`ಮದುವೆ’ ಎನ್ನುವುದು ಜಗತ್ತಿನಾದ್ಯಂತದ ಒಂದು ಪ್ರಮುಖ ಸಂಸ್ಕಾರವಾಗಿದೆ. ಇಬ್ಬರು ಪರಿಚಿತರ ಅಥವಾ ಇಬ್ಬರು ಅಪರಿಚಿತ ಸಂಬಂಧಿಗಳು ಒಗ್ಗೂಡಿ ಅವರ ಮದುವೆಯನ್ನು ನಿರ್ಧರಿಸುತ್ತಾರೆ. ಮದುವೆಯ ಬಳಿಕವೇ ಅವರ ನಿಜವಾದ ಜೀವನ ಆರಂಭವಾಗುತ್ತದೆ. ಕೆಲವು ವರ್ಷಗಳ ಹಿಂದಿನ ತನಕ ಮದುವೆಯಾಗುವುದೆಂದರೆ ಮಕ್ಕಳು ಜನಿಸಲೆಂದೇ ಎಂದು ಭಾವಿಸಲಾಗುತ್ತಿತ್ತು. ಏಕೆಂದರೆ ಯಾವುದೇ ದಂಪತಿಗೆ ಮಗುವಾಯಿತೆಂದರೆ ಮಾತ್ರ ಅದನ್ನು ಅವರ ವೈವಾಹಿಕ ಜೀವನ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಭಾವಿಸಲಾಗುತ್ತಿತ್ತು.

ಮೊದಲಿನ ಉದಾಹರಣೆ ಬಿಡಿ, ಈಗಲೂ ಕೂಡ ಅನೇಕ ಮನೆಗಳಲ್ಲಿ ದಂಪತಿಗಳ ಮೇಲೆ ಮಗುವಿಗಾಗಿ ಒತ್ತಡ ಹೇರಲಾಗುತ್ತದೆ. ಗಂಡ ಹೆಂಡತಿ ಯಾವಾಗ ಮಗು ಆಗಬೇಕು ಎಂದು ನಿರ್ಧರಿಸಿದ್ದಾರೆ ಅಥವಾ ಮಗು ಬೇಡವೇ ಬೇಡ ಎಂದು ತೀರ್ಮಾನಿಸಿದ್ದಾರೊ ಎಂಬ ಬಗ್ಗೆ ಗಮನಕೊಡಲು ಹೋಗುವುದಿಲ್ಲ. ಎಷ್ಟೋ ಸಲ ಸಂಗದೋಷದಿಂದ ಕೆಟ್ಟುಹೋದ ಹುಡುಗರು ಅಥವಾ ಹುಡುಗ ಹುಡುಗಿಯರ ಬಗ್ಗೆ ಪೋಷಕರದು ಒಂದೇ ಅಭಿಪ್ರಾಯವಾಗಿರುತ್ತದೆ. ಅದೇನೆಂದರೆ ಮದುವೆಯಾದ ಬಳಿಕ ಒಂದೆರಡು ಮಕ್ಕಳಾಗಿಬಿಟ್ಟರೆ ಎಲ್ಲ ಸರಿಹೋಗುತ್ತದೆ ಎಂದು ಅವರು ಭಾವಿಸುತ್ತಾರೆ.

ಸಾಮಾಜಿಕ ಭೇದ ಭಾವ

ಮಗುವಾಗದ ಮಹಿಳೆಯನ್ನು ಮೊದಲು ಬಂಜೆ ಎಂದು ಕರೆಯಲಾಗುತ್ತಿತ್ತು. ಆಕೆಯ ಗಂಡ ಇನ್ನೊಂದು, ಮತ್ತೊಂದು ಎಂಬಂತೆ ಅನೇಕ ಮದುವೆಗಳನ್ನು ಮಾಡಿಕೊಳ್ಳುತ್ತಿದ್ದ. ತನ್ನದೇ ದೋಷ ಇದ್ದರೂ ಅದನ್ನು ಆ ಮಹಿಳೆಯರ ಮೇಲೆ ಹಾಕಿಬಿಡುತ್ತಿದ್ದ.

ಮಕ್ಕಳಿಗೆ ಜನ್ಮ ಕೊಡುವ ಮಹಿಳೆಯರನ್ನು ಸಮಾಜ ಗೌರವದಿಂದ ಕಾಣುತ್ತಿತ್ತು. ಆದರೆ ಮಗುವಿಗೆ ಜನ್ಮ ನೀಡದ ಮಹಿಳೆಯನ್ನು ತುಚ್ಛವಾಗಿ ಕಾಣಲಾಗುತ್ತಿತ್ತು. ಆಕೆಗೆ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿರಲಿಲ್ಲ.

ಮದುವೆಯಾದ 7 ವರ್ಷಗಳ ಬಳಿಕ ತಾಯಿಯಾದ ಸಂಗೀತಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ಕೆಲವು ವರ್ಷಗಳವರೆಗೆ ಮಗು ಆಗದೇ ಇದ್ದರೂ ನಾವಿಬ್ಬರೂ ಸೇರಿಕೊಂಡು ನಮ್ಮ ಉದ್ಯೋಗದ ಬಗ್ಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿದೆ. ನಾವಿಬ್ಬರೂ ಒಂದೇ ವೃತ್ತಿಯಲ್ಲಿ ಇದ್ದುದರಿಂದ ಇಬ್ಬರೂ ಜೊತೆ ಜೊತೆಗೆ ಖುಷಿ ಖುಷಿಯಿಂದ ಕೆಲಸ ಮಾಡುತ್ತಿದ್ದೆ. ಕೆಲವು ಜನರ ನಿಂದನೆಯ ಮಾತುಗಳನ್ನು ಕೇಳಬೇಕಾಗಿ ಬರುತ್ತಿತ್ತು. 7 ವರ್ಷದ ಬಳಿಕ ನಾನು ಗರ್ಭಿಣಿಯಾದೆ, ಬಳಿಕ ಆಕಾಂಕ್ಷಾ ನಮ್ಮ ಜೀವನದಲ್ಲಿ ಬಂದಾಗ ನಮಗೆ ನಿಜವಾದ ಜವಾಬ್ದಾರಿಯ ಅರಿವಾಯಿತು. ಒಂದು ಪರಿಪೂರ್ಣ ಕುಟುಂಬ ಮತ್ತು ತಾಯಿಯಾದ ಅನುಭೂತಿ ನನಗೆ ವಿಶೇಷ ಥ್ರಿಲ್ ‌ನೀಡಿತು. ಆಕಾಂಕ್ಷಾಳ ಬಾಲ್ಯ, ಅವಳ ನಗು, ಅಳು, ಮುನಿಸು, ಹಠ, ಅವಳ ಹಾಡು, ನೃತ್ಯದಲ್ಲಿ ನಾನು ಅದೆಷ್ಟು ಮೈಮರೆತೆನೆಂದರೆ ಅವಳು ದೊಡ್ಡವಳಾದದ್ದೇ ನನ್ನ ಗಮನಕ್ಕೆ ಬರಲಿಲ್ಲ.

ಸಂಗೀತಾಳ ಜೀವನದಲ್ಲಿ ಆಕಾಂಕ್ಷಾಳ ಆಗಮನದ ಬಳಿಕ ಅವಳಿಗೆ ತಾಯಿಯಾದ ಅನುಭೂತಿಯೇನೊ ದೊರೆಯಿತು. ಆದರೆ ಆಕಾಂಕ್ಷಾ ಇರದೇ ಇದ್ದಾಗ ಆಕೆ ಮತ್ತು ಆಕೆಯ ಪತಿ `ಚೈಲ್ಡ್ ಫ್ರೀ’ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದರು.

ಮಾನಸಿಕತೆ ಬದಲಾಗುತ್ತಿದೆ ಏಕೆ?

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜೋಡಿಗಳು `ನಾವಿಬ್ಬರು ನಮಗಿಬ್ಬರು’ ಹಾಗೂ `ನಾವಿಬ್ಬರು ನಮಗೊಬ್ಬರು’ ಎಂಬುದರಿಂದ `ಚೈಲ್ಡ್ ಫ್ರೀ’ ಮಾನಸಿಕತೆತನಕ ತಲುಪಿದ್ದಾರೆ. ಅಂದಹಾಗೆ ಸಮಾಜದಲ್ಲಿ `ಮಕ್ಕಳು ರಹಿತ’ ಮಾನಸಿಕತೆ ಮೊದಲಿನಿಂದಲೇ ಇತ್ತು. ಯಾವುದಾದರೊಂದು ವಿಶೇಷ ಗುರಿಯಿಟ್ಟುಕೊಂಡು ಆಗ ಜನರು ಅವಿವಾಹಿತರಾಗಿಯೇ ಉಳಿಯುತ್ತಿದ್ದರು. ಮತ್ತೆ ಕೆಲವರು ಮದುವೆಯಾದರೂ ಮಕ್ಕಳಾಗದಂತೆ ನೋಡಿಕೊಳ್ಳುತ್ತಿದ್ದರು.

ಈ ಕುರಿತಂತೆ ಮನೋತಜ್ಞ ಡಾ. ಶಶಿಧರ್‌ ಹೀಗೆ ಹೇಳುತ್ತಾರೆ, “ಆಗಿನ ಸ್ಥಿತಿಯೇ ಬೇರೆಯಾಗಿತ್ತು. ಆಗ ಕುಟುಂಬ ನಿರ್ವಹಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವವರೂ ಇದ್ದರು. ಮದುವೆಯಾಗದೆಯೇ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರೂ ಇದ್ದರು. ಎರಡನೇ ಗುಂಪಿನ ಜನರು ಮದುವೆಯನ್ನೇ ಆಗುತ್ತಿರಲಿಲ್ಲ. ಅವರಿಗೆ ದೇಶ ಸೇವೆಯೇ ಮುಖ್ಯವಾಗಿತ್ತು. ಇಂದಿನ ಪೀಳಿಗೆಯವರು ಹೇಗಿದ್ದಾರೆಂದರೆ, ತಮ್ಮ ತಂದೆತಾಯಿ ಉದ್ಯೋಗಸ್ಥರಾಗಿರುವ ಕಾರಣದಿಂದ ಜನರಿಗಿಂತ ಹೆಚ್ಚಾಗಿ ಆಟಿಕೆಗಳೊಂದಿಗೆ ಕಾಲ ಕಳೆದಿದ್ದರು. ಬಹುಶಃ ಅವರು ಇದೇ ಕಾರಣದಿಂದ, `ಚೈಲ್ಡ್ ಫ್ರೀ’ ಆಗಿರಲು ಬಯಸುತ್ತಿರಬಹುದು.

ಗಂಭೀರವಾಗಿ ವಿಚಾರ ಮಾಡುವುದು ಅತ್ಯಗತ್ಯ

ಈ ವಿಚಾರಧಾರೆಯ ಹಿಂದಿನ ಮಹತ್ವದ ಕಾರಣವೇನೆಂದರೆ, ಮಹಿಳೆ ಸುಶಿಕ್ಷಿತಳಾಗಿರುವುದು. ಇಂದಿನ ಮಹಿಳೆಯರು ಚಾಣಾಕ್ಷರು. ಉದ್ಯೋಗಸ್ಥೆಯಾಗಿರುವ ಕಾರಣದಿಂದ ಆಕೆಗೆ ಹಣ ಬೇಕಿದೆ. ದೊಡ್ಡ ಹುದ್ದೆಯ ಅಪೇಕ್ಷೆ ಇದೆ. ಅಗತ್ಯಗಳು ಹೆಚ್ಚಿದಾಗ ಆರ್ಥಿಕ ಅಸುರಕ್ಷತೆ ಹಾಗೂ ಒತ್ತಡದ ಕಾರಣದಿಂದ `ಚೈಲ್ಡ್ ಫ್ರೀ’ ಆಗಿರುವ ಬಗ್ಗೆ ಗಂಡ ಹೆಂಡತಿ ನಿರ್ಧಾರ ಕೈಗೊಳ್ಳುತ್ತಾರೆ. ಈ ನಿರ್ಧಾರಕ್ಕೆ ಅವರು ತಮ್ಮ ಗಂಡನಿಗೆ ಬೆಂಬಲ ಕೊಡುತ್ತಾರೆ. ಈಗಲೂ ಕೂಡ ನಮ್ಮ ಸಮಾಜ ವ್ಯವಸ್ಥೆಯಲ್ಲಿ ಮಗುವಾದ ಬಳಿಕ ತಂದೆಗಿಂತ ಹೆಚ್ಚಾಗಿ ತಾಯಿಯೇ ಮಗುವಿನ ಆರೈಕೆಯಲ್ಲಿ ವ್ಯಸ್ತಳಾಗಿರುತ್ತಾಳೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಕೆರಿಯರ್‌ ಅಥವಾ ಮಾತೃತ್ವದ ಹೊಣೆಗಾರಿಕೆಯ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇರುತ್ತದೆ. ಹೆಸರಾಂತ ನರ್ತಕಿ ಸುಧಾ ಚಂದ್ರನ್‌ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಚೈಲ್ಡ್ ಫ್ರೀ ಆಗಿರುವುದು ಮಾನಸಿಕತೆಯಾಗಿರದೆ, ಅದೊಂದು ಅಡ್ಜಸ್ಟ್ ಮೆಂಟ್‌ ಆಗಿದೆ. ಮಗು ಆಗಬೇಕೊ, ಬೇಡವೋ ಇದು ಗಂಡಹೆಂಡತಿಯ ವೈಯಕ್ತಿಕ ವಿಷಯ. ಇಂದು ಮಕ್ಕಳಿದ್ದರು ಕೂಡ ಜೀವನ ನಡೆಸುತ್ತಿದ್ದಾರೆ. ಅದೂ ಕೂಡ ಚೆನ್ನಾಗಿಯೇ. ಆದರೆ ಮಕ್ಕಳು ರಹಿತ ಜೀವನ ಸಂಧ್ಯಾ ಸಮಯದಲ್ಲಿ ಪಶ್ಚಾತ್ತಾಪ ಪಡುವಂತಾಗಬಾರದು. ಈ ಕುರಿತಂತೆ ಗಂಭೀರವಾಗಿ ಯೋಚಿಸುವ ಅವಶ್ಯಕತೆ ಇದೆ.”

– ಮಮತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ