ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಯಾರ ಹೆಸರನ್ನೂ ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "70ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.
ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮದೆಲ್ಲಾ ಸಾರ್ಥಕ ಬದುಕು ಆಗಲಿ ಎಂದು ಹಾರೈಸಿದರು.
ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.
ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿಕ್ಕ ಅವಕಾಶ ಬಳಸಿಕೊಂಡು ಸಾಧನೆ ಮಾಡಿದವರು ಇಂದು ನಮ್ಮ ಎದುರಿಗಿದ್ದಾರೆ. ಇವರು ಕನ್ನಡವನ್ನು ಉಸಿರಾಡಿದ, ಬೆಳಗಿದ, ಕನ್ನಡದಲ್ಲಿ ಬದುಕಿದ ಸಾಧಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 70 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಮೊತ್ತ 5 ಲಕ್ಷ ರೂ. 25 ಗ್ರಾಂ ಚಿನ್ನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.





