ಅನಾದಿ ಕಾಲದಿಂದಲೂ ಶಿಲ್ಪಕಲೆಯಂಥ ನೈಪುಣ್ಯ ಕೇವಲ ಗಂಡಸರ ಸ್ವತ್ತಾಗಿತ್ತು. ಇಂಥ ಕಠಿಣ ಕಲೆಯನ್ನು ಸುಲಭವಾಗಿ ಸುಲಲಿತವಾಗಿ ಪ್ರಯೋಗಕ್ಕೆ ತಂದಿರುವ, ಶಿಲ್ಪಕಲೆಯ ಕಲಾ ಪ್ರತಿಭೆ ಭಾರತಿ ಚಂದ್ರಶೇಖರ್ ಅವರ ಅಮೋಘ ಸಾಧನೆಗಳ ಬಗ್ಗೆ ತಿಳಿಯೋಣವೇ…..?
ಇವರ ಪೂರ್ಣ ಹೆಸರು ಭಾರತಿ ಚಂದ್ರಶೇಖರ ಸರಗಣಾಚಾರಿ. ಊರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಇವರ ಈಗಿನ ವಾಸಸ್ಥಾನ. ತಂದೆ ಚಂದ್ರಶೇಖರ್ ತಾಯಿ ಶಾಂತಾಬಾಯಿ ದಂಪತಿಯ ಆರನೇ ಮಗಳಾಗಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು. ಬಾದಾಮಿ ಎಂದಾಗಲೇ ಶಿಲ್ಪಕಲೆಯ ಕಲಾವಂತಿಕೆಯು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಕಲಾದೇವಿ ಆರಾಧಿಸುವ ಶಿಲ್ಪಕಲೆಯನ್ನೇ ತಮ್ಮ ವೃತ್ತಿ ಹಾಗೂ ಪ್ರವೃತ್ತಿಯಾಗಿಸಿಕೊಂಡರು ಭಾರತಿ ಚಂದ್ರಶೇಖರ್ ಸರಗಣಾಚಾರಿ.
ಕಲ್ಲಿನಲ್ಲಿ ಅರಳಿದ ಕಲೆ
`ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ….. ಕಾಣಿಸದೇ ಹೊನ್ನ ಚರಿತೆಯಲಿ ಹಂಪೆಯ ನುಡಿ….’ ಎಂಬುದು ಎಂದೆಂದಿಗೂ ಜೀವಂತ! ಶಿಲೆಯೊಳಗೆ ಸಂಗೀತ ಎನ್ನುವ ಹಾಗೆ ಭಾರತಿ ಶಿಲ್ಪಕಲೆಯನ್ನು ಸಂಗೀತದಂತೆ ತಮ್ಮಲ್ಲಿ ಮೈಗೂಡಿಸಿಕೊಂಡಿದ್ದಾರೆ.
ಚಿತ್ರಕಲೆಯಲ್ಲಿ ಎ.ಎಂ.2000 ರಲ್ಲಿ ಹಾಗೂ ಬಿ.ಎಫ್.ಎ ಕನ್ನಡ ವಿಶ್ವವಿದ್ಯಾಲಯ ಹಂಪಿ ಬನಶಂಕರಿಯಲ್ಲಿ 2001 ಶಿಲ್ಪಕಲಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅದೇ ರೀತಿ ಶಿಲ್ಪಕಲೆಯ ಹೆಚ್ಚಿನ ಅಧ್ಯಯನಕ್ಕಾಗಿ ಸವಾಲು ಮೈಸೂರು 2013ರಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.
ನಿರಂತರ ಶಿಲ್ಪಕಲೆಯ ಪ್ರದರ್ಶನ
2003ರಿಂದ ನಿರಂತರ ಶಿಲ್ಪಕಲೆಯ ಪ್ರದರ್ಶನ ಹಾಗೂ ಶಿಬಿರಗಳಲ್ಲಿ ಭಾಗವಹಿಸಿದರು. ಇವರ ಶಿಲ್ಪಕಲೆಯ ಸಾಧನೆ ಗುರುತಿಸಿ 2015ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ 2013-14ನೇ ಸಾಲಿನ ಕಿತ್ತೂರು ಚೆನ್ನಮ್ಮ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಶಿಲ್ಪಕಲೆಯ ಕೆತ್ತನೆ ಹಾಗೂ ಚಿತ್ರಕಲೆಯಲ್ಲಿ ಭಾರತಿ ಎಷ್ಟು ತೊಡಗಿಸಿಕೊಂಡಿದ್ದಾರೆ ಎಂದರೆ, ಮದುವೆಯಾಗದೆ ಇಡೀ ತಮ್ಮ ಜೀವನವನ್ನೇ ಶಿಲ್ಪಕಲೆಯ ಕೆತ್ತನೆಗಾಗಿ ಮುಡಿಪಾಗಿಟ್ಟು ಕುಮಾರಿಯಾಗಿಯೇ ಉಳಿದಿದ್ದಾರೆ.
ಶಿಲ್ಪಿ ಕೆತ್ತಿದ ವಿಗ್ರಹ
ಬಾಗಲಕೋಟೆ ಜಿಲ್ಲೆಯ ಕುಂದರಗಿಯ ಶ್ರೀ ಭುವನೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾನಗೊಂಡ ಮೂರ್ತಿ ಇವರ ಕೆತ್ತನೆಯಿಂದ ಮೂಡಿದ್ದು ಎನ್ನುವುದೇ ಒಂದು ವಿಶೇಷ.
ಮೊದಲಿನಿಂದಲೂ ಪ್ರಚಾರದಿಂದ ದೂರ ಇರುವ ಭಾರತಿ ಸದಾ ಹಸನ್ಮುಖಿಯಾಗಿರುತ್ತಾರೆ. ಸದಾಸರ್ವದಾ ನಾಡು ನುಡಿಗಾಗಿ ಹೋರಾಟ ನಡೆಸುವ ಮನೋಭಾವ ಇವರದ್ದು.
ಮಹಿಳೆಯರ ಸ್ವಾವಲಂಬನೆಯ ಶಕ್ತಿ
ಮಹಿಳೆಯರ ಸ್ವಾವಲಂಬನೆಯ ಶಕ್ತಿಯಾಗಿ, ಅಬಲೆಯರ ಧ್ವನಿಯಾಗಿ, ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದ ಹೆಣ್ಣುಮಕ್ಕಳಿಗೆ ಕರಕುಶಲತೆಯ ಬಗ್ಗೆ ಉಚಿತ ತರಬೇತಿ ನೀಡುತ್ತಾ, ಅವರಿಗೆ ಹೊಸ ಭರವಸೆ ನೀಡುವ ಮೂಲಕ ಅವರ ಬದುಕಿಗೆ ಆಶಾಕಿರಣವಾಗಿದ್ದಾರೆ.
ಸದಾಸರ್ವದಾ ಚಟುವಟಿಕೆಗಳು
ಯಾವಾಗಲೂ ಚಟುವಟಿಕೆಯಿಂದ ಇರುವ ಇವರು ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದಾರೆ. ಇದಲ್ಲದೆ ನಾಣ್ಯಗಳ ಸಂಗ್ರಹ ಹಾಗೂ ತಮಟೆಯನ್ನು ಬಾರಿಸುವ ಕಲೆಯಲ್ಲೂ ಅಪೂರ್ವ ನೈಪುಣ್ಯತೆಯನ್ನು ಹೊಂದಿದ್ದಾರೆ. ಇತರ ಸಾಮಾನ್ಯ ಮಹಿಳೆಯರಂತೆ ಇರದೆ ಶಿಲ್ಪಕಲೆಯ ಮೂಲಕ ವಿಭಿನ್ನ ಸಾಧನೆ ಮಾಡಿರುವ ಈ ಸಾಧಕಿಗೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ಹೇಳುವುದರ ಮೂಲಕ ಅವರಿಗೆ ಶುಭ ಕೋರೋಣ.
– ಮಹಾಂತೇಶ ಬಾಗೇವಾಡಿ





