ಪ್ರಸಕ್ತ ಟಿ-20 ವಿಶ್ವಕಪ್ 2026ರಲ್ಲೂ ಪಾಕಿಸ್ತಾನ ವಿರುದ್ಧದ ತನ್ನ ಗೆಲುವಿನ ನಾಗಾಲೋಟವನ್ನು ಭಾರತ ಮುಂದುವರೆಸಿದೆ.
ಐಸಿಸಿ ಆಯೋಜಿಸುವ ಪಂದ್ಯಾವಳಿಗಳಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಭಾರತ, ಕೊಲಂಬೊದ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಭಾರತ ತಂಡ ಟಿ20 ವಿಶ್ವಕಪ್ನ ತನ್ನ 3ನೇ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್ಗಳ ಜಯ ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ 3ನೇ ಗೆಲುವು ದಾಖಲಿಸಿದ ಸೂರ್ಯಕುಮಾರ್ ಯಾದವ್ ತಂಡ “ಎ” ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ.
ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಆಕರ್ಷಣೀಯ ಪಂದ್ಯದಲ್ಲಿ ಭಾರತ ತಂಡ ನೀಡಿದ 176 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 2 ಓವರ್ಗಳು ಬಾಕಿ ಇರುವಂತೆ 114 ರನ್ಗಳಿಗೆ ಆಲ್ಔಟ್ ಆಗಿದೆ.
ಪಾಕಿಸ್ತಾನ ಪರ ಉಸ್ಮಾನ್ ಖಾನ್ (44) ಮತ್ತು ಸೈಮ್ ಆಯೂಬ್ (25ಕ್ಕೆ 3) ಗಮನ ಸೆಳೆದರೆ, ಭಾರತ ಪರ ಇಶಾನ್ ಕಿಶನ್ (77) ರನ್ ಸಿಡಿಸಿದರು. ಬುಮ್ರಾ, ವರುಣ್, ಹಾರ್ದಿಕ್ ಮತ್ತು ಅಕ್ಷರ್ ತಲಾ 2 ವಿಕೆಟ್ ಪಡೆದರು.
ನೋ ಹ್ಯಾಂಡ್ ಶೇಕ್: ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ಪಾಕ್ ನಾಯಕ ಸಲ್ಮಾನ್ ಆಘಾ ಟಾಸ್ ವೇಳೆ ಹಸ್ತಲಾಘವ ಮಾಡುವ ಸಂಪ್ರದಾಯದಿಂದ ವಿಶ್ವಕಪ್ನಲ್ಲೂ ದೂರ ಉಳಿದರು. ಕಳೆದ ಏಷ್ಯಾಕಪ್ನಲ್ಲೂ ಉಭಯ ನಾಯಕರು ಹಸ್ತಲಾಘವ ಮಾಡಿರಲಿಲ್ಲ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪಾಕಿಸ್ತಾನ ಐಸಿಸಿಗೂ ದೂರು ಸಲ್ಲಿಸಿತ್ತು. ಪಹಲ್ಗಾಮ ದಾಳಿಯಲ್ಲಿ ಬಲಿಯಾದ ಭಾರತೀಯರಿಗೆ ಸಂತಾಪ ಸೂಚಕವಾಗಿ ಟೀಮ್ ಇಂಡಿಯಾ ಆಟಗಾರರು ಪಾಕ್ ತಂಡಕ್ಕೆ ಹ್ಯಾಂಡ್ ಶೇಕ್ ನೀಡುವ ಸಂಪ್ರದಾಯವನ್ನು ಕಡಿತಗೊಳಿಸಿದ್ದಾರೆ.





