ವೈವಾಹಿಕ ಜೀವನದಲ್ಲಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಲು ಸೆಕ್ಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕೌಟುಂಬಿಕ ನ್ಯಾಯಾಲಯಗಳಿಗೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಇದಕ್ಕೆಲ್ಲ ಮುಖ್ಯ ಕಾರಣ ಸೆಕ್ಸ್ ಕೊರತೆ ಇರಬಹುದು. ಎಷ್ಟೋ ಸಲ ಅದು ಇಬ್ಬರ ನಡುವೆ ತೀವ್ರ ಜಗಳಕ್ಕೂ ಕಾರಣವಾಗುತ್ತದೆ. ಕೆಲವು ದಂಪತಿಗಳಲ್ಲಿ ವಿಚ್ಛೇದನಕ್ಕೂ ಕಾರಣವಾಗುತ್ತದೆ. ಕೆಲವು ಪುರುಷರು ಹೆಂಡತಿಯ ಅಸಹಕಾರದಿಂದ ರೋಸಿಹೋಗಿ ಬೇರೆ ಮಹಿಳೆಯರ ಸಂಗ ಮಾಡುತ್ತಾರೆ. ಹೀಗಾಗಿ ಕುಟುಂಬದಲ್ಲಿ ನೆಮ್ಮದಿ ಎನ್ನುವುದೇ ಹೊರಟುಹೋಗುತ್ತದೆ.

ಮನೋತಜ್ಞ ಡಾ. ಮಧುಕರ ಹೇಳುತ್ತಾರೆ, “ವಯಸ್ಸಿಗನುಗುಣವಾಗಿ ಗಂಡ ಹಾಗೂ ಹೆಂಡತಿಯ ಸೆಕ್ಸ್ ನ ಲೆಕ್ಕಾಚಾರ ಬೇರೆ ಬೇರೆ ಆಗಿರುತ್ತದೆ. ಇದೇ ಅಂತರ ಎಷ್ಟೋ ಸಲ ಅವರನ್ನು ದೂರ ದೂರ ಮಾಡಲು ಕಾರಣವಾಗುತ್ತದೆ. ಗಂಡ-ಹೆಂಡತಿಯ ಸಂಬಂಧದ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳಲು ಈ ಗಣಿತವನ್ನು ತಿಳಿದುಕೊಳ್ಳುವುದು ಅತ್ಯವಶ್ಯ.”

ಇದೇ ಕಾರಣದಿಂದ ಗಂಡ-ಹೆಂಡತಿಯರಲ್ಲಿ ಸೆಕ್ಸ್ ಅಪೇಕ್ಷೆ ಕಡಿಮೆ ಅಥವಾ ಹೆಚ್ಚು ಇರುತ್ತದೆ. ಹೆಂಡತಿಯರು ಇದನ್ನೆಲ್ಲ ಅರ್ಥ ಮಾಡಿಕೊಳ್ಳದೆ ಗಂಡ ಹೊರಗೆ ಯಾರ ಜೊತೆಗೋ ಸುತ್ತಾಡುತ್ತಿದ್ದಾನೆ ಎಂದು ಭಾವಿಸುತ್ತಾರೆ. ಅವರ ಈ ಯೋಚನೆಯೇ ವೈವಾಹಿಕ ಜೀವನದಲ್ಲಿ ವಿಷ ಬೆರೆಸುವ ಕೆಲಸ ಮಾಡುತ್ತದೆ. ವಯಸ್ಸನ್ನು 10-10 ವರ್ಷಗಳ ಗುಂಪಿನ ಪ್ರಕಾರ ನೋಡಿದಾಗ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ.

ಮದುವೆಗೆ ಮುಂಚೆ

ಈಗ ಹುಡುಗಿಯರ ಮದುವೆಯ ವಯಸ್ಸು ಸರಾಸರಿ 25-35 ನಡುವೆ ಇದೆ. ಇನ್ನೊಂದೆಡೆ ಆಹಾರ ಪದ್ಧತಿ ಮತ್ತು ಬದಲಾಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ಹುಡುಗ-ಹುಡುಗಿಯರಿಗೆ 15ನೇ ವಯಸ್ಸಿನಷ್ಟೊತ್ತಿಗೆ ಸೆಕ್ಸ್ ನ ಅರಿವು ಉಂಟಾಗುತ್ತದೆ. 15-30 ವಯೋಮಿತಿಯಲ್ಲಿ ಹುಡುಗಿಯರಿಗೆ ನಿಯಮಿತ ಮುಟ್ಟು ಉಂಟಾಗುತ್ತದೆ. ಹಾರ್ಮೋನು ಬದಲಾವಣೆ ಗೋಚರಿಸುತ್ತದೆ. ಇಂತಹದರಲ್ಲಿ ಅವರಲ್ಲಿ ಸೆಕ್ಸ್ ಭಾವನೆ ಜಾಗೃತವಾಗುತ್ತದೆ. ಆದರೆ ಅವರು ಅದನ್ನು ಹತ್ತಿಕ್ಕಿ ತಮ್ಮ ಕೆರಿಯರ್‌ನತ್ತ ಗಮನಕೊಡುತ್ತಾರೆ.

ಇದೇ ವಯಸ್ಸಿನ ಹುಡುಗರಲ್ಲಿ ಸೆಕ್ಸ್ ಬಗೆಗಿನ ಉತ್ಸಾಹ ಮೇರೆ ಮೀರಿರುತ್ತದೆ. ಇಂತಹದರಲ್ಲಿ ಮದುವೆ, ರಿಲೇಶನ್‌ಶಿಪ್‌ನ ಯೋಚನೆ ಅವರಲ್ಲಿ ರೋಮಾಂಚನ ಉಂಟು ಮಾಡುತ್ತದೆ.

30ರ ಬಳಿಕ ಬದಲಾಗುವ ಪರಿಸ್ಥಿತಿ

ಹೆಂಗಸರ ಸ್ಥಿತಿ : 30ರ ಬಳಿಕ ಮದುವೆಯಾಗುವ ಯುವತಿಯರಲ್ಲಿ ಸೆಕ್ಸ್ ನ ಕುರಿತಂತೆ ಯಾವುದೇ ಸಮಸ್ಯೆ ಇರುವುದಿಲ್ಲ. ಅವರು ಆರ್ಗಸಂ ತಲುಪಲು ಸಂಪೂರ್ಣ ಸನ್ನದ್ಧರಾಗಿ ಇರುತ್ತಾರೆ. ಆಗ ಮಹಿಳೆಯರಲ್ಲಿ ಕೆರಿಯರ್‌ ರೂಪಿಸಿಕೊಳ್ಳುವಲ್ಲಿ ಯಾವುದೇ ಬಗೆಯ ಒತ್ತಡ ಇರುವುದಿಲ್ಲ. ಮನೆಯಲ್ಲೂ ಅಷ್ಟೊಂದು ಜವಾಬ್ದಾರಿಗಳಿರುವುದಿಲ್ಲ. ಈ ಸ್ಥಿತಿಯಲ್ಲಿ ಅವರಲ್ಲಿ ಲೈಂಗಿಕ ಇಚ್ಛೆ ತುಂಬಾ ಬಲವಾಗಿರುತ್ತದೆ. ಮಗು ಆದ ಬಳಿಕ ಮಹಿಳೆಯರ ದೇಹದಲ್ಲಿ ಸಾಕಷ್ಟು ಬಗೆಯ ಬದಲಾವಣೆಗಳು ಉಂಟಾಗುತ್ತದೆ. ಆಗ ಅವರ  ಲೈಂಗಿಕ ಭಾವನೆಯನ್ನು ತಿಳಿದುಕೊಳ್ಳುವುದು ಸುಲಭ. ಅವರು ನಿಶ್ಚಿಂತರಾಗಿ ಸಂಬಂಧದ ಆನಂದ ಪಡೆಯಲು ಸನ್ನದ್ಧರಾಗಿರುತ್ತಾರೆ.

ಗಂಡಸರ ಸ್ಥಿತಿ : ವಯಸ್ಸಿನ ಈ ಹಂತದಲ್ಲಿ ಪುರುಷ ಅನೇಕ ಬಗೆಯ ಜವಾಬ್ದಾರಿಗಳಲ್ಲಿ ಮುಳುಗಿರುತ್ತಾನೆ. ಮದುವೆಯ ಬಳಿಕ ಮಗು ಹಾಗೂ ಕುಟುಂಬಕ್ಕೆ ಮಾಡಬೇಕಾದ ಖರ್ಚಿನ ಬಗ್ಗೆ ಚಿಂತಿತನಾಗಿರುತ್ತಾನೆ. ಕೆರಿಯರ್‌ನಲ್ಲಿ ಬೆಳವಣಿಗೆ ಈ ಮುಂತಾದ ಕಾರಣಗಳಿಂದಾಗಿ ಅವನು ತೀರಾ ದಣಿದವನಂತೆ ಕಂಡುಬರುತ್ತಾನೆ. ಸಂಕಷ್ಟಗಳಿಗೆ ರೋಸಿ ಕೆಲವರು ಮದ್ಯ ವ್ಯಸನಿಗಳಾಗಿಬಿಡುತ್ತಾರೆ. ಆ ಸ್ಥಿತಿಯಲ್ಲಿ ಲೈಂಗಿಕೇಚ್ಛೆ ಕಡಿಮೆಯಾಗುತ್ತದೆ.

ಸ್ತ್ರೀರೋಗ ತಜ್ಞೆ ಡಾ. ಸುನೀತಾ ಚಂದ್ರಾ ಹೀಗೆ ಹೇಳುತ್ತಾರೆ, “ನಮ್ಮಲ್ಲಿ ಬರುವ ಬಹುತೇಕ ಸಂತಾನಹೀನ ಮಹಿಳೆಯರಲ್ಲಿ ಯಾವುದೇ ಸಮಸ್ಯೆ ಇರದು! ಅವರ ಪತಿಯರಲ್ಲಿ ವೀರ್ಯಾಣು ಕೊರತೆ ಇರುತ್ತದೆ. ಜೊತೆಗೆ ವೀರ್ಯಾಣು ಗುಣಮಟ್ಟ ಕೂಡ ಸರಿಯಾಗಿ ಇರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೇನೆಂದರೆ ಗಂಡನಿಗೆ ಮಾನಸಿಕ ಒತ್ತಡ ಹಾಗೂ ಕೆಲಸದ ಒತ್ತಡ. ಈ ಕಾರಣದಿಂದ ಅವರು ಸೆಕ್ಸ್ ನಲ್ಲಿ ಸರಿಯಾಗಿ ಸಹಕಾರ ಕೊಡಲು ಆಗುವುದಿಲ್ಲ.”

40ರ ಹುರುಪು

40ರ ನಂತರ ಪುನಃ ದೈಹಿಕ ಬದಲಾವಣೆಗಳು ಕಂಡುಬರುತ್ತವೆ. ಮಹಿಳೆಯರಲ್ಲಿ ಹಾರ್ಮೋನು ಮಟ್ಟ ಕಡಿಮೆಯಾಗುತ್ತದೆ. ಅವರಲ್ಲಿ ಲೈಂಗಿಕ ಇಚ್ಛೆ ಪುನಃ ಜಾಗೃತವಾಗುತ್ತದೆ. ಎಷ್ಟೋ ಮಹಿಳೆಯರು ಮಕ್ಕಳ ಜವಾಬ್ದಾರಿಯಿಂದ ಮುಕ್ತರಾಗಿರುತ್ತಾರೆ. ಈ ಕಾರಣದಿಂದ ಅವರಲ್ಲಿ  ಲೈಂಗಿಕ ಇಚ್ಛೆ ಹೆಚ್ಚತೊಡಗುತ್ತದೆ. ಆದರೆ ಇದು ಪರಿಪೂರ್ಣವಾಗಿ ಆರೋಗ್ಯದಿಂದಿರುವವರಲ್ಲಿ ಮಾತ್ರ ಕಂಡುಬರುತ್ತದೆ. ಯಾವುದೋ ರೋಗಕ್ಕೆ ತುತ್ತಾದವರಲ್ಲಿ ಹಾಗೂ ಸ್ಥೂಲದೇಹಿಗಳಲ್ಲಿ ಅದು ಅಷ್ಟಾಗಿ ಕಂಡುಬರುವುದಿಲ್ಲ. ಅವರು ಲೈಂಗಿಕ ಸಂಬಂಧದಿಂದ ದೂರ ಇರಲು ನೋಡುತ್ತಾರೆ. 40+ ಪುರುಷರಲ್ಲೂ ಹೊಸ ಬದಲಾವಣೆ ಕಂಡುಬರುತ್ತದೆ. ಅವರು ಉದ್ಯೋಗದಲ್ಲಿ ಸೆಟಲ್ ಆಗಿರುತ್ತಾರೆ. ಯಾರು ಆರೋಗ್ಯದಿಂದಿರುತ್ತಾರೋ ಮೊದಲಿಗಿಂತ ಹೆಚ್ಚು ಎನರ್ಜಿ ಫೀಲ್ ಮಾಡಿಕೊಳ್ಳುತ್ತಾರೆ. ಸೆಕ್ಸ್ ನಲ್ಲಿ ಹೊಸತನ ತರುವ ವಿಚಾರ ಅವರಲ್ಲಿ ತೀವ್ರವಾಗಿ ಓಡುತ್ತಿರುತ್ತದೆ.

50ರ ಬಳಿಕ ಮಹಿಳೆಯರಲ್ಲಿ ಪೀರಿಯಡ್ಸ್ ಕಿರಿಕಿರಿ ಇರುವುದಿಲ್ಲ. ಅವರು ಸೆಕ್ಸ್ ಬಗ್ಗೆ ಒಳ್ಳೆಯ ಫೀಲಿಂಗ್‌ ಮಾಡಿಕೊಳ್ಳುತ್ತಾರೆ. ಆ ಬಳಿಕ ಅವರಲ್ಲಿ ಅನೇಕ ಪ್ರಶ್ನೆಗಳು ಮನೆ ಮಾಡಿರುತ್ತವೆ. ಕೆಲವರಲ್ಲಿ ಹಾರ್ಮೋನು ಬದಲಾವಣೆಯ ಕಾರಣದಿಂದ ದೇಹ ಅದಕ್ಕೆ ಸ್ಪಂದಿಸುವುದಿಲ್ಲ. ಮಂಡಿಯ ಸಮಸ್ಯೆಗಳು ಕಾಡುತ್ತವೆ. ಈ ಕಾರಣದಿಂದ ಅವರ ಲೈಂಗಿಕ ಇಚ್ಛೆ ದಬ್ಬಲ್ಪಡುತ್ತದೆ.

ಈ ವಯಸ್ಸಿನ ಪುರುಷರಲ್ಲಿ ಕಂಡುಬರುವ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳನ್ನು ನಿವಾರಿಸುವ ಔಷಧಿಗಳಿಂದಾಗಿ ಲೈಂಗಿಕ ಇಚ್ಛೆಯ ಮೇಲೆ ಪ್ರಭಾವ ಬೀರುತ್ತದೆ. ದೇಹದ ಸೆಕ್ಸ್ ಗಣಿತವೇ ಗಂಡ ಹೆಂಡತಿಯ ನಡುವಿನ ಸೆಕ್ಸ್ ಸಂಬಂಧದಲ್ಲಿ ಅಷ್ಟಿಷ್ಟು ಅಡೆತಡೆ ಉಂಟು ಮಾಡಲು ಕಾರಣವಾಗುತ್ತದೆ.

ಡಾ. ಮಧುಕರ ಕೊಡುವ ಸಲಹೆ ಏನೆಂದರೆ, “ಸೆಕ್ಸ್ ನ ಈ ಗಣಿತ ಮನಸ್ಸಿನ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು.”

ಸಂಬಂಧದಲ್ಲಿ ಸೆಕ್ಸ್ ಗೆ ತನ್ನದೇ ಆದ ಮಹತ್ವವಿದೆ. ನಮ್ಮ ಸಮಾಜದಲ್ಲಿ ಸೆಕ್ಸ್ ಬಗ್ಗೆ ಮಾತನಾಡುವುದನ್ನು ಕೆಟ್ಟದ್ದೆಂದು ಭಾವಿಸಲಾಗುತ್ತದೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಹತ್ತು ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಔಷಧಿಗಳಿಗಿಂತ ಪರಸ್ಪರ ಮಾತುಕತೆಯ ಮುಖಾಂತರ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಉತ್ತಮ. ಪರಸ್ಪರ ಸಹಕಾರದ ಮೂಲಕ ಇಬ್ಬರ ನಡುವಿನ ಅಂತರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆಗಲೇ ವೈವಾಹಿಕ ಜೀವನ ಸುಲಲಿತವಾಗಿ ಸಾಗಲು ಸಾಧ್ಯವಾಗುತ್ತದೆ.

– ಡಾ. ಮನೋಹರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ