ತುಳಸಿದಾಸರು ಒಂದು ಕಡೆ ಹೇಳುತ್ತಾರೆ, “ಭಯ ಎನ್ನುವುದು ಮನುಷ್ಯನನ್ನು ಕೆಲಸ ಕಾರ್ಯ ಮಾಡಲು ಪ್ರೇರೇಪಿಸುತ್ತದೆ,” ಶಿಕ್ಷಕರೊಬ್ಬರು ಕೈಯಲ್ಲಿ ಹಿಡಿದ ಕೋಲಿನಿಂದಾಗಿ ಮಕ್ಕಳು ಪುಸ್ತಕ ಹಿಡಿದು ಕುಳಿತುಕೊಳ್ಳುತ್ತಾರೆ. ಒಂದು ಹಂತದ ತನಕ ಭಯ ಎನ್ನುವುದು ಕೆಲಸಕಾರ್ಯಗಳಿಗೆ ಪ್ರೇರಣಾದಾಯಕವಾಗಿ ಕೆಲಸ ಮಾಡುತ್ತದೆ. ಆದರೆ ಅದೇ ಭಯ ಮಿತಿ ಮೀರಿದರೆ ಸ್ವಾರ್ಥಸಿದ್ಧಿಯ ಸಾಧನವಾಗಿ ಬಳಸಲ್ಪಡುತ್ತಿದ್ದರೆ ಅದು ನಮ್ಮ ಪ್ರಗತಿಗೆ ಅಡ್ಡಗಾಲಾಗಿ ಪರಿಣಮಿಸುತ್ತದೆ. ನಮ್ಮ ಭಾರತೀಯ ಸಮಾಜ ಇದೇ ಭಯದ ಅತಿರೇಕತನದಿಂದಾಗಿ 21ನೇ ಶತಮಾನದವರಂತೆ ಜೀವನ ನಡೆಸುತ್ತಿದೆ. ಜಪಾನ್‌, ಚೀನಾ, ಕೊರಿಯಾದಂತಹ ದೇಶಗಳು ನಿರಂತರ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದರೆ, ಭಾರತದಲ್ಲಿ ಮಾತ್ರ ಪೂಜೆ ಪುನಸ್ಕಾರ, ಮೂಢನಂಬಿಕೆಗಳಿಂದಾಗಿ ಪ್ರಗತಿಯಲ್ಲಿ ಹಿನ್ನಡೆ ಕಂಡುಬರುತ್ತಿದೆ. ಒಂದೆಡೆ ಭಾರತದ ಬಡ ರೈತರು ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ತಿರುಪತಿ, ಶಿರಡಿ, ಸಿದ್ಧಿವಿನಾಯಕ, ಪದ್ಮನಾಭದಂತಹ ದೇಗುಲಗಳ ಅರ್ಚಕರು ಕೋಟಿ ಕೋಟಿ ರೂ. ಗಳ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ.

ದೇವರ ಭಯ ಇಲ್ಲಿನ ಶಿಕ್ಷಕರು ದೇಶದ ಭಾವಿ ಪ್ರಜೆಗಳನ್ನು ಸೃಷ್ಟಿಸಲು ಪ್ರಯತ್ನಶೀಲರಾಗಿದ್ದಾರೆ. ಅವರು ಸದಾ ಪಾಠಗಳನ್ನು ಹೇಳುತ್ತಾ ತಮ್ಮ ಗಂಟಲು ನೋಯಿಸಿಕೊಳ್ಳುತ್ತಿದ್ದಾರೆ. ಅದೇ ಪೂಜಾರಿ, ಪುರೋಹಿತರು, ಸ್ವಾಮಿಗಳು ಶ್ಲೋಕಗಳನ್ನು ಪಠಿಸುತ್ತಾ ಚಿತ್ರವಿಚಿತ್ರ ರೀತಿಯಲ್ಲಿ ಕುಣಿಯುತ್ತಾ ಜನರನ್ನು ಮೂರ್ಖರನ್ನಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಮನೆಮಠದ ಆವರಣದಲ್ಲಿ ಬಗೆಬಗೆಯ ಬಣ್ಣದ ಕಾರುಗಳು ಕಂಡುಬರುತ್ತವೆ. ಭಾರಿ ಎತ್ತರೆತ್ತರದ ಅದ್ಧೂರಿ ಕಟ್ಟಡಗಳು, ಸುಂದರ ಸೇವಕಿಯರು ಕಣ್ಣಿಗೆ ಬೀಳುತ್ತಾರೆ.

ನಮ್ಮ ದೇಶದ ಈ ಧಾರ್ಮಿಕ ಲೂಟಿಕೋರರು ಪೂಜೆ ಹಾಗೂ ಧರ್ಮದ ಅಸಂಖ್ಯ ಬಂದೂಕುಗಳ ಸಹಾಯದಿಂದ ಮೂಢನಂಬಿಕೆಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಮೂರ್ಖರನ್ನಾಗಿಸುತ್ತಿದ್ದಾರೆ. ಬಂದೂಕು ತೋರಿಸದೆಯೇ ಇವರು ಜನರನ್ನು ಹೇಗೆ ಹೆದರಿಸುತ್ತಿದ್ದಾರೆಂದರೆ ದೇವಿ ಕೋಪ ಮಾಡಿಕೊಂಡಿದ್ದಾಳೆ.

ಸಕಾರಾತ್ಮಕ ಶಕ್ತಿಗಳು ಅಲ್ಲೋಲ ಕಲ್ಲೋಲ ಸ್ಥಿತಿ ಉಂಟು ಮಾಡಬಹುದು. ಭೂತಪ್ರೇತಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡಬಹುದು ಎಂದೆಲ್ಲ ಜನರ ಮನಸ್ಸಿನಲ್ಲಿ ಭಯ ಹುಟ್ಟು ಹಾಕುತ್ತಾರೆ. ಆಗ ಯಾವುದನ್ನೂ ಪ್ರಶ್ನೆ ಮಾಡದೆ ಜನ ತಮ್ಮ ಬಳಿ ಇರುವುದನ್ನೆಲ್ಲ ಅವರಿಗೆ ಒಪ್ಪಿಸಿಬಿಡುತ್ತಾರೆ. ಜನರನ್ನು ಪೂಜೆಪುನಸ್ಕಾರಗಳಲ್ಲಿ ಹೇಗೆ ತೊಡಗಿಸಿಬಿಟ್ಟಿದ್ದಾರೆಂದರೆ, ಅವರಿಗೆ ಬೇರೇನನ್ನೂ ಯೋಚಿಸದಂತೆ ಮಾಡಿದ್ದಾರೆ. ಜನರ ದುಡ್ಡಿನಲ್ಲಿ ಈ ಪೂಜಾರಿ ಪುರೋಹಿತರು ಸ್ವಾಮಿಗಳು ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

ಕೇವಲ ಡಂಬಾಚಾರ

ನಿಮಗೆ ಹಸುಗಳ ಮೂತ್ರ ಕುಡಿಯಲು ಕೊಡಬಹುದು ಅಥವಾ ಸಲಹೆ ನೀಡಬಹುದು. ನಾವು ವೈಜ್ಞಾನಿಕ ಸತ್ಯ ಅರಿತೂ ಕೂಡ ಅವರ ಮಾತಿಗೆ ಮರುಳಾಗಿ ಬಿಡುತ್ತೇವೆ. ಯಾವ ಅಂಶವನ್ನು ದೇಹ ಹೊರಹಾಕುತ್ತೊ, ಅದು ದೇಹಕ್ಕೆ ಪುನಃ ಉಪಯುಕ್ತ ಆಗಲಾರದು. ಹೀಗಿದ್ದೂ ಕೂಡ ನಾವು ಜೈಕಾರ ಹಾಕುತ್ತಾ ಅದನ್ನು ಸೇವಿಸಿಬಿಡುತ್ತೇವೆ.

ವಾಸ್ತವದಲ್ಲಿ ಹಸುವಿನ ಕರುಳಿನಲ್ಲಿ ಕೆಲವು ಬಗೆಯ ವಿಷಕಾರಿ ರೋಗಾಣುಗಳು ಇರುತ್ತವೆ. ಒಂದು ವೇಳೆ ನಾವು ಅದರ ಮೂತ್ರವನ್ನು ಸೇವಿಸಿದಲ್ಲಿ ಆ ರೋಗಾಣುಗಳು ನಮ್ಮ ದೇಹದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಾಗುತ್ತದೆ.

ಅದೇ ರೀತಿ ಕಾಮಾಲೆ ರೋಗ ಉಲ್ಬಣಿಸಿದಾಗ ಬೇವಿನ ಟೊಂಗೆಗಳನ್ನು ತೆಗೆದುಕೊಂಡು ಮಂತ್ರವಾದಿಯ ಬಳಿ ಹೋಗುತ್ತಾರೆ. ಸಾಕ್ಷರರು ಕೂಡ ಅಲ್ಲಿ ಸಾಲು ಗಟ್ಟಿ ನಿಂತಿರುತ್ತಾರೆ.

ಸಿಡುಬು ರೋಗವನ್ನು ದೇವಿಯ ಅವಕೃಪೆ ಎಂದು ಭಾವಿಸಿ, ಅದನ್ನು ಪಾಲಿಸಲು ಸಾಕಷ್ಟು ಮೊತ್ತ ಖರ್ಚು ಮಾಡಲಾಗುತ್ತದೆ. ಕೊನೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಡಾಕ್ಟರ್‌ ಬಳಿ ಹೋಗಿ ಗೋಗರೆಯುತ್ತಾರೆ. ನೀವು ಪೂಜೆ ಪುನಸ್ಕಾರಗಳಲ್ಲಿ ಅಷ್ಟೊಂದು ವಿಶ್ವಾಸ ಇಟ್ಟಿರುವಿರಾದರೆ ಒಂದು ಪರೀಕ್ಷೆಗೆ ಸಿದ್ಧರಾಗಿ. ಪೊಟ್ಯಾಶಿಯಂ ಸೈನೈಡ್‌ನ ಒಂದು ಇಂಜೆಕ್ಷನ್‌ ಹಾಕಿಸಿಕೊಳ್ಳಿ ಹಾಗೂ ರಕ್ಷಣೆಗಾಗಿ ನಿಮ್ಮ ಪೂಜ್ಯ ದೇವರನ್ನು ಆಹ್ವಾನಿಸಿ, ಇಲ್ಲಿ ನಿಮ್ಮ ದುಡಿಮೆಯ ಹಣವನ್ನು ಕಬಳಿಸುವ ಪೂಜಾರಿ ಪುರೋಹಿತರಿಗಾದರೂ ಶರಣು ಹೋಗಿ. ನಿಮ್ಮ ನಂಬಿಕೆ ನಿಜವೇ ಆಗಿದ್ದಲ್ಲಿ ಭಯ ಏಕೆ? ನನ್ನ ನಂಬಿಕೆ ಪ್ರಕಾರ ನೀವು ಹಾಗೆ ಮಾಡಲ ಹೋಗುವುದಿಲ್ಲ. ಏಕೆಂದರೆ ದೇವರ ಮೇಲೆ ನಿಮಗೆ ನಂಬಿಕೆ ಇಲ್ಲ, ಈ ಪೂಜಾರಿ ಪುರೋಹಿತರ ಮೇಲೂ ಇಲ್ಲ. ಅಂದಹಾಗೆ ಬೇರೆಯವರು ಹೋಗುತ್ತಿದ್ದಾರೆಂದು ಹೋಗುತ್ತಿದ್ದೀರಿ.

ಕೋಲೆಬಸವನ ಹಾಗೆ ನಿಮ್ಮ ತಲೆಗೆ ಧರ್ಮದ ಪಟ್ಟ ಕಟ್ಟಲಾಗಿದೆ. ನೀವು ಯಾವ ದಿಕ್ಕಿನಲ್ಲಿ, ಏಕೆ ಹೋಗುತ್ತಿದ್ದೀರಿ ಎಂಬುದು ನಿಮಗೆ ಗೊತ್ತೇ ಇಲ್ಲ. ನೀವು ಹೊರಟು ಹೋಗುತ್ತಿದ್ದೀರಿ ಅಷ್ಟೆ. ಏಕೆಂದರೆ ನಿಮ್ಮ ಪೂರ್ವಿಕರು ಕೂಡ ಹೋಗಿದ್ದರು. ಧರ್ಮಗ್ರಂಥದಲ್ಲಿ ಹಾಗೆ ಬರೆಯಲಾಗಿದೆ ಎಂದು ನೀವು ಹಾಗೆ ಮಾಡುತ್ತಿರಬಹುದು, ಮತ್ತೂ ಒಂದು ಕಾರಣ ಗಮನಿಸಿ, ಕೆಲವು ಸ್ವಾರ್ಥಿ ಹಾಗೂ ಧನದಾಹಿ ಪೂಜಾರಿ ಪುರೋಹಿತರು ನಿಮ್ಮ ಮೆದುಳಿನ ಪ್ರೋಗ್ರಾಮಿಂಗ್‌ ಹೇಗೆ ಮಾಡಿಬಿಟ್ಟಿದ್ದಾರೆಂದರೆ, ಶೋಷಣೆಯನ್ನು ಸಹಿಸಿಕೊಂಡು ಕೂಡ ನೀವು ಶೋಷಿತರೆಂದು ಹೇಳುವ ಬದಲು ಭಕ್ತರೆಂದು ಹೇಳಿಕೊಳ್ಳುತ್ತೀರಿ.

ಇದೆಂಥ ಮೂಢನಂಬಿಕೆ?

ಶಾರೂಖ್‌ ಖಾನ್‌ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಎಲ್ಲ ವಾಹನಗಳ ಸಂಖ್ಯೆ 555 ಆಗಿದೆ. ಅವರು ತಮ್ಮ ಐಪಿಎಲ್ ಟೀಮ್ ಕೋಲ್ಕತಾ ನೈಟ್‌ ರೈಡರ್ಸ್‌ನ ಸೋಲಿನಿಂದ ಕಂಗೆಟ್ಟು ಜ್ಯೋತಿಷಿಯ ಹೇಳಿಕೆಯ ಮೇರೆಗೆ ತಮ್ಮ ಜರ್ಸಿಯ ಬಣ್ಣವನ್ನು ಕಂದು ಬಣ್ಣಕ್ಕೆ ಪರಿವರ್ತಿಸಿಕೊಂಡರು.`ಸತ್ಯಮೇವ ಜಯತೆ’ಯಂತಹ ಸಾಮಾಜಿಕ ಕಾರ್ಯಕ್ರಮ ನೀಡಿದ ಅಮೀರ್‌

ಖಾನ್‌ ಡಿಸೆಂಬರ್‌ ತಿಂಗಳನ್ನು ಅತ್ಯಂತ ಶುಭ ಎಂದು ಭಾವಿಸುತ್ತಾರೆ. ಹೀಗಾಗಿ ತಮ್ಮ ಪ್ರತಿಯೊಂದು ಹೊಸ ಚಿತ್ರವನ್ನೂ ಡಿಸೆಂಬರ್‌ನಲ್ಲಿಯೇ ಬಿಡುಗಡೆ ಮಾಡುತ್ತಾರೆ. ದೀಪಿಕಾ ಪಡುಕೋಣೆ ತಮ್ಮ ಯಾವುದೇ ಚಿತ್ರ ಬಿಡುಗಡೆಗೂ ಮುನ್ನ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಏಕ್ತಾ ಕಪೂರ್‌ ಸಹ ತನ್ನ ಯಾವುದೇ ಕೆಲಸ ಮಾಡುವ ಮುನ್ನ ಜ್ಯೋತಿಷಿಗಳ ಸಲಹೆ ಪಡೆಯುತ್ತಾರೆ. ಅದು ಶೂಟಿಂಗ್‌ ದಿನಾಂಕ ಆಗಿರಬಹುದು, ಸ್ಥಳ ನಿಗದಿಯಾಗಿರಬಹುದು, ಉಂಗುರ ಖರೀದಿಸುವುದೇ ಆಗಿರಬಹುದು. ತಮ್ಮ ಎಲ್ಲಾ ಧಾರಾವಾಹಿಗಳ ಶೀರ್ಷಿಕೆ `ಕ’ಯಿಂದಲೇ ಶುರುವಾಗಬೇಕು ಎನ್ನುತ್ತಾರೆ.

ನಟಿ ಶಿಲ್ಪಾ ಶೆಟ್ಟಿ ತಮ್ಮ ತಂಡ ರಾಜಾಸ್ಥಾನ ರಾಯಲ್ಸ್ ನ ಪಂದ್ಯಗಳಿರುವ ದಿನಗಳಂದು ಎರಡು ಗಡಿಯಾರಗಳನ್ನು ಕಟ್ಟಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದ ತಂಡಕ್ಕೆ ಗೆಲುವು ದೊರೆಯತ್ತದೆ ಎಂದು ಅವರು ನಂಬಿದ್ದಾರೆ. ಕರಣ್‌ ಜೋಹರ್‌ ಕೂಡ ತಮ್ಮ ಚಿತ್ರಗಳ ಹೆಸರು `ಕ’ದಿಂದ ಶುರುವಾದರೆ ಅದಕ್ಕೆ ಯಶಸ್ಸು ಲಭಿಸುತ್ತದೆ ಎಂದು ಭಾವಿಸಿ ಹಾಗೆಯೇ ಹೆಸರು ಇಡುತ್ತಿದ್ದರು.

ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಕೂಡ ಮೂಢನಂಬಿಕೆಗಳಿಗೇನೂ ಕಡಿಮೆ ಇಲ್ಲ. ಆಸ್ಕರ್‌ ಪುರಸ್ಕೃತ ಮಾರ್ಗನ್‌ ಫ್ರೀ ಮ್ಯಾನ್‌ ಅವರ ಅಭಿಮಾನಿಯೊಬ್ಬರು ಮೂಢನಂಬಿಕೆಯಿಂದ ಅವರನ್ನು ಹತೈಗೈದಿದ್ದರು. ಮಾರ್ಡ್‌ ಜುಕರ್‌ ಬರ್ಗ್‌ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಭಾರತದ ನೀಮ್ ಕರೋತಿ ಬಾಬಾನ ಅಭಿಮಾನಿಗಳಾಗಿದ್ದಾರೆ. ಈ ಓದು ಬರಹ ಬಲ್ಲ ಮೂಢನಂಬಿಕೆಗ್ರಸ್ತರ ಬಗ್ಗೆ ಏನು ತಾನೆ ಹೇಳಲು ಸಾಧ್ಯ?

ಈ ಎಲ್ಲ ಮೂಢನಂಬಿಕೆಗಳ ಜನನಿ ಪೂಜೆ. ಈ ಪೂಜೆಯೇ ನಮ್ಮನ್ನು ಮೂಢನಂಬಿಕೆಯ ಜೇಡರಬಲೆಯಲ್ಲಿ ಸಿಲುಕಿಸುವ ಪ್ರವೇಶದ್ವಾರ. ಇವೆಲ್ಲವುಗಳಿಗಿಂತ ಹೆಚ್ಚಾಗಿ ಭಯ ಉಂಟಾಗುವುದು ಪೂಜೆ ನಡೆಸುವ ಸಂದರ್ಭದಲ್ಲಿ ಮಂತ್ರ ಪಠಿಸುವಾಗ, ಪೂಜೆಯ ಸಮಯದಲ್ಲಿ ನಾವು ಮಂತ್ರ ಜಪಿಸುವ ನಿಯಮ ರೂಪಿಸಿದೆ. ಒಂದುವೇಳೆ ಆರೋಗ್ಯ ಸರಿಯಿರದಿದ್ದರೆ ಅಥವಾ ವ್ಯಸ್ತತೆಯ ಕಾರಣದಿಂದ ನಾವು ನಿಯಮ ಮುರಿಯುವ ಮತ್ತು ದೇವರು ಕೋಪಗೊಳ್ಳುತ್ತಾನೆಂಬ ಭಯದಿಂದ ಏಳುತ್ತಾ ಬೀಳುತ್ತ ನಿಯಮ ಪೂರ್ತಿಗೊಳಿಸಲು ಸಮಯ ಹಾಳು ಮಾಡುತ್ತೇವೆ.

ಜಪಮಾಲೆ ಜಪಿಸುವ ಮೂಲಕ ಸಮಯ ವ್ಯರ್ಥ ಮಾಡುವವರಿಗೆ ನಾವು ಕೊಡುವ ಏಕೈಕ ಸಲಹೆ ಎಂದರೆ, ಇದೆಲ್ಲವನ್ನು ಬಿಟ್ಟು ನೋಡಿ. ಆಗ ನಿಮಗೆ ನಾನು ಅದೆಷ್ಟು ಮೋಸ ಹೋಗಿದ್ದೆ, ಈಗ ಅದನ್ನೆಲ್ಲ ಬಿಟ್ಟ ನಂತರ ಅದೆಷ್ಟು ನೆಮ್ಮದಿ ಉಂಟಾಗಿದೆ ಎಂಬುದು ಭಾಸವಾಗುತ್ತದೆ.

ಕಂದಾಚಾರದ ದರ್ಬಾರು

ದುರ್ಗಾ ಮಂದಿರವೆಂದರ ಪೂಜಾರಿ ಮೈಮೇಲೆ ದುರ್ಗಾ ಮಾತೆಯ ಸವಾರಿ ಬರುತ್ತದೆಂದು ಹೇಳಲಾಗುತ್ತದೆ. ಅಲ್ಲಿಗೆ ದೊಡ್ಡ ದೊಡ್ಡ ವ್ಯಾಪಾರಿಗಳ ಜೊತೆಗೆ ಸರ್ಕಾರದ ಹಿರಿಯ ಅಧಿಕಾರಿಗಳೂ ಆಗಮಿಸುತ್ತಾರೆ.

ಬೆಂಕಿ ಹೊಂಡದ ಮೇಲೆ ನಡೆಯುವುದು, ನಾಲಿಗೆಯಲ್ಲಿ ತಂತಿ ಸಿಲುಕಿಸುವುದು, ಸ್ವಾಮೀಜಿಯೊಬ್ಬರ ಮಾತನ್ನು ನಂಬಿ ನೆಲ ಅಗೆದು ಚಿನ್ನದ ಶೋಧಕ್ಕೆ ಕೈ ಹಾಕುವುದು ಇವೆಲ್ಲ ನಡೆಯುತ್ತಿರುತ್ತವೆ. ತಿರುವನಂತಪುರದ ಪದ್ಮನಾಭ ದೇಗುಲದಲ್ಲಿ ಎಷ್ಟೊಂದು ಚಿನ್ನವಿದೆ ಎಂದರೆ ಭಾರತ ಪುನಃ ಚಿನ್ನದ ಹಕ್ಕಿ ಆಗಬಹುದು. ಆದರೆ ಅಲ್ಲಿನ 6ನೇ ಬಾಗಿಲಿನ ಭಯ ತೋರಿಸಿ ದೇಗುಲದ ಪೂಜಾರಿಗಳು ಅದನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ.

ಕ್ರೈಸ್ತರು ಬೆರಳುಗಳನ್ನು ಕ್ರಾಸ್‌ ಮಾಡುವುದು ಮತ್ತು ಹಾವು ಕಚ್ಚಿದಾಗ ಮಂತ್ರವಾದಿಯ ಬಳಿ ಹೋಗಿ ಮಂತ್ರದ ಮೂಲಕ ವಿಷ ಕಡಿಮೆ ಮಾಡಲು ಓಡುವುದು ಇದೇ ಭಯದ ಪ್ರವೃತ್ತಿಯ ಪರಿಚಯವಾಗಿದೆ.

ದೊಡ್ಡವರ ಹೆಸರು

80ನೇ ದಶಕದಲ್ಲಿ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಯ ಭಕ್ತರ ಪಟ್ಟಿಯಲ್ಲಿ ದೇಶದ ಪ್ರಖ್ಯಾತ ರಾಜಕಾರಣಿಗಳ ಹೆಸರು ಸೇರಿದಂತೆ ವಿದೇಶಿಗರೂ ಸೇರಿದ್ದರು. ನೆಪೋಲಿಯನ್‌ ಕಪ್ಪು ಬೆಕ್ಕಿಗೆ ಹೆದರುತ್ತಿದ್ದರೆ, ವಿನ್‌ಸ್ಟನ್‌ ಚರ್ಚಿಲ್ ‌ಶುಭವೆಂದು ಭಾವಿಸಿ ಅದನ್ನು ಸ್ಪರ್ಶಿಸುತ್ತಿದ್ದರು. ಕತ್ರೀನಾ ಕೈಫ್‌ ತನ್ನ ಪ್ರತಿಯೊಂದು ಚಲನಚಿತ್ರದ ಬಿಡುಗಡೆಗೂ ಮುನ್ನ ಸಲೀಮ್ ಚಿಸ್ತಿಯ ದರ್ಗಾಗೆ ಹೋಗಿ ಚಾದರ್‌ ಹೊದ್ದಿಸುತ್ತಾಳೆ. ಸಚಿನ್‌ ತೆಂಡೂಲ್ಕರ್‌ ಸತ್ಯ ಸಾಯಿಬಾಬಾ ನಿಧನರಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದರು ಹಾಗೂ ಬ್ಯಾಟಿಂಗ್‌ ಮಾಡುವಾಗ ಪ್ಯಾಡ್‌ನ್ನು ತದ್ವಿರುದ್ಧ ಕಟ್ಟಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದರು. ಅಮಿತಾಭ್ ‌ಬಚ್ಚನ್‌ ತಮ್ಮ ಸೊಸೆಯ ಮಾಂಗಲಿಕ ದೋಷ (ಉ. ಭಾರತದಲ್ಲಿ ಪ್ರಬಲ)ವನ್ನು ನಿವಾರಿಸಲು ಮೊದಲು ಆಕೆಯ ವಿವಾಹವನ್ನು ಯಾವುದಾದರೊಂದು ಮರದ ಜೊತೆ ನೆರವೇರಿಸುತ್ತಾರೆ. ಅನಿಲ್ ‌ಅಂಬಾನಿ ಗೋವರ್ಧನ ಮಹಾರಾಜರ ಮೇಲೆ ನೂರಾರು ಲೀಟರ್‌ ಹಾಲು ಸುರಿಸುತ್ತಾರೆ. ಮುಕೇಶ್‌ ಅಂಬಾನಿ ಕೂಡ ಈಚೆಗೆ ಕುಟುಂಬದವರು ಹಾಗೂ ಮಿತ್ರರೊಂದಿಗೆ ಸೇರಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಈ ಮುಖಂಡರ ಬಗ್ಗೆ ಅನೇಕ ಟೀಕೆ ಟಪ್ಪಣಿಗಳು ಕೇಳಿ ಬರುತ್ತಿರುತ್ತವೆ. ಸ್ವತಃ ಅಮಿತಾಭ್ ‌ಬಚ್ಚನ್‌ ಒಂದು ಕಡೆ ಹೇಳುತ್ತಾರೆ, ತಾನು ಭಾರತ ಆಡುತ್ತಿರುವ ಮ್ಯಾಚ್‌ ನೋಡಿದ್ರೆ ಅದು ಸೋತು ಹೋಗುತ್ತದೆ ಎಂದು ನಂಬಿ ಭಾರತ ಆಡುವ ಮ್ಯಾಚನ್ನು ನೋಡಲು ಹೋಗುವುದಿಲ್ಲ. ಹೀಗೆ ಅದೆಷ್ಟೋ ಕ್ರೀಡಾಪಟುಗಳು ಭ್ರಮೆ ಹೊಂದಿರುತ್ತಾರೆ.

ಒಂದು ನಿರ್ದಿಷ್ಟ ಸೀಟಿನ ಮೇಲೆ ಕುಳಿತುಕೊಳ್ಳುವುದರಿಂದ ಯಶಸ್ಸು ದೊರೆಯುತ್ತದೆ, ಒಂದು ನಿರ್ದಿಷ್ಟ ಪೋಷಾಕು ಧರಿಸುವುದರಿಂದ ಗೆಲುವು ಸಿಗುತ್ತದೆ ಎಂದೆಲ್ಲ ನಂಬುತ್ತಾರೆ. ತಾನು ಅದಕ್ಕಾಗಿ ಪಟ್ಟಶ್ರಮ, ಪಡೆದ ತರಬೇತಿ, ಆಟ ಆಡುವಾಗಿನ ಚಾಕಚಕ್ಯತೆ ಅವರಿಗೆ ನೆನಪಿಗೆ ಬರುವುದೇ ಇಲ್ಲ.

ನಟ ಸಂಜೀವ್ ‌ಕುಮಾರ್‌ ಮದುವೆ ಆಗಲಿಲ್ಲ. ಆದರೆ ಅದಕ್ಕೂ ಮುಂಚೆ ಅವರು ಅದೆಷ್ಟೋ ಸಲ ಪ್ರೀತಿ ಮಾಡಿದ್ದರು. ಅವರಿಗಿದ್ದ ಮೂಢನಂಬಿಕೆ ಏನೆಂದರೆ ಕುಟುಂಬದಲ್ಲಿ ಹುಟ್ಟಿದ ಮಗುವಿಗೆ 10 ವರ್ಷ ಆಗುತ್ತಿದ್ದಂತೆ ತಂದೆಯ ಸಾವು ಸಂಭವಿಸುತ್ತದೆ ಎಂಬುದಾಗಿತ್ತು. ಅವರ ತಾತ, ತಂದೆ ಹಾಗೂ ಸೋದರರು ಎಲ್ಲರ ಜೊತೆಗೂ ಹೀಗೆಯೇ ಆಗಿತ್ತು. ಸಂಜೀವ್ ‌ಕುಮಾರ್‌ ತನ್ನ ಮೃತ ಅಣ್ಣನ 10 ವರ್ಷದ ಮಗನನ್ನು ದತ್ತು ಪಡೆದರು. ಅದಾದ 10 ವರ್ಷದ ಬಳಿಕ ಅವರೂ ಸಾವಿಗೀಡಾದರು. ಅವರು ಮದುವೆ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಮದುವೆ ಮಾಡಿಕೊಳ್ಳದೇ ಇದ್ದರೂ ಅವರು 10 ವರ್ಷದ ಬಳಿಕ ತೀರಿಹೋದದ್ದು ನಿಜ.

ಜೀವದೊಂದಿಗೆ ಚೆಲ್ಲಾಟ

ಗ್ರಾಮೀಣ ಭಾಗದ ಜನ ಕಬ್ಬಿಣದ ಸಲಾಕೆ ಬಿಸಿ ಮಾಡಿ ಸಿಡಿ ಹಾಕಿಸುವುದು ಎಂಬ ಹೆಸರಲ್ಲಿ ಹಲವು ರೋಗಗಳ ಚಿಕಿತ್ಸೆ ಮಾಡುತ್ತಾರೆ. ಕಡವೆಯ ಕೊಂಬುಗಳ ಮೂಲಕ ಜನರ ದೇಹದಿಂದ ರಕ್ತ ಹೊರತೆಗೆದು ಬಾಬಾಗಳು ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಬಗ್ಗೆ ಪ್ರತಿಪಾದನೆ ಮಾಡುತ್ತಾರೆ.

ಜಯ ಗುರುದೇವ್, ಕೃಪಾಲು ಬಾಬಾ ಮಂದಿರಗಳಿಗೆ ಹೋಗುವ, ನಿರ್ಮಲ ಬಾಬಾ ಆಸಾರಾಮ್ ಹಾಗೂ ಸತ್ಯ ಸಾಯಿಬಾಬಾರಿಗೆ ಜೈ ಎಂದು ಹೇಳುವ ಸಾಕ್ಷರ ಭಕ್ತರಿಗೆ ಈ ಬಾಬಾಗಳ ಹಿನ್ನೆಲೆ ಹಾಗೂ ಕುಕೃತ್ಯಗಳ ಬಗ್ಗೆ ತಿಳಿದುಕೊಳ್ಳಲು ಏಕೆ ಪ್ರಯತ್ನ ಮಾಡುವುದಿಲ್ಲ?

ಬಾಬಾಗಳ ಮೇಲೊಂದು ಕ್ಷ-ಕಿರಣ

ನಿರ್ಮಲ್ ಜಿತ್‌ ಸಿಂಗ್‌ ನರುಲಾ ಹಲವು  ವ್ಯಾಪಾರಗಳಿಗೆ ಕೈ ಹಾಕಿದರೂ, ಅದರಲ್ಲಿ ಯಶ ಕಾಣಲಿಲ್ಲ. ಹೀಗಾಗಿ ಸ್ವಾಮೀಜಿ ವೇಷ ಧರಿಸಿದರು. ಆಸಾರಾಮ್ ಬಾಪು ಬಂಜೆ ಮಹಿಳೆಯರ ಮಡಿಲಲ್ಲಿ ಮಗು ಕೊಡುವ ಚಮತ್ಕಾರ ತೋರಿಸುತ್ತಿದ್ದರು. ಅವರ ಆಶ್ರಮಕ್ಕೆ ಹೋದ ಮಹಿಳೆಯರು ಹೇಗೆ ಗರ್ಭ ಧರಿಸುತ್ತಿದ್ದರು ಎಂಬ ಸತ್ಯ ಈಗ ಇಡೀ ಜಗತ್ತಿಗೆ ಗೊತ್ತಿದೆ.

ನಿತ್ಯಾನಂದ ಸ್ವಾಮಿ ಪ್ರತಿದಿನ ಅದೆಷ್ಟು ಯುವತಿಯರೊಂದಿಗೆ ಧ್ಯಾನ ಯೋಗ ಮಾಡುತ್ತಿದ್ದ ಎಂಬುದು ದಕ್ಷಿಣ ಭಾರತದ ನಟಿಯೊಬ್ಬಳ ವಿಡಿಯೋದಿಂದ ಬಹಿರಂಗಗೊಂಡಿದೆ.

ಇವರೂ ಕಡಿಮೆ ಏನಿಲ್ಲ!

63 ವರ್ಷದ ಬಾಬಾ ರಾಮಪಾಲ್ ‌ತನ್ನ ಆಶ್ರಮದಲ್ಲಿ ಅದೆಷ್ಟೋ ಮಹಿಳೆಯರನ್ನು, ಮಕ್ಕಳನ್ನು ಕೂಡಿ ಹಾಕುತ್ತಿದ್ದ. ತನ್ನ ಆಶ್ರಮದಲ್ಲಿ ಅದೆಷ್ಟೋ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದ. ರಾಮಪಾಲ್‌ ಈಗ ಪೊಲೀಸ್‌ ವಶದಲ್ಲಿದ್ದಾನೆ. ಸಾದಾಸೀದಾ ನೌಕರನಾಗಿ ಜೀವನ ಆರಂಭಿಸಿದ ವಿಶ್ವದ ಟಾಪ್‌ ವ್ಯಕ್ತಿ ಎನಿಸಿದ ಚಂದ್ರಸ್ವಾಮಿ ಹೆಚ್ಚು ಚರ್ಚೆಗೆ ಬಂದದ್ದು ಆಶ್ರಮದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗ, ಅಲ್ಲಿ (ಶಸ್ತ್ರಾಸ್ತ್ರ ದಲ್ಲಾಳಿ) ಅದನಾನ್‌ ಖಾನ್ ರೋಗಿಗೆ ಸೇರಿದ 11 ಮಿಲಿಯನ್‌ಡಾಲರ್‌ನ ಅಸಲಿ ಡ್ರಾಫ್ಟ್ ಸಿಕ್ಕಿತ್ತು. ಚಂದ್ರಸ್ವಾಮಿ ವರ್ಷದ ಹಿಂದಷ್ಟೇ ನಿಧನರಾದರು.

ಓಶೋ ಎಂತಹ ಒಬ್ಬ ವ್ಯಕ್ತಿಯೆಂದರೆ, ಅಮೆರಿಕವನ್ನು ಹೆದರಿಸುವ ವ್ಯಕ್ತಿಗಳಲ್ಲಿ ಈತ ಕೂಡ ಇದ್ದ. ತನ್ನ ಆಶ್ರಮದಲ್ಲಿ ಮುಕ್ತ ವ್ಯಭಿಚಾರ ನಡೆಸುವ, ಅದರಿಂದಲೇ ದೇವರು ಸಾಕಾರಗೊಳ್ಳುತ್ತಾನೆ ಎಂದು ಹೇಳುವ ಆತ, ಅಮೆರಿಕದ ಆಶ್ರಮದಲ್ಲಿ ತನ್ನದೇ ಸಮರ್ಥಕರ ಹತೈಗೈಯುವ ಯೋಜನೆ ರೂಪಿಸಿದ ಹಲವು ಆರೋಪಗಳನ್ನು ಎದುರಿಸುತ್ತಿದ್ದ.

ಕಲ್ಯಾಣಸಿಂಗ್‌ ನಿಕಟವರ್ತಿ, ಭಾಜಪಾ ಸಂಸದರಾಗಿದ್ದ ಸಾಕ್ಷಿ ಮಹಾರಾಜ್‌ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? 2009ರ ಮಾರ್ಚ್‌ನಲ್ಲಿ ಯುವತಿಯೊಬ್ಬಳ ಶವ ದೊರಕಿತು. ಆಗ ಎಲ್ಲೆಲ್ಲೂ ಅಲ್ಲೋಲ ಕಲ್ಲೋದ ವಾತಾವರಣ ಸೃಷ್ಟಿಗೊಂಡಿತ್ತು. ಭೂಮಿ ಆಕ್ರಮಣ ಹಾಗೂ ಮಹಿಳೆಯರ ಲೈಂಗಿಕ ಶೋಷಣೆಯ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತವೆ. ಸಾಕ್ಷಿ ಅವರ ಬಳಿ ಆಶ್ರಮದ ರೂಪದಲ್ಲಿ ಸಾಕಷ್ಟು ಆಸ್ತಿಪಾಸ್ತಿ ಇದೆ.

ಇವರಿಗೆ ಧರ್ಮವೇ ದಂಧೆ

1 ರೂ.ನಲ್ಲಿ ಶಿಕ್ಷಣ ನೀಡುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪೈಲಟ್‌ ಬಾಬಾ ಅವ್ಯವಹಾರದ ಮೂಲಕ ಕೋಟ್ಯಂತರ ರೂ. ಗಳಿಸಿದ. ಬೃಂದಾವನದಲ್ಲಿ ಬಾಬಾ ಭಗವತಾಚಾರ್ಯ ರಾಜೇಂದ್ರ ಉರುಫ್‌ ಪೋರ್ನ್‌ ಸ್ವಾಮಿಯನ್ನು ಬಂಧಿಸಲಾಗಿತ್ತು. ಆತ ಅಶ್ಲೀಲ ಚಿತ್ರಗಳ ಶೂಟಿಂಗ್‌ ಮಾಡುತ್ತಿರುವ ವಿಷಯ ಬಹಿರಂಗವಾಗಿತ್ತು. ವಿದೇಶಿ ಯುವತಿಯರ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಚಿತ್ರಗಳು ಸಿಕ್ಕಿದ್ದವು. ಅಷ್ಟೇ ಅಲ್ಲ, ಅವನು ತನ್ನ ಹೆಂಡತಿಯ ಅಶ್ಲೀಲ ಸಿಡಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ.

ಬಾಬಾ ಗುರ್ಮಿತ್

ರಾಮ ರಹೀಮ್ ಮೇಲೊಂದು ಆರೋಪ ಕೇಳಿ ಬಂದಿತ್ತು. ಆತನ ಮೇಲೆ ಆಶ್ರಮದಲ್ಲಿದ್ದವರಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿದ  ಹಾಗೂ ಚಾರಿತ್ರ್ಯಹೀನತೆಯ ಆರೋಪ ಹೊರಿಸಲಾಗಿತ್ತು.

ಸಂತ ಸ್ವಾಮಿ ಭೀಮಾನಂದರ ಹೆಸರು ದೇಶದ ಅನೇಕ ಕಡೆ ಸೆಕ್ಸ್ ಸ್ಕ್ಯಾಂಡಲ್ ನಡೆಸಿದ ಆರೋಪ ಕೇಳಿ ಬಂದಿತ್ತು. 1997ರಲ್ಲಿ ಲಜಪತ್‌ ನಗರದಲ್ಲಿ ಬಂಧಿಸಲಾಗಿತ್ತು. ಈತ ಮಂತ್ರದಿಂದ ರೋಗ ಗುಣಪಡಿಸುವುದಾಗಿ ಕೂಡ ನಂಬಿಸುತ್ತಿದ್ದ.

ಧರ್ಮದ ವ್ಯಾಪಾರ

ಸತ್ಯ ಸಾಯಿಬಾಬ ಭಕ್ತರು, ವಿಐಪಿ ಭಕ್ತರ ಸಂಖ್ಯೆ  ಅಪಾರ. ಮಾಜಿ ಪ್ರಧಾನಿಗಳಾದ ನರಸಿಂಹರಾವ್‌, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌, ಮಾಜಿ ರಾಷ್ಟ್ರಪತಿ ಅಬ್ದುಲ್ ‌ಕಲಾಂ, ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ, ವಿಐಪಿಯ ಅಶೋಕ ಸಿಂಘಾಲ್‌, ಆರ್‌ಎಸ್‌ಎಸ್‌ನ ಬಹುತೇಕ ಎಲ್ಲ ಮುಖಂಡರೂ ಅವರ ಬಳಿ ಹೋಗುತ್ತಿದ್ದರು.

ಒಂದು ವೇಳೆ ಇವರು ಇಷ್ಟೊಂದು ಪ್ರಖ್ಯಾತ ಮಂತ್ರವಾದಿಗಳಾಗಿದ್ದಲ್ಲಿ, ತಮಗಾಗಿಯೇ ಹಣವನ್ನು ಮಂತ್ರದ ಬಲದಿಂದ ಏಕೆ ಒಗ್ಗೂಡಿಸಿಕೊಳ್ಳಲು ಆಗಲಿಲ್ಲ? ದೇವಸ್ಥಾನಗಳನ್ನು ನಿರ್ಮಿಸದೆ ಆಸ್ಪತ್ರೆಗಳನ್ನು ಶಿಕ್ಷಣ ಸಂಸ್ಥೆಗಳನ್ನು ಏಕೆ ಕಟ್ಟಲಾಗುತ್ತಿಲ್ಲ? ಎಷ್ಟೊಂದು ಹಣವನ್ನು ದೇಗುಲ ಹಾಗೂ ಆಶ್ರಮ ಸ್ಥಾಪಿಸಲು ಖರ್ಚು ಮಾಡಲಾಗುತ್ತೋ, ಅಷ್ಟು ಹಣವನ್ನು ವಿಶ್ವಮಟ್ಟದ ಶಿಕ್ಷಣ ಕೇಂದ್ರ ಹಾಗೂ ಆಸ್ಪತ್ರೆ ತೆರೆಯಲು ಬಳಸಿದ್ದರೆ ಜನರ ಕಲ್ಯಾಣ ಆಗುತ್ತಿರಲಿಲ್ಲವೆ? ಅವರಿಗೆ ಅಂಗಡಿಯಿಂದ ಬಂದ ಹಣವನ್ನು ಅಂಗಡಿಗೆ ಖರ್ಚು ಮಾಡಬೇಕಿತ್ತು. ಏಕೆಂದರೆ ಹೆಚ್ಚೆಚ್ಚು ಗ್ರಾಹಕರು ಬರಬೇಕು ಅಲ್ಲವೇ? ಇಂತಹ ಯೋಚನೆ ಪೂಜಾರಿ ಆಗಿದ್ದ ಅಲ್ಲ, ವ್ಯಾಪಾರ ನಡೆಸಲು ನಿಸ್ಸೀಮನಾಗಿದ್ದವ ಮಾತ್ರ ಯೋಚಿಸಲು ಸಾಧ್ಯ.

ಮಂತ್ರ ತಂತ್ರದ ಹೆಸರಿನಲ್ಲಿ ಮೋಸ

ಮೂಢನಂಬಿಕೆಯ ಎರಡನೇ ಬಹು ದೊಡ್ಡ ವರ್ಗವೆಂದರೆ ಮಂತ್ರ ತಂತ್ರ. ಮುಸ್ಲಿಂ ಬಾಬಾ ವಶೀಕರಣದ ಮೂಲಕ ವಿರೋಧಿ ಹಾಗೂ ಉದಾಸೀನ ವ್ಯಕ್ತಿಯನ್ನು 24 ಗಂಟೆಯಲ್ಲಿ ವಶಕ್ಕೆ ಪಡೆಯುವ ಗ್ಯಾರಂಟಿ ಕೊಡುತ್ತಾನೆ. ಆದರೆ ವ್ಯಕ್ತಿ 24 ಗಂಟೆ ನಿರೀಕ್ಷಿಸುತ್ತ ಉಳಿದುಬಿಡುತ್ತಾನೆ ಹಾಗೂ ಆ ಬಾಬಾ ಮತ್ತೊಂದು ಬೇಟೆಯನ್ನು ಮೋಸಗೊಳಿಸಲು ಹೊರಟು ಬಿಟ್ಟಿರುತ್ತಾನೆ.

ಮಂತ್ರ ತಂತ್ರ, ಮುಹೂರ್ತ, ಮಣಿ, ತಾಯಿತ ಮುಂತಾದವು ಈ ಧೂರ್ತರು ಹಬ್ಬಿಸಿದ ಮೂಢನಂಬಿಕೆಗಳು. ಇವರು ಅದೃಶ್ಯ ವ್ಯಕ್ತಿಗಳ ಭಯ ತೋರಿಸಿ ಮತ್ತು ತಮಗೆ ತೋಚಿದ ಕಥೆಗಳನ್ನು ಹೇಳಿ ಅಂದರೆ ಈ ಭೂಮಿ ಶೇಷನಾಗನ ಹೆಡೆಯ ಮೇಲೆ ಆಸೀನನಾಗಿದೆ. ಮಳೆ, ಗರ್ಜನೆ ಮತ್ತು ಮಿಂಚು ಇವು ಇಂದ್ರನ ಕ್ರಿಯೆಗಳು, ರೋಗಕ್ಕೆ ಭೂತ ಪಿಶಾಚಿಗಳು ಕಾರಣ ಎಂದೆಲ್ಲ ಹೇಳಿ ಜನರಿಂದ ದಾನ ದಕ್ಷಿಣೆಯ ರೂಪದಲ್ಲಿ ಸಾಕಷ್ಟು ಹಣ ದೋಚುತ್ತ ಬಂದಿದ್ದಾರೆ.

ಯಾವುದೇ ಒಂದು ದೇಶ ಮೂಢನಂಬಿಕೆಯ ಮುಖಾಂತರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದಕ್ಕಾಗಿ ಕರ್ಮ ಅಥವಾ ಕಾಯಕ ಅಗತ್ಯ. ಶ್ರೀಮಂತ ದೇಶಗಳಲ್ಲೂ ಮೂಢನಂಬಿಕೆ ಇದೆ. ಆದರೆ ಅಲ್ಲಿ ಮೂಢನಂಬಿಕೆ ವಿರೋಧಿಗಳು ವಿಜ್ಞಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೆಂದೇ ಅವರು ನಿರಂತರವಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಭಾರತದ ಕಣಕಣದಲ್ಲೂ ಮೂಢನಂಬಿಕೆ ತುಂಬಿ ತುಳುಕುತ್ತಿದೆ. ಈಗ ಧರ್ಮಕ್ಕೆ ದೇಶದ ಸಮಾನ ಸ್ಥಾನಮಾನ ಕೊಟ್ಟು, ಮೂಢನಂಬಿಕೆ ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.

– ಎಂ. ಸ್ವಪ್ನಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ