ನಮ್ಮ ದೇಶದ ಮಾನವ ಹಕ್ಕುಗಳ ಕಾಯಿದೆಯ 10 ನೇ ವಿಧಿಯಂತೆ ಈ ದೇಶದ ಪ್ರತಿಯೊಬ್ಬ ನಾಗರೀಕರಿಗೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಈ ಹಕ್ಕು ಸಾರ್ವಜನಿಕ ಪ್ರಾಧಿಕಾರದ ಹಸ್ತಕ್ಷೇಪವಿಲ್ಲದೆ ಮತ್ತು ಗಡಿಗಳನ್ನು ಲೆಕ್ಕಿಸದೆ ಅಭಿಪ್ರಾಯಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಮಾಹಿತಿ ಮತ್ತು ಆಲೋಚನೆಗಳನ್ನು ಸ್ವೀಕರಿಸುವ ಮತ್ತು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ ಎಂದಿರುವಾಗ, ಲೇಖನದ ಶೀರ್ಷಿಕೆಗೆ ಉತ್ತರ ಅಗತ್ಯವೇ? ಎಲ್ಲ ದೇಶಗಳಲ್ಲೂ ವಾಕ್ ಸ್ವಾತಂತ್ರ್ಯ ಬೇಕು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದೀವಲ್ಲ ಎಂಬ ಪ್ರಶ್ನೆ ಏಳುವುದು ಸಹಜವಾದರೂ, ಈ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ದುರ್ಬಳಕೆ ಆಗುತ್ತಿರುವುದನ್ನು ಗಮನಿಸಿದಾಗ ಖಂಡಿತವಾಗಿಯೂ ಇಲ್ಲಿ ಕೇಳುತ್ತಿರುವ ಅತ್ಯಂತ ಸಮಂಜಸವಾಗಿದೆ ಎಂದೆನಿಸುತ್ತಿದೆ.
ನಮ್ಮ ಸಂವಿಧಾನದಲ್ಲಿರುವ ವಾಕ್ ಸ್ವಾತ್ರಂತ್ರ್ಯ ಎಂಬುದು ಏನು? ಎಂಬುದನ್ಣೇ ಅರಿಯದೇ, ಸುಖಾಸುಮ್ಮನೆ ತಾವು ನಂಬಿರುವ ಸಿದ್ಧಾಂತ ಮತ್ತು ನಂಬಿಕೆಗಳನ್ನೇ ಇತರರ ಮೇಲೆ ಹೇರಲು ಹೊರಟಿರುವವರ ಸಂಖ್ಯೆಯೇ ಇತ್ತೀಚೆಗೆ ನಮ್ಮ ದೇಶದಲ್ಲಿ ಹೆಚ್ಚಾಗಿ ಹೋಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ವಾಕ್ ಸ್ವಾತಂತ್ರ್ಯ ಎಂದರೆ ಅವರು ಆಡುವ ಮಾತುಗಳಿಗೆ ಒಂದು ತೂಕವಿರಬೇಕು ಮತ್ತು ಅದು ನಂಬುವಂತಿರಬೇಕು. ಅವರಾಡುವ ಮಾತುಗಳು ವೈಜ್ಞಾನಿಕವಾಗಿಯೂ ಇಲ್ಲವೇ ಐತಿಹಾಸಿಕವಾಗಿ ಪೂರಕವಾಗಿರಬೇಕು. ಸುಖಾ ಸುಮ್ಮನೇ ಜಗತ್ತು ದುಂಡಗಿಲ್ಲ ಚಪ್ಪಟೆಯಾಗಿದೆ, ಲಸಿಕೆಗಳು ಮನುಷ್ಯರನ್ನು ಕೊಲ್ಲುತ್ತವೆ ಇಲ್ಲವೇ ಹಿಂದೂ ಎಂಬ ಧರ್ಮವೇ ಇಲ್ಲಾ ಎನ್ನುತ್ತಾ ಕೇವಲ ಸುಳ್ಳು ಸುಳ್ಳು ಸುದ್ದಿಗಳನ್ನೇ ದೊಡ್ಡದನಿಯಲ್ಲಿ ಹಾದಿ ಬೀದಿಯಲ್ಲಿ ಹೋಗುವ ನಾಲಯಕ್ಕುಗಳು ಹೇಳುತ್ತಾ ಅದನ್ನೇ ಸತ್ಯ ಮಾಡಲು ಮುಂದಾದಾಗ, ಇಂತಹವರಿಂದ ಅಭಿವ್ಯಕ್ತಿ ಸ್ವಾತ್ರಂತ್ರ್ಯ ಹರಣವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದ್ದು ಅದಕ್ಕೆ ಜ್ವಲಂತ ಉದಾಹರಣೆಯಾಗಿ ಈ ಕೆಲವು ಪ್ರಕರಣಗಳ ಬಗ್ಗೆ ಕೂಲಕುಂಶವಾಗಿ ಪ್ರತಿಯೊಬ್ಬರೂ ಯೋಚಿಸಲೇ ಬೇಕಾಗಿದೆ.
ಇಡೀ ವಿಶ್ವದಲ್ಲೇ ಅತ್ಯಂತ ಹಳೆಯದಾದ ಮತ್ತು ಇಂದಿಗೂ ಅತ್ಯಂತ ಹೆಚ್ಚಿನ ಜನರಿಂದ ಅಚರಿಸಲ್ಪದುತ್ತಿರುವ ಧರ್ಮವೆಂದರೆ ಅದು ಹಿಂದೂ ಧರ್ಮ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ಉಳಿದ ಎಲ್ಲಾ ಧರ್ಮಗಳಿಗೂ ಒಬ್ಬ ಧರ್ಮ ಪ್ರವರ್ತಕರಿರುವ ಕಾರಣ, ಆ ಧರ್ಮದ ಆರಂಭವು ಜಗತ್ತಿಗೆ ತಿಳಿದಿದ್ದರೆ, ಹಿಂದೂ ಧರ್ಮದ ಸ್ಥಾಪಕರು ಯಾರು? ಯಾವಾಗ ಆರಂಭವಾಯಿತು ಎಂಬುದೇ ಯಾರಿಗೂ ತಿಳಿದಿಲ್ಲವಾದ ಕಾರಣ ಮತ್ತು ತ್ರೇತಾಯುಗ, ಸತ್ಯಯುಗ, ದ್ವಾಪರಯುಗದಲ್ಲೂ ಅಸ್ತಿತ್ವದಲ್ಲಿ ಇದ್ದು ಈಗ ಕಲಿಯುಗದಲ್ಲೂ ಅಸ್ತಿತ್ವದಲ್ಲಿ ಇರುವ ಕಾರಣ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೇ ಉಲ್ಲೇಖಿಸುತ್ತಾರೆ. ಬೌದ್ಧ, ಜೈನ, ಸಿಖ್ ಮುಂತಾದ ಧರ್ಮಗಳಿಗೆ ಹಿಂದೂ ಧರ್ಮವೇ ಮೂಲವಾಗಿದೆ.

ಅನೇಕ ಇತಿಹಾಸಕಾರರೇ ತಿಳಿಸಿರುವಂತೆ ಬೌದ್ಧ ಧರ್ಮವು ಭಾರತದಲ್ಲಿ 2,500 ವರ್ಷಗಳ ಹಿಂದೆ ಮಗಧ ಸಾಮ್ರಾಜ್ಯದ (ಈಗ ಬಿಹಾರದಲ್ಲಿದೆ) ಸಿದ್ಧಾರ್ಥ ಗೌತಮ ನಂತರದ ದಿನದಲ್ಲಿ ಬುದ್ಧ ಎಂದೇ ಪ್ರಖ್ಯಾತಿ ಪಡೆದವರಿಂದ ಸ್ಥಾಪಿಸಿದ್ದು ಸದ್ಯಕ್ಕೆ ಜಗತ್ತಿನಾದ್ಯಂತ ಸುಮಾರು 470 ಮಿಲಿಯನ್ ಜನರು, ಬೌದ್ಧಧರ್ಮವನ್ನು ಅನುಸರಿಸುತ್ತಿದ್ದು ಈ ಧರ್ಮವನ್ನು ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಬುದ್ಧ ಎಂದರೆ ಎಚ್ಚರಗೊಂಡವನು ಎಂಬ ಅರ್ಥ ಬರುತ್ತದೆ.
ನಂತರದ ದಿನಗಳಲ್ಲಿ ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾದ ಅಶೋಕ ಚಕ್ರವರ್ತಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಪಶ್ಚಿಮದಲ್ಲಿ ಇಂದಿನ ಅಫ್ಘಾನಿಸ್ತಾನದಿಂದ ಪೂರ್ವದಲ್ಲಿ ಇಂದಿನ ಚೀನಾ, ಜಪಾನ್, ಜಾವಾ, ಮಲಯ ಸುಮಾತ್ರಾ ವರೆಗೂ ತನ್ನ ಮಕ್ಕಳು ಮತ್ತು ಅನುಯಾಯಿಗಳನ್ನು ಕಳುಹಿಸಿ ಬೌದ್ಧಧರ್ಮವನ್ನು ಪ್ರಚುರ ಪಡಿಸಿದ್ದರೆ, ಅಚ್ಚರಿಯ ವಿಷಯವೆಂದರೆ, ಬೌದ್ಧ ಧರ್ಮವು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಭಾಗಗಳನ್ನು ಹೊರತುಪಡಿಸಿ ಭಾರತದ ಬಹುತೇಕ ರಾಜ್ಯಗಳನ್ನು ಆವರಿಸಿತ್ತು.





