ಪ್ರತಿಯೊಬ್ಬ ಸ್ತ್ರೀ ಪುರುಷರು ತಮ್ಮ ತಮ್ಮ ಆದ್ಯತೆಗಳ ಬಗೆಗೆ ಹೆಚ್ಚು ಗಮನ ಕೊಡುತ್ತಿರುತ್ತಾರೆ. ಈ ರೀತಿಯಾಗಿ ಅವರು ಸದಾ ವ್ಯಸ್ತರಾಗಿರುವುದು ಕಂಡುಬರುತ್ತದೆ.
ಈ ಕಾರಣದಿಂದಲೇ ಮದುವೆಯ ಬಳಿಕ ಅತಿ ಹೆಚ್ಚು ದಂಪತಿಗಳು ಒತ್ತಡಕ್ಕೆ ಸಿಲುಕುತ್ತಾರೆ.
ಎರಡು ಬೇರೆ ಬೇರೆ ಕುಟುಂಬಗಳಿಂದ ಬಂದ ಗಂಡು ಮತ್ತು ಹೆಣ್ಣು ಸಪ್ತಪದಿ ತುಳಿದು ಗಂಡ ಹೆಂಡತಿಯರಾಗುತ್ತಾರೆ. ಒಟ್ಟಾಗಿ, ಹೊಂದಾಣಿಕೆಯಿಂದ ಬಾಳುವ ಕನಸು ಕಾಣುತ್ತಾರೆ. ಆ ಬಳಿಕ ಅವರ ನಡುವೆ ಉದ್ಭವಿಸುವ ಮಾನಸಿಕ ತಾಕಲಾಟ ಅವರನ್ನು ಗೊಂದಲಕ್ಕೆ ಕೆಡತ್ತದೆ. ಆಗ ಅವರಲ್ಲಿ ಅಸಹನೆ, ಕೋಪ ಮನೆ ಮಾಡಿ ಅವರನ್ನು ಒತ್ತಡಕ್ಕೆ ದೂಡುತ್ತದೆ.
ಸಾಮಾನ್ಯವಾಗಿ ಸಂಗಾತಿ ಸತತವಾಗಿ ಸತಾಯಿಸುವುದು, ಟೀಕೆ ಮಾಡುವುದು, ಕಡೆಗಣಿಸಿ ಮಾತನಾಡುವುದರಿಂದ ಈ ರೀತಿಯ ಭಾವನೆ ಉಂಟಾಗುತ್ತದೆ.
ಏನಾಗುತ್ತದೆ? ಅಂದಹಾಗೆ, ಮದುವೆಯ ಬಳಿಕ ನಿಮ್ಮ ಸಂಗಾತಿಯ ಅಪೇಕ್ಷೆಗಳು ನಿಮಗಿಂತಲೂ ಹೆಚ್ಚಾಗುತ್ತವೆ. ನೀವು ನಿಮ್ಮ ವ್ಯಸ್ತ ದಿನಚರಿಯ ಕಾರಣದಿಂದಾಗಿ ಅವರ ಅಪೇಕ್ಷೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಇದೇ ಮರುಕಳಿಸುತ್ತಿದ್ದರೆ ಒತ್ತಡಕ್ಕೆ ಕಾರಣವಾಗುತ್ತದೆ.
ಮದುವೆಯ ಕಾರಣದಿಂದಾಗಿ ಉದ್ಭವಿಸಿದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೆಲವರು ಮದ್ಯಕ್ಕೆ ಶರಣಾದರೆ ಇನ್ನು ಕೆಲವರು ಸಂಗಾತಿಯಿಂದ ದೂರ ಇರತೊಡಗುತ್ತಾರೆ. ಪರಸ್ಪರರನ್ನು ನಿರ್ಲಕ್ಷಿಸತೊಡಗುತ್ತಾರೆ. ತಮ್ಮಲ್ಲಿನ ಆಕ್ರೋಶವನ್ನು ಕೋಪದ ಮೂಲಕ ಹೊರಗೆಡಹುತ್ತಾರೆ.
ಮದುವೆ ಇಬ್ಬರು ವ್ಯಕ್ತಿಗಳ ಮಿಲನ. ಅದರಲ್ಲಿ ಇಬ್ಬರೂ ಪರಸ್ಪರ ಪೂರಕವಾಗಿರಬೇಕು ಬಹುಶಃ ಸಂಗಾತಿಗಳಲ್ಲಿ ಒಬ್ಬರು ಹೆಚ್ಚು ಖರ್ಚು ಮಾಡುವ ಪ್ರವೃತ್ತಿಯರಾಗಿರುತ್ತಾರೆ. ಇನ್ನೊಬ್ಬರು ಖರ್ಚು ಮಾಡುವ ಮುನ್ನ ಒಂದು ಸಲ ಯೋಚಿಸಲು ಸಲಹೆ ನೀಡಬಹುದು. ಗಂಡಹೆಂಡತಿಯರಲ್ಲಿ ಒಬ್ಬರು ಅಂತರ್ಮುಖಿಯಾದರೆ, ಇನ್ನೊಬ್ಬರು ಬಹಿರ್ಮುಖಿಯಾಗುತ್ತಾರೆ. ಒಂದು ವೇಳೆ ಹೀಗಿರದಿದ್ದರೆ ಗಂಡಹೆಂಡತಿ ಇಬ್ಬರೂ ಸೇರಿಯೇ ಮನಬಂದಂತೆ ಖರ್ಚು ಮಾಡುವ ಪ್ರವೃತ್ತಿಯರಾಗಿರುತ್ತಾರೆ. ಈ ಕಾರಣದಿಂದ ಅವರಿಗೆ ಉಳಿತಾಯವಾಗಲಿ, ಹಣ ಹೂಡಿಕೆ ಮಾಡುವುದಾಗಲಿ ಸಾಧ್ಯವಾಗುವುದಿಲ್ಲ.
ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಹೋಲಿಸಿದಲ್ಲಿ ಹೆಚ್ಚು ಪರೋಪಕಾರಿ ಮನೋಭಾವದವನಾಗಿರಬಹುದು ಹಾಗೂ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಭಾವನೆಗಳನ್ನು ಬಳಸಿಕೊಳ್ಳುವುದರ ಮೂಲಕ ಅಂದಾಜು ಮಾಡಬಹುದು. ಕೆಲವು ಸಂಬಂಧಗಳ ಬಾಬತ್ತಿನಲ್ಲಿ ಇದು ಗೊತ್ತಿರುವ ವ್ಯವಹಾರವೇ ಆಗಿರುತ್ತದೆ. ಅದರಲ್ಲಿ ಯಾವುದೇ ಭಾವನಾತ್ಮಕ ಒತ್ತಡವಿಲ್ಲದೆ, ವ್ಯಕ್ತಿಯೊಬ್ಬರ ಇಚ್ಛೆ ಪೂರ್ತಿಗೊಳ್ಳುತ್ತದೆ. ಇಂತಹ ವ್ಯಕ್ತಿ ಮದುವೆಯ ಬಳಿಕ ಶೀಘ್ರವೇ ಅದರ ಉಪಯೋಗ ಮಾಡಿಕೊಳ್ಳಲು ಆರಂಭಿಸುತ್ತಾನೆ.
ಇದಕ್ಕೆ ಪರಿಹಾರವೆಂದರೆ, ಇಬ್ಬರೂ ಸಾಕಷ್ಟು ಸಮಯ ಬಿಡುವು ಮಾಡಿಕೊಂಡು ಕಳೆಯಬೇಕು. ಒಬ್ಬರ ಮಾತನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು. ಅವರ ವಿಚಾರಗಳಿಗೆ ಮಹತ್ವ ಕೊಡಬೇಕು. ಇದರ ಹೊರತಾಗಿ ಮನೆಯ ವ್ಯವಹಾರಗಳು, ಮಕ್ಕಳ ಭವಿಷ್ಯ ಹಾಗೂ ಹಣಕಾಸು ವ್ಯವಹಾರಗಳನ್ನು ಇಬ್ಬರೂ ಸೇರಿಯೇ ನಿರ್ವಹಿಸಬೇಕು.
ಈ ಎಲ್ಲ ಸಂಗತಿಗಳ ಬಗೆಗೆ ಗಮನಕೊಡದೇ ಇರುವುದರಿಂದ ಗಂಡ ಹೆಂಡತಿ ನಡುವಿನ ಬಿರುಕು ಇನ್ನಷ್ಟು ಹೆಚ್ಚಾಗಬಹುದು. ಇದು ಕಾಲಕ್ರಮೇಣ ಆರಂಭಿಕ ಸಿಡಿಮಿಡಿತನದ ಸ್ಥಿತಿಯಿಂದ ಪರಸ್ಪರ ಬೇರೆ ಬೇರೆ ಆಗುವ ಹಂತದ ತನಕ ತಲುಪಬಹುದು. ಇದರಿಂದ ಚಿಂತೆ, ಖಿನ್ನತೆ, ಒತ್ತಡ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.