ಒಮ್ಮೆ ಗುಂಡ ತನ್ನ ಹೆಂಡತಿ, ಅತ್ತೆಯೊಡನೆ ಆಕೆಯನ್ನು ಊರಿಗೆ ಕಳುಹಿಸಲು ರೈಲ್ವೆ ಸ್ಟೇಷನ್ನಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಯಾಕೋ ಅನುಮಾನ ಬಂದ ಟ್ರಾಫಿಕ್‌ಪೊಲೀಸ್, ಒಂದು ಜೀಪ್‌ನಲ್ಲಿ ಅವನನ್ನು ಫಾಲೋ ಮಾಡಿದ.
ಅರ್ಧ ಗಂಟೆ ಪ್ರಯಾಣಿಸಿದರೂ ಗುಂಡ ಒಂದು ಚೂರೂ ಟ್ರಾಫಿಕ್‌ನಿಯಮ ಮೀರದೆ, ಸ್ಪೀಡಾಗಿ ಧಾವಿಸದೆ, ಸ್ಮೂತ್ ಆಗಿ ಹೋಗುತ್ತಿದ್ದ. ಇಂಥ ಡ್ರೈವರ್‌ನನ್ನು ಹೊಗಳಲೇಬೇಕು ಎಂದು ಪೊಲೀಸ್ ಗುಂಡನ ಕಾರು ನಿಲ್ಲಿಸಿ ಕೇಳಿದ, “ವೆರಿಗುಡ್! ನಿಮ್ಮ ಡ್ರೈವಿಂಗ್ ಅದ್ಭುತ… ಎಷ್ಟು ಕಾಲದಿಂದ ಪಳಗಿದ್ದೀರಿ?”
ಹೊಗಳಿಕೆ ಕೇಳಿದ ಆವೇಶದಲ್ಲಿ ಗುಂಡ ವಾಸ್ತವತೆ ಮರೆತು, “ಇನ್ನೂ ಲೈಸೆನ್ಸ್ ಸಿಕ್ಕಿಲ್ಲ…. ಅದೊಂದು ಕೈಗೆ ಬರುವಷ್ಟರಲ್ಲಿ ಹೇಗೆ ಪಳಗಿರ್ತೀನಿ ನೋಡಿ,” ಎನ್ನುವುದೇ?
ಓಹೋ ಎಂದು ಅವನ ಕಡೆ ಪೊಲೀಸ್ ತಿರುಗುವಷ್ಟರಲ್ಲಿ ಗುಂಡನ ಹೆಂಡತಿ, “ನಮ್ಮಮ್ಮ ಊರಿಗೆ ಹೊರಟಿದ್ದಾರೆ ಅನ್ನುವ ಖುಷಿಯಲ್ಲಿ 4 ಪೆಗ್ ಜಾಸ್ತಿ ಕುಡಿದುಬಿಟ್ಟಿದ್ದಾರೆ ಅಷ್ಟೆ…. ಅವರೇನೂ ರೆಗ್ಯುಲರ್ ಕುಡುಕ ಅಲ್ಲ ಸಾರ್,” ಎಂದಳು.
ಕೇಸ್ ಬುಕ್ ಮಾಡಲು ಪೊಲೀಸ್ ಸಜ್ಜಾದ. ಗೊರಕೆ ಹೊಡೆಯುತ್ತಿದ್ದ ಗುಂಡನ ಅತ್ತೆ ದಿಢೀರ್ ಎಂದು ಎದ್ದು ಕುಳಿತು, ಕಿವಿ ಕೇಳಿಸಲೆಂದು ಬ್ಯಾಟರಿಯನ್ನು ಕಿವಿಗೆ ಸರಿಯಾಗಿ ಅಳವಡಿಸಿಕೊಳ್ಳುತ್ತಾ, “ಅಯ್ಯೋ! ನಾನು ಆಗಲೇ ಬಡ್ಕೊಂಡೆ… ಈ ಕದ್ದ ಮಾಲಿನ ಗಾಡಿ ತಗೊಂಡು ರೈಲ್ವೆ ಸ್ಟೇಷನ್ನಿಗೆ ಹೋಗೋದು ಬೇಡ ಅಂತ…. ಅವಸರದಲ್ಲಿ ಅಳಿಯಂದ್ರು ಅದರ ನಂಬರ್ ಪ್ಲೇಟ್‌ಕೂಡ ಬದಲಾಯಿಸಲಿಲ್ಲ….” ಗುಂಡ, ಅವನ ಹೆಂಡತಿ ಕಣ್ಕಣ್ಣು ಬಿಡುತ್ತಿರುವಷ್ಟರಲ್ಲಿ ಪೊಲೀಸ್ ಕೈಯಲ್ಲಿ ಕೋಳ ಸಿದ್ಧಪಡಿಸಿಕೊಳ್ಳುವುದೇ….?
ಗುಂಡನ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದರು. ಅವನಿಗೆ ಒಂದು ಸಂದೇಹ ಬಂದು ತಂದೆಯನ್ನು ಕೇಳಿದ, “ಪತ್ನಿ, ಹೆಂಡತಿ, ಶ್ರೀಮತಿ, ಅರ್ಧಾಂಗಿನಿ, ಮಡದಿ, ವೈಫ್ ಈ ಪದಗಳಲ್ಲಿ ಏನಾದರೂ ಅಂತರವಿದೆಯೇ?”
ತಂದೆ ಶಾಂತವಾಗಿ, “ನೋಡಪ್ಪ ದೇವನೊಬ್ಬ… ನಾಮ ಹಲವು ಎಂಬಂತೆ ಮುಂದೆ ನಿನಗೆ ಕಷ್ಟ ತಪ್ಪಿದ್ದಲ್ಲ. ಅದೇ ತರಹ ಇಲ್ಲಿ ಕಷ್ಟ ಒಂದೇ ನಾಮ ಹಲವು ಎಂದಾಗಿದೆ,” ಎಂದಾಗ ಗುಂಡ ಸುಸ್ತಾದ.
ಅವಿವಾಹಿತ : ಈ ಹೆಂಗಸರು ಮಾತಿಗೆ ಮುಂಚೆ ಯಾಕೆ ಸೆರಗನ್ನು ಎಳೆದು ಸೊಂಟಕ್ಕೆ ಸಿಗಿಸುತ್ತಾರೆ?
ವಿವಾಹಿತ : ಒಂದು….. ಬೇಗ ಬೇಗ ಮನೆಗೆಲಸ ಪೂರೈಸಲು ಅಥವಾ ಗಂಡನಿಗೆ ತಕ್ಕ ಶಾಸ್ತಿ ಮಾಡಲು.
ಪಾರ್ಟಿಗೆ ಬಂದಿದ್ದ ಸುಂದರಿ ಜೊತೆ ಪತಿ ನಸುನಗುತ್ತಾ ಮಾತಾಡುತ್ತಾ ಸಮಯ ಕಳೆಯುತ್ತಿದ್ದ. ಇದನ್ನು ನೋಡಿದ ಪತ್ನಿ ಬಿಟ್ಟಾಳೆಯೇ?
ಪತ್ನಿ : ಮನೆಗೆ ನಡೆಯಿರಿ, ನಿಮ್ಮ ಮಂಡಿ ನೋವಿಗೆ ಚೆನ್ನಾಗಿ ತೈಲ ತಿಕ್ಕುತ್ತೇನೆ.
ಪತಿ : ಆದರೆ ನನಗೆ ಮಂಡಿ ನೋವೇ ಇಲ್ಲವಲ್ಲ…..?
ಪತ್ನಿ : ನಾವು ಇನ್ನೂ ಮನೆಗೆ ಹೋಗಿಲ್ಲವಲ್ಲ….?
ಒಂದು ದಿನ ಪತಿ ಮನೆಯ ಎಲೆಕ್ಟ್ರಿಕ್ ರಿಪೇರಿಗೆ ಇಳಿದಿದ್ದ. ಕೆಲಸದ ಮಧ್ಯೆ ಪತ್ನಿಯನ್ನು ಕೂಗಿ ಕರೆದ.
ಪತ್ನಿ : ಏನ್ರಿ ಅದು ಕರೆದದ್ದು?
ಪತಿ : ಸ್ವಲ್ಪ ಇಲ್ಲಿ ಬಾ ಅಂದೆ.
ಪತ್ನಿ : ಸರಿ ಬಂದಾಯ್ತು. ಏನೀಗಾ?
ಪತಿ : ಇಲ್ಲಿ 2 ವೈರ್‌ಗಳನ್ನು ಮುಂಭಾಗದಲ್ಲಿ ಸ್ವಲ್ಪ ಕಟ್ ಮಾಡಿದ್ದೀನಲ್ಲ ಅದರಲ್ಲಿ ಒಂದನ್ನು ಹಿಡ್ಕೊ.
ಪತ್ನಿ : ಯಾಕೆ?
ಪತಿ : ಏ ಹಿಡ್ಕೋ ಅಂತಂದ್ರೆ…..
ಪತ್ನಿ : ಹಾಳಾಗಿಹೋಗಲಿ ಕೊಡಿ, ಹ್ಞೂಂ ಹಿಡ್ಕೊಂಡೆ.
ಪತಿ : ಏನಾದ್ರೂ ವ್ಯತ್ಯಾಸ ಅಂತ ಅನ್ನಿಸ್ತಾ?
ಪತ್ನಿ : ಇಲ್ಲವಲ್ಲ….. ಏನಾಯ್ತು?
ಪತಿ : ಓ…. ಹಾಗಾದ್ರೆ ಕರೆಂಟ್ ಹರಿಯುತ್ತಿರುವ ವೈರ್ ಬೇರೆ ಅಂತಾಯ್ತು.
ಪತಿ : ಮಗು ಆಗಿನಿಂದ ಒಂದೇ ಸಮ ಅಳ್ತಿದೆ. ಅದನ್ನು ಸ್ವಲ್ಪ ಸುಧಾರಿಸಬಾರದೇ….?
ಪತ್ನಿ : ಆಗಿನಿಂದ ಒಂದು ರಾಶಿ ಕೆಲಸ ಮಾಡುತ್ತಿದ್ದೇನೆ. ಕೈ ಬಿಡುವೇ ಇಲ್ಲ. ನಾನೇನು ಇದನ್ನು ವರದಕ್ಷಿಣೆ ಜೊತೆ ತವರಿನಿಂದ ಹೊತ್ತು ತಂದೆನೇ? ನೀವೇ ನಿಮ್ಮ ಮಗುವನ್ನು ಸುಧಾರಿಸಿ!
ಪತಿ : ಹಾಗಿದ್ದರೆ…. ಅತ್ತುಕೊಳ್ಳಲಿ ಬಿಡು… ನಾನೂ ಮದುವೆ ಮನೆಗೆ ದಿಬ್ಬಣದ ಜೊತೆ ಇದನ್ನು ಕರೆದುಕೊಂಡು ಬಂದಿರಲಿಲ್ಲ!
ರೋಗಿಷ್ಟ ಪತಿಯನ್ನು ಕರೆದುಕೊಂಡು ಪತ್ನಿ ಡಾಕ್ಟರ್ ಬಳಿ ಹೋದಳು. ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ಡಾಕ್ಟರ್ ಆಕೆಗೆ ವಿವರವಾಗಿ ತಿಳಿ ಹೇಳಿದರು.
“ನೋಡೀಮ್ಮ…. ಇವರಿಗೆ ಒಳ್ಳೆಯ ಊಟ ತಿಂಡಿ ಕೊಡಿ. ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳಿ. ಮನೆಯ 108 ಸಮಸ್ಯೆಗಳ ಬಗ್ಗೆ ಹೇಳಿ ಅವರ ಮನಶ್ಶಾಂತಿ ಹಾಳು ಮಾಡಬೇಡಿ. ಅನಗತ್ಯದ ಬೇಡಿಕೆಗಳನ್ನು ಮುಂದಿಟ್ಟು ಅವನ್ನು ಪೂರೈಸದಿದ್ದರೆ ತವರಿಗೆ ಹೋಗಿಬಿಡುತ್ತೇನೆ ಎಂದು ಭಯಪಡಿಸಬೇಡಿ. ಹೀಗೆ 6 ತಿಂಗಳು ಗಮನಿಸಿಕೊಂಡರೆ ತಂತಾನೇ ಆರೋಗ್ಯ ಸುಧಾರಿಸುತ್ತದೆ……”
ದಾರಿಯಲ್ಲಿ ಪತಿ ಕೇಳಿದ, “ಡಾಕ್ಟರ್ ನಿನ್ನನ್ನು ಒಳಗೆ ಕರೆಸಿ ಏನು ಹೇಳಿದರು?”
“ಏನಿಲ್ಲ…. ಉಪ್ಪು, ಹುಳಿ, ಖಾರ, ಸಿಹಿ, ಎಣ್ಣೆ, ತುಪ್ಪ ಹಾಕದ ಪಥ್ಯದ ಅಡುಗೆ ಮಾಡಿ ಬಡಿಸಿ, 1 ತಿಂಗಳಲ್ಲಿ ಎಲ್ಲಾ ಸುಧಾರಿಸುತ್ತದೆ ಎಂದರು,” ಎನ್ನುವುದೇ ಪತ್ನಿ?
ಪತಿಪತ್ನಿ ಮಧ್ಯೆ ವಿವಾದ ಮುಗಿಯುವ ಹಾಗೇ ಇರಲಿಲ್ಲ.
ಪತ್ನಿ : ಅದೆಲ್ಲ ಹಾಳಾಗಿ ಹೋಗಲಿ, ಈಗ ನಾನು ಮೂರ್ಖಳೋ ಅಥವಾ ನೀವು ಮೂರ್ಖರೋ…. ಬಿಡಿಸಿ ಹೇಳಿ.
ಪತಿ : ನೀನು ಮಹಾ ಬುದ್ಧಿವಂತೆ ಅಂತ ಎಲ್ಲರಿಗೂ ಗೊತ್ತಿದೆ ಬುದ್ಧಿವಂತರು ಯಾರಾದರೂ ಮೂರ್ಖರನ್ನು ಮದುವೆ ಆಗ್ತಾರೇನು….?