ಹೆಚ್ಚಿನ ವ್ರತಗಳು ಗಂಡ, ಮಗನ ದೀರ್ಘಾಯುಷ್ಯಕ್ಕಾಗಿಯೂ, ಧನ ಸಂಪತ್ತು ಅಥವಾ ಆರೋಗ್ಯ ಕರುಣಿಸಬೇಕೆಂಬ ಕಾರಣಕ್ಕಾಗಿಯೂ ಆಚರಿಸಲ್ಪಡುತ್ತವೆ. ಕೆಲವೊಂದು ವ್ರತಗಳು ಸ್ವಯಂಪ್ರೇರಣೆಯಿಂದಲೋ, ಮತ್ತೆ ಕೆಲವೊಂದು ವ್ರತಗಳು ಸಮಾಜದ ಭಯದಿಂದ! ಅವನ್ನು ಆಚರಿಸದ ಮಹಿಳೆ ಸಮಾಜದ ಕೋಪಕ್ಕೆ ತುತ್ತಾಗಬೇಕಾಗುತ್ತದೆ.
ಅಂಜಲಿಯ ಮದುವೆಯಾಗಿ 6 ತಿಂಗಳಷ್ಟೇ ಆಗಿತ್ತು. ಅಷ್ಟರಲ್ಲಾಗಲೇ ಅವಳು ಮುದುಡಿದ ತಾವರೆಯಂತಾಗಿದ್ದಳು. ಅವಳ ಮುಖದ ಕಾಂತಿ ಹಾಗೂ ನಗು ಹೊರಟು ಹೋಗಿತ್ತು. ಆಕೆ ಮದುವೆಯಾಗಿ ಬಂದಾಗಿನಿಂದಲೂ ಅವಳ ಸ್ವಾತಂತ್ರ್ಯದ ಮೇಲೆಯೇ ಅಂಕುಶ ಹಾಕಲಾಗಿತ್ತು. ಅವಳು ಮದುವೆಗೆ ಮುಂಚೆ ಹೇಗೆ ಇರುತ್ತಿದ್ದಳೊ, ಹಾಗೆ ಇರಲು ಅವಳಿಗೆ ಅವಕಾಶ ಕೊಡುತ್ತಿರಲಿಲ್ಲ. ಅವಳ ಮಾತುಕತೆ, ಉಡುಗೆ ತೊಡುಗೆ ಎಲ್ಲದರ ಮೇಲೂ ಅತ್ತೆಮನೆಯಲ್ಲಿ ನಿರ್ಬಂಧ ಹೇರಲಾಗಿತ್ತು.
ಅಂಜಲಿಯ ಮದುವೆಯಾಗಿ 1 ತಿಂಗಳ ತನಕ ಎಲ್ಲ ಸರಿಯಾಗಿತ್ತು. ಹನಿಮೂನ್, ಸಂಬಂಧಿಕರ ಮನೆಗೆ ಹೋಗುವುದು ಬರುವುದರಲ್ಲಿ 1 ತಿಂಗಳು ಹೋಗಿದ್ದೇ ಗೊತ್ತಾಗಲಿಲ್ಲ. ಆ ಬಳಿಕ ನಿರ್ಬಂಧಗಳು ಒಂದೊಂದಾಗಿ ಹೇರಲ್ಪಡಲು ಶುರುವಾದವು. ಅಂತಹ ನಿರ್ಬಂಧಗಳನ್ನು ಅವಳು ಮುರಿದದ್ದೇ ಅವಳಿಗೆ ಮುಳುವಾಯಿತು. ಇಂದು ಆ ದೇವರ ವ್ರತ, ನಾಳೆ ಇನ್ಯಾವುದೊ ದೇವರ ಪೂಜೆ. ಗಂಡನ ದೀರ್ಘಾಯುಷ್ಯಕ್ಕಾಗಿ ಒಂದು ವ್ರತ ಮಾಡಿದರೆ, ಸ್ತ್ರೀ ಗೌರವ ಹೆಚ್ಚಿಸಿಕೊಳ್ಳಲು ಮತ್ತೊಂದು ವ್ರತ. ಪ್ರತಿವಾರ ಒಂದೆರಡು ವ್ರತಗಳಾದರೂ ಬರುತ್ತಲೇ ಇದ್ದವು.
ರೀತಿ ನೀತಿಗಳು ಅವಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದವು. ಜೀನ್ಸ್ ಧರಿಸಬಾರದು ಎನ್ನುವುದೊಂದು ನಿರ್ಬಂಧ. ಇದಕ್ಕೆ ಅವರು ಕೊಟ್ಟ ಕಾರಣ ನೀನೀಗ ಮದುವೆಯಾಗಿದ್ದೀಯಾ, ಸೀರೆ ಉಡು, ಕುಂಕುಮ ಹಚ್ಚಿಕೊ, ತಲೆಯ ಮೇಲೆ ಸೆರಗು ಹೊದ್ದುಕೊ. ಇವೆಲ್ಲ ನಿರ್ಬಂಧಗಳು ಅವಳ ಹಕ್ಕನ್ನು ಮೊಟಕುಗೊಳಿಸುತ್ತ ಹೋದವು. ಅಂದಹಾಗೆ ವ್ರತ, ಹಬ್ಬಗಳು, ರೀತಿನೀತಿಗಳು ಮರ್ಯಾದೆ, ಸಂಸಾರ ಮುಂತಾದ ಸ್ತ್ರೀಯರ ಮೇಲೆ ಕಡಿವಾಣ ಹಾಕುವ ಪ್ರಮುಖ ಅಸ್ತ್ರಗಳಾಗಿವೆ. ಅವುಗಳಲ್ಲಿ ಸಿಲುಕಿ ಅವಳ ಸ್ವಾತಂತ್ರ್ಯ ಹರಣವಾಗುತ್ತದೆ. ಮದುವೆಯಾಗಿ 10 ದಿನ, 1 ತಿಂಗಳು, ಆ ಬಳಿಕ 1 ವರ್ಷ ಪೂರ್ತಿಗೊಂಡ ಪ್ರಯುಕ್ತ ಆಕೆ ಒಂದಿಲ್ಲೊಂದು ವ್ರತ ಉಪವಾಸ ಮಾಡಬೇಕಾಗುತ್ತದೆ. ಅವಳ ಸ್ಥಿತಿ ಜೈಲಿನ ಕೈದಿಯಂತಾಗುತ್ತದೆ.
ನಿರ್ಬಂಧದಲ್ಲಿ ಮಹಿಳೆಯರು
ಇವೆಲ್ಲವುಗಳಿಂದ ಅವಳಿಗೆ ಮಾತನಾಡಲು ಖುಷಿಯಿಂದ ಕಾಲ ಕಳೆಯಲು ಅಷ್ಟೇ ಏಕೆ ಊಟತಿಂಡಿಯ ಮೇಲೂ ನಿರ್ಬಂಧಗಳು ಹಾಕಲ್ಪಡುತ್ತವೆ. ಅವಳಿಗೆ ತನ್ನ ಅಸ್ತಿತ್ವವೇ ಇಲ್ಲ ಎಂದು ಅನಿಸತೊಡಗುತ್ತದೆ. ಬಹಳಷ್ಟು ಕುಟುಂಬಗಳು ಮದುವೆಯಾಗಿ ಬಂದ ಹುಡುಗಿ ಎಷ್ಚೇ ಆಧುನಿಕ ಮನೋಭಾವದಳಾಗಿದ್ದರೂ ಆಕೆಗೆ ಸೀರೆ ಉಡಲು ಒತ್ತಡ ಹೇರಲಾಗುತ್ತದೆ. ಇದೆಲ್ಲದರಿಂದ ಆಕೆಯ ಪ್ರತಿಭೆ ಹಾಗೂ ಆಸಕ್ತಿಗಳು ಕ್ರಮೇಣ ದೂರವಾಗುತ್ತ ಹೋಗುತ್ತವೆ. ಹಲವು ನಿರ್ಬಂಧಗಳ ಸಂಕೋಲೆಯಲ್ಲಿ ಬಂಧಿಸಲ್ಪಟ್ಟ ಮಹಿಳೆ ಅದಕ್ಕೆ ಎಷ್ಟು ಅಡಿಕ್ಟ್ ಆಗಿಬಿಡುತ್ತಾಳೆಂದರೆ ಅವಳಿಗೆ ಏನನ್ನಾದರೂ ಮಾಡಬೇಕೆಂಬ ಹುಮ್ಮಸ್ಸು ಹೊರಟುಹೋಗುತ್ತದೆ. ಹಿಂದೂ ಸಮಾಜ ಮೊದಲಿನಿಂದಲೂ ಪುರುಷ ಪ್ರಧಾನವಾಗಿದೆ. ಯಾವುದಾದರೊಂದು ಕಾರಣದಿಂದ ಪುರುಷ ತನ್ನನ್ನು ತಾನು ಪರಂಪರೆ, ರೀತಿನೀತಿ, ವ್ರತ ಉಪಾಸಗಳಿಂದ ದೂರ ಇಟ್ಟುಕೊಳ್ಳುತ್ತಾನೆ. ಅದೊಂದು ಕಾಲವಿತ್ತು, ಆಗ ಪುರುಷರೆಲ್ಲರೂ ಜುಬ್ಬಾ ಪಂಚೆ ಧರಿಸುತ್ತಿದ್ದರು. ಆದರೆ ಈಗ ಎಲ್ಲರೂ ಪ್ಯಾಂಟ್ ಶರ್ಟ್ ಧರಿಸುತ್ತಾರೆ. ಪುರುಷ ಹೊರಗೆ ಹೋಗಿ ದುಡಿದು ಬರುತ್ತಾನೆ ಎಂದು ಅದಕ್ಕೆ ಕಾರಣ ಕೊಡಲಾಗುತ್ತದೆ. ಅವರ ಪ್ರಕಾರ, ಮೊದಲ ಸ್ವಾತಂತ್ರ್ಯ ಹೊರಗೆ ಹೋಗಿ ಹಣ ಗಳಿಸುವುದರಿಂದ ದೊರೆಯುತ್ತದೆ. ಅದು ಪುರುಷರಿಗೆ ದೊರೆತಿದೆ, ಮಹಿಳೆ ಅದಕ್ಕೆ ಹಕ್ಕುದಾರಳಲ್ಲ ಎಂದು ಭಾವಿಸಲಾಗುತ್ತದೆ.