ಕೌದಿ, ಕವುದಿ, ಕವದಿ, ಕವಿದಿ, ಕೌಂದಿ ಇನ್ನು ಮುಂತಾದ ಹೆಸರುಗಳಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಕರೆಯಲ್ಪಟ್ಟರೆ ಇನ್ನು ಹಾಸನದ ಭಾಗದಲ್ಲಿ ಇದನ್ನೇ ದಟ್ಟ ಅಥವಾ ದಟ್ಟಾ ಎಂದು ಕರೆಯುತ್ತಾರೆ. ಹೀಗೆ ಬಿನ್ನ ಬಿನ್ನ ಹೆಸರುಗಳಿಂದ ಕರೆಸಿಕೊಂಡರೂ ಅದರ ಅರ್ಥ ಮತ್ತು ವಸ್ತುವು ಒಂದೇ ಆಗಿದ್ದು. ಬೇರೆ ಬೇರೆ ಬಟ್ಟೆಯ ತುಂಡುಗಳನ್ನು ಸೇರಿಸಿ ಅದಕ್ಕೊಂದು ಚಂದನೆಯ ರೂಪವನ್ನು ಕೊಟ್ಟು ಹೊಲಿದಿರುವ ದಪ್ಪನಾದ ಹೊದಿಕೆಯೇ ಕೌದಿ ಅಥವಾ ದಟ್ಟ.

ಸಾಮಾನ್ಯವಾಗಿ ನಮ್ಮ ಪೂರ್ವಜರು ಯಾವುದೇ ವಸ್ತುಗಳನ್ನು ಹೊರಗೆ ಬಿಸಾಡದೇ ಅದೇ ಕಸದಿಂದಲೂ ರಸವನ್ನು ತೆಗೆಯಬಲ್ಲಂತಹ ಸೃಜನಶೀಲತೆಯನ್ನು ಹೊಂದಿದ್ದರು ಎಂಬುದಕ್ಕೆ ಜ್ವಲಂತ ಉದಾಹರಣೆಯೇ ಈ ದಟ್ಟ. ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಹೆಂಗಸರು ಉಡುತ್ತಿದ್ದ ಹತ್ತಿಯ ಸೀರೆ ಮತ್ತು ಗಂಡಸರು ಉಡುತ್ತಿದ್ದ ಪಂಚೆಗಳು ಉಟ್ಟು ಉಟ್ಟೂ ಮಾಸಿಹೋಗುತ್ತಿದ್ದಂತೆಯೇ ಅದನ್ನು ಬಿಸಾಡಲು ಮನಸ್ಸಾಗದೇ ಅವೆಲ್ಲವನ್ನೂ ಒಂದರ ಮೇಲೊಂದು ಚಂದವಾಗಿ ಸೇರಿಸಿ ಅವುಗಳ ಸುತ್ತಲೂ ಹೊಲಿಗೆ ಹಾಕಿ ಅದರ ಮಧ್ಯದಲ್ಲೂ ಸಹಾ ಸಣ್ಣ ಸಣ್ಣದಾದ ಟಾಕವನ್ನು ಹಾಕಿ ಅದನ್ನು ಇನ್ನೂ ಹೆಚ್ಚಿಗೆ ಆಕರ್ಶಣೀಯವನ್ನಾಗಿಸುವ ಸಲುವಾಗಿ ಮಧ್ಯೆ ಮಧ್ಯೆ ಸಣ್ಣ ಸಣ್ಣ ಬಣ್ಣದ ಬಟ್ಟೆಗಳನ್ನು ಹೊಲಿದು ಚಳಿಗಾಲದಲ್ಲಿ ಬೆಚ್ಚಗೆ ಹಾಸಿಕೊಳ್ಳಲು ಇಲ್ಲವೇ ಹೊದ್ದು ಕೊಳ್ಳುವಂತಹ ದಟ್ಟವನ್ನು ತಯಾರಿಸುತ್ತಿದ್ದರು. ಈ ರೀತಿಯ ಹೊದಿಕೆಯನ್ನು ಹಚ್ಚಡ ಎಂದೂ ಕರೆಯುತ್ತಾರೆ. ಅದೇ ರೀತಿಯಲ್ಲಿ ಕೇವಲ ಮನುಷ್ಯರಿಗಲ್ಲದೇ, ದನಕರುಗಳಿಗೂ ಸಹಾ ಈ ಕೌದಿಗಳಿನ್ನು ಹೊದಿಸುತ್ತಿದ್ದು ಅದಕ್ಕೆ ಸಬರ ಎಂದೂ ಸಹಾ ಕರೆಯುತ್ತಾರೆ.
ಕೌದಿ ಎಂಬ ಪದ ಮೂಲತಃ ಕಂಥಾ ಎಂಬ ಸಂಸ್ಕೃತದಿಂದ ಪದವಾಗಿದೆ ಎಂದರೂ ತಪ್ಪಾಗದು. ಸಂಸ್ಕೃತದಲ್ಲಿ ಕಂಥಾ ಎಂದರೆ ಹರಕು ಬಟ್ಟೆ, ತುಂಡುಗಳನ್ನು ಹೊಲಿದು ತಯಾರಿಸಿದ ಬಟ್ಟೆ, ಅಂಗಿ ಅಥವಾ ಚೀಲ ಎಂಬರ್ಥ ಬರುತ್ತದೆ ಅದರಲ್ಲೂ ವಿಶೇಷವಾಗಿ ಇದು ಸನ್ಯಾಸಿಗಳು ಉಪಯೋಗಿಸುತ್ತಿದ್ದ ಜೋಳಿಗೆಯು ಇದೇ ರೀತಿಯ ಚಿಂದಿ ಬಟ್ಟೆಗಳಿಂದಲೇ ತಯಾರಾಗಿರುತ್ತಿತ್ತು ನಂತರ ಅದನ್ನೇ ಸಂಸಾರಿಗಳೂ ಸಹಾ ಉಪಯೋಗಿಸ ತೊಡಗಿದರು. ಈ ಕೌದಿಯ ಬಳಕೆಯು ಕೇವಲ ಕರ್ನಾಟಕ್ಕೆ ಮಾತ್ರವೇ ಸೀಮಿತವಾಗಿರದೇ ದಕ್ಷಿಣದ ಉಳಿದ ರಾಜ್ಯಗಳಲ್ಲಿಯೂ ಕಾಣಬಹುದಾಗಿದೆ. ಇದನ್ನೇ ತಮಿಳಿನಲ್ಲಿ ಕವಜನೈ, ಕವನ್ದಿ, ಕವನ್ದಿಗೈ ಎಂದು ಕರೆದರೆ ಮಲಯಾಳದಲ್ಲಿ ಕವಿಯನ್ ಎಂದು ಕರೆಯಲಾಗುತ್ತದೆ.
ಇದೇ ಕೌದಿ, ಇತ್ತೀಚೆಗೆ ತಾನೇ ಪದ್ಮಭೂಷಣ ವಿಜೇತೆಯಾದ ಮತ್ತು ಇನ್ಫೋಸಿಸ್ ನಂತಹ ವಿಶ್ವವಿಖ್ಯಾತ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಮತಿ ಸುಧಾ ಮೂರ್ತಿಯವರ ಜೀವನದಲ್ಲಿ ಬಾರೀ ರೀತಿಯ ಬದಲಾವಣೆಯನ್ನು ತಂದರೆ, ವಯಕ್ತಿಕವಾಗಿ ಒಂದು ಕಾಲದಲ್ಲಿ ಇದೇ ದಟ್ಟಾ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತಲ್ಲದೇ ಅದರ ಸುಮಧುರ ನೆನಪು ಸದಾಕಾಲವೂ ಇರುತ್ತದೆ.

ನಾವೆಲ್ಲರೂ ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದರೆ ಸಾಕು ಬೆಂಗಳೂರಿನಿಂದ ಅಜ್ಜಿ ಮತ್ತು ತಾತ ಇದ್ದ ನಮ್ಮೂರು ಬಾಳಗಂಚಿಗೆ ಹೋಗುತ್ತಿದ್ದೆವು. ಅದೇ ಸಮಯದಲ್ಲಿ ಹದಿನೈದು ದಿನಗಳ ಕಾಲ ನಮ್ಮ ಊರಿನ ಜಾತ್ರೆ ನಡೆಯುತ್ತಿದ್ದ ಕಾಲವಾದ್ದರಿಂದ ನಮ್ಮ ಎಲ್ಲಾ ಕುಟಂಬದ ಸದಸ್ಯರೂ ಸಹಾ ಊರಿಗೆ ಬರುತ್ತಿದ್ದರು. ಮಕ್ಕಳ ಸಂಖ್ಯೆಯೇ ಸುಮಾರು 15-20 ಕ್ಕೂ ಮೀರಿದಾಗ ಅಷ್ಟು ಜನರಿಗೂ ಹಾಸಲು ಮತ್ತು ಹೊದೆಯಲು ನಮ್ಮ ಅಜ್ಜಿಯವರು ಮುಂಗಡವಾಗಿಯೇ ದಟ್ಟವನ್ನು ಸಿದ್ಧ ಪಡಿಸಿಟ್ಟಿರುತ್ತಿದ್ದರು. ಈ ಮೊದಲೇ ಹೇಳಿದಂತೆ ನಮ್ಮ ಅಜ್ಜಿಯ ಹಳೆಯ ಸೀರೆ ಮತ್ತು ನಮ್ಮ ತಾತನ ಹಳೆಯ ಪಂಜೆ ಮತ್ತು ಶಲ್ಯವನ್ನು ಚಂದವಾಗಿ ಸೇರಿಸಿ ದಪ್ಪನಾದ, ಹೊದ್ದು ಕೊಂಡರೆ ಮೈ ಪೂರ್ತಿ ಬೆಚ್ಚಗಾಗುವ ದಟ್ಟ ಅದಾಗಿರುತ್ತಿತ್ತು. ನಮ್ಮ ಅಜ್ಜಿ ದಟ್ಟಾ ಹೊಲಿಯುವ ಮುನ್ನಾ ಎಷ್ಟೇ ಚೆನ್ನಾಗಿ ಸೀರೆ ಮತ್ತು ಪಂಚೆಗಳನ್ನು ಒಗೆದಿದ್ದರೂ ಸಹಾ, ನಮ್ಮ ತಾತನವರ ನಶ್ಯದ ವಾಸನೆ ಹೋಗಿರದೇ ಅದೊಂದು ರೀತಿಯ ವಿಶೇಷವಾದ ಪರಿಮಳವನ್ನು ಸೂಸುತ್ತಿದ್ದದ್ದು ನಮಗೆ ಅಪ್ಯಾಯಮಾನವಾಗಿರುತ್ತಿತ್ತು. ಆ ದಟ್ಟವನ್ನು ಹಾಸಿಕೊಂಡು/ಹೊದ್ದುಕೊಂಡು ಮಲುಗುತ್ತಿದ್ದರೆ, ನನಗಂತೂ ಆದರ ಸುವಾಸನೆಯಿಂದಾಗಿ ನಮ್ಮ ತಾತನವರ ತೊಡೆಯ ಮೇಲೆಯೇ ಮಲಗಿದ್ದಂತೆ ಭಾಸವಾಗುತ್ತಿತ್ತು. ಅದೇ ರೀತಿ ಇಂದಿಗೂ ನಮ್ಮ ತಂದೆಯವರ ನೆನಪಾದಾಗಲೆಲ್ಲಾ ಅವರು ಬಳಸುತ್ತಿದ್ದ ನಶ್ಯದ ಡಬ್ಬದ ಮುಚ್ಚಳವನ್ನೊಮ್ಮೆ ತೆಗೆದು ಅದರ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ನನಗೆ ನಮ್ಮ ತಂದೆಯವರೇ ನನ್ನ ಅಕ್ಕಪಕ್ಕದಲ್ಲೇ ಇದ್ದಾರೇನೋ ಎಂಬಂತೆ ಭಾಸವಾಗುತ್ತದೆ.





