ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿಯ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಗುರುವಾರ ನಡೆದಿದೆ.
ರಾಮು (44), ರಾಜಪಾಲ್ ಸಿಂಗ್ (35), ಸತ್ಯನಾರಾಯಣಸಿಂಗ್ (31), ರಾಮೃತಾರ್ ಸಿಂಗ್ (29), ಧರ್ಮೇಶ್ ಸಿಂಗ್ (22), ರಾಜೇಶ್ ಪ್ರಸಾದ್ ಚೌಧರಿ (24), ಭುವನೇಶ್ವರ್ ಸಿಂಗ್ ಗೊಂಡ್ (33) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಈ ಪೈಕಿ ಆರು ಮಂದಿ ಮಧ್ಯಪ್ರದೇಶ ಮೂಲದವರಾಗಿದ್ದರೆ, ರಾಮು ಯಾದಗಿರಿ ಜಿಲ್ಲೆಯವರಾಗಿದ್ದಾರೆ. ದುರಂತದಲ್ಲಿ ನೆಹಾಲ್ ಸಿಂಗ್ (21), ಆನಂದ್ (22), ಗುಲಾಜ್ ಸಿಂಗ್ (20), ರಾಜ್ ಪಾಲ್ ಸಿಂಗ್ (30), ಚೋಟಾಲಾಲ್ (19) ಗಂಭೀರವಾಗಿ ಗಾಯಗೊಂಡಿದ್ದು, ಅವರೆಲ್ಲರನ್ನೂ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಬೆನ್ನಲ್ಲೇ ಕ್ವಾರಿ ಮಾಲೀಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಾಪಟ್ಟಣ ಬಳಿಯ ಹುಲವೇನಹಳ್ಳಿ ಗ್ರಾಮದಲ್ಲಿ ಉದಯ ಶಂಕರ್ ಅವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ (ಕಾವೇರಿ ಜಲ್ಲಿ ಕ್ರಷರ್) ಕಾರ್ಮಿಕರು ಕ್ವಾರಿಯಲ್ಲಿ ಕುಳಿ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ, ಮೇಲ್ಭಾಗದಲ್ಲಿ ಆನಂದಸ್ವಾಮಿ ಎಂಬುವರಿಗೆ ಸೇರಿದ ಬಸವೇಶ್ವರ ಕಲ್ಲು ಕ್ವಾರಿಯಲ್ಲಿ ಚಾಲಕ ತಿರುಪತಿ ಎಂಬಾತ ಹಿಟಾಚಿಯಿಂದ ಕಲ್ಲು ಬಂಡೆ ಜಾರಿಸುತ್ತಿದ್ದ.
ಬೆಳಗ್ಗೆ ಸುಮಾರು 7.30ರ ವೇಳೆಗೆ ಬಸವೇಶ್ವರ ಕಲ್ಲು ಕ್ವಾರಿಯಲ್ಲಿ ಕ್ರಷರ್‌ನ ಬಂಡೆಯನ್ನು ಜರುಗಿಸುವಾಗ ಏಕಾಏಕಿ ಕಲ್ಲುಬಂಡೆಗಳು ಕೆಳಗೆ ಉರುಳಿ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿವೆ. ಬಂಡೆಗಳು ಉರುಳಿದ ರಭಸಕ್ಕೆ 7 ಕಾರ್ಮಿಕರ ದೇಹಗಳು ಅಪ್ಪಚ್ಚಿಯಾಗಿ, ಅವರೆಲ್ಲರೂ ಅಲ್ಲಿಯೇ ಮೃತಪಟ್ಟಿದ್ದಾರೆ. ಇತರ ಐವರು ಕಾರ್ಮಿಕರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಯಿತು. ದುರಂತದಲ್ಲಿ ನಾಲ್ಕು ಟ್ರಾಕ್ಟರ್ ಕಂಪ್ರೆಷರ್‌ಗಳು ಜಖಂಗೊಂಡಿವೆ.
ನಿಯಮಗಳ ಪ್ರಕಾರ, ಎರಡು ಕ್ವಾರಿಗಳ ನಡುವೆ ಕನಿಷ್ಠ 7.5 ಅಡಿ ಜಾಗವನ್ನು ‘ಬಫರ್ ಜೋನ್’ ಎಂದು ಬಿಡಬೇಕಾಗುತ್ತದೆ. ಆದರೆ, ಮಾಲೀಕರು ಈ 7.5 ಅಡಿಯ ಬಫರ್ ಜೋನ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಲ್ಲು ಬಂಡೆಗಳ ಕೆಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದರು. ತಾವರೆಕೆರೆ ಠಾಣೆ ಪೊಲೀಸರು ಕಾವೇರಿ ಜಲ್ಲಿ ಕ್ರಷರ್ ಮಾಲೀಕ ಉದಯ ಶಂಕರ್, ಬಸವೇಶ್ವರ ಕ್ರಷರ್ ಮಾಲೀಕ ಆನಂದ ಸ್ವಾಮಿ, ಮೇಸ್ತ್ರಿ ಪಾಂಡು, ಇಟಾಚಿ ಚಾಲಕ ತಿರುಪತಿ ಸೇರಿ ಐವರನ್ನು ಬಂಧಿಸಿದ್ದಾರೆ.
ಮೃತರ ಪೈಕಿ ರಾಮು ಎಂಬುವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಿಹಾಳ್ ತಾಂಡಾದವರು ಎನ್ನಲಾಗಿದೆ. ಯಾದಗಿರಿಯಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ರಾಮು ತಮ್ಮ ಇಡೀ ಕುಟುಂಬ ಸಮೇತ ಬೆಂಗಳೂರಿಗೆ ವಲಸೆ ಬಂದಿದ್ದರು.





