ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು? ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಲೇ ಪೀಡಿಸುತ್ತಿರುವುದನ್ನು ಸಹಿಸಿಕೊಳ್ಳುತ್ತಲೇ ಹೋದ ಕೃಷ್ಣ ಕಡೆಗೆ ಇದಕ್ಕೊಂದು ಪ್ರಾತ್ಯಕ್ಷಿಕವಾಗಿಯೇ ಪರಿಹಾರ ಸೂಚಿಸಬೇಕೆಂದು ಕರ್ಣನನ್ನು ಅಲ್ಲಿಗೆ ಬರಲು ಹೇಳಿ ಕಳಿಸಿದ.

ಕೃಷ್ಣ ಹೇಳಿ ಕಳಿಸಿದ್ದಾನೆ ಎಂದ ಮೇಲೆ ಕುತೂಹಲದಿಂದ ಕರ್ಣನೂ ಅಲ್ಲಿಗೆ ಬಂದಾಗ ಅಲ್ಲಿದ್ದ ಎರಡು ಬೆಟ್ಟವನ್ನು ಚಿನ್ನಮಯವನ್ನಾಗಿಸಿದ ಕೃಷ್ಣ, ಮೊದಲು ಅರ್ಜುನನನ್ನು ಕರೆದು, ಈ ಎರಡೂ ಚಿನ್ನದ ಗ್ರಾಮಸ್ಥರಿಗೆ ವಿತರಿಸಬೇಕು. ಆದರೆ ಅದರಲ್ಲಿ ಒಂದು ಚೂರೂ ಉಳಿಸಬಾರದು ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಬಾರದು ಎಂದು ಹೇಳಿ ಕಳುಹಿಸಿದ.
ಇಷ್ಟೇ ತಾನೇ, ಎಂದು ಹುಂಬತನದಿಂದ ಅಲ್ಲಿಯೇ ಸಮೀಪದ ಹಳ್ಳಿಗೆ ಹೋದಾಗ ಅವನನ್ನು ಗುರುತಿಸಿದ ಎಲ್ಲರು ವಂದಿಸಿದರು. ಕೂಡಲೇ ಆತ ಅಲ್ಲಿಯ ಡಂಗರ ಹೊಡೆಯುವವರನ್ನು ಕರೆಸಿ ಅರ್ಜುನ ಪ್ರತಿಯೊಬ್ಬ ಗ್ರಾಮಸ್ಥರಿಗೂ ಚಿನ್ನವನ್ನು ದಾನ ಮಾಡುತ್ತಿರುವ ಕಾರಣ, ಪ್ರತಿಯೊಬ್ಬರೂ ಅಲ್ಲಿ ಕಾಣುತ್ತಿರುವ ಗುಡ್ಡದ ಬಳಿ ಬರುವಂತೆ ಹೇಳಿಕಳುಹಿಸಿದ. ಚಿನ್ನವನ್ನು ದಾನ ಕೊಡುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಆ ಕೂಡಲೇ ಆ ಗುಡ್ಡದ ಬಳಿ ಬಂದಿದ್ದಲ್ಲದೇ, ಅರ್ಜುನನ್ನು ಮನಸೋ ಇಚ್ಚೆ ಹಾಡಿ ಹೊಗಳುತ್ತಾ ಹೋದಂತೆ ಅರ್ಜುನ ಹಿರಿ ಹಿರಿ ಹಿಗ್ಗಿದ.

ಗ್ರಾಮಸ್ಥರೆಲ್ಲರೂ ಬಂದ ಕೂಡಲೇ ಅರ್ಜುನನು ಹಗಲೂ ರಾತ್ರಿ ಎನ್ನದೇ ಬೆಟ್ಟದಿಂದ ಬಂಗಾರವನ್ನು ಬಗೆದೂ ಬಗೆದೂ ಕೊಡುತ್ತಲೇ ಹೋದ. ಗ್ರಾಮಸ್ಥರು ಮನಸೋ ಇಚ್ಚೆ ಬಂಗಾರವನ್ನು ಪಡೆದುಕೊಂಡು ಹೊದರು ಬೆಟ್ಟ ಕಿಂಚಿತ್ತೂ ಕಡಿಮೆಯಾಗಲಿಲ್ಲ.
ಅರ್ಜುನ ಬಂಗಾರವನ್ನು ದಾನ ಕೊಡುತ್ತಿರುವ ವಿಷಯ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ ಹರಡುತ್ತಲೇ ಅಕ್ಕ ಪಕ್ಕದ ಹಳ್ಳಿಯವರಿಗೆಲ್ಲಾ ತಲುಪಿ ಅವರುಗಳು ಸಹಾ ಓಡೋಡಿ ಬಂದು ದಾನಕ್ಕಾಗಿ ಸರದಿ ಸಾಲಿನಲ್ಲಿ ನಿಲುತ್ತಲೇ ಹೋದರು. ಅದಾಗಲೇ ದಣಿದಿದ್ದ ಅರ್ಜುನನಿಗೆ ಅವರುಗಳ ಹೊಗಳಿಕೆ ಮತ್ತಷ್ಟು ಉತ್ತೇಜನ ತರುತ್ತಿದ್ದ ಕಾರಣ ತನ್ನ ಆಯಾಸವನ್ನು ಲೆಕ್ಕಿಸದೇ ಕೃಷ್ಣ ಮುಂದೆ ಸೋಲಬಾರದು ಎಂಬ ಅಹಂಕಾರದಿಂದ ದಾನವನ್ನು ನಿಲ್ಲಿಸದೇ ಮುಂದುವರಿಸುತ್ತಲೇ ಹೋದ.
ತದ ನಂತರ ಕರ್ಣನನ್ನು ಕರೆದ ಕೃಷ್ಣಾ ಮತ್ತೆರಡು ಚಿನ್ನದ ಪರ್ವತಗಳನ್ನು ತೋರಿಸಿ ಮತ್ತದೇ ನಿಯಮವನ್ನು ತಿಳಿಸಿ ಈ ಬೆಟ್ಟದಲ್ಲಿ ಒಂದು ಚೂರೂ ಉಳಿಸದೇ ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಿಸದೇ ಪ್ರತಿ ಭಾಗವನ್ನು ದಾನ ಮಾಡಲು ತಿಳಿಸಿದ.

ಕೃಷ್ಣನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡ ಕರ್ಣ ಕೃಷ್ಣನಿಗೆ ಪ್ರತಿವಂದಿಸಿ ಕೂಡಲೇ ಬೆಟ್ಟದ ಮತ್ತೊಂದು ಭಾಗದ ಹಳ್ಳಿಗೆ ಹೋಗಿ ಅಲ್ಲಿನ ಗ್ರಾಮಸ್ಥರನ್ನು ಕರೆದು, ನೋಡೀ, ಆ ಎರಡು ಚಿನ್ನದ ಬೆಟ್ಟಗಳು ನಿಮ್ಮದು, ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿ ಸುಮ್ಮನೆ ಕೃಷ್ಣನ ಬಳಿ ಬಂದು ನೀವು ಹೇಳಿದ ಕೆಲಸ ಮುಗಿಯುತು ಎಂದು ಹೇಳಿ ವಂದಿಸಿ ತನ್ನ ಪಾಡಿಗೆ ತಾನು ಹೊರಟೇ ಬಿಟ್ಟ.





