ಜವಳಿ ಗಿರಣಿಯಿಂದ ಕಾರ್ಮಿಕರ ಬದುಕಿಗೆ, ಅಲ್ಲಿಂದ ಆಧುನಿಕ ರಿಯಲ್ ಎಸ್ಟೇಟ್‌ವರೆಗೆ ಬದಲಾಗಿರುವ ಬೆಂಗಳೂರಿನ ವಿಶಿಷ್ಟ ಪ್ರದೇಶ
ಸಾಮಾನ್ಯವಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳ ಹೆಸರುಗಳ ಹಿಂದೆ ಐತಿಹಾಸಿಕ, ಭೌಗೋಳಿಕ, ಸಾಮಾಜಿಕ ಅಥವಾ ಪೌರಾಣಿಕ ಹಿನ್ನೆಲೆ ಇರುತ್ತದೆ. ಆದರೆ ನಗರದ ಹೃದಯಭಾಗದಲ್ಲಿರುವ ಬಿನ್ನಿಪೇಟೆಯ ಕಥೆ ಸ್ವಲ್ಪ ವಿಭಿನ್ನ. ಈ ಹೆಸರಿನ ಹಿಂದೆ ಸ್ಥಳೀಯ ರಾಜರು, ದೇವಾಲಯ ಅಥವಾ ಪುರಾಣದ ಕಥೆಯಷ್ಟೇ ಅಲ್ಲ—ಬ್ರಿಟಿಷ್ ಕಾಲದ ಜವಳಿ ಉದ್ಯಮ ಮತ್ತು ‘Binny & Co.’ ಎಂಬ ವ್ಯಾಪಾರ ಸಂಸ್ಥೆಯ ಇತಿಹಾಸವೂ ಅಡಗಿದೆ. ಒಂದು ಕಾಲದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಬಿನ್ನಿ ಮಿಲ್, ಅದರ ಸುತ್ತಲಿನ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಬದುಕನ್ನೇ ಬದಲಿಸಿತು. ಕೊನೆಗೆ ಆ ಗಿರಣಿ ಮಾಯವಾದರೂ, ಅದರ ಹೆಸರೇ ಒಂದು ಸಂಪೂರ್ಣ ಪ್ರದೇಶದ ಗುರುತಾಗಿ ಉಳಿಯಿತು. ಅದರ ಕುರಿತಾದ ರೋಚಕ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೆಜೆಸ್ಟಿಕ್ ಪಕ್ಕದಲ್ಲಿದ್ದ ಮಿಲ್… ಮಿಲ್ ಸುತ್ತ ಬೆಳೆದ ‘ಬಿನ್ನಿಪೇಟೆ’
ಇಂದು ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಸಂಪರ್ಕ ಹೊಂದಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಚಿಕ್ಕಪೇಟೆ, ಚಾಮರಾಜಪೇಟೆ, ಓಕಳಿಪುರಂ ಮತ್ತು ಮಾಗಡಿ ರಸ್ತೆಯಿಂದ ಸುತ್ತುವರಿದಿರುವ ಬಿನ್ನಿಪೇಟೆ ಅತ್ಯಂತ ಚಟುವಟಿಕೆಯ ಪ್ರದೇಶ. ಆದರೆ ಒಂದು ಕಾಲದಲ್ಲಿ ಇದು ಮುಖ್ಯವಾಗಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರ ವಸತಿ ಹಾಗೂ ಉದ್ಯೋಗದ ಪ್ರದೇಶವಾಗಿತ್ತು.

1870ರ ದಶಕದ ಕೊನೆಯ ಭಾಗದಲ್ಲೇ ಬೆಂಗಳೂರಿನಲ್ಲಿ ಜವಳಿ ಕೈಗಾರಿಕೆಯ ಪ್ರಯತ್ನಗಳು ಆರಂಭವಾಗಿದ್ದವು. 1881ರ Rendition ನಂತರ ಮೈಸೂರು ಸಂಸ್ಥಾನಕ್ಕೆ ಆಡಳಿತ ಮರಳಿದ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಿತು. ಇದೇ ಹಿನ್ನೆಲೆಯಲ್ಲೇ ಬೆಂಗಳೂರಿನ ಜವಳಿ ಉದ್ಯಮಕ್ಕೆ ಹೊಸ ವೇಗ ದೊರೆಯಿತು. 1884ರಲ್ಲಿ Bangalore Woollen, Cotton and Silk Mills ಸ್ಥಾಪನೆಯಾಯಿತು; ನಂತರ ಮದ್ರಾಸ್‌ನ Binny ಸಂಸ್ಥೆಯು ಇದರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಸುಮಾರು 16 ಎಕರೆ ಪ್ರದೇಶದಲ್ಲಿ, ಮಾಗಡಿ ರಸ್ತೆಯ ಆರಂಭದ ಭಾಗದಲ್ಲಿ, ರೈಲ್ವೆ ಸಂಪರ್ಕಕ್ಕೆ ಸಮೀಪವಾಗಿ ಈ ಮಿಲ್ ಬೆಳೆದಿತ್ತು.
ಇಲ್ಲೊಂದು ಕುತೂಹಲಕಾರಿ ಸಂಗತಿಯಿದೆ. ಆ ಕಾಲದಲ್ಲಿ ಸುತ್ತಮುತ್ತಲಿನ ಜನರಲ್ಲಿ ಕೃಷಿ, ಹೈನುಗಾರಿಕೆ, ಸಣ್ಣ ವ್ಯಾಪಾರ ಸೇರಿದಂತೆ ವಿವಿಧ ಉದ್ಯೋಗಗಳಿದ್ದವು. ಆದರೆ ಮಿಲ್ ಬೆಳೆದಂತೆ ಉದ್ಯೋಗಕ್ಕಾಗಿ ಜನರು ಗಿರಣಿಯತ್ತ ಆಕರ್ಷಿತರಾದರು. ಕಾರ್ಮಿಕರು ಬಂದರು, ಅವರಿಗಾಗಿ ಮನೆಗಳು ನಿರ್ಮಾಣವಾದವು, ಸಣ್ಣ ಅಂಗಡಿಗಳು ಹುಟ್ಟಿಕೊಂಡವು, ಸಾರಿಗೆ ಹೆಚ್ಚಾಯಿತು. ಹೀಗೆ ನಿಧಾನವಾಗಿ ಮಿಲ್ ಪ್ರದೇಶವೇ ‘ಬಿನ್ನಿ ಪೇಟೆ’ ಎಂಬ ಹೆಸರಿನಿಂದ ಗುರುತಿಸಲ್ಪಡತೊಡಗಿತು.
‘ಬಿನ್ನಿ’ ಎನ್ನುವ ಹೆಸರು ಎಲ್ಲಿಂದ ಬಂತು?
ಇದರ ಕಥೆ ಬೆಂಗಳೂರಿನಿಂದ ಆರಂಭವಾಗುವುದಿಲ್ಲ. John Binny ದಕ್ಷಿಣ ಭಾರತಕ್ಕೆ ಬಂದು 18ನೇ ಶತಮಾನದ ಅಂತ್ಯದ ವೇಳೆಗೆ ವ್ಯಾಪಾರ ಆರಂಭಿಸಿದವರು. 1797ರಲ್ಲಿ Binny & Co. ಅನ್ನು ಮದ್ರಾಸಿನಲ್ಲಿ ಸಾಮಾನ್ಯ, Clearing ಮತ್ತು Forwarding Agency ಆಗಿ ಆರಂಭಿಸಲಾಯಿತು. ನಂತರ ಸಂಸ್ಥೆ ಬ್ಯಾಂಕಿಂಗ್, ವಿಮೆ, ಹಡಗು ಏಜೆನ್ಸಿ ಮತ್ತು ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿತು.





