಷಿಸಿಬಿಟ್ಟಿದ್ದಳು. ಸದಾ ನಗುನಗುತ್ತಾ ಇರುತ್ತಿದ್ದ, ಮನಸ್ಸನ್ನು ಖುಷಿಗೊಳಿಸುತ್ತಿದ್ದ ಆಕೆಯ ಜೊತೆಗೆ ಅವನ ನಿಕಟತೆ ಹೆಚ್ಚಿತ್ತು. ಅವಳ ಜೊತೆ ಇದ್ದಾಗ ಅವನಿಗೆ ತನ್ನ ಕಾಲೇಜಿನ ದಿನಗಳು ನೆನಪಿಗೆ ಬರುತ್ತಿದ್ದವು. ಮಂಜುಳಾಳ ತುಂಟಾಟದ ಕಣ್ಣಾಮುಚ್ಚಾಲೆ ಆಟ ಅವನ ಪುರುಷತನಕ್ಕೆ ಸವಾಲೆಸೆಯುವಂತಿತ್ತು. ಆ ತುಂಟ ಕಣ್ಣುಗಳ ಚೆಲುವೆಯ ಮುಂದೆ ಶೋಭಾಳ ಚೆಲುವು ಮಸುಕು ಮಸುಕು ಎಂಬಂತೆ ಭಾಸವಾಗುತ್ತಿತ್ತು. ಶೋಭಾಳನ್ನು ಅವನು ಮನಸಾರೆ ಪ್ರೀತಿಸುತ್ತಿದ್ದ. ತನ್ನ ಜೀವನದ ಅವಿಭಾಜ್ಯ ಅಂಗ ಎಂದೇ ಭಾವಿಸುತ್ತಿದ್ದ. ಆದರೆ ರೊಮ್ಯಾನ್ಸ್ ನಿಟ್ಟಿನಲ್ಲಿ ಮಂಜುಳಾಳನ್ನು ಬದಿಗೆ ಸರಿಸುವುದು ಅವನಿಗೆ ಅಸಾಧ್ಯ ಎಂಬಂತಾಗಿತ್ತು.
ಇವರು ನನ್ನ ಗಂಡ!
ಶೋಭಾಳ ಹಾಗೆ ಮೈತ್ರೇಯಿ ಕೂಡ ತನ್ನ ಗಂಡನ ಪ್ರೇಮ ಪ್ರಕರಣಗಳಿಂದ ಬೇಸತ್ತು ಹೋಗಿದ್ದಳು. ಗೆಳತಿಯರ ಮನೆಗಳಿಗೆ ಗಂಡನನ್ನು ಕರೆದುಕೊಂಡು ಹೋಗಲು ಆಕೆ ಹೆದರುತ್ತಿದ್ದಳು. ಆಕೆ ಗಂಡನ ಮೇಲೆ ಸದಾ ಒಂದು ಕಣ್ಣು ನೆಟ್ಟಿರುತ್ತಿದ್ದಳು. ಯಾವುದೇ ಪಾರ್ಟಿಗೆ ಹೋದರೂ ಆಕೆಗೆ ಪಾರ್ಟಿಯಲ್ಲಿ ಮನಸ್ಸು ನಿಲ್ಲುವುದೇ ಇಲ್ಲ. ಪತಿಯ ವ್ಯಕ್ತಿತ್ವ, ಮಾತಿನ ವೈಖರಿ ಹೇಗಿತ್ತೆಂದರೆ, ಅವನ ಸುತ್ತಮುತ್ತ ಒಂದಿಷ್ಟು ಜನ ಇದ್ದೇ ಇರುತ್ತಿದ್ದರು. ಅದರಲ್ಲೂ ಹುಡುಗಿಯರ ಸಂಖ್ಯೆ ಹೇರಳವಾಗಿರುತ್ತಿತ್ತು. ಆ ದೃಶ್ಯ ನೋಡಿ ಮೈತ್ರೇಯಿಗೆ ಗಂಡನ ಕೆನ್ನೆಗೆ ಎರಡು ಬಾರಿಸಬೇಕು ಎನ್ನುವಷ್ಟರ ಮಟ್ಟಿಗೆ ಕೋಪ ಬರುತ್ತಿತ್ತು. ಅಷ್ಟೇ ಅಲ್ಲ, ಇವನು ನನ್ನ ಗಂಡ, ಇವನ ಹತ್ತಿರ ಯಾರೂ ಸುಳಿಯಬೇಡಿ ಎಂದು ಕೊರಳಲ್ಲಿ ಬೋರ್ಡ್ ಹಾಕಬೇಕು ಎನಿಸುತ್ತಿತ್ತು.