ಮೂರು ದಿನಗಳ ಕಾಲ ನಡೆದ ವಿಜಯನಗರದ ಹಂಪಿ ಉತ್ಸವಕ್ಕೆ ಕೊನೇ ದಿನ ವಿಶೇಷ ಮೆರಗು ಸಿಕ್ಕಿತ್ತು. ಯಾಕಂದ್ರೆ, ಸ್ಯಾಂಡಲ್ವುಡ್ನ ಮೋಹಕತಾರೆ ನಟಿ ರಮ್ಯಾ ಆಗಮಿಸಿ ಎಲ್ಲರನ್ನು ರಂಜಿಸಿದರು. ಸಾವಿರಾರು ಜನ ಉತ್ಸವದಲ್ಲಿ ಭಾಗಿಯಾಗಿದ್ದರ ಜೊತೆ ಕೊನೇ ದಿನ ಕನ್ನಡ ಚಿತ್ರರಂಗದ ಕ್ವೀನ್ ಅಂತಾನೇ ಕರೆಯಲ್ಪಡುವ ರಮ್ಯಾರನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ಈ ವೇಳೆ ಕನ್ನಡ ಅದ್ಭುತ ಕಲಾವಿದ.. ಮಾನವೀಯತೆಯ ರಾಯಭಾರಿ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಹಾಡು ಹಾಡಿದ್ದು ಅಪ್ಪು ಇನ್ನೂ ಅಮರ ಅನ್ನೋ ಸಂದೇಶ ಸಾರಿದಂತಾಯ್ತು.
ಭಾರೀ ಚಪ್ಪಾಳೆ ಜೊತೆಗೆ ವೇದಿಕೆ ಮೇಲೆ ಆಗಮಿಸಿದ ನಟಿ ರಮ್ಯಾ ಎಲ್ಲರನ್ನೂ ಮುದ್ದು ಮುದ್ದಾಗಿ ಮಾತನಾಡಿಸಿದ್ರು. ರಮ್ಯಾ ಬರ್ತಿದ್ದಂತೇ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯ ಸ್ವಾಗತ ಕೋರಿದರು. ಊಟ ಆಯ್ತಾ.. ಎಲ್ಲರೂ ಚೆನ್ನಾಗಿದ್ದೀರಾ.. ನಾನು ಚೆನ್ನಾಗಿದ್ದೇನೆ.. ಎಲ್ಲರೂ ಒಟ್ಟಿಗೆ ಹಾಡು ಹಾಡೋಣ ಅಂತಾ ಕನ್ನಡದಲ್ಲಿ ಮಾತನಾಡುತ್ತಿದ್ದಂತೇ ಎಲ್ಲರ ಕರತಾಡನ ಮೊಳಗಿತ್ತು. ‘ನೀನೆ, ನೀನೆ ನನಗೆಲ್ಲಾ ನೀನೆ’ ಅಂತಾ ಅಪ್ಪುರನ್ನು ನೆನೆದು ಹಾಡು ಹಾಡುತ್ತಾ ಎಲ್ಲರನ್ನೂ ರಂಜಿಸಿದ್ರು.
‘ನನ್ ಜೊತೆ ನಿಮಗೆ ಫೋಟೋ ಬೇಕಾ ಬನ್ನಿ’ ಎಂದು ವಿಕಲಚೇತನರನ್ನ ಕರೆದ ನಟಿ ರಮ್ಯಾ, ಖುಷಿಯಿಂದಲೇ ಫೋಟೋಗೆ ಪೋಸ್ ಕೊಟ್ರು. ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು. ವಿಕಲಚೇತನ ರಾಜು ಅನ್ನೋರು ರಮ್ಯಾ ಟೀಚರ್ಗೆ ತಮ್ಮ ಫೋನ್ನನಲ್ಲಿ ಸೆಲ್ಫಿ ತೆಗೆಸಿಕೊಂಡ್ರು. ಹೀಗೆ ಮಾತನಾಡುತ್ತಿದ್ದಾಗ ಆತ ಭಾವುಕರಾಗಿಬಿಟ್ರು. ಸ್ವಲ್ಪನೂ ಜಂಭ ತೋರದೇ ರಾಜುಗೆ ಆತ್ಮೀಯವಾಗಿ ಮಾತನಾಡಿಸಿದ ರಮ್ಯಾ ಧನ್ಯವಾದ ತಿಳಿಸಿದ್ರು.
ಆಯೋಜಕರಿಗೆ ಧನ್ಯವಾದ:
ಮತ್ತೊಂದು ವಿಶೇಷ ಅಂದ್ರೆ ಹಂಪಿ ಉತ್ಸವವನ್ನು ಆಯೋಜನೆ ಮಾಡಿದವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ರು. ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದೀರಿ.. ಇಷ್ಟು ದೊಡ್ಡ ವೇದಿಕೆ ನಿರ್ಮಿಸಿದ್ದೀರಿ.. ಸಾವಿರಾರು ಜನರು ಬಂದು ಇಲ್ಲಿ ಸಂಭ್ರಮಿಸುತ್ತಿದ್ದಾರೆ.. ವಿಶೇಷವಾಗಿ ನೀವು ಕನ್ನಡದ ಕಲಾವಿದರನ್ನ ಮಾತ್ರ ಆಹ್ವಾನಿಸಿದ್ದು ತುಂಬಾನೇ ಖುಷಿ ಕೊಟ್ಟಿದೆ ಅಂತಾ ರಮ್ಯಾ ಹೇಳುತ್ತಿದ್ದಂತೇ ಅಸಂಖ್ಯಾತ ಜನರು ಕೂಗಿ ಕೂಗಿ ರಮ್ಯಾ ಮೇಡಂಗೆ ಧನ್ಯವಾದ ತಿಳಿಸಿದ್ರು.
ಡಿಸಿಎಂ ಹೇಳಿಕೆಗೆ ಸಮರ್ಥನೆ:
ಬಳಿಕ ವೇದಿಕೆಯಿಂದ ಕೆಳಗಿಳಿದು ಮಾತನಾಡಿದ ರಮ್ಯಾ, ನೆಲ- ಜಲ ಭಾಷೆ ವಿಚಾರದಲ್ಲಿ ಕನ್ನಡ ಕಲಾವಿದರೆಲ್ಲಾ ಒಂದಾಗಬೇಕೆಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಕೊಟ್ಟ ಹೇಳಿಕೆಯನ್ನು ಸಮರ್ಥಿಸಿಕೊಂಡ್ರು. ‘ಡಿಸಿಎಂ ಸಾಹೇಬ್ರು ಹೇಳೋದ್ರಲ್ಲಿ ತಪ್ಪೇನಿಲ್ಲ. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು.. ಡಿಸಿಎಂ ಡಿಕೆಶಿವಕುಮಾರ್ ಅದನ್ನೇ ಹೇಳಿದ್ರು, ಅದಕ್ಕೆ ನನ್ನ ಸಹಮತವಿದೆ’ ಅಂತಾ ತಿಳಿಸಿದ್ರು.
ಸದ್ಯಕ್ಕೆ ಫಿಲ್ಮ್ ಯಾವುದೂ ಇಲ್ಲ:
‘ಸದ್ಯ ನನಗೆ ಯಾವುದೇ ಹೊಸ ಚಲನಚಿತ್ರದ ನಟನೆ ಬಗ್ಗೆ ಯೋಜನೆಗಳಿಲ್ಲ. ಬಹಳ ದಿನಗಳ ಬಳಿಕ ಹಂಪಿಗೆ ಬಂದಿದ್ದೇನೆ. ನನಗೆ ಖುಷಿಯಾಗಿದೆ, ಸಂತೋಷವಾಗಿದೆ. ಸಚಿವ ಜಮೀರ್ ಅಹಮ್ಮದ್ ಮತ್ತು ವಿಜಯನಗರ ಜಿಲ್ಲಾಡಳಿತ ಆಹ್ವಾನ ನೀಡಿದ್ದರಿಂದ ಬಂದಿದ್ದೇನೆ, ಖುಷಿಯಾಗಿದೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು’ ಅಂತಾ ರಮ್ಯಾ ಹೇಳಿದ್ರು.