ಮದುವೆಗೆ ಮುಂಚಿನಿಂದಲೂ ಉದ್ಯೋಗಸ್ಥ ವನಿತೆಯಾಗಿ, ಕೆರಿಯರ್ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಬೆಂಗಳೂರಿನ ಕುಮುದಾರಾಣಿ, ಮದುವೆಯ ನಂತರ ಕೆಲಸ ಮುಂದುವರಿಸಿಕೊಂಡು ಈಗ ಇಬ್ಬರು ಮಕ್ಕಳ ಮಮತಾಮಯಿ ತಾಯಿ ಎನಿಸಿದ್ದಾರೆ.
ಹಿರಿಯ ಮಗಳು ಅನನ್ಯಾ 12 ದಾಟಿ, ಇದೀಗ 6ನೇ ಕ್ಲಾಸಿನ ಕೊನೆಯ ಹಂತದಲ್ಲಿದ್ದಾಳೆ. ಕಿರಿಯ ಮಗಳು ಇನ್ನೂ ಚಿಕ್ಕ ಕ್ಲಾಸಿನ ವಿದ್ಯಾರ್ಥಿನಿ. ಹದಿಹರೆಯಕ್ಕೆ ಕಾಲಿಟ್ಟ ಮಗಳ ಜೊತೆಗಿನ ಇವರ ವಾತ್ಸಲ್ಯದ ಅನುಬಂಧದ ಬಗ್ಗೆ ಅವರ ಮಾತುಗಳಲ್ಲೇ ತಿಳಿಯೋಣವೇ....?
ನಿಮ್ಮ ಮತ್ತು ನಿಮ್ಮ ಮಗಳ ಬಾಂಧವ್ಯದ ಕುರಿತು ಹೇಳಿ.ನನ್ನ ಹಿರಿಯ ಮಗಳು ಅನನ್ಯಾ ಎಲ್ಲಾ ವಿಷಯಗಳ್ನೂ ಮನಬಿಚ್ಚಿ ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ, ಅದು ಹಾಗೆ ಹೀಗೆ ಎಂದು ಚರ್ಚಿಸುತ್ತಾಳೆ, ಸರಿ ತಪ್ಪು ಇತ್ಯಾದಿಗಳನ್ನು ವಿಮರ್ಶಿಸುತ್ತಾಳೆ. ಯಾವುದೇ ವಿಷಯವಿದ್ದರೂ ತಾನೇ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯ ಅವಳಿಗಿದೆ. ಹಾಗೆ ಮಾಡಿದರೂ ನನ್ನ ಬಳಿ ಬಂದು, ಇದು ಸರಿಹೋಯ್ತಲ್ವಾ, ಹೀಗೆ ಮಾಡಲೇ ಎಂದು ಮಾರ್ಗದರ್ಶನ ಕೋರುತ್ತಾಳೆ. ಅವಳ ವಿದ್ಯಾಭ್ಯಾಸದ ಕುರಿತು ನನಗೆ ಹೆಚ್ಚಿನ ಚಿಂತೆ ಇಲ್ಲ. ಎಲ್ಲವನ್ನೂ ನಾನೇ ಮ್ಯಾನೇಜ್ ಮಾಡ್ತೀನಿ. ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿರುವ ಪತಿಗೆ ಬಿಡುವು ದೊರಕುವುದೇ ಅಪರೂಪ. ಹೀಗಾಗಿ ನನ್ನ ಬಳಿ ಕೇಳಿದ ನಂತರ, ತಿಳಿಯದ ಇನ್ನಿತರ ವಿಷಯಗಳನ್ನು ತಂದೆ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾಳೆ. ಆದರೆ ಅವಳು ತುಂಟತನ ಮಾತ್ರ ಇನ್ನೂ ಬಿಟ್ಟಿಲ್ಲ. ಬಲು ಘಾಟಿ! ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅಷ್ಟೇ ಆಸಕ್ತಿ ಇದೆ.
ನಿಮ್ಮ ಮಗಳ ಜೊತೆ ಯಾವುದಾದರೂ ಒಂದು ಮರೆಯಲಾಗದ ಸನ್ನಿವೇಶದ ಕುರಿತು ಹಂಚಿಕೊಳ್ಳಲು ಬಯಸುವಿರಾ?
ನಾವು ತಾಯಿ ಮಗಳು ಅನ್ನುವುದಕ್ಕಿಂತ ಒಳ್ಳೆಯ ಫ್ರೆಂಡ್ಸ್ ಎನ್ನಬಹುದು, ಹಾಗೆ ಎಲ್ಲ ವಿಷಯವನ್ನೂ ಓಪನ್ ಆಗಿ ಚರ್ಚಿಸುತ್ತೇವೆ. ಅವಳೊಂದಿಗಿನ ಪ್ರತಿ ಅನುಭವ ಮಧುರವೇ..... ಹಾಗೆ ನೋಡಿದರೆ, ಒಂದನ್ನಂತೂ ಮರೆಯಲಾಗದು. ಒಮ್ಮೆ ಬಂಡೀಪುರಕ್ಕೆ ಪ್ರವಾಸಕ್ಕೆಂದು ಹೋಗಿದ್ದೆವು. ಎಲ್ಲರಿಂದ ದೂರವಾಗಿ ನಾವಿಬ್ಬರೇ ಸ್ವಲ್ಪ ಧೈರ್ಯವಹಿಸಿ ಏನೇನೋ ಚರ್ಚಿಸುತ್ತಾ ಒಂದು ಮೂಲೆಗೆ ಬಂದುಬಿಟ್ಟಿದ್ದೆವು. ದಿಢೀರ್ ಅಂತ ಅಲ್ಲಿ 4-5 ಆನೆಗಳು ಒಟ್ಟಾಗಿ ಕಾಣಿಸಿಕೊಂಡಾಗ ನನಗಂತೂ ಬಹಳ ಕಕ್ಕಾಬಿಕ್ಕಿ ಆಯ್ತು.
``ಅಮ್ಮ, ನೀನು ನರ್ವಸ್ ಆಗಬೇಡ!'' ಅಂತ ಅವಳೇ ನನಗೆ ಧೈರ್ಯ ಹೇಳಿ ಮೆಲ್ಲಗೆ ಅಲ್ಲಿಂದ ಹೊರಡಿಸಿದಳು. ತಕ್ಷಣ ನಮ್ಮ ಡ್ರೈವರ್‌ಗೆ ತಾನೇ ಫೋನ್ ಮಾಡಿ, ಗಾಡಿ ತರಿಸಿ ಸುರಕ್ಷಿತವಾಗಿ ನಮ್ಮ ರೂಮ್ ಸೇರಿದೆವು. ಆ ಸಮಯದಲ್ಲಿ ಅವಳು ತೋರಿದ ಸಮಯಸ್ಛೂರ್ತಿ ನನಗೆಂದೂ ಮರೆಯಲಾಗದು!
ನೀವು ಮಾಡುವ ಅಡುಗೆಯಲ್ಲಿ ನಿಮ್ಮ ಮಗಳು ಇಷ್ಟಪಟ್ಟು ತಿನ್ನುವ ತಿಂಡಿ ತಿನಿಸು.....ಮನೆಯಲ್ಲಿ ನನಗೆ ಎಲ್ಲಾ ಸಣ್ಣಪುಟ್ಟ ಕೆಲಸಗಳಲ್ಲೂ ನೆರವಾಗುತ್ತಾಳೆ. ತರಕಾರಿ ಹೆಚ್ಚಿ ಕೊಡುವುದು, ಎಲ್ಲರಿಗೂ ಬಡಿಸುವಾಗ ನನ್ನೊಂದಿಗೆ ಅವಳೂ ಕೈ ಜೋಡಿಸುತ್ತಾಳೆ. ಮುಖ್ಯವಾಗಿ ಹೊರಗಿನ ಹೋಟೆಲ್ ತಿಂಡಿ ತಿನಿಸು ಅವಳಿಗೆ ಅಷ್ಟೇನೂ ಇಷ್ಟವಾಗದು, ಹಾಗೇಂತ ಹೋಗೋದೇ ಇಲ್ಲ ಅಂತಲ್ಲ. ಅಮ್ಮ ನೀನೇ ಮಾಡಿಬಿಡು ಅಂತಿರ್ತಾಳೆ. ಅದರಲ್ಲೂ ನಾನು ಮಾಡುವ ಬಾಳೇಕಾಯಿ ಬಜ್ಜಿ, ಕಾರ್ನ್ ಪರೋಟ ಅವಳಿಗೆ ತುಂಬಾನೇ ಇಷ್ಟ. ಮಾಮೂಲಿ ಅನ್ನ ಸಾರು ಮಾಡುವ ಬದಲು ಆಗಾಗ ಇದನ್ನೇ ಮಾಡಿಬಿಡಮ್ಮ ಅನ್ನುತ್ತಾಳೆ. ಹೆಂಗರುಳು ತುಂಬಾ ಮಿಡಿಯುತ್ತೆ ಅನ್ನುವ ಹಾಗೆ ನನ್ನ ಮಗಳು ನನಗೆ ಈಗಾಗಲೇ ನನ್ನ ಬಲಗೈ ಆಗಿಹೋಗಿದ್ದಾಳೆ!