`ಬೆಇಂತಹಾ' ಧಾರಾವಾಹಿಯಲ್ಲಿ ಡೆಬ್ಯೂ ಮಾಡಿದ ನಟಿ ಪ್ರೀತಿಕಾ ರಾವ್ ಮಾಡೆಲಿಂಗ್, ಫಿಲ್ಮ್ ಜರ್ನಲಿಸ್ಟ್ ಕೆಲಸದ ಜೊತೆಗೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಟಿ ಅಮೃತಾ ರಾವ್‌ರ ತಂಗಿಯಾಗಿದ್ದರೂ ಅವರು ಎಂದೂ ನಟಿಯಾಗುವ ಕನಸು ಕಾಣಲಿಲ್ಲ. ಅವರಿಗೆ ಮಾಡೆಲ್ ಆಗಿರುವುದೇ ಇಷ್ಟವಾಗಿತ್ತು. ಅವರು ಒಂದು ಪತ್ರಿಕೆಯಲ್ಲಿ ಬಾಲಿವುಡ್‌ನ ಗಾಸಿಪ್ ಕಾಲಂ ಕೂಡ ಬರೆಯುತ್ತಿದ್ದರು.
25 ವರ್ಷದ ಪ್ರೀತಿಕಾ ಬಹಳ ನಮ್ರ ಸ್ವಭಾವದವರು. ಅವರ ತಂದೆ ಮುಂಬೈನಲ್ಲಿ ಒಂದು ಆ್ಯಡ್ ಏಜೆನ್ಸಿ ಹೊಂದಿದ್ದಾರೆ. ತಾಯಿ ಗೃಹಿಣಿ. ಮಂಗಳೂರಿನಲ್ಲಿ ಹುಟ್ಟಿದ ಪ್ರೀತಿಕಾರ ಶಿಕ್ಷಣ ಮುಂಬೈನಲ್ಲಿ ಆಯಿತು. ಅವರು ಚಿಕ್ಕ ವಯಸ್ಸಿನಲ್ಲೇ ಜಾಹೀರಾತುಗಳಲ್ಲಿ ಕೆಲಸ ನಿರ್ವಹಿಸಿದರು. ಅವರ ಅಕ್ಕ ಅಮೃತಾ ರಾವ್ ಆರಂಭದಿಂದವೇ ನಟಿಯಾಗಲು ಇಚ್ಛಿಸುತ್ತಿದ್ದರು. ಪ್ರೀತಿಕಾರಿಗೆ ಚಿತ್ರಗಳಲ್ಲಿ ನಟಿಸಲು ಆಫರ್ ಬಂದಾಗ ಒಪ್ಪುತ್ತಿರಲಿಲ್ಲ. ಅವರು ಒಬ್ಬ ಉತ್ತಮ ಮಾಡೆಲ್ ಆಗಲು ಬಯಸುತ್ತಿದ್ದರು.
ಪ್ರೀತಿಕಾ ರಜದಲ್ಲಿ ಅಮೆರಿಕಾಗೆ ಹೊರಟಾಗಲೇ ಅವರಿಗೆ ಅನೇಕ ಟಿವಿ ಧಾರಾವಾಹಿಗಳ ಆಫರ್ ಬಂದವು. ಆಗ ಅವರು ಮುಂಬೈಗೆ ಬಂದು ಆಡಿಷನ್ ಕೊಟ್ಟರು. ಅವರನ್ನು ಧಾರಾವಾಹಿಗಳಿಗೆ ಆಯ್ಕೆ ಮಾಡಲಾಯಿತು. ಆದರೆ ಅವರಿಗೆ `ಬೆಇಂತಹಾ' ಧಾರಾವಾಹಿ ಬಹಳ ಇಷ್ಟವಾಯಿತು. ಏಕೆಂದರೆ ಅದು ಇತರ ಧಾರಾವಾಹಿಗಳಿಗೆ ಹೋಲಿಸಿದರೆ ಲಾರ್ಜರ್ ದ್ಯಾನ್ ಲೈಫ್ ಮತ್ತು ಗ್ಲಾಮರಸ್ ಆಗಿತ್ತು. ಜೊತೆಗೆ ಅದರಲ್ಲಿ ಅಭಿನಯದ ಹಲವು ಶೇಡ್ಸ್ ಗಳಿದ್ದವು.
ಯಾವುದಾದರೂ ಪಾತ್ರ ಆವರಿಸಿಕೊಳ್ಳುವಾಗ ಏನನ್ನು ಗಮನಿಸುತ್ತೀರಿ? ಎಂದು ಕೇಳಿದಾಗ ಪ್ರೀತಿಕಾ ಉತ್ತರ ಹೀಗಿತ್ತು, ``ಕಥೆ ಚೆನ್ನಾಗಿರಬೇಕು. ಜೊತೆಗೆ ಸೆಟ್, ಟೈಮಿಂಗ್, ಚ್ಯಾನೆಲ್ ಇತ್ಯಾದಿಗಳನ್ನೂ ಗಮನಿಸುತ್ತೇನೆ. ಏಕೆಂದರೆ ಟಿವಿಯಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಬಹಳ ಸಮಯ ಕೊಡಬೇಕಾಗುತ್ತದೆ. ಹೀಗಿರುವಾಗ ನನ್ನ ಕೆಲಸದಲ್ಲಿ ಸಂತೃಪ್ತಿ ಸಿಗದಿದ್ದರೆ ಅದನ್ನು ಮಾಡುವುದು ವ್ಯರ್ಥ.''
ನೀವು ಹಿಂದಿ ಚಿತ್ರಗಳಲ್ಲಿ ಏಕೆ ಪ್ರಯತ್ನಿಸಲಿಲ್ಲ? ನೀವು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುತ್ತಿದ್ದಿರಲ್ಲ, ಎಂದು ಕೇಳಿದಾಗ ಹೀಗೆ ಉತ್ತರಿಸಿದರು, ``ಜನ ಯಾವಾಗಲೂ ನನಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಹೇಳುವುದೇನೆಂದರೆ ನಾನು ಸೌಥ್‌ನ್ನು ಆರಿಸಿಕೊಳ್ಳಲಿಲ್ಲ, ಸೌಥ್ ನನ್ನನ್ನು ಆರಿಸಿಕೊಂಡಿದೆ. ಅದೇ ರೀತಿ ನಾನು ಟಿವಿಯನ್ನು ಆರಿಸಿಕೊಳ್ಳಲಿಲ್ಲ, ಟಿ.ವಿ. ನನ್ನನ್ನು ಆರಿಸಿಕೊಂಡಿದೆ.''
ಈ ಧಾರಾವಾಹಿಯಲ್ಲಿನ ಪಾತ್ರ ನಿಮಗೆಷ್ಟು ಹೊಂದುತ್ತದೆ ಎಂದು ಕೇಳಿದಾಗ, ``ಇಷ್ಟು ಡ್ರಾಮಾ ನನ್ನ ನಿಜ ಜೀವನದಲ್ಲಿ ಇಲ್ಲ. ನಾನು ಬಹಳ ಶಾಂತ ಹಾಗೂ ಸರಳ ಸ್ವಭಾವದವಳು. ಆದರೆ ಈ ಪಾತ್ರದಲ್ಲಿ ಟಾಮ್ ಬಾಯ್ ಲುಕ್ ಇದೆ,'' ಎಂದರು.
ತಾವು ಈ ಧಾರಾವಾಹಿಯ ಮೂಲಕ ಪ್ರತಿ ಮನೆಯನ್ನೂ ತಲುಪಬೇಕು, ಅಂದರೆ ಆಲಿಯಾ ಪ್ರತಿ ಮನೆಯವರಿಗೂ ಇಷ್ಟವಾಗಬೇಕು ಎಂಬುದು ಪ್ರೀತಿಕಾರ ಆಸೆ. ಆದ್ದರಿಂದ ಪ್ರತಿ ಶೋ ಚೆನ್ನಾಗಿರುವಂತೆ ಮಾಡಲು ಅವರು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಶೋನಲ್ಲಿ ಕಾಸ್ಟ್ಯೂಮ್ ಡಿಸೈನಿಂಗ್‌ನ್ನು ಪ್ರೀತಿಕಾ ಸ್ವತಃ ಮಾಡುತ್ತಾರೆ.
ಪ್ರೀತಿಕಾಗೆ ಕುಟುಂಬದವರೆಲ್ಲರ ಸಹಕಾರ ಇದೆ. ಅವರು ಫ್ಯಾಷನೆಬಲ್ ಆಗಿದ್ದಾರೆ, ``ನಾನು ಯಾವಾಗಲೂ ಫ್ಯಾಷನ್ ಮ್ಯಾಗಝೀನ್ ನೋಡುತ್ತೇನೆ ಹಾಗೂ ಟ್ರೆಂಡ್‌ಗೆ ಅಪ್ ಡೇಟ್ ಆಗುತ್ತೇನೆ. ಕಲರ್‌ಫುಲ್ ಡ್ರೆಸ್‌ಗಳನ್ನು ಇಷ್ಟಪಡುತ್ತೇನೆ. ಸಂದರ್ಭಕ್ಕೆ ತಕ್ಕಂತಹ ಉಡುಪುಗಳನ್ನು ಧರಿಸುತ್ತೇನೆ. ನನಗೆ ಟಿ.ವಿ. ಶೋನಲ್ಲಿ ಎಲ್ಲ ರೀತಿಯ ಉಡುಪುಗಳನ್ನು ಧರಿಸಲು ಅವಕಾಶ ಸಿಗುತ್ತದೆ. ನಾನು ನನ್ನ ಫಿಟ್ ನೆಸ್ ಬಗ್ಗೆ ಸಂಪೂರ್ಣ ಗಮನ ಕೊಡುತ್ತೇನೆ. ಸ್ಟ್ರೆಚಿಂಗ್ ಮಾಡುತ್ತೇನೆ. ಅದರಿಂದ ಶರೀರ ಫಿಟ್ ಆಗಿರುತ್ತದೆ. ಬೆಳಗ್ಗೆ ಸಮಯ ಸಿಗದಿದ್ದರೆ ರಾತ್ರಿ ಮಲಗುವ ಮೊದಲು ಅಗತ್ಯವಾಗಿ ಸ್ಟ್ರೆಚಿಂಗ್ ಮಾಡುತ್ತೇನೆ. ನಾನು ಟೆನ್ಶನ್ ಮಾಡಿಕೊಳ್ಳುವುದಿಲ್ಲ. ಯಾವುದಾದರೂ ಕೆಲಸ ಯಶಸ್ವಿಯಾಗದಿದ್ದರೆ ಮುಂದೆ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತೇನೆ,'' ಎಂದರು.