ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ಮಹಿಳಾ ಸಾಹಿತಿ ಬಾನು ಮುಷ್ತಾಕ್ ಅವರನ್ನು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಬಳ್ಳಾರಿಯ ಖಾಸಗಿ ಹೋಟೆಲ್‌ನಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು, ಈವರಗೆ ನಡೆದ 87 ಸಾಹಿತ್ಯ ಸಮ್ಮೇಳನಗಳ ಪೈಕಿ ನಾಲ್ಕು ಸಮ್ಮೇಳನಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದು, ಬಾನು ಮುಷ್ತಾಕ್ ಐದನೆಯವರಾಗಿದ್ದಾರೆ.ಸಭೆ ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಷಿ, ಇದೇ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ವಾಧ್ಯಕ್ಷ ಸ್ಥಾನಕ್ಕೆ ಹಿರಿಯ ಲೇಖಕಿಯರಾದ ಡಾ.ವೀಣಾ ಶಾಂತೇಶ್ವರ ಹಾಗೂ ಮಾಲತಿ ಪಟ್ಟಣಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಲಾಯಿತು. ಬಾನು ಅವರ ಸಾಹಿತ್ಯ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದೀಪಾ ಭಾಸ್ತಿ ಅವರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಕನ್ನಡದ ಪ್ರಸಿದ್ಧ ಮಹಿಳಾ ಸಾಹಿತಿ ಹಾಸನ ಜಿಲ್ಲೆಯ ಬಾನು ಮುಷ್ತಾಕ್ ಅವರು ಬರೆದ ಸಣ್ಣ ಕಥಾಸಂಕಲನ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರೇ ಮಡಿಕೇರಿ ಮೂಲದ ಅನುವಾದಕಿ ದೀಪಾ ಭಾಸ್ತಿ. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಭಾಸ್ತಿ ಕೂಡ ಬಾನು ಮುಷ್ತಾಕ್ ಅವರ ಜೊತೆಯಲ್ಲಿದ್ದರು. 2025ರ ಮೇ 21ರಂದು ನಡೆದ ಸಮಾರಂಭದಲ್ಲಿ ಈ ಇಬ್ಬರು ಬೂಕರ್ ಪ್ರಶಸ್ತಿ ಸ್ವೀಕರಿಸಿದ್ದರು.