“ನೀನು ಎಂದಾದರೂ ಬುದ್ಧಿವಂತಿಕೆಯ ಮಾತಾಡಿದ್ದೀಯಾ?”

ಮಗ-ಸೊಸೆಯ ಮುಂದೆ ಗಂಡ ಸಿಡುಕಿದ್ದು ಹೆಂಡತಿ ಉಷಾಳಿಗೆ ಬಹಳ ಇರುಸುಮುರುಸು ಉಂಟು ಮಾಡಿತು. ಆಕೆ ಉದಾಸ ಧ್ವನಿಯಲ್ಲಿ “ನೀವೇ ತಾನೇ ಹೇಳಿದ್ದು, ಸಾಂಬಾರು ತಣ್ಣಗಾಗಿದೆ, ಬಿಸಿ ಮಾಡಿಕೊಂಡು ಬಾ ಅಂತಾ…” ಎಂದಳು.

“ಹೌದು, ಬಿಸಿ ಮಾಡಿಕೊಂಡು ಬಾ ಅಂತ ಹೇಳಿದ್ದೆನೆ ಹೊರತು ಕುದಿಸಿಕೊಂಡು ಬಾ ಅಂತ ಹೇಳಿರಲಿಲ್ಲ. ಮುದುಕಿಯಾದೆ ವಿನಾ ಇನ್ನೂ ನಿನಗೆ ಬುದ್ಧಿ ಬರಲಿಲ್ಲ ಅಲ್ವಾ…?”

ಮಾತಿಗೆ ಮಾತು ಬೆಳೆಯುತ್ತಿರುವುದನ್ನು ನೋಡಿ ತಾನು ಮೌನಾಗಿರುವುದೇ ಸರಿ ಎಂದು ಉಷಾಳಿಗೆ ಅನಿಸಿತು. ಸಾಂಬಾರು ಆರಲು ಎಷ್ಟು ನಿಮಿಷ ಬೇಕು? ಆದರೆ ಹೆಂಡತಿಯನ್ನು ಮಾತು ಮಾತಿಗೂ ಹೀಯಾಳಿಸುವ ಪರಂಪರೆ ಮನೆಯಲ್ಲಿದ್ದರೆ, ಅದು ಪರಂಪರಾಗತವಾಗಿ ಮುಂದುವರಿಯುತ್ತಲೇ ಇರುತ್ತದೆ. ಮಕ್ಕಳು ಇದೆಲ್ಲವನ್ನೂ ನೋಡುತ್ತಲೇ ಬೆಳೆಯುತ್ತಾರೆ. ದೊಡ್ಡವರಾದ ಮೇಲೆ ಅವರು ಹೀಗೆ ಮಾಡಿದರೂ ಆಶ್ಚರ್ಯವಿಲ್ಲ.

ಅದೆಷ್ಟೊ ಜನರು ಹೇಳುವ ಪ್ರಕಾರ, ಗಂಡಹೆಂಡತಿಯ ನಡುವಣ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಅದರಿಂದ ಸಂಬಂಧದ ಮೇಲೆ ಯಾವುದೇ ಗಾಢ ಪರಿಣಾಮ ಉಂಟಾಗದು. ಆದರೆ ನಿಮ್ಮ ಸಂಗಾತಿ ಸ್ವಲ್ಪ ಹೆಚ್ಚೇ ಎನ್ನುವಷ್ಟರ ಮಟ್ಟಿಗೆ ಈ ಸ್ಥಿತಿಯನ್ನು ಉತ್ಪನ್ನ ಮಾಡಿದರೆ ಅದನ್ನು ಸಹಿಸಿಕೊಳ್ಳುವುದು ತಪ್ಪು. ಮಾತು ಮಾತಿಗೆ ಸಿಡುಕುವುದು ಕೈ ಎತ್ತಿ ಅವಮಾನಿಸುವುದಕ್ಕೆ ಸಮ ಎಂದೇ ಹೇಳಬಹುದು.

ವಾಸ್ತವ ಜೀವನದ ಉದಾಹರಣೆ

ಶ್ವೇತಾ ಮತ್ತು ರಮೇಶ್‌ ಮದುವೆಯಾಗಿ 14 ವರ್ಷಗಳೇ ಕಳೆದಿವೆ. ಶ್ವೇತಾ ಒಂದು ಖಾಸಗಿ ವಿ.ವಿ.ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆರಿಯರ್‌ ನಿರ್ವಹಿಸುತ್ತಿದ್ದಾರೆ. ರಮೇಶ್‌ ಬ್ಯಾಂಕ್‌ ಉದ್ಯೋಗಿ. ರಮೇಶ್‌ ಟೆನ್ಶನ್‌ನಲ್ಲಿ ಇದ್ದಾಗ ಶ್ವೇತಾಳ ಮೇಲೆ ತನ್ನೆಲ್ಲ ಕೋಪವನ್ನು ತೋರಿಸಿಕೊಳ್ಳುತ್ತಾನೆ. ನಾವೀಗ ಎಲ್ಲಿದ್ದೇವೆ ಎದುರಿಗೆ ಯಾರಿದ್ದಾರೆ ಎಂಬುದನ್ನೂ ನೋಡುವುದಿಲ್ಲ. ಅದಕ್ಕೆ ಹೊತ್ತು ಗೊತ್ತು ಒಂದೂ ಇರುವುದಿಲ್ಲ.

ರಮೇಶ್‌ ಶ್ವೇತಾಳ ಜೊತೆ ಮಾತನಾಡುವಾಗ ಅತ್ಯಂತ ಅವಮಾನಕರ ಭಾಷೆ ಬಳಸುತ್ತಾನೆ, ಸಿಡುಕುತ್ತಾನೆ, ಕಿರುಚುತ್ತಾನೆ. ಅವಳನ್ನು ಕಡೆಗಣಿಸಿ ಮಾತನಾಡುತ್ತಾನೆ. ಇದರಿಂದ ಆಕೆಯ ಮನಸ್ಸು ಘಾಸಿಗೊಳ್ಳುತ್ತದೆ. ಅಷ್ಟೇ ಅಲ್ಲ, ಅವನ ಬಗೆಗಿನ ಪ್ರೀತಿಗೂ ಧಕ್ಕೆ ಉಂಟಾಗುತ್ತದೆ. ಶ್ವೇತಾ ಈ ಬಗ್ಗೆ ಕೇಳಿದರೆ, ಅವನು ತನ್ನ ವರ್ತನೆಯ ಬಗ್ಗೆ ಕ್ಷಮೆ ಕೇಳುತ್ತಾನೆ. ಆದರೆ ಅವನ ಕ್ಷಮೆಗೆ ಯಾವುದೇ ಬೆಲೆ ಇಲ್ಲ. ಸ್ವಲ್ಪ ದಿನಗಳ ಬಳಿಕ ಅವನು ಪುನಃ ಅದೇ ರೀತಿ ವರ್ತಿಸುತ್ತಾನೆ.

ಈ ಪರಿಸ್ಥಿತಿಯನ್ನು ಸುಧಾರಣೆಗೆ ತರಲು ಶ್ವೇತಾ, ಡಾ. ಸ್ಟೀವನ್‌ ಸ್ಟೋಸನ್ನರವರ ಪುಸ್ತಕ `ಲವ್ ವಿದೌಟ್‌ ಹರ್ಟ್‌’ ಪುಸ್ತಕವನ್ನು ಓದಿದಳು. ಆ ಪುಸ್ತಕದಲ್ಲಿ ಆಕೆಗೆ ಭಾವನಾತ್ಮಕ ಅವಮಾನಕರ ವರ್ತನೆಯನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಮಾಹಿತಿ ದೊರಕಿತು. ಶ್ವೇತಾ ಅವನಿಗೆ ಅದೆಷ್ಟೋ ತಿಳಿವಳಿಕೆ ಹೇಳಿ ನೋಡಿದಳು. ಆದರೆ ಅದರಿಂದ ರಮೇಶ್‌ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ. ಹೀಗಾಗಿ ಆಕೆ ಸಾರ್ವಜನಿಕ ಸ್ಥಳ, ಸಭೆ-ಸಮಾರಂಭಗಳಿಗೆ ಅವನ ಜೊತೆ ಹೋಗುವುದನ್ನೇ ನಿಲ್ಲಿಸಿಬಿಟ್ಟಳು. ರಮೇಶ್‌ ಆ ಬಗ್ಗೆ ಶ್ವೇತಾಳ ಬಳಿ ಕಾರಣ ಕೇಳಿದಾಗ, ಅವಳು ಸ್ಪಷ್ಟವಾಗಿಯೇ ಸಾರ್ವಜನಿಕ ಸ್ಥಳದಲ್ಲಿ ನಿಮ್ಮಿಂದ ಅವಮಾನಿತಳಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದಳು. ಆ ಬಳಿಕ ರಮೇಶ್‌ನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂತು.

ಸಿನಿಮಾಗಳ ಉದಾಹರಣೆಗಳು

ಹಳೆಯ ಪ್ರಸಿದ್ಧ ಸಿನಿಮಾ `ಅಭಿಮಾನ್‌’ದಲ್ಲಿ ನಾಯಕಿ ಜಯಾ ಬಚ್ಚನ್‌ ಯಶಸ್ಸಿನ ಬಗ್ಗೆ ನಾಯಕ ಅಮಿತಾಭ್ ಗೆ ಅಸೂಯೆ ಉಂಟಾಗುತ್ತದೆ. ನಾಯಕ ತನ್ನ ಹೆಂಡತಿಯ ಜೊತೆ ಬಹಿರಂಗವಾಗಿಯೇ ಕೋಪದಿಂದ ವರ್ತಿಸುತ್ತಾನೆ.

ಕೆಲವು ವರ್ಷಗಳ ಹಿಂದಷ್ಟೇ ಬಂದು ಹೋದ `ಇಂಗ್ಲಿಷ್‌ ವಿಂಗ್ಲಿಷ್‌’ ಚಲನಚಿತ್ರದಲ್ಲಿ  ನಾಯಕಿ ಶ್ರೀದೇವಿಗೆ ಇಂಗ್ಲಿಷ್‌ ಬರುವುದಿಲ್ಲವೆಂದು ಗಂಡ ಅವಳನ್ನು ಹೀಯಾಳಿಸುತ್ತಿರುತ್ತಾನೆ. ಲಡ್ಡು ತಯಾರಿಸುವ ಅವಳ ವೃತ್ತಿಯನ್ನೂ ತೆಗಳುತ್ತಾನೆ. ಅಪ್ಪನನ್ನು ಅನುಕರಣೆ ಮಾಡುವ ಮಕ್ಕಳೂ ಸಹ ಅಮ್ಮನ ಬಗ್ಗೆ ಹಗುರವಾಗಿ ಮಾತನಾಡಲು ಆರಂಭಿಸುತ್ತಾರೆ.

ಮಕ್ಕಳ ಮೇಲೆ ಪರಿಣಾಮ

ಸಾಮಾನ್ಯವಾಗಿ ಮಹಿಳೆಯರು ತಮ್ಮ ಚರ್ಚೆಗಳಲ್ಲಿ ಗಂಡಂದಿರ ಗದರುವಿಕೆ, ಟೀಕೆಗಳ ಬಗೆಗೂ ಪರಸ್ಪರ ಚರ್ಚಿಸುತ್ತಾರೆ. ಅವರ ಗುಣ, ಸ್ವಭಾವದ ಬಗ್ಗೆ ಅವಲೋಕನ ಮಾಡುತ್ತಾರೆ. ಈ ಮಾತುಕತೆಯಲ್ಲಿ ಅವರು ಕೆಲವೊಮ್ಮೆ ಅತಿಶಯೋಕ್ತಿಯ ಮಾತುಗಳನ್ನು ಆಡುತ್ತಾರೆ. ಆ ಸಮಯದಲ್ಲಿ ಮಕ್ಕಳು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ಮರೆಯುತ್ತಾರೆ. ಮಕ್ಕಳು ನೋಡು ನೋಡುವಷ್ಟರಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಅವರೂ ದೊಡ್ಡವರಾದ ಬಳಿಕ ಹಾಗೆಯೇ ವರ್ತಿಸುತ್ತಾರೆ. ಪರಸ್ಪರರನ್ನು ಹೀಯಾಳಿಸದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ಗೌರವಿಸಬೇಕು. ಕಾಲೇಜೊಂದರ ಪ್ರೊಫೆಸರ್‌ ಪ್ರಭುರವರ ಪ್ರಕಾರ, ಡೇಟಿಂಗ್‌ ಸಮಯದಲ್ಲಿಯೇ ನಿಮ್ಮ ಸಂಗಾತಿ ನಿಮ್ಮನ್ನು ಹೀಯಾಳಿಸುವುದು, ಅವಮಾನಿಸುವುದನ್ನು ಮಾಡುತ್ತಿದ್ದರೆ ಆಗಲೇ ಸಂಬಂಧ ಕಡಿದುಕೊಳ್ಳುವುದು ಒಳ್ಳೆಯದು. ಏಕೆಂದರೆ  ಮದುವೆಯ ಬಳಿಕ ಇದನ್ನೇ ಮುಂದುವರಿಸಬಾರದು.

ಪ್ರಾರಂಭದಲ್ಲಿಯೇ ಸಹಿಸಿಕೊಳ್ಳಬೇಡಿ

ಸಂಧ್ಯಾ ಗಂಡನ ವಾಗ್ದಾಳಿಯಿಂದ ಬೇಸತ್ತು ಹೋಗಿದ್ದಳು. ಆತ ಮುಂದೆ ತನ್ನ ವರ್ತನೆ ಬದಲಿಸಿಕೊಳ್ಳಬಹುದು ಎಂದು ಅವಳು ನಂಬಿಕೆ ಇಟ್ಟುಕೊಂಡಿದ್ದಳು. ಆದರೆ ಗಂಡ ಬದಲಾಗಲೇ ಇಲ್ಲ. ಅಪವಾದ ಎಂಬಂತೆ ಕೆಲವರು ಬದಲಾಗುತ್ತಾರೆ. ಹಾಗಾಗಿ ಆರಂಭದಿಂದಲೇ ಏನನ್ನು ಸಹಿಸಿಕೊಳ್ಳಬಹುದು, ಏನನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂಬುದನ್ನು ಗಂಡನಿಗೆ ಮನವರಿಕೆ ಮಾಡಿಕೊಡಿ.

ಕೆಲ  ಮನೋತಜ್ಞರು ಗಂಡನ ಅಶಿಷ್ಟ ಮಾತುಗಳನ್ನು ಕೇಳಿ ಹೆಂಡತಿ ನಕ್ಕು ಮರೆತುಬಿಡಬೇಕು ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ ಮಾಡುವುದು ಸಾಧ್ಯವಿಲ್ಲ. ಯಾರಾದರೂ ನಿಮ್ಮ ಬಗ್ಗೆ ಅವಮಾನಿಸುವ ರೀತಿಯಲ್ಲಿ ಮಾತನಾಡಿದರೆ ನೀವು ಅದಕ್ಕೆ ಪ್ರತಿಯಾಗಿ ನಕ್ಕು ಸುಮ್ಮನಿರಲು ಆದೀತೆ? ಅದರ ಬದಲು ಕೋಪ ಉಕ್ಕಿ ಬರುತ್ತದೆ.

ಪ್ರಿಯಾಳ ಉದಾಹರಣೆಯನ್ನೇ ಗಮನಿಸಿ. ಆಕೆಯ ಪತಿ ಕೋಪದಿಂದ, “ನಿನಗೆ ಅಷ್ಟು ಮಾಡಲೂ ಬರುವುದಿಲ್ವಾ?” ಎಂದು ಕೇಳಿದ. ಆ ಮಾತಿಗೆ ಪ್ರಿಯಾ ನಗುತ್ತಲೇ, “ನನಗೆ ಏನು ಬರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ನನಗೆ ಏನು ಬರುವುದಿಲ್ಲ ಎಂದು ನಿಮಗೆ ಅನಿಸುತ್ತದೋ ಅದನ್ನೇ ನೀವು ನನಗೆ ಕಲಿಸಿಕೊಡಿ,” ಎಂದಳು. ಹಾಸ್ಯದಲ್ಲಿ ಅಗಾಧ ಶಕ್ತಿ ಇದೆ. ಅದು ದುರ್ವತನೆಯನ್ನು ಕಡಿಮೆಗೊಳಿಸುವ ಚಮತ್ಕಾರಿ ಶಕ್ತಿ ಹೊಂದಿದೆ. ತೆಗಳುವ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಗುತ್ತದೆ.

ಬಹುಶಃ ನಿಮ್ಮ ಪತಿ ಸಕಾರಾತ್ಮಕ ಟೀಕೆಗಳಿಂದ ನಿಮ್ಮನ್ನು ಬದಲಿಸಲು ಪ್ರಯತ್ನಿಸುತ್ತಿರಬಹುದು. ನೀವೇ ಅತಿ ಹೆಚ್ಚು ಸಂವೇದನಾಶೀಲರಾಗಿರಬಹುದು. ನೀವು ಮನೆಯನ್ನು ವ್ಯವಸ್ಥಿತವಾಗಿ ಇಟ್ಟಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪತಿ ನಿಮ್ಮನ್ನು ಟೀಕಿಸುತ್ತಿದ್ದರೆ, ನೀವು ಮುಖ ಸಿಂಡರಿಸದೆ ನಿಮ್ಮ ಅಭ್ಯಾಸಗಳನ್ನು ತಿದ್ದಿಕೊಳ್ಳಿ.

ಏಕಾಂಗಿಯಾಗಿ ಬಿಟ್ಟುಹೋಗಿ

ಗಂಡ ನಿಮ್ಮನ್ನು ಯಾರೂ ಇಲ್ಲದ ಸ್ಥಳದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದರೆ, ನೀವು ಆ ಕ್ಷಣವೇ ಆ ಸ್ಥಳದಿಂದ ಯಾವುದೋ ಒಂದು ನೆಪ ಹೇಳಿ ಹೊರಟು ಹೋಗಿ….. ಗಂಡನನ್ನು ಏಕಾಂಗಿಯಾಗಿ ಬಿಟ್ಟರೆ ಅದು ಅವನ ಕೋಪ ನಿಯಂತ್ರಿಸುತ್ತದೆ.

ವಿಷಯ ಸ್ಪಷ್ಟಪಡಿಸಿ

ನೀವು ಎಷ್ಟೇ ಪ್ರಯತ್ನಪಟ್ಟರೂ ಒಂದಿಲ್ಲೊಂದು ದಿನ ಗಂಡನ ದುರ್ವತೆನೆಯಿಂದ ಹಿಂಸೆ ಅನುಭವಿಸುವಿರಿ. ಹೀಗಾಗಿ ಆದಷ್ಟು ಶೀಘ್ರ ವಿಷಯ ಸ್ಪಷ್ಟಪಡಿಸಿ. ಮಧ್ಯದಲ್ಲಿ ಬಾಯಿ ಹಾಕಬೇಡಿ ಎಂದು ಕೂಡ ಹೇಳಿ. ನಿಮ್ಮ ಟೀಕೆ, ಅವಮಾನ ನನಗೆ ಅದೆಷ್ಟು ಹಿಂಸೆ ನೀಡುತ್ತದೆ ಎಂಬುದನ್ನು ಅವರಿಗೆ ತಿಳಿಸಿ. ಮಾನಸಿಕ ನೋವು, ದೈಹಿಕ ನೋವಿನಷ್ಟೇ ಹಿಂಸೆ ನೀಡುತ್ತದೆ ಎಂಬುದನ್ನು ಅವರಿಗೆ ಹೇಳಿ. ನೀವು ಇಷ್ಟೆಲ್ಲ ಹೇಳುತ್ತಿರುವುದು ನಿಮ್ಮಿಬ್ಬರ ನಡುವಿನ ಸಂಬಂಧ ಮತ್ತಷ್ಟು ಸದೃಢವಾಗಬೇಕೆಂದೇ ಹೊರತು, ಜಗಳ ಮತ್ತಷ್ಟು ಹೆಚ್ಚಾಗಬೇಕೆಂದಲ್ಲ.

ಗೊತ್ತಿಲ್ಲದೆಯೇ ಮಾಡಿದ ತಪ್ಪು

ಪತಿ ತನಗೆ ಗೊತ್ತಿಲ್ಲದಂತೆಯೇ  ಹೆಂಡತಿಯನ್ನು ಟೀಕಿಸುತ್ತಿರಬಹುದು. ಅದರಿಂದ ಹೆಂಡತಿ ತುಂಬಾ ನೋವು ಅನುಭವಿಸುತ್ತಾಳೆ. ಯಾವ ಮಾತಿನಿಂದ ಪತ್ನಿಗೆ ನೋವಾಗಿದೆ ಎಂದು ತಿಳಿಯದೆ ಆತ ಅದನ್ನೇ ಮುಂದುವರಿಸಬಹುದು ಅದನ್ನು ತಿಳಿಯದೆ ಆತ ಹಾಗೆ ಮಾಡುತ್ತಿದ್ದರೆ, ಒಪ್ಪಿಕೊಳ್ಳಬೇಡಿ.

ನೇರ ಮಾತುಕತೆಯಿಂದ ಪರಿಹಾರ

ಮನಿಷಾ ಗಂಡನ ಈ ಅಭ್ಯಾಸವನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ವಿರೋಧಿಸಿದಳು. ಆದರೆ ತಾನು ವಿರೋಧಿಸಿದಷ್ಟು ಅದು ಹೆಚ್ಚುತ್ತಲೇ ಹೋದುದು ಅವಳ ಗಮನಕ್ಕೆ ಬಂದಿತು. ಅವಳು ಬ್ಲಾಗ್‌ ಒಂದರಲ್ಲಿ ಓದಿದ ವಿಷಯನ್ನು ಅನುಸರಿಸಲು ನಿರ್ಧರಿಸಿದಳು. ಅವಳು ಗಂಡನ ಮುಂದೆ ಈ ವಿಷಯದ ಬಗ್ಗೆ ಪ್ರತ್ಯಕ್ಷವಾಗಿ ಮಾತನಾಡಲು ನಿರ್ಧರಿಸಿದಳು.

“ನೀವು ನನ್ನನ್ನು ಅದೆಷ್ಟು ಪ್ರೀತಿಸುತ್ತೀರಿ ಎಂಬುದು ನನಗೆ ಗೊತ್ತು. ನೀವು ನನಗೆ ಕೆಡುಕಾಗುವುದನ್ನು ಖಂಡಿತಾ ಬಯಸುವವರಲ್ಲ. ಆದರೆ ಎಲ್ಲರೆದುರು ನೀವು ನನ್ನ ಬಗ್ಗೆ ಸಿಡಿಮಿಡಿಗೊಂಡು ಮಾತನಾಡುವುದು ನನಗೆ ನೋವುಂಟು ಮಾಡುತ್ತದೆ. ನೀವು ಏಕಾಂಗಿಯಾಗಿರುವಾಗ ಹೇಳುವ ಮಾತುಗಳನ್ನು ಬಹಿರಂಗವಾಗಿ ಹೇಳುವುದು ನನಗೆ ಮುಜುಗರವನ್ನುಂಟು ಮಾಡುತ್ತದೆ. ನಕಾರಾತ್ಮಕ ರೀತಿಯಲ್ಲಿ ನೀವು ಸಿಡಿಮಿಡಿಗೊಳ್ಳುವುದು ನನಗೆ ನೋವು ತರಿಸುತ್ತದೆ.”

ಮನಿಷಾಳ ಮಾತುಗಳು ಆಕೆಯ ಗಂಡನ ಅಂತರಂಗ ತಲುಪಲು ತಡಮಾಡಲಿಲ್ಲ ಪತಿ ತನ್ನ ತಪ್ಪನ್ನು ಒಪ್ಪಿಕೊಂಡು, ತನ್ನ ವರ್ತನೆ ಬದಲಿಸಿಕೊಂಡ.

ಪ್ರೊಫೆಶಲ್‌ನಗಳ ಸಹಾಯ ಬೇಕೇ?

ಕೌಟುಂಬಿಕ ಜೀವನದ ಶಿಕ್ಷಣ ನೀಡುವ ತಜ್ಞರು ಈ ಕುರಿತಂತೆ ಹೀಗೆ ಹೇಳುತ್ತಾರೆ, ನಿಮ್ಮ ಪತಿ ನಿರಂತರವಾಗಿ ನಿಮ್ಮ ಆತ್ಮವಿಶ್ವಾಸ ಕುಗ್ಗುವಂತಹ ಮಾತುಗಳನ್ನು ಆಡುತ್ತಿದ್ದರೆ, ನಿಮ್ಮ ಬಗ್ಗೆಯೇ ನಿಮಗೆ ನಂಬಿಕೆ ಹೊರಟುಹೋದರೆ ಅದು ಗಂಭೀರ ವಿಷಯವೇ ಹೌದು. ಅದು ಅಪಮಾನಕರ ಸುದ್ದಿ. ಅಂತಹ ಸಂದರ್ಭದಲ್ಲಿ ನೀವು ಪ್ರೊಫೆಶನಲ್‌ಗಳ ಸಹಾಯ ಪಡೆಯಬಹುದು.

– ಕೆ. ಅಮೃತಾ 

ನಿಮ್ಮ ಸಮಸ್ಯೆಯ ಗಂಭೀರತೆ ತಿಳಿಸುವ 10 ಪ್ರಶ್ನೆಗಳು

ನಿಮ್ಮ ಗಂಡ, ಬಾಯ್‌ಫ್ರೆಂಡ್‌ ಅಥವಾ ಲಿವ್‌ ಇನ್‌ ಪಾರ್ಟನರ್‌ಗೆ ನಿಮ್ಮನ್ನು ಬಹಿರಂಗವಾಗಿ ಟೀಕಿಸುವ ಅಭ್ಯಾಸವಿದ್ದರೆ ಅಥವಾ ಛೇಡಿಸುವಿಕೆ ಕಂಗೆಡಿಸುತ್ತಿದ್ದರೆ, ನಿಮಗೆ ನೀವೇ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಒಳಿತು.

– ನಿಮ್ಮ ಚಿಕ್ಕಪುಟ್ಟ ಸಂಗತಿಗಳ ಮೇಲೂ ಅವರು ನಿಯಂತ್ರಣ ಹೇರಲು ಪ್ರಯತ್ನಿಸುತ್ತಿದ್ದಾರೆಯೇ? ನೀವು ದಿನವಿಡೀ ಏನೇನು ಮಾಡಿದಿರಿ, ಯಾವ ಕೆಲಸಗಳನ್ನು ಮಾಡಲಿಲ್ಲ, ಅದರ ಬಗ್ಗೆ ನಿಮ್ಮ ವಿರುದ್ಧ ಟೀಕೆಗಳ ಸುರಿಮಳೆ ಮಾಡುತ್ತಾರೆಯೇ? ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ನಿಮ್ಮ ಒಪ್ಪಿಗೆ ಪಡೆಯುವುದಿಲ್ಲವೇ?

– ನಿಮ್ಮ ಮುಂದೆ ಸುಳ್ಳು ಹೇಳುತ್ತಾರೆಯೇ? ಅವರು ಹೇಳಿದ್ದು ಸುಳ್ಳು ಎಂದು ಸಾಬೀತಾದಾಗ ಕ್ಷಮೆ ಯಾಚಿಸುವ ಬದಲು ನೆಪಗಳ ಸುರಿಮಳೆ ಸುರಿಸುತ್ತಾರೆಯೇ?

– ಅವರು ನಿಮ್ಮನ್ನು ಅವಮಾನಕರ ಭಾಷೆಯಲ್ಲಿ, ವ್ಯಂಗ್ಯದ ಶೈಲಿಯಲ್ಲಿ ಅಥವಾ ಕರುಣೆ ತೋರಿಸುವ ರೀತಿಯಲ್ಲಿ ಮಾತನಾಡುತ್ತಾರೆಯೇ? ಅವರನ್ನು ಶಾಂತ ರೀತಿಯಲ್ಲಿ, ತರ್ಕಬದ್ಧ ರೀತಿಯಲ್ಲಿ ಮಾತನಾಡಿಸುವುದು ಕಠಿಣವಾಗುತ್ತದೆಯೇ?

– ಅವರು ನಿಮ್ಮ ಪ್ರತಿಭೆ, ಗುಣ ಹಾಗೂ ನಿಮ್ಮ ಪಾತ್ರದ ಬಗ್ಗೆ ಪ್ರಸ್ತಾಪಿಸಿದಾಗ, ವ್ಯಂಗ್ಯಾತ್ಮಕವಾಗಿ ಟಿಪ್ಪಣಿ ಮಾಡುತ್ತಾರೆಯೇ? – – ಭಾವನಾತ್ಮಕವಾಗಿ ಬೆಂಬಲ ಕೊಡುವಲ್ಲಿ ಹಿಂದೇಟು ಹಾಕುತ್ತಾರೆಯೇ? ಮನಸ್ತಾಪದ ಸಂದರ್ಭದಲ್ಲಿ ಮಾತುಕತೆಯ ಮುಖಾಂತರ ಪರಿಹಾರ ಕಂಡುಕೊಳ್ಳುವ ಬದಲು ಅಲ್ಲಿಂದ ಎದ್ದು ಹೋಗುವುದನ್ನೇ ಸೂಕ್ತ ಎಂದು ಭಾವಿಸುತ್ತಾರೆಯೇ? ಇಲ್ಲವೇ ಸ್ವರಕ್ಷಣೆ ಅಥವಾ ಪ್ರತ್ಯುತ್ತರ ನೀಡಲು ಹಿಂದೇಟು ಹಾಕುತ್ತಾರೆಯೇ?

– ಅವರ ಸಿಟ್ಟುಕೋಪ ನಿಮಗೆ ಭಯ ಹುಟ್ಟಿಸುತ್ತದೆಯೇ?

–  ಯಾವಾಗಲೂ ನೆಪಗಳನ್ನೊಡ್ಡಿ ನಿಮ್ಮನ್ನು ಟೀಕಿಸುತ್ತಿರುತ್ತಾರೆಯೇ?

– ಅವರು ಯಾರೊಂದಿಗಾದರೂ ಫ್ಲರ್ಟ್‌ ಮಾಡುವುದು ನಿಮಗೆ ನೋವನ್ನುಂಟು ಮಾಡುತ್ತದೆಯೇ? ಅವರು ಈ ರೀತಿ ವರ್ತಿಸಲು ನಿಮ್ಮಲ್ಲಿ ಯಾವುದಾದರೂ ಕೊರತೆ ಇದೆಯೇ?

– ಅವರು ತಮ್ಮ ವರ್ತನೆಯ ಬಗ್ಗೆ ಯಾವುದೇ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿಲ್ಲವೇ? ಅವರ ವರ್ತನೆ ನಿಮಗೆ ಅಸಹನೀಯ ಎನಿಸುತ್ತದೆಯೇ? ಅಂದಹಾಗೆ, ಮನೆಯ ಕೆಲಸದಿಂದ ಉಂಟಾದ ಮತಭೇದದ ಹೊರತಾಗಿಯೂ ಅವರು ನಿಮಗೆ ಯಾವುದೇ ನೆರವು ನೀಡಲು ಸಿದ್ಧರಾಗುವುದಿಲ್ಲವೇ?

– ಅವರು ಯಾವಾಗಾದರೂ ನಿಮ್ಮ ವಿರುದ್ಧ ದೈಹಿಕ ಹಿಂಸೆ ಅಥವಾ ಕೆಟ್ಟ ಶಬ್ದಗಳ ಬಳಕೆ ಮಾಡುತ್ತಾರೆಯೇ?:

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ