9 ವರ್ಷದ ಪುಟ್ಟ ಹುಡುಗಿ ಸೈನಾ ಬ್ಯಾಡ್ಮಿಂಟನ್ ರಾಕೆಟ್ ಹಿಡಿದು ದಿಟ್ಟ ಹೆಜ್ಜೆ ಮುಂದಿಟ್ಟಿದ್ದು ನಿಜಕ್ಕೂ ಪ್ರಶಂಸನೀಯ! ಆ ಕಾಲದಲ್ಲಿ ಆ ವಯಸ್ಸಿನ ಹುಡುಗಿಯರು ಸಣ್ಣ ಬೊಂಬೆ ಹಿಡಿದು ಆಡುತ್ತಿದ್ದುದೇ ಹೆಚ್ಚು. ಆದರೆ ಸೈನಾ ಮಾತ್ರ ಈ ಆಟದಲ್ಲಿ ಒಂದಾದ ಮೇಲೆ ಒಂದರಂತೆ ಸ್ಪರ್ಧೆಗಳನ್ನು ಗೆಲ್ಲುತ್ತಾ ತಾನು ಸಾಧಾರಣ ಹುಡುಗಿಯಲ್ಲ ಎಂದು ನಿರೂಪಿಸಿದರು. ಅರ್ಜುನ ಹಕ್ಕಿಯ ಕಣ್ಣಿನ ಮೇಲೆ ದೃಷ್ಟಿ ಇಟ್ಟಂತೆ ಈಕೆ ತನ್ನ ಗುರಿಯತ್ತಲೇ ಗಮನವಿಟ್ಟರು. ಹೊಸಬರು ಈ ಆಟಕ್ಕೆ ಬರುವುದಾದರೆ ಅವರು 3-4 ವರ್ಷದವರಿರುವಾಗಲೇ ಇದನ್ನು ಆರಂಭಿಸಬೇಕೆಂದು ಸಲಹೆ ನೀಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು, ಬಹುಕಾಲ ಆ ವರ್ಚಸ್ಸು ಉಳಿಸಿಕೊಳ್ಳಲು ಇದು ಅಡಿಪಾಯ ಎನ್ನುತ್ತಾರೆ.
ಇವರ ತಂದೆ ವಿಜ್ಞಾನಿ, ತಾಯಿ ಗೃಹಿಣಿ. ಒಬ್ಬ ಅಕ್ಕ, ಅಣ್ಣ ಇದ್ದಾರೆ. 3ನೇ ಮಗುವಾಗಿ ಮತ್ತೆ ಹೆಣ್ಣು ಹುಟ್ಟಿದಾಗ ಕುಟುಂಬದವರು ಸಂತೋಷವಾಗಿ ಏನೂ ಸ್ವಾಗತಿಸಲಿಲ್ಲವಂತೆ. ಮುಖ್ಯವಾಗಿ ಅಜ್ಜಿ ಮತ್ತೆ ಹೆಣ್ಣು ಹುಟ್ಟಿತಲ್ಲ ಎಂದು ಹಲುಬಿದ್ದೇ ಹೆಚ್ಚು. ಭಾರತೀಯ ಪುರುಷ ಪ್ರಧಾನ ಸಮಾಜದಲ್ಲಿ, ಅದರಲ್ಲೂ ಹರಿಯಾಣಾದಂಥ ಹಿಂದುಳಿದ ರಾಜ್ಯದಲ್ಲಿ ಇಂಥ ಸನ್ನಿವೇಶ ಅಸಹಜವಲ್ಲ. ಆದರೆ ಸೈನಾ ತಮ್ಮ ಅಪೂರ್ವ ಸಾಧನೆಯಿಂದ ಯಾವುದೇ ಕುಟುಂಬ, ರಾಜ್ಯ, ದೇಶಕ್ಕೇ ಹೆಮ್ಮೆ ತರುವ ಹೆಣ್ಣಾಗಿ ಮಗು ಗಂಡೇ ಆಗಿರಬೇಕೆಂಬ ಮೂಢನಂಬಿಕೆಯವರಿಗೆ ಚಳಿ ಬಿಡಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ದುರ್ಬಲ ಎಂದೇ ಬಿಂಬಿಸಲಾಗುತ್ತದೆ, ಆದರೆ ಬ್ಯಾಡ್ಮಿಂಟನ್‌ನಲ್ಲಿ ಈಕೆ ದಿನೇ ದಿನೇ ಹೊಸ ಹೊಸ ಕೀರ್ತಿ ಸ್ಥಾಪಿಸುತ್ತಾ ಆ ಮಾತನ್ನು ಸುಳ್ಳಾಗಿಸಿದ್ದಾರೆ.
ಸೈನಾರ ಯಶಸ್ಸಿನ ಕಥೆ ಎಷ್ಟು ರೋಚಕ ಎಂದರೆ, ಈಗ ಈಕೆ ಕುರಿತು ಬಯೋಪಿಕ್ ಚಿತ್ರ ನಿರ್ಮಿಸಲು ಬಾಲಿವುಡ್ ಮುಂದಾಗಿದೆ. ಅದರಲ್ಲಿ ಪರಿಣಿತಿ ಚೋಪ್ರಾ ಈಕೆಯ ಪಾತ್ರ ವಹಿಸಲಿದ್ದಾರೆ.
ಯಶಸ್ಸಿನ ಕ್ರೆಡಿಟ್
ಸೈನಾ ತಮ್ಮ ಯಶಸ್ಸಿನ ಪೂರ್ತಿ ಕ್ರೆಡಿಟ್‌ನ್ನು ತಮ್ಮ ತಾಯಿತಂದೆಯರಿಗೆ ಸಲ್ಲಿಸುತ್ತಾರೆ. ಈಕೆಯ ತಾಯಿ ಉಷಾದೇವಿ ಇವರ ಪ್ರತಿಯೊಂದು ಸಣ್ಣಪುಟ್ಟ ಅಗತ್ಯಗಳನ್ನೂ ಪೂರೈಸುತ್ತಾ ಇವರ ಪಾಲಿಗೆ ಫ್ರೆಂಡ್, ಫಿಲಾಸಫರ್, ಗೈಡ್ ಆಗಿದ್ದಾರೆ. ತನ್ನ ಫಿಟ್ನೆಸ್ ಬಗ್ಗೆ ಸೈನಾ ಬಹಳ ಕಾಳಜಿ ವಹಿಸುತ್ತಾರೆ. ತಮ್ಮ ಮನೆಯಲ್ಲೇ ಒಂದು ಪುಟ್ಟ ಜಿಮ್ ಮಾಡಿಕೊಂಡಿದ್ದಾರೆ. ಸದಾ ಜಿಮ್ ಉಪಕರಣ ಬಳಸುತ್ತಾ ಫಿಟ್ ಆಗಿರುತ್ತಾರೆ. ಯಾವ ಸ್ಥಾನವೇ ಇರಲಿ, ಕ್ಷೇತ್ರ ಯಾವುದೇ ಇರಲಿ, ಅಲ್ಲಿ ಟಾಪ್ 1 ಆಗಿರಲು ಸತತ ಪರಿಶ್ರಮ ಪಡುತ್ತಲೇ ಇರಬೇಕಾಗುತ್ತದೆ.
ಹೆಣ್ಣಾದ ಕಾರಣ ಈಕೆಗೆ ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಹಿತಾನುಭ ಆಗಿದೆ. ಕೋಚ್ ಮತ್ತಿತರರು ಹೆಚ್ಚಿನ ಕಾಳಜಿ ತೋರಿದ್ದಾರೆ. ಜಾಹೀರಾತುಗಳೂ ಧಾರಾಳ ದೊರಕಿವೆ. ಈಕೆಯ ಪ್ರಕಾರ, ಹೆಣ್ಣಿನ ಸ್ಥಿತಿಯಲ್ಲಿ ಹಿಂದಿಗಿಂತಲೂ ಸತತ ಸುಧಾರಣೆ ಆಗುತ್ತಿದೆ. ಆದರೂ ಸಹ, ಹೆಣ್ಣಿಗೆ ಗಂಡಿನಷ್ಟೇ ಸಮಾನತೆ ನೀಡುವಲ್ಲಿ ಸಮಾಜ ಇನ್ನೂ ಎಷ್ಟೋ ಬದಲಾಯಿಸಬೇಕಿದೆ. ಕೇವಲ ಕಾನೂನು ಕಟ್ಟಳೆಗಳಿಂದ ಈ ಕಾರ್ಯ ನಡೆಯದು, ಮುಂದೆ ಬರಲು ಹೆಂಗಸರೂ ಸಹ ಸತತ ಪರಿಶ್ರಮ ಪಡಬೇಕು.
ಯಶಸ್ಸಿನ ಪಾಲುದಾರರು
ಈಕೆಯ ಆಟೋಟಗಳನ್ನು ಸುಧಾರಿಸುವಲ್ಲಿ ಕೋಚ್ ಮತ್ತು ಮಾರ್ಗದರ್ಶಕರು ಹೆಚ್ಚು ಆಸಕ್ತಿ ತೋರಿದ್ದಾರೆ. ವಿದೇಶಿ ಟ್ರೇನರ್‌ಗಳ ಕುರಿತು ಪ್ರಶ್ನಿಸಿದಾಗ, ಅವರ ಯೋಗ್ಯತೆಗಿಂತಲೂ ಮುಖ್ಯವಾದುದು ಅವರ ನಿಷ್ಠೆ ಎನ್ನುತ್ತಾರೆ. ಭಾರತೀಯ ಟ್ರೇನರ್‌ಗಳ ನೆರವಿನಿಂದಲೇ ಈಕೆ 2009 ಹಾಗೂ 2010ರಲ್ಲಿ ಇಂಡೋನೇಷ್ಯಾ ಓಪನ್ ಮತ್ತು ಸಿಂಗಾಪುರ್ ಓಪನ್ ಸ್ಪರ್ಧೆಗಳಲ್ಲಿ ಗೆದ್ದರು. ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಸ್ವರ್ಣ ಪದಕ ಪಡೆದ ಇವರ ಮ್ಯಾಚ್‌ನ್ನು ಮರೆತವರುಂಟೇ? ಇದರ ಶ್ರೇಯಸ್ಸನ್ನು ಈಕೆ ತಮ್ಮ ತರಬೇತುದಾರರು ಹಾಗೂ ಮಾತಾಪಿತರ ಪ್ರೋತ್ಸಾಹಕ್ಕೆ ನೀಡುತ್ತಾರೆ.
ರೋಝರ್ ಫೆಡ್ರರಲ್ ಹಾಗೂ ಸಚಿನ್ ತೆಂಡೂಲ್ಕರ್ ಈಕೆಯ ಆದರ್ಶ ವ್ಯಕ್ತಿಗಳು. ತಾನು ಬ್ಯಾಡ್ಮಿಂಟನ್ ಸಚಿನ್ ಆಗಬಯಸುತ್ತಾರೆ. ಈಕೆ ವಿಶ್ವದ ಘಟಾನುಘಟಿ ಕ್ರೀಡಾಪಟುಗಳೊಂದಿಗೆ ಹೋರಾಡಿದ್ದಾರೆ, ಆದರೆ ಎಂದೂ ಯಾರಿಗೂ ಹೆದರಿದವರಲ್ಲ. ಈಕೆ ಪ್ರತಿ ಮ್ಯಾಚ್‌ಗೂ ಬಹಳ ಕಠಿಣ ಪರಿಶ್ರಮಕ್ಕೆ ತೊಡಗುತ್ತಾರೆ. ಸತತ ಸಕಾರಾತ್ಮಕ ಧೋರಣೆಯೊಂದಿಗೆ ತನ್ನ 100% ಎಫರ್ಟ್ಸ್ ನೀಡುತ್ತಾರೆ. ಪ್ರತಿದಿನ ಈಕೆ 8 ಗಂಟೆ ಕಾಲ ಪ್ರಾಕ್ಟೀಸ್ ಮಾಡುತ್ತಾರೆ. ಇದಲ್ಲದೆ ವ್ಯಾಯಾಮಕ್ಕಾಗಿ ಬೇರೆ ಸಮಯ ನಿಗದಿ ಇರುತ್ತದೆ.
ಇಷ್ಟಾನಿಷ್ಟಗಳು
ಹೊಸ ಬಗೆಯ ಫ್ಯಾಷನ್ ಈಕೆಗೆ ಹೆಚ್ಚು ಇಷ್ಟ. ಭಾರತೀಯ, ವೆಸ್ಟರ್ನ್ ಎರಡೂ ಬಗೆಯ ಉಡುಪು ತೊಡುವ ಇವರಿಗೆ ಒಡವೆಗಳಲ್ಲೂ ಅಷ್ಟೇ ಆಸಕ್ತಿ ಇದೆ. ವಜ್ರಾಭರಣಗಳು ಎಂದರೆ ವಿಶೇಷ ಪ್ರೀತಿ. ಅಡುಗೆ ಮಾಡುವುದು ಎಂದರೆ ಈಕೆಗೆ ಒಲ್ಲದ ಕೆಲಸ. ಮನೆಯ ಕೆಲಸ ಕಾರ್ಯಗಳೆಲ್ಲ ತಾಯಿಯದೇ ಜವಾಬ್ದಾರಿಯಾದ್ದರಿಂದ ಅಂಥ ಚಟುವಟಿಕೆ ಅಷ್ಟಕ್ಕಷ್ಟೆ. ಮೂಲತಃ ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಸೇರಿದ ಸೈನಾ ಅದನ್ನೇ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ಈಕೆಯದು ಅಂತರ್ಮುಖಿ ಸ್ವಭಾವ, ಹೆಚ್ಚು ಪಟಪಟ ಮಾತನಾಡುವವರಲ್ಲ. ಹೀಗಾಗಿ ಗೆಳತಿಯರೂ ಕಡಿಮೆ, ಸಮಯಾಭಾವ ಮತ್ತೊಂದು ಕಾರಣ. ತಾಯಿ ತಂದೆಯರೇ ಬೆಸ್ಟ್ ಫ್ರೆಂಡ್ಸ್. ಮದುವೆ ಕುರಿತು ಪ್ರಶ್ನಿಸಿದಾಗ, ನಗುನಗುತ್ತಾ ಈಕೆ ಟಾಪಿಕ್ ಬದಲಾಯಿಸಿದರು. ತಾಯಿಯ ಸಲಹೆ ಎಂದರೆ ಹಿರಿಯರು ಆರಿಸಿದ ವರನನ್ನೇ ಮಗಳು ಮದುವೆ ಆಗುತ್ತಾಳೆ.
ಹಿಂದಿ ಸಿನಿಮಾ ನೋಡಲು ಇಷ್ಟ, ಆದರೆ ಎಂದೂ ಬಾಲಿವುಡ್ ಎಂಟ್ರಿ ಬಗ್ಗೆ ಯೋಚಿಸಿದ್ದೇ ಇಲ್ಲವಂತೆ. ಖಾನ್‌ತ್ರಯರ ಜೊತೆ ನಟಿಸುವ ಅವಕಾಶ ಸಿಕ್ಕರೆ ಆಗ ನೋಡೋಣ ಎನ್ನುತ್ತಾರೆ. ಜೀವನದಲ್ಲಿ ಹಣದ ಮಹತ್ವ ಅರಿತಿರುವ ಈಕೆ, ತನಗಾಗಿ ಕೆಲವು ಸೀಮಾರೇಖೆ ಹಾಕಿಕೊಂಡಿದ್ದಾರೆ, ಅದನ್ನೆಂದೂ ಅತಿಕ್ರಮಿಸುವುದಿಲ್ಲವಂತೆ.
ಇಂದು ಸೈನಾ ಒಬ್ಬ ಮಹಾನ್ ಸೆಲೆಬ್ರಿಟಿ. ಆದರೆ ಅದು ಆಕೆಯ ಖಾಸಗಿ ಬದುಕಿನ ಮೇಲೆ ವಿಶೇಷ ಪ್ರಭಾವ ಬೀರಿಲ್ಲ. ಆಕೆಗೆ ಆತ್ಮವಿಶ್ವಾಸ ಹೆಚ್ಚು. ಸಾರ್ವಜನಿಕ ರೂಪದಿಂದ ಜನ ಇವರನ್ನು ಗುರುತಿಸ ತೊಡಗಿದ್ದಾರೆ. ಹೊಸ ಆಟಗಾರರು ಇವರನ್ನು ಆದರ್ಶವಾಗಿಸಿಕೊಂಡು ಹೀಗೇ ಆಗಬಯಸುತ್ತಾರೆ. ಇದೆಲ್ಲ ಈಕೆಗೆ ಬಲು ಇಷ್ಟ! ಉದಯೋನ್ಮುಖ ಕ್ರೀಡಾಪಟುಗಳಿಗೆ ಈಕೆಯದು ಒಂದೇ ಸಂದೇಶ, ಹೆಚ್ಚು ಹೆಚ್ಚು ಪರಿಶ್ರಮ ಪಡಬೇಕು.
– ಪ್ರತಿನಿಧಿ