ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಸಾನಿಯಾ ಚಂದೋಕ್ ಅವರ ಜೊತೆ ವಿವಾಹವಾಗಿದ್ದಾರೆ. ಮುಂಬೈನಲ್ಲಿ ನಡೆದ ಈ ಅದ್ದೂರಿ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಾಂದೋಕ್ ಅವರ ಕೈಹಿಡಿದಿದ್ದು, ಎಂ.ಎಸ್. ಧೋನಿ, ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು, ರಾಜಕೀಯ ಮುಖಂಡರು, ಬಾಲಿವುಡ್ ತಾರೆಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ, ಮಾರ್ಚ್ 3 ರಂದು ಈ ಜೋಡಿಯ ಮೆಹಂದಿ ಸಮಾರಂಭ ನೆರವೇರಿತ್ತು. ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ಮೆಹಂದಿ ಸಮಾರಂಭ ನಡೆದಿತ್ತು.
ಸಚಿನ್ ಅವರ ಆಪ್ತರಾದ ಐಸಿಸಿ ಮುಖ್ಯಸ್ಥ ಜಯ್ ಶಾ, ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಅಜಿತ್ ಅಗರ್ಕರ್, ಟೀಂ ಇಂಡಿಯಾ ಹಾಲಿ ಪ್ರಧಾನ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಮದುವೆಗೆ ಅತಿಥಿಗಳ ಮಹಾಪೂರವೇ ಹರಿದುಬಂದಿತ್ತು.
ಮಹೇಂದ್ರ ಸಿಂಗ್ ಧೋನಿ, ಅಜಿತ್ ಅಗರ್ಕರ್, ವಿಜೇತಾ ಪೆಂಧಾರ್ಕರ್, ಕಿರಣ್ ಮೋರೆ, ಅನಿಲ್ ಕುಂಬ್ಳೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಭಾಗವಹಿಸಿದ್ದರು.
ಸಾನಿಯಾ ಚಂದೋಕ್ ಮುಂಬೈ ಮೂಲದ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರಾರು ಹಾಗೂ ನಿರ್ದೇಶಕಿಯೂ ಆಗಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಯೂ ಆಗಿರುವ ಸಾನಿಯಾ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.





