ಟ್ರಾಫಿಕ್ ಪೊಲೀಸ್ : ಈಗಲೇ ನಿನಗೆ ಫೈನ್ ಹಾಕ್ಬೇಕು. ರಸೀತಿ ಬರೀತೀನಿ, ನಿನ್ನ ಪೂರ್ಣ ಹೆಸರು ಹೇಳು.
ಹೊಸ ಡ್ರೈವರ್ : ದೇವನಹಳ್ಳಿ ವೀರಭದ್ರಯ್ಯ ವೆಂಕಟಪ್ಪ ವರದಾಚರ ವಿಶ್ವೇಶ್ವರಯ್ಯ....
ಟ್ರಾಫಿಕ್ ಪೊಲೀಸ್: ಸಾಕು, ಸಾಕು.... ಈ ಬಾರಿ ಬಿಟ್ಟಿದ್ದೀನಿ. ಮುಂದಿನ ಸಲ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡದಂತೆ ಎಚ್ಚರಿಕೆಯಿಂದ ಗಾಡಿ ಓಡಿಸು!
ಟೀಚರ್ : ಕಂಜೂಸ್ ಎಂದು ಯಾರನ್ನು ಹೇಳುತ್ತಾರೆ?
ಗುಂಡ : 100 ಮೆಸೇಜ್ ಕಳುಹಿಸಿದರೂ ಒಂದಕ್ಕೂ ಉತ್ತರ ಕೊಡದೆ ಇರುವಂಥರು.
ಟೀಚರ್: ಶಭಾಷ್! ಎಲ್ಲಿ...... ಅಂಥ ವ್ಯಕ್ತಿಗೊಂದು ಉದಾ ಕೊಡು, ನೋಡೋಣ.
ಗುಂಡ : ನಿಮ್ಮ ಮಗಳಿಗಿಂತ ಬೇರೆ ಬೇಕೇ.....?
ರಾಮಯ್ಯನನ್ನು ಸರ್ಜರಿಗೆಂದು ಆಪರೇಷನ್ ಥಿಯೇಟರ್ ಗೆ ಕರೆತರಲಾಯಿತು. ಆತನಿಗೆ ಅಲ್ಲಿ ಆ ಆಪರೇಷನಿಂದ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಅರಿವಾಯಿತು. ಎಲ್ಲಕ್ಕೂ ಮುಖ್ಯ... ಸರ್ಜರಿ ಮಾಡುವವನು ಇವರ ಅಳಿಯ ಡಾ. ನಾಣಿ ಆಗಿದ್ದ! ಕೊನೆಗೆ ರಾಮಯ್ಯ ಅಳಿಯನನ್ನು ಕರೆಸಿಕೊಂಡು ಹೇಳಿದರು, ``ನೋಡಪ್ಪ, ನೀನೊಬ್ಬ ನುರಿತ ಸರ್ಜನ್ ಎಂಬುದರಲ್ಲಿ 2 ಮಾತಿಲ್ಲ. ಏನೋ.... ನನ್ನ ಮಗಳು ಆಗಾಗ ನಿನ್ನನ್ನು ಶೋಷಿಸುತ್ತಾಳೆ ಎಂಬುದನ್ನು ಬಿಟ್ಟರೆ ಅವಳೂ ಒಳ್ಳೆ ಹೆಂಡತಿಯೇ.... ಆ ಸೇಡನ್ನು ನನ್ನ ಮೇಲೆ ತೀರಿಸಿಕೊಳ್ಳಬೇಡ! ಒಂದು ವಿಷಯ ನೆನಪಿರಲಿ, ಈ ಆಪರೇಷನ್ ಆದ ಮೇಲೆ ನಾನೇದರೂ ಅಕಸ್ಮಾತ್ ಗೊಟಕ್ ಅಂದುಬಿಟ್ಟರೆ, ನಿಮ್ಮತ್ತೆ ನಿಮ್ಮಿಬ್ಬರ ಜೊತೆ ಇರುತ್ತಾಳೆ, ಅದನ್ನು ನೆನಪಿಟ್ಟುಕೊಂಡು ಆಪರೇಷನ್ ಮುಂದುವರಿಸು,'' ಎಂದು ಕಿವಿಮಾತು ಹೇಳಿದರು.
ಆಪರೇಷನ್ ಯಶಸ್ವಿಯಾಗಿ ರಾಮಯ್ಯ ಹೆಂಡತಿ ಜೊತೆ ಸುಖವಾಗಿದ್ದಾರಂತೆ!
ಗುಂಡ : ಅಲ್ವೋ ಸೀನ, ಅಂಥ ಒಳ್ಳೆ ಆಸ್ಪತ್ರೆ, ಎಷ್ಟು ಒಳ್ಳೆ ಡಾಕ್ಟರ್ ಇರೋವಾಗ, ಆಪರೇಷನ್ ದಿನ ಹೇಳದೆ ಕೇಳದೆ ನೀನ್ಯಾಕೋ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದೆ?
ಸೀನ : ಅಲ್ವೋ..... ಅಲ್ಲಿನ ನರ್ಸ್ ಮತ್ತೆ ಮತ್ತೆ ಏನು ಹೇಳ್ತಿದ್ದಳು ಗೊತ್ತಾ? ಏನೂ ಭಯಪಡಬೇಡ್ರಿ ಧೈರ್ಯವಾಗಿರಿ. ಹೇಗೋ ಆಗುತ್ತೆ, ದೇವರ ಮೇಲೆ ಭಾರ ಹಾಕಿ... ಅಂತೆಲ್ಲ ಅನ್ನೋದೇ?
ಗುಂಡ : ಸರಿಯಾಗೇ ಹೇಳಿದ್ದಾಳಲ್ಲೋ... ಇದರಲ್ಲಿ ತಪ್ಪೇನು ಬಂತು?
ಸೀನ : ಏ ಸುಮ್ನಿರಪ್ಪ... ಆ ಮಾತು ಆಕೆ ನನಗೆ ಹೇಳಿದ್ದಲ್ಲ.... ಆಪರೇಷನ್ ಮಾಡುವ ಡಾಕ್ಟರಿಗೆ!
ರಾಮು : ಶ್ಯಾಮು, ನೀನು ಬಹಳ ಸ್ಮಾರ್ಟ್ ಅಂತ ಆಗಾಗ ಹೇಳ್ತಾ ಇರ್ತೀಯಲ್ಲ.... ಎಲ್ಲಿ ಒಂದು ಉದಾಹರಣೆ ಕೊಡು ನೋಡೋಣ.
ಶ್ಯಾಮು : ನೋಡು, ನನ್ನ ಸ್ಮಾರ್ಟ್‌ನೆಸ್ ಬಗ್ಗೆ ಹೇಳಬೇಕೆಂದರೆ ಒಂದಾ ಎರಡಾ....? ಇರಲಿ, ಒಂದು ಉದಾಹರಣೆ ಕೇಳುವವನಾಗು. ನಾನು 110ನೇ ತರಗತಿಯವರೆಗೂ ಶಾಲೆಯಲ್ಲಿ ಕಲಿಯುವಾಗ ಇತಿಹಾಸ, ಪೌರನೀತಿ, ಭೂಗೋಳದ ಪರೀಕ್ಷೆ ಬಂದಾಗೆಲ್ಲ ಅದಕ್ಕೆ ಸಂಬಂಧಿಸಿದ ಉತ್ತರಗಳು ನನಗೆ ಗೊತ್ತಾಗದೆ ಹೋದರೆ ನಾನು ಎಂದೂ ಕಾಪಿ ಮಾಡಲು ಹೋಗುತ್ತರಲಿಲ್ಲ..... ಬದಲಿಗೆ ಅಂತಹ ಅನೇಕ ಕಷ್ಟದ ಪ್ರಶ್ನೆಗಳನ್ನು ಹಾಗೇ ಬಿಟ್ಟುಬಿಡುತ್ತಿದ್ದೆ.
ರಾಮು : ಇದರಲ್ಲಿ ನಿನ್ನ ಸ್ಮಾರ್ಟ್ ನೆಸ್ ಏನು ಬಂತು ಮಣ್ಣು......?