ಸಂಬಂಧಗಳ ಎಳೆಗಳನ್ನು ಪ್ರತಿಯೊಬ್ಬರೂ ಅತ್ಯಂತ ಸೂಕ್ಷ್ಮವಾಗಿ ಪ್ರೀತಿಪೂರ್ವಕವಾಗಿ ನಿಭಾಯಿಸುವುದನ್ನು ಅರಿತಿರುತ್ತಾರೆ. ಆದರೆ ಇಂದಿನ ವ್ಯಸ್ತ ಜೀವನಶೈಲಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ದೃಢ ಸಂಬಂಧ ನಿಮ್ಮ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು ನೆರವಾಗುತ್ತದೆ. ಏಕೆಂದರೆ ಇದು ನಿಮ್ಮ ಮನಸ್ಸು ಮತ್ತು ಮೆದುಳನ್ನು ಬಲಿಷ್ಠಗೊಳಿಸುತ್ತದೆ. ಆದರೆ ಯಾವುದೊ ಕಾರಣದಿಂದ ನಿಮ್ಮ ಸಂಬಂಧ ಚೆನ್ನಾಗಿಲ್ಲದಿದ್ದರೆ ನಿರಾಶರಾಗುವ ಅಗತ್ಯವಿಲ್ಲ. ಅದರ ಬದಲು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದರಲ್ಲಿಯೇ ಜಾಣತನವಿದೆ.
ಅಂದಹಾಗೆ, ಸಂಬಂಧಗಳು ಒಂಥರಾ ಹೂಡಿಕೆಯಂತೆ. ಅದಕ್ಕಾಗಿ ನೀವು ಎಷ್ಟು ಒಳ್ಳೆಯ ಪ್ರಯತ್ನ ಮಾಡುತ್ತೀರೊ, ಅಷ್ಟು ಒಳ್ಳೆಯ ಫಲಿತಾಂಶ ನಿಮಗೆ ವಾಪಸ್ ಲಭಿಸುತ್ತದೆ.
ಈ ಕುರಿತಂತೆ `ಶುಭಂ ಕರೋತಿ' ಸಂಸ್ಥೆಯ ಮ್ಯಾರೇಜ್ ಕೌನ್ಸೆಲರ್ ರಶ್ಮಿ ಹೀಗೆ ಹೇಳುತ್ತಾರೆ, ``ಸಂಬಂಧಗಳ ವ್ಯಾಖ್ಯೆ ಈಗ ಬದಲಾಗಿದೆ. ಈಚೆಗೆ ಬಹಳಷ್ಟು ಹುಡುಗ ಹುಡುಗಿಯರು ಪ್ರೀತಿಸುತ್ತಾರೆ. ಬಳಿಕ ಮದುವೆ ಕೂಡ ಆಗುತ್ತಾರೆ. ಅದರಲ್ಲಿ ಕೆಲವರು ಅವರಿವರ ಮಾತು ಕೇಳಿ ಅಥವಾ ನಂಬಿಕೆಯ ಕೊರತೆಯಿಂದ ಒಬ್ಬರು ಇನ್ನೊಬ್ಬರ ಕೈ ಬಿಟ್ಟುಬಿಡುತ್ತಾರೆ. ಇದಕ್ಕೆ ಕಾರಣ ಅತ್ಯಂತ ಸರಳವಾಗಿರುತ್ತದೆ. ಕುಟುಂಬ, ಹಣ, ಸಮಯ ಕೊಡದೇ ಇರುವುದು, ವಿಶ್ವಾಸದ ಕೊರತೆ ಮುಂತಾದವು. ಅವಕ್ಕೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ಇದಕ್ಕಾಗಿ ಇಬ್ಬರ ಬಳಿ ಸಮಯವಾಗಲಿ, ತಾಳ್ಮೆಯಾಗಲಿ ಇಲ್ಲ.
ಮುಕ್ತ ವಾತಾವರಣ
ಗಂಡ ಹೆಂಡತಿಯರ ಸಂಬಂಧ ಬಹಳ ಅತ್ಯಮೂಲ್ಯವಾಗಿರುತ್ತದೆ ಎಂಬ ಸಂಗತಿ ನಿಮ್ಮ ನೆನಪಿನಲ್ಲಿರಲಿ. ಈ ಸಂಬಂಧವನ್ನು ಕಾಯ್ದುಕೊಂಡು ಹೋಗಲು ಪರಸ್ಪರ ಮಾತುಕತೆ ಅಗತ್ಯ. ಮನೆಯಲ್ಲಿ ಮುಕ್ತ ವಾತಾವರಣ ಅಗತ್ಯ. ಅಲ್ಲಿ ಒಬ್ಬರಿಗೊಬ್ಬರು ವಿಷಯ ವಿನಿಮಯ ಮಾಡಿಕೊಳ್ಳುವಂತಿರಬೇಕು.
ಭಾವನೆಗಳಿಂದ ವಸ್ತುಸ್ಥಿತಿಯನ್ನು ದೂರ ಇಡಿ. ಯಾವುದಾದರೂ ಸಮಸ್ಯೆ ಇದ್ದರೆ ಅದರಲ್ಲಿ ಭಾವನೆಗಳು ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳಿ. ಅದರಿಂದ ಸರಿಯಾದ ನಿರ್ಣಯ ಕೈಗೊಳ್ಳುವುದು ಕಷ್ಟ. ಪಾರದರ್ಶಕತೆ ಮತ್ತು ಸ್ಪಷ್ಟತೆಯ ಸ್ಥಿತಿಯಲ್ಲಿ ಯಾವುದೇ ಸಮಸ್ಯೆಯನ್ನಾದರೂ ಬಿಡಿಸಬಹುದು.
ಹೃದಯ ವಿವೇಕದ ಮಾತು ಕೇಳಿ
ಎಷ್ಟೋ ಸಲ ನಿಮ್ಮ ಹೃದಯ ಏನೊ ಹೇಳುತ್ತದೆ, ಮೆದುಳು ಇನ್ನೇನೊ ಹೇಳುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಯಾವುದೇ ನಿರ್ಣಯ ಕೈಗೊಂಡರೂ ಮುಂದೆ ಪಶ್ಚಾತ್ತಾಪಪಡಬೇಕಾಗಿ ಬರಬಹುದು. ಹೀಗಾಗಿ ಏನಾದರೂ ಹೇಳುವ ಮುಂಚೆ ಹೃದಯ ಮತ್ತು ಮೆದುಳು ಈ ಎರಡರ ಮಾತುಗಳನ್ನು ಆಲಿಸಿ. ಬಳಿಕ ಅದರ ವಿಶ್ಲೇಷಣೆ ಮಾಡಿ. ಆದಾಗ್ಯೂ ನಿಮಗೇನೂ ಹೊಳೆಯದಿದ್ದರೆ ಕೌನ್ಸೆಲರ್‌ಗಳ ಸಲಹೆ ಪಡೆದುಕೊಳ್ಳಿ.
ಸ್ವತಃ ನಿಮಗೇ ಹಾಗೂ ಸಂಗಾತಿಗೆ ತಿಳಿವಳಿಕೆ ಹೇಳುವ ಪ್ರಯತ್ನ ಮಾಡಿ. ಆಗ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಆಗುತ್ತದೆ. ಇದರಿಂದ ನಿಮ್ಮ ಹೊಣೆಗಾರಿಕೆ ಹೆಚ್ಚುತ್ತದೆ. ಆಗ ನಿಮಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.
ಮನೆಯಲ್ಲಿ `ನಾನು' ಎನ್ನುವುದರ ಬದಲು `ನಾವು' ಎನ್ನುವುದರ ವಾತಾವರಣ ಬೆಳೆಸಿ. ಇದರಿಂದ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಇಬ್ಬರಲ್ಲೂ ಏನಾದರೂ ವಿಶೇಷ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ.