ದೀಯಾ ಔರ್‌ ಬಾತೀ ಹಮ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಟಿ ದೀಪಿಕಾ ಸಿಂಗ್‌ ಇಂದು ಸಂಧ್ಯಾಳ ರೂಪದಲ್ಲಿ ಪ್ರತಿ ಮನೆಯಲ್ಲೂ ಜನಪ್ರಿಯರಾಗಿದ್ದಾರೆ. ಚಿಕ್ಕಂದಿನಿಂದಲೂ ಚೂಟಿ ಸ್ವಭಾವದ ದೀಪಿಕಾ ತಮ್ಮ ಕುಟುಂಬದ ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು. ಆಗಿನಿಂದಲೇ ಅವರು ಏನಾದರೂ ಕೊಂಚ ವಿಭಿನ್ನವಾಗಿ ಮಾಡಲು ನಿಶ್ಚಯಿಸಿದರು. ಮನೆಯ ಆರ್ಥಿಕ ಸಹಾಯಕ್ಕಾಗಿ ಅವರು ಟ್ಯೂಶನ್‌ ಕೂಡ ಮಾಡಿದರು. ದೀಪಿಕಾ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರಬುದ್ಧರಾಗಿದ್ದರು. ಅವರು ಯಾವುದೇ ನಿರ್ಣಯನ್ನು ಸ್ವತಃ ತಾವೇ ತೆಗೆದುಕೊಳ್ಳುತ್ತಾರೆ.

ಅವರು ಇಲ್ಲಿಯವರೆಗೆ ತಲುಪುವಲ್ಲಿ ಅವರ ತಾಯಿ ತಂದೆಯರ ಸಹಕಾರ ಅತ್ಯಂತ ದೊಡ್ಡದಿದೆ. ಅವರನ್ನು ಒಬ್ಬ ಹುಡುಗನಂತೆ ಬೆಳೆಸಲಾಯಿತು. ಅವರು ಎಂ.ಬಿ.ಎ ಮಾಡುವಾಗ ಥಿಯೇಟರ್‌ನಲ್ಲೂ ಕೆಲಸ ಮಾಡಿದರು. ಅವರ ನಟನೆಯನ್ನು ಎಲ್ಲರೂ ಹೊಗಳಿದಾಗ ಮುಂದೆ ನಟನೆಯನ್ನೇ ಮುಂದುವರಿಸಬೇಕು ಎಂದುಕೊಂಡರು.

ದೀಪಿಕಾ ಒಬ್ಬ ಗೆಳತಿಯೊಡನೆ ಆಡಿಷನ್‌ ಕೊಡಲು ದೆಹಲಿಯಂದ ಮುಂಬೈಗೆ ಹೋದರು. 12 ವರ್ಷಗಳವರೆಗೆ ಆಡಿಷನ್‌ ಕೊಟ್ಟ ನಂತರ `ದೀಯಾ ಔರ್‌ ಬಾತೀ ಹಮ್’ನಲ್ಲಿ ಅವಕಾಶ ಸಿಕ್ಕಿತು.

ಮುಂಬೈನಲ್ಲಿ ವಾಸಿಸುವುದು ದೀಪಿಕಾಗೆ ಸುಲಭವಾಗಿರಲಿಲ್ಲ. ಅವರು ದೆಹಲಿಗೆ ಹಿಂತಿರುಗಲು ಯೋಚಿಸುತ್ತಿದ್ದರು. ಅಷ್ಟರಲ್ಲಿ ಈ ಧಾರಾವಾಹಿ ಸಿಕ್ಕಿತು.

“ಮುಂಬೈನಲ್ಲಿ ಹಣವಿಲ್ಲದೆ ಇರುವುದು ಬಹಳ ಕಷ್ಟವಾಗಿತ್ತು. ನಾನು 2 ದಿನಗಳಿಗಾಗಿ ಅಲ್ಲಿಗೆ ಬಂದಿದ್ದೆ. ಆದರೆ ನಿಧಾನವಾಗಿ ವಾರಗಳು ಹಾಗೂ ಹಲವು ತಿಂಗಳುಗಳೇ ಕಳೆದುಹೋದವು. ಕೆಲಸ ಸಿಕ್ಕ ನಂತರ ಪಯಣ ಸುಲಭವಾಗಿರಲಿಲ್ಲ. ನನ್ನ ಸಹ ಕಲಾವಿದರೆಲ್ಲರೂ ಆ್ಯಕ್ಟಿಂಗ್‌ನಲ್ಲಿ ಪರಿಣಿತರಾಗಿದ್ದರು. ನಾನು ಹೊಸಬಳಾಗಿದ್ದೆ. ನಟಿಸಲು ಬರುತ್ತಿರಲಿಲ್ಲ. ದಿನದ ಕೆಲಸದ ನಂತರ ರಾತ್ರಿ ಸ್ಕ್ರಿಪ್ಟ್ ಓದುತ್ತಿದ್ದೆ. ರಾತ್ರಿ ಕೇವಲ 2 ಗಂಟೆ ನಿದ್ರಿಸುತ್ತಿದ್ದೆ. ಸೆಟ್‌ ಆಗಲು ಸಮಯ ಹಿಡಿಯಿತು. ಆದರೂ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. 3-4 ರ್ಷಗಳ ನನ್ನ ಪರಿಶ್ರಮ ಫಲ ಕೊಟ್ಟಿತು. ಇಂದು ಮುಂಬೈನಲ್ಲಿ ನನ್ನದೇ ಆದ ಮನೆಯೂ ಇದೆ.” ಶೂಟಿಂಗ್‌ನಿಂದಾಗಿ ದೀಪಿಕಾ ತಮ್ಮ ಕುಟುಂಬಕ್ಕೆ ಕಡಿಮೆ ಸಮಯ ಕೊಡುತ್ತಾರೆ. ಆದರೆ ಯಾವಾಗಲೂ ಯಾರಾದರೊಬ್ಬರು ಅವರ ಜೊತೆಗಿರುತ್ತಾರೆ. ಫೋನ್‌ ಮೂಲಕ ಮನೆಯವರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. 4 ಜನ ತಮ್ಮ, ತಂಗಿಯರ ಕುಟುಂಬದಲ್ಲಿ ಇವರೇ ದೊಡ್ಡವರು. ಹೀಗಾಗಿ ಇಡೀ ಕುಟುಂಬದ ಹೊಣೆಗಾರಿಕೆಯೂ ಅವರಿಗಿದೆ.

“ನಾನು ತಾತ ಅಜ್ಜಿ, ಅಪ್ಪ ಅಮ್ಮ, ತಮ್ಮ ತಂಗಿಯರಿಗೆ ಏನಾದರೊಂದು ಗಿಫ್ಟ್ಗಳನ್ನು ಕೊಡುತ್ತಿರುತ್ತೇನೆ. ಅದರಿಂದ ಅವರಿಗೂ ಖುಷಿಯಾಗುತ್ತದೆ,” ಎಂದು ದೀಪಿಕಾ ನಗುತ್ತಾ ಹೇಳುತ್ತಾರೆ.

ದೀಪಿಕಾ ಈಗ ಮದುವೆಯಾಗುತ್ತಿದ್ದಾರೆ. ಅವರು ತಮ್ಮ ಧಾರಾವಾಹಿಯ ನಿರ್ದೇಶಕ ರೋಹಿತ್‌ ರಾಜ್‌ ಗೋಯಲ್ ರೊಂದಿಗೆ 1 ವರ್ಷದಿಂದ ರಿಲೇಶನ್‌ಶಿಪ್‌ ಹೊಂದಿದ್ದಾರೆ. “ನನ್ನ ತಂಗಿಯ ಮದುವೆಯಲ್ಲಿ ಅವನನ್ನು ಭೇಟಿ ಆಗಿದ್ದೆ. ಅವರು ದೆಹಲಿಯವರು. ನಮ್ಮ ಸ್ವಭಾವ ಒಂದೇ ರೀತಿ ಇದೆ. ಮನೆಯವರೂ ಒಪ್ಪಿಗೆ ಕೊಟ್ಟಿದ್ದಾರೆ. ನನ್ನ ಸಂಗಾತಿ ಕೇರಿಂಗ್‌ ಹಾಗೂ ಶೇರಿಂಗ್ ಆಗಿರಬೇಕು ಎಂದು ಯಾವಾಗಲೂ ಬಯಸುತ್ತಿದ್ದೆ. ಇವೆರಡು ಗುಣಗಳೂ ರೋಹಿತ್‌ರಲ್ಲಿ ಇದೆ,” ಎನ್ನುತ್ತಾರೆ.

ದೀಪಿಕಾ ತಮ್ಮ ಸೌಂದರ್ಯ ಕಾಯ್ದುಕೊಳ್ಳಲು ಆಯಿಲ್ ಫುಡ್‌ ತಿನ್ನುವುದಿಲ್ಲ. ಆಲಿವ್ ‌ಆಯಿಲ್‌ನಿಂದ ತಯಾರಿಸಿದ ಆಹಾರ ಮಾತ್ರ ಸೇವಿಸುತ್ತಾರೆ. ಅವರು ಸ್ವೀಟ್ಸ್ ನಿಂದ ದೂರ. ಅವರು ಹೀಗೆ ಹೇಳುತ್ತಾರೆ, “ನನಗೆ ಇಡೀ ದಿನ ಕೆಲಸ ಇರುತ್ತದೆ. ಹಸಿವಿನಿಂದ ಇರಲು ಆಗುವುದಿಲ್ಲ. ಪ್ರತಿ 2 ಗಂಟೆಗೊಮ್ಮೆ ಏನಾದರೊಂದು ಅಗತ್ಯವಾಗಿ ತಿನ್ನುತ್ತೇನೆ. ಸಮಯ ಸಿಕ್ಕರೆ ಡ್ಯಾನ್ಸಿಂಗ್‌, ರನ್ನಿಂಗ್‌ ಮಾಡುತ್ತೇನೆ. ಜೊತೆಗೆ ಜಿಮ್ ಗೂ ಹೋಗುತ್ತೇನೆ. ನನಗೆ ಮಾರ್ಷಲ್ ಆರ್ಟ್ಸ್ ಕೂಡ ಗೊತ್ತು. ನಾನು ಪ್ರಕೃತಿಗೆ ಅನುಸಾರವಾಗಿ ಹೋಗುತ್ತೇನೆ. ಬೆಳಗ್ಗೆ ಬೇಗ ಏಳಲು ಹಾಗೂ ರಾತ್ರಿ ಬೇಗ ಮಲಗಲು ಪ್ರಯತ್ನಿಸುತ್ತೇನೆ. ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ ಶ್ಯಾಂಪೂ ಮತ್ತು ಕಂಡೀಶನರ್‌ ಹಚ್ಚುತ್ತೇನೆ. ನಾನು ಬ್ಯೂಟಿ ಪಾರ್ಲರ್‌ಗೆ ಹೋಗುವುದಿಲ್ಲ. ನನಗೆ ಮೇಕಪ್‌ ಇಷ್ಟವಿಲ್ಲ. ಒಂದು ವೇಳೆ ಮದುವೆಯ ಸೀನ್‌ ಇದ್ದರೆ ಗಾಢ ಮೇಕಪ್ ಮಾಡುತ್ತಾರೆ. ಇಲ್ಲದಿದ್ದರೆ ತೆಳುವಾದ ಮೇಕಪ್‌ನಿಂದಲೇ ಕೆಲಸ ನಡೆಯುತ್ತದೆ. ಲಿಪ್‌ಸ್ಟಿಕ್‌ ಮತ್ತು ಲೈನರ್‌ನ್ನು ನನ್ನ ಪರ್ಸ್‌ನಲ್ಲಿ ಅಗತ್ಯವಾಗಿ ಇಟ್ಟಿರುತ್ತೇನೆ. ಹೆಚ್ಚು ನೀರು ಕುಡಿಯುತ್ತಿರುತ್ತೇನೆ.” ಎನ್ನುತ್ತಾರೆ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ