ನಾವೆಲ್ಲರೂ ಅತ್ಯಾಧುನಿಕ ಜೀವನಶೈಲಿಗೆ ಬದಲಾಗುತ್ತಿದ್ದೇವೆ. ಆದರೆ ಈಗಲೂ ಸಹ ನಮ್ಮ ದೇಶದಲ್ಲಿ `ಕಾಂಡೋಂ' ಎಂದು ಪಬ್ಲಿಕ್ ಆಗಿ ಹೇಳುವಂತಿಲ್ಲ, ಅದು ಟ್ಯಾಬೂ ಎನಿಸಿದೆ. ಇಂದೂ ಸಹ ಯುವಜನತೆ ಮೆಡಿಕಲ್ ಶಾಪ್ ಎದುರು ಹೋಗಿ `ಕಾಂಡೋಂ' ಕೇಳಲು ಹಿಂಜರಿಯುತ್ತಾರೆ. ಆದರೆ `ಕಾಂಡೋಂ' ಕೆಟ್ಟದ್ದೇನಲ್ಲ, ಇತರ ವಸ್ತುಗಳಂತೆಯೇ ಇದರ ಅಗತ್ಯ ಇದೆ. ನಮ್ಮ ಜನರ ಮನದಲ್ಲಿ ಜಾಗ್ರತೆ ಮೂಡಿಸಿ, ಕಾಂಡೋಂ ಕುರಿತ ಟ್ಯಾಬೂ ದೂರ ಮಾಡಲು ಬಂದಿರುವ ಚಿತ್ರವೇ `ಕಹಾನಿ ರಬ್ಬರ್‌ಬ್ಯಾಂಡ್ ಕೀ.`ಈ ಚಿತ್ರದ ಪ್ರಮುಖ ವೈಶಿಷ್ಟ್ಯ ಎಂದರೆ ಈ ಚಿತ್ರದ ಕಥೆ, ಕಿತ್ರಕಥೆ, ನಿರ್ದೇಶನದ ಜವಾಬ್ದಾರಿ ಯಾರೋ ಗಂಡಸರದ್ದಲ್ಲ, ಬದಲಿಗೆ ಒಬ್ಬ ಹೆಣ್ಣುಮಗಳದ್ದು! ಆಕೆಯೇ ಸಾರಿಕಾ ಸಂಜೋತ್. ಇದು ಈಕೆಯ ಮೊದಲ ಚಿತ್ರ ಎಂಬುದು ಇಲ್ಲಿನ ಪ್ಲಸ್ ಪಾಯಿಂಟ್. ಮೊದಲ ಬಾರಿಗೇ ನಮ್ಮ ಮಡಿವಂತ ಸಮಾಜಲ್ಲಿ ಟ್ಯಾಬೂ ಎನಿಸಿರುವ ಕಾಂಡೋಂ ವಿಷಯಕ್ಕೆ ಕೈ ಹಾಕಿದ್ದು ನಿಜಕ್ಕೂ ಸಾಹಸವೇ ಸರಿ, ಬೇರೆ ಗಂಡಸರು ಈ ವಿಷಯವನ್ನು ಇಷ್ಟು ಆಳವಾಗಿ ವಿಶ್ಲೇಷಿಸಿಲ್ಲ ಎಂಬುದೂ ನಿಜ.
ಈ ಚಿತ್ರದಲ್ಲಿ `ಸಸುರಾಲ್ ಸಿಮರ್' ಧಾರಾವಾಹಿ ಖ್ಯಾತಿಯ ನಟ ಮನೀಶ್ ರಾಯ್ ಹಾಗೂ `ಬಾಲಿಕಾ ವಧು' ಖ್ಯಾತಿಯ ಅವಿಕಾ ಗೌರವ್ ಜೊತೆ `ವ್ಯೂಹ 92' ಚಿತ್ರದ ಪ್ರತೀಕ್ ಗಾಂಧಿ ಒಟ್ಟಾಗಿ ನಟಿಸಿರುವುದು ಹೆಚ್ಚಿನ ಕಳೆ ತಂದಿದೆ.
ಸಾರಿಕಾ ಜೊತೆ ಗೃಹಶೋಭಾ ನಡೆಸಿದ ಮಾತುಕಥೆಯ ಸಾರಾಂಶ :
ಇದುವರೆಗಿನ ನಿಮ್ಮ ಬಾಲಿವುಡ್ ಪ್ರಯಾಣ ಹೇಗೆ ಸಾಗಿದೆ? ಸಿನಿಮಾ ಕಡೆ ತಿರುಗಬೇಕೂಂತ ಯಾಕೆ ಅನ್ನಿಸಿತು?
ನನಗೆ ಸಿನಿಮಾ ಹಿನ್ನೆಲೆ ಇಲ್ಲವೇ ಇಲ್ಲ. ಬಾಲ್ಯದಿಂದಲೂ ವಿಪರೀತ ಸಿನಿಮಾ ನೋಡುವ ಹುಚ್ಚಿತ್ತು. ಪ್ರತಿ ಕುಟುಂಬದಲ್ಲೂ ತಾಯಿ ತಂದೆ ತಮ್ಮ ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದೇ ಕನಸು ಕಾಣುತ್ತಾರೆ. ಆದರೆ ನನ್ನ ತಂದೆ ಮೊದಲಿನಿಂದಲೂ ನನ್ನನ್ನು ಚಿತ್ರ ನಿರ್ದೇಶಕಿಯಾಗಿ ಕಾಣಬೇಕೆಂದೇ ಬಯಸಿದ್ದರು. ಹಾಗೇಂತ ಅವರಿಗೂ ಬಾಲಿವುಡ್ ಗೂ ಯಾವ ಸಂಬಂಧವೂ ಇಲ್ಲ. ಅವರು ನನ್ನನ್ನು ಎಲ್ಲಾ ಬಗೆಯ ಚಿತ್ರಗಳಿಗೂ ಕರೆದೊಯ್ಯುತ್ತಿದ್ದರು. ನಾನು ಸಿಸ್ಟಂನಲ್ಲಿ ಹಿಂದಿಯ ಮೊದಲ ವಾಕ್ಚಿತ್ರ `ರಾಜ ಹರಿಶ್ಚಂದ್ರ' ಸಹ ನೋಡಿದ್ದೇನೆ. ಹಾಗೆಯೇ ನಮ್ಮ ದೇಶದ ಬಹು ಭಾಷೆಗಳ, ದಕ್ಷಿಣದ, ವಿದೇಶೀ ಚಿತ್ರಗಳನ್ನೂ ಬೇಕಾದಷ್ಟು ನೋಡಿದ್ದೇನೆ. ಹೀಗಾಗಿ ನನಗೆ ಸಿನಿಮಾ ಅಂದ್ರೆ ಬದುಕಿನ ಭಾಗವೇ ಆಗಿಹೋಗಿದೆ.
ನನ್ನ ಡಿಗ್ರಿ ಕೋರ್ಸ್ ಜೊತೆ ಕ್ರಮೇಣ ನಾನು ಸಿನಿಮಾ ಶೂಟಿಂಗ್ ಕುರಿತಾದ ತಾಂತ್ರಿಕ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿ, ಪ್ರಾಕ್ಟಿಕಲ್ ಆಗಿಯೂ ಕಲಿಯ ತೊಡಗಿದೆ. ಹಾಗೆಯೇ ಸಿನಿಮಾಗೆ ಅಂತ್ಲೇ ಕಥೆ ಬರೆದೆ, ಚಿತ್ರಕಥೆ ಬರೆಯುವುದನ್ನು ರೂಢಿಸಿಕೊಂಡೆ. ಈ ರೀತಿ ನಾನೀಗ ಕಥೆ, ಚಿತ್ರಕಥೆ, ನಿರ್ದೇಶನಗಳ ಜವಾಬ್ದಾರಿ ವಹಿಸಿಕೊಂಡು `ರಬ್ಬರ್ ಬ್ಯಾಂಡ್' ಚಿತ್ರ ರೆಡಿ ಮಾಡಿದ್ದೇನೆ. ಈ ಚಿತ್ರ ಖಂಡಿತವಾಗಿ ತೀರಾ ವಿಭಿನ್ನ ವಿಷಯಕ್ಕೆ ಸಂಬಂಧಿಸಿದ್ದು ಎನ್ನಬಹುದು. ಜನರಿಗೆ ಕೇವಲ ಮನರಂಜನೆ ಮಾತ್ರವಲ್ಲದೆ, ಒಂದು ಮೆಸೇಜ್ ಸಹ ನೀಡಲಿದೆ ಈ ಚಿತ್ರ.





