ಅಲ್ಫಾನ್ಸೋ ಹೆಸರು ಪೋರ್ಚುಗೀಸರ ಪ್ರಸಿದ್ಧ ಸೇನಾಧಿಕಾರಿ ಅಲ್ಫಾಂಸೋ ಡಿ ಆಲ್ಬುಕ್ವೆರ್ಕು ಮೂಲದಿಂದ ಬಂದದ್ದು. ಈತನಿಗೆ ಮೊದಲಿನಿಂದಲೂ ಕೈತೋಟದಲ್ಲಿ ಹೆಚ್ಚಿನ ಆಸಕ್ತಿಯ ಕಾರಣ, ಗೋವಾದಲ್ಲಿ ಪೋರ್ಚುಗೀಸರು ಆಡಳಿತ ನಡೆಸುತ್ತಿದ್ದಾಗ, ಈತ ಅಲ್ಲಿ ಈ ಮಾವಿನ ಸಸಿಗಳನ್ನು ಅಭಿವೃದ್ಧಿಪಡಿಸಿದನಂತೆ. ಆಂಗ್ಲರಿಗೂ ಈ ಹಣ್ಣು ಬಹಳ ಇಷ್ಟವಾಯ್ತು. ಹಾಗಾಗಿ ಆತನ ಹೆಸರನ್ನೇ ಇದಕ್ಕೆ ಖಾಯಂ ಆಗಿರಿಸಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಯಿತು. ಆಂಗ್ಲರ ಅಪಾರ ಮೆಚ್ಚುಗೆ ಪಡೆದ ಈ ಹಣ್ಣು ಇಂದಿಗೂ ಭಾರತದಿಂದ ಅತ್ಯಧಿಕವಾಗಿ ಯೂರೋಪಿನ ದೇಶಗಳಿಗೆ ರಫ್ತಾಗುತ್ತದೆ. ಈ ವರ್ಷ ಯೂರೋಪಿನ ದೇಶಗಳು ಇದರ ಆಮದಿನ ಮೇಲೆ ನಿಷೇಧ ಹೇರಿದಾಗ, ಇದನ್ನು ಬ್ರಿಟನ್ನಿನ ಸಂಸತ್ತಿನಲ್ಲಿ ದೊಡ್ಡದಾಗಿ ಚರ್ಚಿಸಲಾಯಿತು.
ಸಾಮಾನ್ಯವಾಗಿ ಈ ಹಣ್ಣಿನ ಗಾತ್ರ 150-300 ಗ್ರಾಂ ಇರುತ್ತದೆ. ಇದು ಸಿಹಿ, ಸುಗಂಧ ಹಾಗೂ ಸುವಾಸನೆಯಲ್ಲಿ ಇತರ ಹಣ್ಣುಗಳಿಗಿಂತ ಎಷ್ಟೋ ಪಟ್ಟು ಮೇಲುಗೈ ಸಾಧಿಸಿದೆ. ಇದರ ಅತಿ ವಿಶಿಷ್ಟ ಗುಣವೆಂದರೆ, ಇದು ಚೆನ್ನಾಗಿ ಮಾಗಿದ ನಂತರ 1 ವಾರಾದರೂ ಒಂದಿಷ್ಟು ಕೆಡುವುದಿಲ್ಲ. ಇದರ ಈ ಗುಣದಿಂದಾಗಿಯೇ, ನಮ್ಮ ದೇಶದಿಂದ ರಫ್ತಾಗುವ ಹಣ್ಣುಗಳಲ್ಲಿ ಇದಕ್ಕೆ ಅಗ್ರಸ್ಥಾನ. ಬೆಲೆಯ ವಿಷಯದಲ್ಲೂ ಇದು ಅತಿ ದುಬಾರಿ. ಮಾರಾಟದ ವಿಷಯದಲ್ಲಿ ಇದರ ಇನ್ನೊಂದು ದಾಖಲೆ ಎಂದರೆ, ಇದು ಕಿಲೋ ಲೆಕ್ಕದ ಬದಲಿಗೆ ಡಜನ್ ಲೆಕ್ಕದಲ್ಲಿ ವ್ಯಾಪಾರವಾಗುತ್ತದೆ.
ಮಂಡಿ ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರಸ್ತುತ ಡಜನ್‌ಗೆ ರೂ.700 ಹಾಗೂ ಹೆಚ್ಚಿರುತ್ತದೆ. ಅದರ ತೂಕದ ಕಾರಣ, ಡಜನ್‌ಗೆ ಬೆಲೆ ಏರಿಳಿತ ಕಾಣುತ್ತದೆ. ಚಿಲ್ಲರೆ ವ್ಯಾಪಾರದಲ್ಲಿ ಇದಂತೂ ಡಜನ್‌ಗೆ 2-3 ಸಾವಿರ ಎನಿಸಿದೆ! ನಮ್ಮ ದೇಶದಲ್ಲಿ ಇದು ಅತಿ ದುಬಾರಿ ಹಣ್ಣು ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಇದರ ಶೇ.90ರಷ್ಟು ಪ್ರಮಾಣವನ್ನು ವಿದೇಶಗಳಿಗೆ ರಪ್ತ ಮಾಡಲಾಗುತ್ತದೆ.
ಏಪ್ರಿಲ್-ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಈ ಹಣ್ಣು, ಜುಲೈ-ಆಗಸ್ಟ್ ವರೆಗೂ ಸಿಗುತ್ತಿರುತ್ತದೆ. ಮಹಾರಾಷ್ಟ್ರದ ಕೊಂಕಣ ಕಡೆಯ ಸಿಂಧುಗಣ ಜಿಲ್ಲೆಯ ದೇವಗಢ ಪ್ರಾಂತ್ಯದ ಸುಮಾರು 70 ಹಳ್ಳಿಗಳಲ್ಲಿ 45,000 ಎಕರೆ ಜಮೀನಿನಲ್ಲಿ ಇದನ್ನು ಬೆಳೆಯಲಾಗುತ್ತದೆ. ದೇವಗಢ, ಸಾಗರ ತಟದಿಂದ ಇದು 200 ಕಿ.ಮೀ. ಒಳಭಾಗದಲ್ಲಿದೆ. ಇಲ್ಲಿ ಬೆಳೆಯಲಾಗುವ ಅಲ್ಫಾನ್ಸೋ, ನಮ್ಮ ದೇಶದ ಉತ್ಕೃಷ್ಟ ತಳಿ ಎನಿಸಿದೆ. ದೇವಗಢದ ರೈತರಂತೂ ಈ ತಳಿಯ ಆನ್‌ಲೈನ್ ಮಾರಾಟವನ್ನು ಶುರು ಮಾಡಿದ್ದಾರೆ. ಇದನ್ನು ಹೊರತುಪಡಿಸಿದರೆ ಮಹಾರಾಷ್ಟ್ರದ ರತ್ನಗಿರಿ, ಗುಜರಾತ್‌ನ ಬಲಸಾಡ್ ಮತ್ತು ನಸಾರಿ ಪ್ರಾಂತ್ಯಗಳಲ್ಲಿ ಈ ಹಣ್ಣು ಬೆಳೆಯಲ್ಪಡುತ್ತದೆ.
ನಮ್ಮ ದೇಶದಿಂದ ಪ್ರತಿ ವರ್ಷ ಕೇವಲ ಯೂರೋಪ್ ರಾಷ್ಟ್ರಗಳಿಗೆಂದೇ ಸುಮಾರು 200 ಕೋಟಿಗೂ ಹೆಚ್ಚಿನ ಹಣ್ಣುಗಳು ರಫ್ತಾಗುತ್ತವೆ. ಹಾಗೆಯೇ ದುಬೈ, ಸಿಂಗಾಪುರ್ ಹಾಗೂ ಮಧ್ಯ ಏಷ್ಯಾಗಳ ದೇಶಗಳಿಗೂ 100 ಕೋಟಿಗೂ ಹೆಚ್ಚಿನ ಪ್ರಮಾಣದ ಹಣ್ಣು ರಫ್ತಾಗುತ್ತದೆ. ಪ್ರತಿ ವರ್ಷ ಸುಮಾರು 50,00 ಟನ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬೆಳೆಸುತ್ತಾರೆ. ಇದರ ಪ್ರಧಾನ ಮಾರಾಟ ಕೇಂದ್ರ ನವ ಮುಂಬೈನ ವಾಶಿಯಲ್ಲಿನ ಕೃಷಿ ಉತ್ಪಾದನಾ ಬಜಾರ್ ಸಮಿತಿಯ ಆಡಳಿತದಲ್ಲಿದೆ. ಪ್ರತಿ ವರ್ಷ ಸುಮಾರು 600 ಕೋಟಿ ರೂ.ಗಿಂತಲೂ ಹೆಚ್ಚಿನ ವಹಿವಾಟು ನಡೆಯುತ್ತದೆ.
ಅಲ್ಫಾನ್ಸೋ ಬೆಳೆಯುವ ರೈತರ ಪ್ರಕಾರ, ಈ ಹಣ್ಣು ಬೇರೆಲ್ಲ ಮಾವುಗಳಿಗಿಂತ ಅತಿ ವಿಶಿಷ್ಟ. ಈ ಕಾರಣಕ್ಕಾಗಿಯೇ ಇದನ್ನು ಮಾವುಗಳ ಮುಕುಟಮಣಿ ಎನ್ನುತ್ತಾರೆ. ಈ ಹಣ್ಣಿನ ವೈಶಿಷ್ಟ್ಯಕ್ಕೆ ಕಾರಣ ಈ ದೇವಗಢ ಪ್ರಾಂತ್ಯದ ಫಲವತ್ತಾದ ಖನಿಜಭೂಮಿ ಮತ್ತು ಹವಾಗುಣ. ಈ ಕಾರಣಕ್ಕಾಗಿಯೇ ಅಲ್ಫಾನ್ಸೋ ಭಾರತದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಲ್ಲಿ ಇತರ ಎಲ್ಲಾ ಮಾವುಗಳಿಗಿಂತ ಅತಿ ವಿಶಿಷ್ಟವೆನಿಸುತ್ತದೆ. ಭಾರತದ ಇನ್ನಿತರ ಜಾಗಗಳ ಮಾವಿನ ತೋಪುಗಳಲ್ಲಿ ಇದನ್ನು ಬೆಳೆದರೂ, ಅಂಥ ರುಚಿ ಎಲ್ಲೂ ಲಭಿಸದು. ಲಖ್ನೌನ ಒಂದು ಖ್ಯಾತ ಮಾವಿನ ತೋಪಿನ ಮಾಲೀಕರಾದ ಸುರೇಶ್ ಚಂದ್ರ ಶುಕ್ಲಾ, ಸುಮಾರು 217 ಬಗೆಯ ಮಾವು ಬೆಳೆಯುತ್ತಾರೆ. `ಇದರ ಸೆಸ್ೞ್ ಲೈಫ್ ಉತ್ತಮವಾದುದರಿಂದ, ಎಲ್ಲಕ್ಕಿಂತ ಅದು ಹೆಚ್ಚು ರಫ್ತಾಗುತ್ತದೆ,’ ಎನ್ನುತ್ತಾರೆ. ಇರು ತಮ್ಮದೇ ಆದ `ಹುಸ್ನಾರಾ’ ಎಂಬ ಹೊಸ ತಳಿಯೊಂದನ್ನು ಬೆಳೆಸಿದ್ದಾರೆ, ಇದರ ಸೆಲ್ಫ್ ಲೈಫ್ ಸಹ ಅಷ್ಟೇ ಉತ್ತಮವಾದುದು.
– ಶೈಲಜಾ ಎಸ್.