- ರಾಘವೇಂದ್ರ ಅಡಿಗ ಎಚ್ಚೆನ್.
ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ್ದ ಸೈನಾ ನೆಹ್ವಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಭಾರತದ ಬ್ಯಾಡ್ಮಿಂಟನ್ ತಾರೆ ಪತಿಯೊಂದಿಗೆ ವಿಚ್ಚೇಧನ ಪಡೆದಿರುವುದಾಗಿ ಘೋಷಿಸಿದ್ದಾರೆ. ಸುಮಾರು 7 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಈ ಕುರಿತಾಗಿ ಅವರು ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೈನಾ ನೆಹ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಘೋಷಣೆ ಮಾಡಿದ್ದಾರೆ. ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ವಿಚ್ಚೇದನ ಪಡೆದಿರುವುದಾಗಿ ಹೇಳಿದ್ದಾರೆ. 'ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮಿಬ್ಬರಿಗಾಗಿ ಈ ನಿರ್ಧಾರ ಆರಿಸಿಕೊಂಡಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ನೆಹ್ವಾಲ್ ಹೇಳಿಕೊಂಡಿದ್ದಾರೆ.
ಪರುಪಳ್ಳಿ ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ಇಬ್ಬರೂ ಕೂಡ ಬಹುಕಾಲದ ಸ್ನೇಹಿತರು. ಹೈದರಾಬಾದ್‌ನಲ್ಲಿರುವ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರುಪಳ್ಳಿ ಕಶ್ಯಪ್ ಕೂಡ ಕ್ರೀಡಾ ಲೋಕದಲ್ಲಿಯೇ ಗುರುತಿಸಿಕೊಂಡವರು, ಅವರು ಸಹ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಮೂಲಕ ಗುರುತಿಸಿಕೊಂಡವರು.
ಪರುಪಳ್ಳಿ ಕಶ್ಯಪ್ 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು, 32 ವರ್ಷಗಳಲ್ಲಿ ಸಿಡಬ್ಲ್ಯೂಜಿ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಒಲಿಂಪಿಕ್ ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಶಟ್ಲರ್ ಕೂಡ ಅವರಾಗಿದ್ದಾರೆ
ಸೈನಾ ಒಲಿಂಪಿಕ್‌ನಲ್ಲಿ ಕಂಚು ಮತ್ತು ವಿಶ್ವದ ನಂ. 1 ಶ್ರೇಯಾಂಕದೊಂದಿಗೆ ಗಮನ ಸೆಳೆದವರು. ಇಬ್ಬರು ಹಲವು ವರ್ಷಗಳ ಕಾಲ ಸ್ನೇಹಿತರಾಗಿ ಹಾಗೆ ಡೇಟಿಂಗ್ ಕೂಡ ಮಾಡಿದ್ದರು, ಅಂತಿಮವಾಗಿ ಆವರು 2018ರಲ್ಲಿ ವಿವಾಹವಾಗಿದ್ದರು.
ಆದ್ರೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕಶ್ಯಪ್ ಅಂತಹ ಯಶಸ್ಸು ಗಳಿಸದ ಕಾರಣ ಅವರು ನಿವೃತ್ತಿ ಘೋಷಿಸಿದರು. ಬಳಿಕ ಬ್ಯಾಡ್ಮಿಂಟನ್ ಕೋಚಿಂಗ್ ನೀಡಲು ಮುಂದಾದರು. ಅವರೇ ಪತ್ನಿ ನೆಹ್ವಾಲ್‌ಗೆ ಬೆನ್ನೆಲುಬಾಗಿ ನಿಂತು ತರಬೇತಿ ನೀಡಿದರು. 2019ರಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಪಿವಿ ಸಿಂಧು ವಿರುದ್ಧ ಸೈನಾ ನೆಹ್ವಾಲ್ ಗೆದ್ದು ಬೀಗಿದ್ದರೂ ಈ ಸಮಯದಲ್ಲಿ ಕಶ್ಯಪ್ ತರಬೇತಿ ನೀಡಿದ್ದರು. ವಿಚ್ಛೇದನ ಘೋಷಣೆಯವರೆಗೂ ಕಶ್ಯಪ್ ಆಕೆಗೆ ಕೋಚ್ ಆಗಿದ್ದಾರೆ. ನೆಹ್ವಾಲ್ 2023ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕಾಣಿಸಿಕೊಂಡರು.
ನೆಹ್ವಾಲ್ ಅವರ ಕ್ರೀಡಾ ಕ್ಷೇತ್ರದ ಸಾಧನೆಯನ್ನು ಗುರುತಿಸಿರುವ ಸರ್ಕಾರಗಳು ಅವರಿಗೆ 2009 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯೊಂದಿಗೆ ಗುರುತಿಸಲಾಗಿದೆ. ಇಲ್ಲಿಯವರೆಗೆ ಅವರು ವಿಶ್ವದ ನಂ.1 ಶ್ರೇಯಾಂಕವನ್ನು ಹೊಂದಿರುವ ಏಕೈಕ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಕೀರ್ತಿ ಸಹ ಪಡೆದಿದ್ದಾರೆ. ಸದ್ಯ ಇಬ್ಬರ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಅವರು ತಿಳಿಸಿಲ್ಲ, ಆದರೆ ಇಬ್ಬರ ಒಮ್ಮತದ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಸೈನಾ ನೆಹ್ವಾಲ್‌ಗೆ ಈಗ 35 ವರ್ಷ ವಯಸ್ಸಾಗಿದೆ. ಅವರು ಭವಿಷ್ಯದಲ್ಲಿ ಬ್ಯಾಡ್ಮಿಂಟನ್‌ಗೆ ವಿದಾಯ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.