ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಆಯೋಜಿಸಿದ್ದ ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

65 ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಉನ್ನತ ಶಿಕ್ಷಣದ ಅವಕಾಶಗಳನ್ನು ತೆರದಿಟ್ಟಿದ್ದ ಎಕ್ಸ್​​ಪೋದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ತಮ್ಮ ಆಸಕ್ತಿಯ ವಿಭಾಗಗಳಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದರು.

ಭಾಗವಹಿಸಿದ್ದ ಎಲ್ಲರೂ ವಿದೇಶಿ ವಿ.ವಿ.ಗಳಿಗೆ ದಾಖಲಾಗುತ್ತಾರೆ ಎಂಬ ಖಾತ್ರಿ ಇಲ್ಲದಿದ್ದರೂ, ಕನಿಷ್ಠ ಶೇ.50ರಷ್ಟು ಮಂದಿಯಾದರೂ ಉತ್ತಮ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ವಿಶ್ವವಿದ್ಯಾಲಯ ಪ್ರತಿನಿಧಿಗಳು,’ರಾಜ್ಯ ಸರ್ಕಾರದ ಈ ಉಪಕ್ರಮವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ,’ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ನಡೆದ ಎಕ್ಸ್​ಪೋದಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ವಿಶ್ವವಿದ್ಯಾಲಯದ ಪ್ರತಿನಿಧಿಗಳ ಜತೆಗಿನ  ಸಂವಾದದ ಹೊರತಾಗಿ, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಉತ್ಸುರಾಗಿದ್ದರು.   ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗಾಗಿ ಇರುವ ವಿಶೇಷ ಸಾಲ ಸೌಲಭ್ಯದ ಆಯ್ಕೆಗಳನ್ನು ಕರ್ನಾಟಕ ಬ್ಯಾಂಕ್ ಪ್ರತಿನಿಧಿಗಳು ವಿವರಿಸಿದರು.ಹಲವಾರು ವಿಶ್ವವಿದ್ಯಾಲಯಗಳು ಎಕ್ಸ್​ಪೋದಲ್ಲೇ ಕೆವಿಟಿಎಸ್‌ಡಿಸಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ಘೋಷಿಸಿದವು. ವಿಶ್ವದ ಅಗ್ರ  100 ವಿ.ವಿ.ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ (ಯುಡಬ್ಲ್ಯುಎ)ವು ಪದವಿಪೂರ್ವ ವಿದ್ಯಾರ್ಥಿಗಳಿಗೆ 48,000 ಆಸ್ಟ್ರೇಲಿಯಾ ಡಾಲರ್‌ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  24,000 ಆಸ್ಟ್ರೇಲಿಯಾ ಡಾಲರ್‌ವರೆಗೆ ವಿದ್ಯಾರ್ಥಿವೇತನ ಘೋಷಿಸಿದೆ. ಯನಿರ್ವಸಿಟಿ ಆಫ್‌ ಈಸ್ಟ್‌ ಆಂಗ್ಲಿಯಾ ಅರ್ಹ ಇಬ್ಬರು ವಿದ್ಯಾರ್ಥಿಗಳಿಗೆ  ಶೇ.50ರಷ್ಟು ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. 1884ರಲ್ಲಿ ಸ್ಥಾಪನೆಯಾದ ಬ್ಯಾಂಗೋರ್ ಯೂನಿವರ್ಸಿಟಿ ಸಹ ಇಬ್ಬರಿಗೆ ಶೇ.50 ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.

ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಕೆವಿಟಿಎಸ್‌ಡಿಸಿ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಅವರು, ರಾಜ್ಯದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ ನಂತರವೂ ಉಚಿತ ಮಾರ್ಗದರ್ಶನ ಮತ್ತು ನಿರಂತರ ಬೆಂಬಲ ಒದಗಿಸುವ ಭರವಸೆ ನೀಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ