ಸರಿ ಸುಮಾರು 1757–1947ರ ವರೆಗೆ ಸುಮಾರು 200ವರ್ಷಗಳ ಕಾಲ ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟೀಷ್ ಸಾಮ್ರಾಜ್ಯ ನಮ್ಮ ದೇಶವನ್ನು ನೇರವಾಗಿ ಆಳಿದ ಸಂಧರ್ಭದಲ್ಲಿ ನಮ್ಮ ದೇಶದ ಬಹುತೇಕ ಸಂಸ್ಕಾರ ಸಂಸ್ಕೃತಿಗಳನ್ನು ಹಾಳು ಮಾಡಿದ್ದಲ್ಲದೇ ನಮ್ಮಲ್ಲೇ ಸಾವಿರಾರು ದೇಸೀ ಆಟಗಳು ಇದ್ದರೂ, Gentlemen’s Game ಎನ್ನುವ ಹೆಸರಿನಲ್ಲಿ ಕ್ರಿಕೆಟ್ ಆಟವನ್ನು ಕಲಿಸಿಕೊಟ್ಟು ಹೋದರು.

ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ 1983ರವರೆಗೂ ಅಷ್ಟಕಷ್ಟೇ ಇದ್ದ ಭಾರತ, ಕಪಿಲ್ ದೇವ್ ನಾಯಕತ್ವದಲ್ಲಿ ದೈತ್ಯ ಕ್ಲೈವ್ ಲಾಯ್ಡ್ ನಾಯಕತ್ವದ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು 43 ಓಟಗಳ ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ, ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮವಾಗಿ ಮಾರ್ಪಟ್ಟು ಇಂದು ICC ಯನ್ನೇ ತನ್ನ ಬೆರಳಿನ ತುದಿಯಲ್ಲಿ ಆಡಿಸುವಷ್ಟರ ಮಟ್ಟಿಗೆ ಭಾರತೀಯರು ಬೆಳೆದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

2026ರ ಮಾರ್ಚ್ 8ರಂದು ಅಹಮದಾಬಾದಿನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಲಿಷ್ಟ ನ್ಯೂಜಿಲೆಂಡ್ ತಂಡವನ್ನು 96 ಓಟಗಳ ಅಂತರದಿಂದ ಸೋಲಿಸುವ ಮೂಲಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ಪುರುಷರ ಭಾರತೀಯ ಕ್ರಿಕೆಟ್ ತಂಡ ಹಲವಾರು ಧಾಖಲೆಗಳನ್ನು ನಿರ್ಮಿಸಿದ್ದು ಸುಲಭದ ಕಾರ್ಯವಾಗಿರದೇ, 2026ರ T20 ವಿಶ್ವಕಪ್ಪಿನಲ್ಲಿ ಭಾರತದ ಯಶೋಗಾಥೆಯನ್ನು ನೋಡೋಣ ಬನ್ನಿ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ)ಯಲ್ಲಿ ಸುಮಾರು 110 ಸದಸ್ಯ ರಾಷ್ಟ್ರಗಳಿದ್ದರೂ, ಅದರಲ್ಲಿ 12 ಪೂರ್ಣ ಸದಸ್ಯರು ಟೆಸ್ಟ್ ಆಡುವ ರಾಷ್ಟ್ರಗಳಿದ್ದು, ಉಳಿದ 98 ರಾಷ್ಟ್ರಗಳು ಸಹಾಯಕ ಸದಸ್ಯರಾಗಿದ್ದರೂ, ಪ್ರಸ್ತುತವಾಗಿ ಕೇವಲ 12-15 ರಾಷ್ಟ್ರಗಳು ಮಾತ್ರ ಉನ್ನತ ಮಟ್ಟದ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಕ್ರಿಕೆಟ್ ಆಟದಲ್ಲಿ ಸಕ್ರಿಯವಾಗಿದೆ, ಹಾಗಾಗಿ ಪ್ರತೀವರ್ಷವೂ 10-12 ತಂಡಗಳು ಮಾತ್ರಾ ಆಡುತ್ತಿದ್ದ ವಿಶ್ವಕಪ್ ಪಂದ್ಯಾವಳಿಯನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸಲು ಮತ್ತು ಜಗತ್ತಿನಾದ್ಯಂತ ಕ್ರಿಕೆಟ್ ಆಟಕ್ಕೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಈ ಬಾರಿ ಸುಮಾರು 20 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಗ್ರೂಪ್ A ಲೀಗ್ ಹಂತದ ಮೊದಲ ಪಂದ್ಯದಲ್ಲಿ ಬಹುತೇಕ ಭಾರತೀಯ ಮೂಲದವರೇ ಹೆಚ್ಚಾಗಿರುವ ಅಮೇರಿಕಾ ವಿರುದ್ಧದ ಪಂದ್ಯ ಭಾರತ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರೆ, ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಮೊತ್ತ 77 ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ನಾಯಕ ಸೂರ್ಯಕುಮಾರ್ ಎಚ್ಚರಿಕೆಯಿಂದ ಗಳಿದ 84 ಓಟಗಳ ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್ ಕಲೆ ಹಾಕುವಷ್ಟರಲ್ಲಿ ಸಾಕಷ್ಟು ತಿಣುಕಾಡಿತ್ತು. ನಂತರ ಅಮೇರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ 29 ಓಟಗಳಿಂದ ಸೋತಾರೂ ಭಾರತ ತಂಡಕ್ಕೆ ಆಪರಿಯಾಗಿ ಕಾಟ ಕೊಟ್ಟಿದ್ದು ಶ್ಲಾಘನೀಯವಾಗಿತ್ತು. ನಮೀಬಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಇಶಾನ್ ಕಿಶಾನ್ ಮತ್ತು ಹಾರ್ಧಿಕ್ ಪಾಂಡ್ಯವರ ಭರ್ಜರಿ ಅರ್ಧ ಶತಕದ ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ 206 ಓಟಗಳಿಗೆ ಪ್ರತ್ಯುತ್ತರವಾಗಿ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನವಾಗಿ ಭಾರತಕ್ಕೆ 92 ಓಟಗಳ ಭರ್ಜರಿ ಗೆಲುವು ತಂದು ಕೊಟ್ಟಿತು.





