ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಕುಕಿಂಗ್ ಕ್ವೀನ್' ಇವೆಂಟ್ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಜ್ಯೂವೆಲರಿ ಪಾರ್ಟ್‌ನರ್ ಕಿಸ್ನಾ ಡೈಮಂಡ್‌ಗೋಲ್ಡ್ & ಜ್ಯೂವೆಲರಿ, ಸೇಫ್ಟಿ ಪಾರ್ಟ್‌ನರ್ HP, ಪ್ಯೂರಿಟಿ ಪಾರ್ಟ್‌ನರ್ ಸನ್ ಪ್ಯೂರ್ ಇತ್ಯಾದಿ.
ಈ ಕಾರ್ಯಕ್ರಮದ ಇಡೀ ಫೋಕಸ್ ಅಡುಗೆ, ಪೌಷ್ಟಿಕ ಆಹಾರ ಸೇವನೆಯ ಕುರಿತಾಗಿತ್ತು. ಕಳೆದ ತಿಂಗಳು ಜನವರಿ 18 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಜಿಪಿಓ ಬಳಿಯ ರಾಜಭವನ ರಸ್ತೆಯ ಹೋಟೆಲ್ ಕ್ಯಾಪಿಟಲ್ ನಲ್ಲಿ ಅದ್ಧೂರಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಬಂದಿದ್ದ ಮಹಿಳಾ ಅಭ್ಯರ್ಥಿಗಳಿಂದ ಆನ್ ದಿ ಸ್ಪಾಟ್ ಅಡುಗೆ ತಯಾರಿ ಸ್ಪರ್ಧೆ ಪ್ರಮುಖ ಹೈಲೈಟ್ ಆಗಿತ್ತು. ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಅಡುಗೆಯ ಸ್ಪರ್ಧೆ, ಸೆಲೆಬ್ರಿಟಿ ಶೆಫ್ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.
ನ್ಯೂಟ್ರಿಷನಿಸ್ಟ್ ಸೆಷನ್
ಮೊದಲಿಗೆ ಸಭಿಕರನ್ನು ಉದ್ದೇಶಿಸಿ ಆಹಾರತಜ್ಞೆ ಎಂ.ಎಸ್. ಯಶಸ್ವಿನಿಯವರಿಂದ ಅಮೂಲ್ಯ ಆರೋಗ್ಯದ ಟಿಪ್ಸ್ ಒದಗಿಸಲಾಯಿತು. ನ್ಯೂಟ್ರಿಷನ್‌ಡಯೆಟಿಕ್ಸ್ ನಲ್ಲಿ MSc ಪದವೀಧರೆಯಾದ ಇವರು ಪ್ರಸ್ತುತ ಥೆರಪಿಟಿಕ್ ಡಯೆಟ್, ಮಹಿಳಾ ಆರೋಗ್ಯ, ಲೈಫ್ ಸ್ಟೈಲ್ ಮ್ಯಾನೇಜ್ ಮೆಂಟ್, ಪೇಷೆಂಟ್ ಕನ್ಸಲ್ಟಿಂಗ್ ಇತ್ಯಾದಿ ವಿಭಾಗ ನಿಭಾಯಿಸುತ್ತಾ ಸ್ಪಂದನಾ ನರ್ಸಿಂಗ್ ಹೋಮ್ ಹಾಗೂ ಡಾ. ಮೋಹನ್ಸ್ ಡಯಾಬಿಟಿಕ್ ಸೆಂಟರ್ ನಲ್ಲಿ ನ್ಯೂಟ್ರಿಷನಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಣ್ಣುಮಕ್ಕಳು, ಪ್ರೌಢ ಮಹಿಳೆಯರು ಪ್ರತಿನಿತ್ಯ ಸೇವಿಸುವ ಆಹಾರ ಯಾವ ರೀತಿ ಅವರ ಗಟ್ ಹೆಲ್ತ್, ಹಾರ್ಮೋನ್ ಇನ್‌ಫ್ಲೂಯೆನ್ಸ್, ಹೃದ್ರೋಗಗಳು, ಸರ್ವೈಕಲ್ ಬ್ರೆಸ್ಟ್ ಕ್ಯಾನ್ಸರ್, ಬೋನ್ ಹೆಲ್ತ್, ತೂಕ ನಿಯಂತ್ರಣ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಸವಿವರವಾಗಿ ತಿಳಿಸಿಕೊಟ್ಟರು.
ಎಂಥ ಆಹಾರ ಸೇವಿಸಬೇಕು/ಬಾರದು, ಓಟ್ಸ್, ಮಿಲೆಟ್ಸ್, ಬ್ರೊಕನ್ ವೀಟ್, ಆರ್ಗ್ಯಾನಿಕ್ ಫುಡ್, ಕೊಲೆಸ್ಟ್ರಾಲ್, ಫೈಬರ್ ಯುಕ್ತ ಆಹಾರ, ಡ್ರೈಫ್ರೂಟ್ಸ್, ಚಿಯಾ/ಸಬ್ಜಾ ಸೀಡ್ಸ್/ಎಣ್ಣೆಯ ಬಳಕೆ ಇತ್ಯಾದಿ ಎಲ್ಲದರ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರು. ಆ ನಂತರ ನೆರೆದಿದ್ದ ನೂರಾರು ಮಹಿಳೆಯರ ಅಸಂಖ್ಯಾತ ಸಂದೇಹಗಳನ್ನು ಸೂಕ್ತವಾಗಿ ನಿವಾರಿಸಿ, ಡಯೆಟ್ ಕುರಿತು ಅವರ ಜ್ಞಾನ ತಣಿಸಿದರು.
ಸೆಲೆಬ್ರಿಟಿ ಶೆಫ್ ಸೆಷನ್
ಉದಯ ಟವಿ, ಕಲರ್ಸ್ ಕನ್ನಡ, ಝೀ ಕನ್ನಡ, ಸುವರ್ಣಾ ಟಿವಿ ಇತ್ಯಾದಿಗಳಲ್ಲಿ ಜನಪ್ರಿಯ ಶೆಫ್ ಆಗಿ ಮಿಂಚುತ್ತಿರುವ, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಂದ ಖ್ಯಾತಿವೆತ್ತ ಸವಿತಾ ಕೃಷ್ಣಮೂರ್ತಿಯವರು ನೂರಾರು ಟಿವಿ ಅಡುಗೆ ಕಾರ್ಯಕ್ರಮಗಳಿಂದ, ನಮ್ಮ ಓದುಗರಿಗೆ ತಮ್ಮ `ಅಮೃತವರ್ಷಿಣಿ'ಯ ಯಶೋದಮ್ಮ ಪಾತ್ರದಿಂದ ಚಿರಪರಿಚಿತರು. ಪ್ರಸ್ತುತ ಝೀ ಟವಿಯ `ಆದಿಲಕ್ಷ್ಮಿ ಪುರಾಣ' ಧಾರಾವಾಹಿಯಲ್ಲಿ ಪ್ರಮುಖ ವ್ಯಾಂಪ್ ಆಗಿ ತಮ್ಮ ನಟನಾ ಕೆರಿಯರ್ ಮುಂದುವರಿಸುತ್ತಿದ್ದಾರೆ.

ಗೃಹಶೋಭಾ ಇವೆಂಟ್ ನಲ್ಲಿ ಇವರು ಪ್ರೇಕ್ಷಕರಿಗಾಗಿ ಉತ್ಕೃಷ್ಟ ಪೌಷ್ಟಿಕ `ಅವಲಕ್ಕಿ ಪಲಾವ್' ಹಾಗೂ ಫೈರ್ ಲೆಸ್ ರೆಸಿಪಿಯಾಗಿ `ಸ್ಪೆಷಲ್ ದಹೀ ಬ್ರೆಡ್ ಚಾಟ್' ತಯಾರಿಸಿ, ಅಡುಗೆಯ ಪ್ರತಿಯೊಂದು ಹಂತಗಳನ್ನೂ ವಿವರಿಸುತ್ತಾ, ಅರ್ಧ ಗಂಟೆಯಲ್ಲೇ ಎರಡೂ ಡಿಶ್ ರೆಡಿ ಮಾಡಿ ನೆರೆದಿದ್ದ ಪ್ರೇಕ್ಷಕರಿಗೆ ಅದರ ಸವಿ ಉಣಿಸಿ, ಜನಸ್ತೋಮದ ಪ್ರಶಂಸೆ ಗಿಟ್ಟಿಸಿದರು. ಇವೆಂಟ್ ಗೆ ಬಂದಿದ್ದ ಮಹಿಳಾ ವೃಂದದ ನೂರಾರು ಅಡುಗೆ ಸಂದೇಹಗಳನ್ನು ನಿವಾರಿಸಿ, ಅಮೂಲ್ಯ ಸಲಹೆ ನೀಡಿದರು.





