``ವಯಸ್ಸಿಗೆ ಮೀರಿದ ಪಾತ್ರಗಳನ್ನು ನಾನು ಖಂಡಿತ ಒಪ್ಪಿಕೊಳ್ಳುವುದಿಲ್ಲ. ಒಂದು ಸಲ ನಾವು ವಯಸ್ಸಿಗೆ ಮೀರಿದ ಪಾತ್ರಗಳನ್ನು ಒಪ್ಪಿಕೊಂಡು ಬಿಟ್ರೆ ಮುಂದೆ ನಮಗೆ ಅಂತಹದೇ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.''
`ಲಕ್ಷ್ಮೀ ಬಾರಮ್ಮ,' ಹಳ್ಳಿಯ ಮುಗ್ಧ ಹುಡುಗಿಯೊಬ್ಬಳ ಆಕಸ್ಮಿಕ ವಿವಾಹದ ಸುತ್ತ ಹೆಣೆಯಲಾದ ಧಾರಾವಾಹಿ. ಲಕ್ಷ್ಮೀ ಹಳ್ಳಿಗರ ಬಾಯಲ್ಲಿ `ಲಚ್ಚಿ' ಹಾಗೂ ಚಂದನ್ ಮನೆಯವರಿಂದ ಪ್ರೀತಿಯಿಂದ `ಚಿನ್ನು' ಎಂದೂ ಕರೆಸಿಕೊಳ್ಳುತ್ತಾಳೆ. ಈ ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬುತ್ತಿರುವ ಕಲಾವಿದೆ ಕವಿತಾ.
ಬಿ.ಕಾಂ. ಪದವೀಧರೆಯಾದ ಕವಿತಾ ಆಧುನಿಕ ಪೋಷಾಕು ಧರಿಸುವ ಯುವತಿ, ಭರತನಾಟ್ಯ ಕಲಾವಿದೆ ಕೂಡ. ಮಲ್ಲೇಶ್ವರದ ಅಮ್ಮಣ್ಣಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿ ಸ್ಪಾನ್ಸರ್ ಶಿಪ್ ಡಿಪಾರ್ಟ್‌ಮೆಂಟಿನ ಜವಾಬ್ದಾರಿ ವಹಿಸಿಕೊಂಡು ಬೇರೆ ಬೇರೆ ಈವೆಂಟ್ ನಡೆಸುತ್ತಿದ್ದರು. ಕಾಲೇಜಿನ ಥ್ರೋ ಬಾಲ್ ತಂಡದ ಕ್ಯಾಪ್ಟನ್, ಕ್ರಿಕೆಟ್ ತಂಡದ ಸಹ ಆಟಗಾರ್ತಿಯಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ತಂದುಕೊಟ್ಟಿದ್ದರು.
`ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ ಆಯ್ಕೆಯಾದ ಬಗ್ಗೆ ಹಾಗೂ ಆ ಬಳಿಕದ ಆಗುಹೋಗುಗಳ ಬಗ್ಗೆ ಕವಿತಾ ಇಲ್ಲಿ ಉತ್ತರಿಸಿದ್ದಾರೆ.
ಭರತನಾಟ್ಯ ಕಲಾವಿದೆಯಾದ ನಿಮಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಹೇಗೆ ಲಭಿಸಿತು?
ಭರತನಾಟ್ಯ ಗುರುಗಳಾದ ಶಮಾ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾನು ಹುಬ್ಬಳ್ಳಿಗೆ ಹೋಗಿದ್ದೆ. ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಶೃತಿ ನಾಯ್ಡು ಕೂಡ ಉಳಿದುಕೊಂಡಿದ್ದರು. ಶಮಾ ಮೇಡಂ ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಈ ಪರಿಚಯವೇ ಅವರ `ಪುನರ್ವಿವಾಹ' ಧಾರಾವಾಹಿಗೆ ನಾನು ಆಡಿಷನ್‌ಗೆ ಹೋಗಲು ಕಾರಣವಾಯಿತು. ಆ ಧಾರಾವಾಹಿಗೆ ನನ್ನನ್ನು ಆಯ್ಕೆ ಕೂಡ ಮಾಡಿಬಿಟ್ಟಿದ್ದರು. ಆದರೆ ಅದು ಇಬ್ಬರು ಮಕ್ಕಳ ತಾಯಿಯ ಪಾತ್ರವಾಗಿದ್ದರಿಂದ ನಾನೇ ಆ ಪಾತ್ರ ಬೇಡವೆಂದೆ. ಬಳಿಕ `ಅಶ್ವಿನಿ ನಕ್ಷತ್ರ'ದ ಆಡಿಷನ್‌ಗೂ ಹೋಗಿದ್ದೆ. ಅಲ್ಲಿ ನಾನು ಕೊಟ್ಟಿದ್ದ ಆಡಿಷನ್ ಮಿಲನ್ ಪ್ರಕಾಶ್ ಅವರಿಗೆ ಇಷ್ಟವಾಗಿ `ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ ನನ್ನನ್ನು ಆಯ್ಕೆಯಾಗುವಂತೆ ಮಾಡಿತು.
ಆಧುನಿಕ ವಿಚಾರಧಾರೆ, ಮಾಡರ್ನ್ ಡ್ರೆಸ್ ಧರಿಸುವ ನಿಮಗೆ ಹಳ್ಳಿಹುಡುಗಿ ಅದರಲ್ಲೂ ಗ್ರಾಮ್ಯ ಭಾಷೆ ಮಾತಾಡುವ ಹುಡುಗಿಯ ಪಾತ್ರ ಮಾಡಲು ಕಷ್ಟ ಆಗಲಿಲ್ಲವೇ?
ಆ ಹಳ್ಳಿಹುಡುಗಿಯ ಪಾತ್ರ ನನಗೊಂದು ಚಾಲೆಂಜ್ ಎಂಬಂತೆ ಎನಿಸಿತ್ತು. ಹೀಗಾಗಿ ಆ ಪಾತ್ರ ಒಪ್ಪಿದ್ದೆ. ಆರಂಭದಲ್ಲಿ ಆ ಪಾತ್ರ ಮಾಡುವುದು ನನಗೆ ಕಷ್ಟ ಎನಿಸಿತ್ತು. ಹಳ್ಳಿಯವರ ರೀತಿಯಲ್ಲಿ ಹೇಗೆ ಮಾತನಾಡುವುದು ಎಂದು ಗೊಂದಲವನ್ನುಂಟು ಮಾಡಿತ್ತು. ಆದರೆ ನಿರ್ದೇಶಕ ಸತೀಶ್ ಸರ್, ಚಂದನ್‌ನ ಅಮ್ಮ ಪಾರ್ವತಿಯ ಪಾತ್ರ ಮಾಡುತ್ತಿರುವ ದೀಪಾ ಅವರು ನನಗೆ ಎಳೆ ಎಳೆಯಾಗಿ ಹೇಳಿಕೊಟ್ಟರು. ಗೊಂಬೆಯ ಅಮ್ಮನ ಪಾತ್ರ ಮಾಡುತ್ತಿರುವ ಲಕ್ಷ್ಮೀ ಹಾಗೂ ಇತರೆ ಕಲಾವಿದರು ಕೂಡ ನನಗೆ ಸಾಕಷ್ಟು ವಿಷಯ ತಿಳಿಸುತ್ತಿರುತ್ತಾರೆ.
ಹೊರಗಡೆ ಹೋದಾಗ ಜನ ನಿಮ್ಮ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ?
ನಾನು ಸಾಮಾನ್ಯವಾಗಿ ಹೊರಗಡೆ ಮಾಡರ್ನ್ ಡ್ರೆಸ್‌ನಲ್ಲಿಯೇ ಹೋಗ್ತೀನಿ. ಆದರೂ ಜನ ನನ್ನನ್ನು ಗುರುತಿಸುತ್ತಾರೆ. ಅಚ್ಚರಿಯಿಂದ ನನ್ನನ್ನು ನೋಡುತ್ತಿರುತ್ತಾರೆ. `ನಿಮಗೆ ಮದುವೆಯಾಗಿರಬಹುದು ಅಂದ್ಕೊಡಿದ್ವಿ. ನೀವಿಷ್ಟು ಚಿಕ್ಕ ವಯಸ್ಸಿನವರು ಅಂತಾ ಗೊತ್ತಿರಲಿಲ್ಲ,' ಎನ್ನುತ್ತಾರೆ. ನಮ್ಮ ಮನೆ ಆಸುಪಾಸಿನವರು ಕೂಡ ಆರಂಭದಲ್ಲಿ ನನ್ನನ್ನು ಹಾಗೂ ನನ್ನ ಪಾತ್ರವನ್ನು ಹೋಲಿಸಿ ಬೆರಗುಗಣ್ಣಿನಿಂದ ನೋಡಿ `ನೀವು ನಿಜವಾಗಿಯೂ ಲಚ್ಚಿ ಪಾತ್ರಧಾರಿನಾ?' ಎಂದು ಕೇಳಿದ್ದೂ ಉಂಟು.