ಮಹಿಳೆಯರ ಬಗ್ಗೆ ಇರಬೇಕಿತ್ತು ಕಾಳಜಿ
ಈ ಸಲ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. ಆದರೆ ಸೀರೆ ಉಟ್ಟಿದುದರ ಲಾಭ ಸೀರೆ ಉಟ್ಟವರಿಗೆ ಮಾತ್ರ ಆಗಲಿಲ್ಲ. ಮಹಿಳಾ ವಿತ್ತ ಸಚಿವೆಯ ಬಜೆಟ್ ಮಹಿಳೆಯರಿಗೆ ಉಡುಗೊರೆಯ ರೂಪದಲ್ಲಿ ಏನನ್ನೂ ಕೊಡಲಿಲ್ಲ. ಸರ್ಕಾರಿ ಬಜೆಟ್‌ಗೂ ಮಹಿಳೆಯರಿಗೂ ಸಂಬಂಧ ಇರುವುದಿಲ್ಲ ಎಂದೇನಿಲ್ಲ. ವಾಸ್ತವದಲ್ಲಿ ಇಡೀ ಮನೆಯೇ ಮಹಿಳೆಯರ ವಶದಲ್ಲಿರುತ್ತದೆ. ಹಣ ಯಾವಾಗ ಕೈಗೆ ಬರುತ್ತದೆ, ಹೇಗೆ ಹೋಗುತ್ತದೆ ಎಂಬುದು ಮಹಿಳೆಯರಿಗಷ್ಟೇ ಗೊತ್ತು.
ಮಹಿಳೆಯರಿಗೆ ನಿರಾಳತೆ ಕೊಡಬಹುದಾದ ಸಾಕಷ್ಟು ಅವಕಾಶಗಳು ನಿರ್ಮಲಾರ ಬಳಿ ಇದ್ದವು. ಉನ್ನತ ಶಿಕ್ಷಣವನ್ನು ಹುಡುಗಿಯರಿಗಾದರೂ ಅಗ್ಗ ಮಾಡಬಹುದಿತ್ತು. ಅದನ್ನು ಬಿಟ್ಟು ಯುಜಿಸಿಯ ರೂಪುರೇಷೆ ಬದಲಿಸುವ ಪ್ರಸ್ತಾಪ ಮುಂದಿಟ್ಟರು. ಅದರಿಂದ ಉನ್ನತ ಶಿಕ್ಷಣ ಇನ್ನಷ್ಟು ದುಬಾರಿ ಆಗಬಹುದು. ಅವರು ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡಬಹುದಿತ್ತು. ಅದರಿಂದ ಹುಡುಗಿಯರು ಹೊರಗೆ ಹೋಗುವ ಧೈರ್ಯವನ್ನು ಒಗ್ಗೂಡಿಸುತ್ತಿದ್ದರು. ಏಕಾಂಗಿ ಮಹಿಳೆಯರು ತಲೆಯ ಮೇಲೆ ನಿಶ್ಚಿಂತತೆಯ ಸೂರು ಕಾಣುತ್ತಿದ್ದರು. ನಿರ್ಮಲಾ ರೈಲು, ವಿಮಾನ ಹಾಗೂ ಬಸ್ ಸೇವೆಗಳಲ್ಲಿ ಮಹಿಳೆಯರಿಗೆ ಒಂದಿಷ್ಟು ರಿಯಾಯಿತಿ ಘೋಷಿಸಬಹುದಿತ್ತು. ಅರವಿಂದ್ ಕೇಜ್ರಿವಾಲ್ ದೆಹಲಿ ಮೆಟ್ರೊದಲ್ಲಿ ರಿಯಾಯಿತಿ ಕೊಡಲು ಪ್ರಯತ್ನ ನಡೆಸಿದ್ದಾರೆ. ಇದರಿಂದ ಮಹಿಳೆಯರು ಮನೆಯೆಂಬ ಜೈಲಿನಿಂದ ಹೊರಗೆ ಬರಬಹುದು.
ದೇವಾಲಯ ಮತ್ತು ಆಶ್ರಮಗಳ ಮೇಲೆ ತೆರಿಗೆ ಹಾಕಬಹುದಿತ್ತು. ಪುರುಷರ ಸೇವೆ ಮಾಡಿ ಎಂದು ಅ ಮಹಿಳೆಯರಿಗೆ ಬ್ರೇನ್‌ವಾಶ್ ಮಾಡುತ್ತಿರುತ್ತವೆ. ಮಹಿಳೆಯರಿಗೆ ಏಕಾಂಗಿಯಾಗಿ ಪ್ರವಾಸ ಹೋಗಲು ಪ್ರೋತ್ಸಾಹ ನೀಡಬಹುದಿತ್ತು. ಇದರಿಂದ ತೀರ್ಥಕ್ಷೇತ್ರಗಳಿಗೆ ಹೋಗಿ ಪಾದ ಸವೆಸುವುದನ್ನು ಮೂಗು ಉಜ್ಜುವುದನ್ನು ತಪ್ಪಿಸಬಹುದಿತ್ತು. ಮಹಿಳೆಯರ ವಿಚ್ಛೇದನ ಪ್ರಕರಣಗಳಲ್ಲಿ ತಕ್ಷಣ ನ್ಯಾಯ ಸಿಗಬೇಕು. ಹೀಗಾಗಿ ಕೌಟುಂಬಿಕ ವಿವಾದಗಳನ್ನು 3-4 ತಿಂಗಳಲ್ಲಿಯೇ ಇತ್ಯರ್ಥಗೊಳಿಸಲು ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಬಹುದಿತ್ತು. ಮಹಿಳೆಯರಿಗಾಗಿ ವಿಶೇಷ ಪೊಲೀಸ್ ಪಡೆ ರಚಿಸಿ, ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಬಹುದಿತ್ತು.
ನಿರ್ಮಲಾರ ಇಡೀ ಬಜೆಟ್ ದೊಡ್ಡ ಉದ್ಯಮಗಳನ್ನು ಕೇಂದ್ರೀಕರಿಸಿದೆ. ಮಹಿಳೆಯೊಬ್ಬರು ಮಹಿಳೆಯರಿಗೆ ಆಶಾಕಿರಣವಾಗಿದ್ದಾರೆಂದು ಇದರಿಂದ ಅನ್ನಿಸುವುದೇ ಇಲ್ಲ. ಅವರು ಹಿಂದೆ ರಕ್ಷಣಾ ಸಚಿವೆಯಾಗಿದ್ದಾಗ ಬಿಜೆಪಿಯ ರಕ್ಷಣೆ ಮಾಡುವುದನ್ನು ಬಿಟ್ಟರೆ, ಮಹಿಳೆಯರ ಸುರಕ್ಷತೆ ಹಾಗೂ ಸೈನಿಕರ ಮಹಿಳೆಯರಿಗೆ ಸಂಬಂಧಪಟ್ಟಂತೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲಿಲ್ಲ. ಉಜ್ವಲಾ ಯೋಜನೆಯನ್ನು ಉಳ್ಳವರಿಗೆ ಅಥವಾ ವ್ಯಾಪಾರ ನಡೆಸುವವರಿಗೆ ಕೊಟ್ಟು 1 ಲಕ್ಷ ರೂ. ಸಾಲ ಕೊಡುವುದಾಗಿ ಕಾಗದದಲ್ಲಿ ಭರವಸೆ ಕೊಡಲಾಗಿದೆ. ಅದರಿಂದ ಮೇಜು ಕುಟ್ಟಿದ ಶಬ್ದ ಕೇಳಿಬಂತು. ಆದರೆ ವರ್ಷದ ಕೊನೆಯತನಕ ಏನೂ ಆಗಲಾರದು.
ಬಿಜೆಪಿ ಮುಖಂಡರ ಅಚ್ಚುಮೆಚ್ಚಿನ ಸ್ಮೃತಿ ಇರಾನಿಯ ಇಲಾಖೆಗೆ ಹೆಚ್ಚುವರಿ ಹಣ ನೀಡಲಾಗಿದೆ. ಅದು ಮಂತ್ರಿ ಮತ್ತು ಅಧಿಕಾರಿಗಳ ಜೇಬಿಗೆ ಸಾಕಾಗುತ್ತದೆ ಅಷ್ಟೇ.
ನಿರ್ಮಲಾ ಸೀತಾರಾಮನ್ ಸೀರೆ ಉಟ್ಟಿರುವುದರ ಹೊರತಾಗಿ ಪುರುಷವಾದಿ ಸಮಾಜದ ಅದೇ ಧೋರಣೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮದೇ ಜನರ ಕಾಳಜಿಯಿದೆ ಹೊರತು ಸಾಮಾನ್ಯ ಮಹಿಳೆಯರ ಬಗ್ಗೆ ಕಿಂಚಿತ್ತೂ ಇಲ್ಲ.