ಭರತನಾಟ್ಯದಲ್ಲಿ ಖ್ಯಾತಿ ಗಳಿಸುವುದೇ ಕಷ್ಟ, ಹಾಗಿರುವಾಗ ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದು, ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.....!
ಭಾರತದ ಹೆಸರಿನೊಂದಿಗೇ ಬೆರೆತಿರುವ ಹೆಸರು ಭರತಮುನಿಯದು. ಭರತನ `ನಾಟ್ಯಶಾಸ್ತ್ರ' ಎಲ್ಲಾ ಸಂಗೀತ, ನೃತ್ಯಕಲೆಗಳಿಗೆ ಒಂದು ಪ್ರಮುಖ ಆಧಾರ ಗ್ರಂಥವಾಗಿದೆ. ಭರತನಾಟ್ಯ ಅವುಗಳಲ್ಲೆ ಅತ್ಯಂತ ಹೆಚ್ಚಿನ ಪ್ರಮುಖ ಸ್ಥಾನ ಪಡೆದ ನೃತ್ಯ ಪ್ರಕಾರ. ಅಂತಹ ಭರತನಾಟ್ಯದಲ್ಲಿ ಹೊಸ ವಿಶ್ವ ದಾಖಲೆ ಬರೆದಿರುವವರು ಉಡುಪಿಯ ವಿದುಷಿ ದೀಕ್ಷಾ.
ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದಿರುವ ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.

ಆಗಸ್ಟ್ 21 ರಂದು ಪ್ರತಿ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮಕ್ಕೆ ಅನುಗುಣವಾಗಿ ಭರತನಾಟ್ಯ ಪ್ರದರ್ಶನವನ್ನು ವಿದುಷಿ ದೀಕ್ಷಾ ವಿ. ಆರಂಭಿಸಿದ್ದು, ಆಗಸ್ಟ್ 30ರ ಮಧ್ಯಾಹ್ನ 3.30ಕ್ಕೆ ನೃತ್ಯ ಪ್ರದರ್ಶನ ಅಂತ್ಯಗೊಂಡಿತ್ತು. ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಣೋಯ್, ವಿದುಷಿ ದೀಕ್ಷಾ ವಿ. ಅವರ ದಾಖಲೆಯ ಬಗ್ಗೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ `ಗೃಹಶೋಭಾ' ಅವರನ್ನು ಮಾತಿಗೆಳೆದಿತ್ತು. ಅವರೊಂದಿಗೆ ನಡೆಸಿದ ಆ ಮಾತುಕತೆಯ ಸಾರಾಂಶ ಇಲ್ಲಿದೆ.
ನಾನು ಹುಟ್ಟಿದ್ದು ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದಲ್ಲಿ. ತಂದೆ ವಿಠಲ, ತಾಯಿ ಶುಭಾ, ಈಗೊಂದು ವರ್ಷದ ಹಿಂದೆ ಮದುವೆಯಾಗಿದ್ದು, ನನ್ನ ಪತಿ ಸಿವಿಲ್ ಕಾಂಟ್ರ್ಯಾಕ್ಟರ್ ರಾಹುಲ್. ಹೀಗೆ ದೀಕ್ಷಾ ತಮ್ಮ ಹಾಗೂ ಕುಟುಂಬದ ಕುರಿತು ಚಿಕ್ಕದಾಗಿ ಪರಿಚಯಿಸಿಕೊಂಡರು.

ದೀಕ್ಷಾ ಲಿಟಲ್ ರಾಕ್ ಇಂಡಿಯನ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದಾಭ್ಯಾಸ ನಡೆಸಿದ್ದಾರೆ. ಹೆಬ್ರಿಯ ಅಮೃತ ಭಾರತೀ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ನಡೆಸಿರುವ ಅವರು, ಡಾ. ಜಿ.ಶಂಕರ್ ಮಹಿಳಾ ಕಾಲೇಜು, ಅಜ್ಜರಕಾಡಿನಲ್ಲಿ ಪದವಿ ಪೂರೈಸಿದರು. ಪ್ರಸ್ತುತ ಡಾ. ಟಿ.ಎಂ.ಎ. ಪೈ ಎಜುಕೇಶನ್ ಕಾಲೇಜು, ಕುಂಜಿಬೆಟ್ಟುನಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.
ನಾನು ಚಿಕ್ಕವಳಿದ್ದಾಗ ಭರತನಾಟ್ಯ ಹಾಗೂ ನೃತ್ಯದಲ್ಲಿ ನನಗೆ ಯಾವ ಆಸಕ್ತಿ ಇರಲಿಲ್ಲ. ಆದರೆ ಅಮ್ಮನಿಗೆ ನಾನು ನೃತ್ಯ ಕಲಿಯಬೇಕೆನ್ನುವ ಆಸೆ ಇತ್ತು. ಇದಕ್ಕಾಗಿ ಅವರು ನನಗಿನ್ನೂ ಮೂರು ವರ್ಷವಾಗಿದ್ದಾಗಲೇ ನನ್ನನ್ನು ಡ್ಯಾನ್ಸ್ ತರಗತಿಗೆ ಸೇರಿಸಲು ಮುಂದಾದರು. ಆದರೆ ಅಲ್ಲಿನ ಶಿಕ್ಷಕರು ನಾನಿನ್ನೂ ಚಿಕ್ಕವಳು, ಹಾಗಾಗಿ ಇನ್ನೂ ಸ್ವಲ್ಪ ಸಮಯ ಬಿಟ್ಟು ಬರಲು ಹೇಳಿದ್ದರು. ಆ ನಂತರ ನನಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಒಂದನೇ ತರಗತಿಯಲ್ಲಿ ಕಲಿಯುವಾಗ, ಅಮ್ಮ ಮತ್ತೆ ನನ್ನನ್ನು ಡ್ಯಾನ್ಸ್ ತರಬೇತಿಗಾಗಿ ಸೇರಿಸಿದರು, ಎಂದು ದೀಕ್ಷಾ ತಮ್ಮ ನೃತ್ಯಾಭ್ಯಾಸದ ಮೊದಲ ದಿನಗಳನ್ನು ಬಾಲ್ಯದ ದಿನವನ್ನು ಮೆಲುಕು ಹಾಕಿದರು.





