ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2025 (UPSC CSE 2025) ರ ಅಂತಿಮ ಫಲಿತಾಂಶವನ್ನು ಆಯೋಗವು ಗುರುವಾರ ಪ್ರಕಟಿಸಿದೆ. ಈ ಬಾರಿ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಮೊದಲ ರ್ಯಾಂಕ್ (AIR 1) ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಅಥವಾ upsconline.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಅನುಜ್ ಅಗ್ನಿಹೋತ್ರಿ ಮೊದಲನೇ ರ್ಯಾಂಕ್, ರಾಜೇಶ್ವರಿ ಸುವೆ ಎಂ 2ನೇ ರ್ಯಾಂಕ್ (ಮಹಿಳಾ ಟಾಪರ್), ಆಕಾಂಶ್ ಧುಲ್ 3ನೇ ರ್ಯಾಂಕ್ ಪಡೆದಿದ್ದಾರೆ.
ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ಅನುಜ್ ಅಗ್ನಿಹೋತ್ರಿ ಅವರು ರಾಜಸ್ಥಾನದ ಜೋಧ್‌ಪುರ ಮೂಲದವರು. 2023ರಲ್ಲಿ ಜೋಧ್‌ಪುರದ ಪ್ರತಿಷ್ಠಿತ ಏಮ್ಸ್ ನಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದು, ಪ್ರಸ್ತುತ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಯಲ್ಲಿ (DANICS) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯದ ಜೊತೆಯಲ್ಲೇ ಕಠಿಣ ಪರಿಶ್ರಮದಿಂದ ಓದಿರುವ ಅವರು ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ರಾಜ್ಯದ ಒಟ್ಟು 22 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯುವಕ ಕಿರಣ್ ಸಣ್ಣಪ್ಪ ಕಮತೆ (29) ಅವರು ದೇಶಕ್ಕೆ 53ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಕಿರಣ್, ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. ಐದು ಬಾರಿ ಪ್ರಿಲಿಮ್ಸ್ ಪಾಸಾಗಿದ್ದರೂ, ಮೇನ್ಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಆರನೇ ಬಾರಿಗೆ ಯಶಸ್ಸು ಕಂಡಿದ್ದಾರೆ.
958 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸು
ಆಯೋಗದ ಪ್ರಕಟಣೆಯ ಪ್ರಕಾರ, ಒಟ್ಟು 958 ಅಭ್ಯರ್ಥಿಗಳು ಐಎಎಸ್ (IAS), ಐಪಿಎಸ್ (IPS), ಐಎಫ್ಎಸ್ (IFS) ಹಾಗೂ ಕೇಂದ್ರ ಸರ್ಕಾರದ ‘ಗ್ರೂಪ್ ಎ’ ಮತ್ತು ‘ಗ್ರೂಪ್ ಬಿ’ ಸೇವೆಗಳಿಗೆ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 1,087 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯುಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು.
ಪೂರ್ವಭಾವಿ ಪರೀಕ್ಷೆ 2025ರ ಮೇ 25ರಂದು, ಮುಖ್ಯ ಪರೀಕ್ಷೆ 2025ರ ಆಗಸ್ಟ್ 22 ರಿಂದ ಆಗಸ್ಟ್ 31ರವರೆಗೆ ನಡೆದಿತ್ತು. ಸಂದರ್ಶನ 2026ರ ಜನವರಿಯಲ್ಲಿ ನವದೆಹಲಿಯ ಯುಪಿಎಸ್‌ಸಿ ಕೇಂದ್ರ ಕಚೇರಿಯಲ್ಲಿ ಆರಂಭವಾಗಿದ್ದಸಂದರ್ಶನ ಪ್ರಕ್ರಿಯೆಗಳು ಫೆಬ್ರವರಿ 27ರಂದು ಮುಕ್ತಾಯಗೊಂಡಿದ್ದವು. ಕೇವಲ ಒಂದು ವಾರದ ಅಂತರದಲ್ಲೇ ಯುಪಿಎಸ್‌ಸಿ ಅಂತಿಮ ಫಲಿತಾಂಶ ಪ್ರಕಟಿಸಿದೆ.





