ಇಂದಿನ ದಿನಗಳಲ್ಲಿ ಹುಡುಗಿಯರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಮದುವೆಗೂ ಮುಂಚೆಯೇ ಅವರು ಯಾವುದಾದರೂ ಉದ್ಯೋಗದಲ್ಲಿ ನಿರತರಾಗಿ ಬಿಡುತ್ತಾರೆ. ಮದುವೆಯ ಬಳಿಕ ಅವರು ಉದ್ಯೋಗದಲ್ಲಿ ಮುಂದುವರಿಯಲು ಇಷ್ಟಪಡುತ್ತಾರೆ. ಗಂಡ ಅಥವಾ ಅತ್ತೆಮನೆಯವರಿಗೆ ಆಕೆ ಉದ್ಯೋಗ ಮುಂದುವರಿಸುವಲ್ಲಿ ಯಾವುದೇ ತೊಂದರೆ ಎನಿಸುವುದಿಲ್ಲ. ಏಕೆಂದರೆ ಈಗ ಹುಡುಗರು ಕೂಡ ಉದ್ಯೋಗಸ್ಥ ಹುಡುಗಿಯೇ ಬೇಕೆಂದು ಹೇಳುತ್ತಾರೆ. ಇಬ್ಬರ ಗಳಿಕೆಯಿಂದ ತಮ್ಮ ಜೀವನ ಚೆನ್ನಾಗಿ ನಡೆಯಬೇಕೆಂದು ಅಪೇಕ್ಷಿಸುತ್ತಾರೆ. ಅವರ ಜೀವನದಲ್ಲಿ ಹೊಸ ತಿರುವು ಯಾವಾಗ ಬರುತ್ತದೆಂದರೆ, ಅವರ ಮಡಿಲಿಗೆ ಒಂದು ಮಗು ಬಂದಾಗ. ಮಗು ಎಲ್ಲಿಯವರೆಗೆ ಶಾಲೆಗೆ ಹೋಗುವುದಿಲ್ಲವೋ, ಅಲ್ಲಿಯವರೆಗೆ ಮಗುವಿಗೆ ತಾಯಿಯ ಅಗತ್ಯ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ತಾಯಿಯಾದವಳಿಗೆ ತನ್ನ ಮಗುವಿನ ಸೂಕ್ತ ಪಾಲನೆ ಪೋಷಣೆಗಾಗಿ ತಾನು ಆವರೆಗೆ ಮಾಡುತ್ತಿದ್ದ ಉದ್ಯೋಗವನ್ನು ಅನಿವಾರ್ಯವಾಗಿ ತೊರೆಯಬೇಕಾಗಿ ಬರುತ್ತದೆ. ಏಕೆಂದರೆ ಆಗ ಆಕೆಯ ಮುಂದೆ ಎರಡೇ ಪರ್ಯಾಯಗಳಿರುತ್ತವೆ. ಉದ್ಯೋಗ ಇಲ್ಲವೇ ಮಗುವಿನ ಪಾಲನೆ ಪೋಷಣೆ. ಆಕೆ ಮಗುವಿನ ಉತ್ತಮ ಪಾಲನೆ ಪೋಷಣೆಗಾಗಿ ಉದ್ಯೋಗ ತೊರೆಯುವ ನಿರ್ಣಯಕ್ಕೆ ಬರುತ್ತಾಳೆ.

ಅಮ್ಮನನ್ನು ಅವಲಂಬಿಸುವ ಮಗು

ಈಗಿನದು ಚಿಕ್ಕ ಕುಟುಂಬಗಳ ಯುಗ. ಇಲ್ಲಿ ಅತ್ತೆ, ಮಾವ, ನಾದಿನಿ ಹೀಗೆ ಯಾರೊಬ್ಬರೂ ಇರುವುದಿಲ್ಲ. ಹೆರಿಗೆಯ ಬಳಿಕ ತನ್ನ ತಾಯಿಯನ್ನು ಕರೆಸಿಕೊಂಡರೂ ಅಮ್ಮ ಎಷ್ಟು ದಿನ ಆಕೆಯ ಜೊತೆ ಇರಲು ಸಾಧ್ಯ? ಕೆಲವು ದಿನಗಳ ಕಾಲ ಇದ್ದ ಅವರು ಹೊರಟು ಹೋಗುತ್ತಾರೆ. ಅವರು 4-5 ವರ್ಷಗಳ ಕಾಲ ನಿಮ್ಮ ಜೊತೆಗೆ ಇರಲು ಸಾಧ್ಯವಿಲ್ಲ. ಗಂಡನಿಗೂ ಕೂಡ ಮಗುವಿನ ಪಾಲನೆ ಪೋಷಣೆಯಲ್ಲಿ ಹೆಂಡತಿಗೆ ಸಹಾಯ ಮಾಡುವಷ್ಟು ಸಮಯ ಇರುವುದಿಲ್ಲ. ಅಂದಹಾಗೆ ಮಗುವಿಗೆ ತಂದೆಗಿಂತ ತಾಯಿಯ ಅವಶ್ಯಕತೆಯೇ ಹೆಚ್ಚಿಗೆ ಇರುತ್ತದೆ. ಅಮ್ಮನ ಮಡಿಲಿಗೆ ಹೋದಾಗಲೇ ಅದಕ್ಕೆ ಸುರಕ್ಷತೆಯ ಅನುಭವ ಉಂಟಾಗುತ್ತದೆ. ಕೆಲವು ಮಕ್ಕಳಂತೂ 1 ಗಂಟೆ ಕೂಡ ಅಮ್ಮನನ್ನು ಬಿಟ್ಟು ಇರಲಾರರು. ಅಮ್ಮ ಕಾಣಿಸದೇ ಇದ್ದರೆ ಅದು ಅತ್ತು ರಂಪ ಮಾಡುತ್ತದೆ.

ಅಂದಹಾಗೆ ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯೇನೋ ಸಿಗುತ್ತದೆ. ಆದರೆ ಅದಕ್ಕೂ ಒಂದು ಮಿತಿ ಇರುತ್ತದೆ. ಕೆಲವು ಮಹಿಳೆಯರು ಹೆರಿಗೆಗೂ ಮುಂಚೆಯೇ ಸಾಕಷ್ಟು ರಜೆ ಪಡೆದುಬಿಡುತ್ತಾರೆ. ಹೆರಿಗೆಯ ಬಳಿಕ ಅವರಿಗೆ ಹೆಚ್ಚು ದಿನಗಳ ರಜೆ ಸೌಲಭ್ಯ ಸಿಗುವುದಿಲ್ಲ. ಹುಟ್ಟಿದ ಮಗು ಸಂಪೂರ್ಣವಾಗಿ ತಾಯಿಯ ಹಾಲನ್ನೇ ಅವಲಂಬಿಸಿರುತ್ತದೆ. ಆರಂಭಿಕ 6 ತಿಂಗಳುಗಳ ಕಾಲ ಅದಕ್ಕೆ ತಾಯಿಯ ಹಾಲಿನ ಹೊರತು ಒಂದು ತೊಟ್ಟು ನೀರು ಸಹ ಹಾಕುವುದಿಲ್ಲ. ಆ ಬಳಿಕವಷ್ಟೇ ಅದಕ್ಕೆ ತಾಯಿಯ ಹಾಲನ್ನು ಬಿಡಿಸಿ ಇತರ ಆಹಾರ ಶುರು ಮಾಡಲಾಗುತ್ತದೆ.

ಮಗುವಿನ ಸ್ತನ್ಯಪಾನದ ಅಗತ್ಯವನ್ನು ಪೂರೈಸಲು ತಾಯಿ ಮನೆಯಲ್ಲೇ ಇರಬೇಕಾದ ಅವಶ್ಯಕತೆ ಉಂಟಾಗುತ್ತದೆ. ಹೀಗಾಗಿ ಆಕೆಗೆ ಉದ್ಯೋಗ ತೊರೆಯಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ಕೆಲವು ದಶಕಗಳ ಹಿಂದಿನ ತನಕ ಮಹಿಳೆಯರು ಮಕ್ಕಳ ಲಾಲನೆ ಪೋಷಣೆಗಾಗಿ ಉದ್ಯೋಗ ತೊರೆಯುವ ಅಗತ್ಯ ಉಂಟಾಗುತ್ತಿರಲಿಲ್ಲ. ಆಗ ದೊಡ್ಡ ಕುಟುಂಬದಲ್ಲಿ ಮಕ್ಕಳು ಹೇಗೋ ಬೆಳೆದು ದೊಡ್ಡವರಾಗುತ್ತಿದ್ದರು. ಆದರೆ ಈಗ ಹಾಗಲ್ಲ, ಚಿಕ್ಕ ಕುಟುಂಬಗಳಲ್ಲಿ ಮಗುವಿನ ನಿರ್ವಹಣೆ ಕಷ್ಟಕರ. ಒಂದು ಸಲ ಉದ್ಯೋಗ ತೊರೆದುಬಿಟ್ಟರೆ, ಬಳಿಕ ಪುನಃ  ಕೆಲಸ ಮಾಡಲು ಅವರಿಗೆ ಮನಸ್ಸು ಬರದು. ಹಾಗೆಯೇ ಆ ಅವಧಿಯಲ್ಲಿ ಅವರಿಗೆ ಸುಲಭವಾಗಿ ಹೊಸ ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟಕರ ಸಂಗತಿ. ಉದ್ಯೋಗ ತೊರೆಯುವುದರಿಂದ ಆರ್ಥಿಕ ಸ್ಥಿತಿ ಅಂದರೆ ಆದಾಯದ ಮೇಲೆ ಪ್ರಭಾವ ಬೀಳುತ್ತದೆ. ತೊಂದರೆ ಏನೆಂದರೆ, ಮಗು ಆದ ಬಳಿಕ ಖರ್ಚು ಹೆಚ್ಚುತ್ತದೆ. ಉದ್ಯೋಗ ಬಿಡುವುದರಿಂದ ಆದಾಯ ಕುಗ್ಗುತ್ತದೆ. ಇಂತಹದರಲ್ಲಿ ಆದಾಯ ಹಾಗೂ ಖರ್ಚಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ.

ಮಗುವಿಗಾಗಿ ಉದ್ಯೋಗ ಬಿಟ್ಟುಬಿಟ್ಟರೆ ಅವರು ಓದಿದ್ದು ವ್ಯರ್ಥವಾಗುತ್ತದೆ. ಹೀಗಾಗಿ ನೀವು ನಿಮ್ಮ ಮಗುವಿಗಾಗಿ ಉದ್ಯೋಗ ತೊರೆಯಬೇಕಾಗಿ ಬಂದಾಗ ಯಾವುದೇ ಬಗೆಯ ದುಃಖ ಹೊಂದಬೇಡಿ, ಪಶ್ಚಾತ್ತಾಪ ಕೂಡ ಪಡಬೇಡಿ. ಒಂದು ಸಂಗತಿ ನೆನಪಿಡಿ,  ಉದ್ಯೋಗ ಮಾಡಲು ಇಡೀ ಜೀವನವೇ ಇದೆ. ಈಗ ನಿಮ್ಮ ಜವಾಬ್ದಾರಿ ಕೇವಲ ಮಗುವನ್ನು ನೋಡಿಕೊಳ್ಳುವುದಾಗಿದೆ. ಏಕೆಂದರೆ ಅದು ನಿಮ್ಮ ಕರುಳ ಕುಡಿ.

ಆದ್ಯತೆಗಳನ್ನು ಅರಿಯಿರಿ

ಆಯಾಗಳು ಅಥವಾ ಮನೆಗೆಲಸಗಾರರ ನಂಬಿಕೆಯ ಮೇರೆಗೆ ಮಕ್ಕಳ ಪಾಲನೆ ಪೋಷಣೆ ಆಗುತ್ತದೆ. ಆದರೆ ನಿಮ್ಮಿಂದ ಸಿಗಬಹುದಾದ ಸಂಸ್ಕಾರ ಅವರಿಂದ ಹೇಗೆ ತಾನೇ ದೊರೆಯಲು ಸಾಧ್ಯ? ಒಂದು ವೇಳೆ ನೀವು ನಿಮ್ಮ ಅಮ್ಮ, ಸೋದರಿ, ಅತ್ತಿಗೆಯನ್ನು ಕರೆಸಿಕೊಂಡು ಮಗುವನ್ನು ಅವರಿಗೆ ಒಪ್ಪಿಸಿ ಉದ್ಯೋಗಕ್ಕೆ ಹೋಗುತ್ತೇನೆಂದರೆ, ಅದು ಕೂಡ ತಪ್ಪು. ಅವರಿಗೆ ಅವರದೇ ಆದ ಕುಟುಂಬವಿದೆ, ಜವಾಬ್ದಾರಿಗಳಿವೆ. ಅವರನ್ನು  ತೊಂದರೆಗೀಡು ಮಾಡಿ ನೀವು ಉದ್ಯೋಗಕ್ಕೆ ಹೋಗುವುದು ಸರಿಯಾದ ಕ್ರಮವಲ್ಲ.

ನೀವು ಯಾವುದೇ ಸ್ಥಿತಿಯಲ್ಲೂ ನೌಕರಿ ಬಿಡುವುದಿಲ್ಲ ಎನ್ನುವುದಾದರೆ, ನೀವು ಅವಿಭಕ್ತ ಕುಟುಂಬದ ಹುಡುಗನನ್ನೇ ಮದುವೆಯಾಗಿ. ಅಲ್ಲಿ ಮಗುವಿಗೆ ಹಾಲುಣಿಸುವಾಗ ಮಾತ್ರ ನಿಮ್ಮ ಅವಶ್ಯಕತೆ ಉಂಟಾಗುತ್ತದೆ. ಅದರ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಅಜ್ಜಿ-ತಾತ, ಚಿಕ್ಕಪ್ಪ-ದೊಡ್ಡಮ್ಮ, ನಾದಿನಿ-ಮೈದುನರೇ ನೋಡಿಕೊಳ್ಳುತ್ತಾರೆ. ಅಲ್ಲಿ ನೀವು ಕೆಲವೇ ತಿಂಗಳುಗಳ ಕಾಲ ಹೆರಿಗೆ ರಜೆ ಪಡೆದು ಪುನಃ ಉದ್ಯೋಗಕ್ಕೆ ಹೋಗಬಹುದು.

ಹೆರಿಗೆ ರಜೆಯ ಬಳಿಕ ಕೆಲಸಕ್ಕೆ ಹಾಜರಾಗುವ ಅಥವಾ ಹಾಜರಾಗದೇ ಇರಲು ನೀವು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಅಂದಹಾಗೆ ನೀವು ಇದರ ಬಗ್ಗೆ ಗೊಂದಲದಲ್ಲಿರಬಹುದು. ಆದರೆ ನಿರ್ಣಯವನ್ನಂತೂ ತೆಗೆದುಕೊಳ್ಳಲೇಬೇಕು. ಒಂದುವೇಳೆ ನೀವು ನೌಕರಿ ತೊರೆಯುವ ನಿರ್ಧಾರ ಕೈಗೊಂಡರೆ, ಆ ಬಳಿಕ ನೀವು ಸಕ್ರಿಯವಾಗಿ ಹೇಗೆ ಇರುವಿರಿ? ಏಕೆಂದರೆ ಮಗು ಬೆಳೆಯುತ್ತ ಹೋದಂತೆ ಅದಕ್ಕೆ ನಿಮ್ಮ ಅವಶ್ಯಕತೆ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ನೀವು ನೌಕರಿ ತೊರೆದರೂ ಉಪಾಯವನ್ನು ಅವಶ್ಯವಾಗಿ ಕಂಡುಕೊಳ್ಳಿ. ಏಕೆಂದರೆ ನಿಮ್ಮ ಬುದ್ಧಿ ಸಾಮರ್ಥ್ಯ, ಅರ್ಹತೆ ಮತ್ತು ಪ್ರತಿಭೆ ಯಾವುದೇ ಕಾರಣಕ್ಕೂ ನಿಂತ ನೀರಾಗಬಾರದು.

ಒಂದು ವೇಳೆ ನಿಮ್ಮ ಗಂಡನ ಆದಾಯ ಕಡಿಮೆ ಇದ್ದಾಗ, ನೀವು ನೌಕರಿ ತೊರಯದೆ ಇರುವ ನಿರ್ಧಾರ ಕೈಗೊಳ್ಳಬೇಕಾಗಿ ಬರುತ್ತದೆ. ಅದಕ್ಕಾಗಿ ನೀವು ಕೆಲವು ತಿಂಗಳುಗಳ ಕಾಲ ವೇತನರಹಿತ ರಜೆ ಪಡೆಯಬೇಕಾಗಿ ಬಂದರೂ ಪಡೆದುಕೊಳ್ಳಿ. ಅಂದಹಾಗೆ ಇದರ ಪರಿಣಾಮ ಪ್ರಮೋಶನ್‌ ಅಥವಾ ಒಟ್ಟಾರೆ ಸೇವಾ ಅವಧಿ ಮೇಲೆ ಬೀಳುತ್ತದೆ. ಆದರೆ ನಿಮ್ಮ ಉದ್ಯೋಗಕ್ಕಂತೂ ಯಾವುದೇ ಚ್ಯುತಿ ಬಾರದು.

ನಿಮಗೆ ನೌಕರಿ ಮುಂದುವರಿಸುವ, ತೊರೆಯುವ ಅಥವಾ ರಜೆ ಮುಂದುವರಿಸುವ ನಿರ್ಧಾರವನ್ನು ನಿಮ್ಮ ಗಂಡ, ಮನೆಯವರ ಒಪ್ಪಿಗೆಯ ಮೇರೆಗೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಆಮೇಲೆ ಅವರು ಅದರ ತಪ್ಪನ್ನು ನಿಮ್ಮ ಮೇಲೆಯೇ ಹೊರಿಸುತ್ತಾರೆ. ಒಂದು ವೇಳೆ ನೌಕರಿ ಬಿಟ್ಟರೆ ಏಕೆ ಬಿಟ್ಟೆ, ಒಂದು ವೇಳೆ ಬಿಡದೇ ಇದ್ದರೆ ಏಕೆ ಬಿಡಲಿಲ್ಲ ಎಂಬುದರ ಬಗ್ಗೆ ನೀವೇ ಮಾತು ಕೇಳಿಸಿಕೊಳ್ಳಬೇಕಾಗಿ ಬರುತ್ತದೆ. ಹೀಗಾಗಿ ಆತುರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಹೋಗಬೇಡಿ.

– ಕಾತ್ಯಾಯನ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ