ಅರುಣ್‌ : ಛೇ….ಛೇ! ನಾನು ತಪ್ಪು ಮಾಡಿಬಿಟ್ಟೆ. ನಾನು ಈ ರಾಧಾಳನ್ನು ಮದುವೆ ಆಗುವ ಬದಲು ಅವಳಿಗಿಂತ 1 ವರ್ಷ ಚಿಕ್ಕವಳಾದ ಅವಳ ತಂಗಿ ಸುಧಾಳನ್ನೇ ಮದುವೆ ಆಗಿರಬೇಕಿತ್ತು.

ವರುಣ್‌ : ಮೊನ್ನೆ ನಿನ್ನ ಷಡ್ಡಕ ಅದೇ ಸುಧಾಳ ಗಂಡ ಸೋಮು ಸಿಕ್ಕಿದ್ದ. ಅವನೂ ಅದೂ ಇದೂ ಮಾತನಾಡುತ್ತಾ ಎಂಥ ವಿಷಯ ಹೇಳಿದ ಗೊತ್ತಾ…..?

ಅರುಣ್‌ : ಏನಂದ ಅವನು……?

ವರುಣ್‌ : ಹೋಗಿ ಹೋಗಿ ಈ ಸುಧಾಳನ್ನು ಮದುವೆ ಆಗುವ ಬದಲು ಮೊದಲೇ ಅವಳಕ್ಕ ರಾಧಾಳನ್ನು ಭೇಟಿ ಆಗಿದ್ದರೆ ಅವಳನ್ನೇ ಮದುವೆ ಆಗುತ್ತಿದ್ದೆ. ಆಗ ಎಷ್ಟೋ ಸುಖವಾಗಿರುತ್ತಿದ್ದೆ.

ಅರುಣ್‌ : ಅಷ್ಟೇ ಅಂತೀಯಾ…?

ವರುಣ್‌ : ಹ್ಞೂಂ ಮತ್ತೆ….. ದೂರದ ಬೆಟ್ಟ ನೋಡಲು ನುಣ್ಣಗೆ ಅನ್ನೋದು ಇದಕ್ಕೆ!

ಅರ್ಧ ರಾತ್ರಿ ದಾಟಿತ್ತು. ಇದ್ದಕ್ಕಿದ್ದಂತೆ ಕಾಲೋನಿಯ ಜನ ಜೋರು ಸದ್ದಿನಲ್ಲಿ ಗಲಾಟೆ ಮಾಡುತ್ತಾ ಹುಯಿಲೆಬ್ಬಿಸಿದ್ದರು. ರತ್ನಾಳಿಗೆ ಗಾಬರಿ ಆಯ್ತು. ತಕ್ಷಣ ಗಂಡ ಸೋಮುವನ್ನು ಎಬ್ಬಿಸಿದಳು. ಸೋಮಾರಿ ಏಳುವಷ್ಟರಲ್ಲಿ 10 ನಿಮಿಷ ತಡವಾಗಿತ್ತು.

ರತ್ನಾ : ಹೋಗ್ರಿ… ಬೇಗ ಹೊರಗೆ ಹೋಗಿ ಅದೇನು ಗಲಾಟೆ ಅಂತ ನೋಡ್ರಿ, ಕಳ್ಳ ಬಂದಿದ್ದಾನೋ ಏನು ಕರ್ಮವೋ…..?

ಸೋಮು : ಅಯ್ಯೋ ಹೋಗ್ತೀನಿ ಇರೆ…. ನೆಮ್ಮದಿಯಾಗಿ ನಿದ್ದೆ ಮಾಡಲಿಕ್ಕೂ ಬಿಡಲ್ಲ…

ಸೋಮು ಹೊರಗೆ ಹೋಗಿ ನೋಡುತ್ತಾನೆ, ಜನ ದಿಕ್ಕಾ ಪಾಲಾಗಿ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಾ ಕಿರುಚಾಡುತ್ತಿದ್ದರು.

ಸೋಮು : ಏನ್ರಿ ಆಯ್ತು? ಇಷ್ಟು ಹೊತ್ತಿನಲ್ಲಿ ಏನಿದು ಗಲಾಟೆ?

ರಾಮು : ಅಯ್ಯೋ…. ನಿಮಗೆ ವಿಷಯ ಗೊತ್ತಿಲ್ಲವೋ? ನಮ್ಮ ಏರಿಯಾದ ಕುಡಿಯುವ ನೀರಿನ ಟ್ಯಾಂಕಿಗೆ ಯಾರೋ ವಿಷ ಬೆರೆಸಿದ್ದಾರೆ. ಯಾರೂ ಈಗ ಕೊಳಾಯಿ ನೀರು ಕುಡಿಯಬಾರದು, ಕೆಲವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಅವರಲ್ಲಿ ಗೊಟಕ್‌ ಅಂದಿದ್ದೂ ಆಯ್ತು!

ವಿಷಯ ತಿಳಿದ ಸೋಮು ಬೇಗ ಮನೆ ಸೇರಿ ಮಲಗುವ ತಯಾರಿ ನಡೆಸಿದ.

ರತ್ನಾ : ಏನಂತ್ರಿ ಅದು ಅಷ್ಟು ಗಲಾಟೆ? ಕಳ್ಳತನ…. ಲೂಟಿ….

ಸೋಮು : ಏನೂ ಇಲ್ಲ ಕಣೆ, ಹೊತ್ತು ಹೋಗದ ಜನ. ಇಲಿ ಬಂತು ಅಂದ್ರೆ ಹುಲಿ ಬಂತು ಅಂತಾರೆ. ಬೇಗ  2 ಲೋಟ ನೀರು ಕುಡಿದು ಹಾಯಾಗಿ ಮಲಗಿಬಿಡು.

ಅಪರೂಪಕ್ಕೆ ಮಾವ ಅಳಿಯನಿಗೆ ಫೋನ್‌ ಮಾಡಿದರು.

ಮಾವ : ಏನ್‌ ಸ್ವಾಮಿ ಅಳಿಯಂದ್ರೆ…. ಏನು ಮಾಡುತ್ತಿದ್ದೀರಿ?

ಅಳಿಯ : ತಾಳಿದವನು ಬಾಳಿಯಾನು ಎಂದು ಸಹಿಸುತ್ತಿದ್ದೇನೆ.

ಗುಂಡ ಡೈವೋರ್ಸ್‌ಗಾಗಿ ಕೋರ್ಟಿಗೆ ಅರ್ಜಿ ಹಾಕಿದ್ದ.

ಜಡ್ಜ್ : ನಿಮಗೆ ಯಾಕ್ರಿ ಬೇಕು ಡೈವೋರ್ಸ್‌?

ಗುಂಡ : ಸ್ವಾಮಿ, ಇಂಥ ಹೆಂಡ್ತೀನಾ ನಾನಿನ್ನು ಸಹಿಸಿಕೊಳ್ಳಲಾರೆ, ಸಾಕಾಗಿದೆ.

ಜಡ್ಜ್ : ಏನಂಥ ಕಾಟ ಕೊಟ್ಟಳು?

ಗುಂಡ : ಪ್ರತಿದಿನ ರಾತ್ರಿ ಮನೆಯಿಂದ ಕಾಣೆಯಾಗಿ ಎಲ್ಲೋ ಮಾಯವಾಗಿರ್ತಾಳೆ. ಒಂದು ಡ್ಯಾನ್ಸ್ ಬಾರ್‌ನಿಂದ ಇನ್ನೊಂದಕ್ಕೆ, ಅಲ್ಲಿಂದ ಮತ್ತೊಂದಕ್ಕೆ….. ಹೀಗೆ ಬೆಂಗಳೂರಿನ ಎಲ್ಲಾ ಡ್ಯಾನ್ಸ್ ಬಾರ್‌ಗಳನ್ನೂ ಒಂದೂ ಬಿಡದಂತೆ ಎಡತಾಕುತ್ತಾಳೆ.

ಜಡ್ಜ್ : ಆದರೆ ಅವಳೇಕೆ ಹಾಗೆ ಮಾಡುತ್ತಾಳೆ?

ಗುಂಡ : ಒಂದಿಲ್ಲ ಒಂದು ಕಡೆ ನಾನು ಸಿಕ್ಕಿಬೀಳ್ತೀನಿ ಅಂತ ಅವಳಿಗೆ ಚೆನ್ನಾಗಿ ಗೊತ್ತಿದೆ.

ಟಿವಿಯಲ್ಲಿ ಯಾವುದೋ ಕೆಟ್ಟ ಅಶ್ಲೀಲ ಚಿತ್ರ ಬರುತ್ತಿತ್ತು. ಅದನ್ನು ನೋಡಿ ತಂದೆಗೆ ಸಹಿಸಲು ಆಗಲಿಲ್ಲ. ಅವರು ರೇಗುತ್ತಾ ಹೇಳಿದರು, “ಛೇ…ಛೇ…. ಇವು ಎಂಥ ಹೊಲಸು ಚಿತ್ರಗಳು…. ನಮ್ಮ ಕಾಲದಲ್ಲಿ ಎಂತೆಂಥ ಒಳ್ಳೆಯ ಚಿತ್ರಗಳು ಬರುತ್ತಿದ್ದವು ಗೊತ್ತಾ?”

ಅದನ್ನು ನೋಡಿ ಕಾಲೇಜು ಕಲಿಯುತ್ತಿದ್ದ ಮಗಳಿಗೆ ಕೆಟ್ಟ ಕೋಪ ಬಂದಿತು. ಅವಳು ತಕ್ಷಣ ತಂದೆ ಕಡೆ ಹೇಳಿಯೇ ಬಿಟ್ಟಳು, “ಸುಮ್ನೆ ಇರಪ್ಪ ಸಾಕು ಕಂಡಿದ್ದೀನಿ….. ಈಗ `ಮೀ ಟೂ’ ಆಂದೋಲನದಲ್ಲಿ ಸಿಕ್ಕಿಬೀಳುತ್ತಿರುವವರೆಲ್ಲ ನಿಮ್ಮ ಕಾಲದವರೆ ಅಂತ ಮರೆಯಬೇಡಿ!”

ಇಬ್ಬರು ಗೆಳೆಯರ ನಡುವೆ `ಮೀ ಟೂ’ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿತ್ತು.

ಸತೀಶ್‌ : ಈಗಿನ ಆಧುನಿಕ ಕಾಲದಲ್ಲಿ ಈ ಮಹಿಳೆಯರು `ಮೀ ಟೂ’ ಹೆಸರಿನಲ್ಲಿ ಬೇಕಾದಷ್ಟು ಲಾಭ ಪಡೆಯುತ್ತಾ, ಗಂಡಸರ ಮಾನ 3 ಕಾಸಿಗಿಲ್ಲದಂತೆ ಹರಾಜು ಹಾಕುತ್ತಿದ್ದಾರೆ…..

ಗಿರೀಶ್‌ : ಅದು ಗೊತ್ತಿರುವ ವಿಚಾರ ತಾನೇ? ಅದಕ್ಕೆ ಏನೀಗ?

ಸತೀಶ್‌ : ಅದೇ ಗಂಡಸರೂ ಸಹ `ಯೂ ಟೂ’ ಅಂತ ಕ್ಯಾಂಪೇನ್‌ ಶುರು ಮಾಡಿದರೆ ಈ ಹೆಂಗಸರ ಗತಿ ಏನಾಗುತ್ತೆ ಗೊತ್ತಾ?

ಗಿರೀಶ್‌ : ಏನಾಗುತ್ತೆ ಅಂತೀಯಾ?

ಸತೀಶ್‌ : ಒಂದಲ್ಲ…. ಎರಡಲ್ಲ, ಹೇಳ್ತೀನಿ ಕೇಳು.

ಪತಿವ್ರತೆಯರ ಪೋಸ್‌ ನೀಡುತ್ತಿರುವ ಎಷ್ಟೋ ಸಿನಿಮಾ ನಾಯಕಿಯರು ಮೂರ್ಛೆ ಹೋಗುತ್ತಾರೆ.

ಎಷ್ಟೋ ಸಿನಿ ತಾರೆಯರ ವೈವಾಹಿಕ ಜೀವನ ಮಟಾಶ್‌ ಆಗುತ್ತದೆ!

ಕೆರಿಯರ್‌ ಮೇಲೆ ದುಷ್ಪರಿಣಾಮ ತಪ್ಪಿದ್ದಲ್ಲ, ಅಕ್ಕಪಕ್ಕದ ಮನೆಗಳವರು ಕೆಂಗಣ್ಣು ಬೀರುತ್ತಾರೆ.

ಭೀಮನ ಅಮಾವಾಸ್ಯೆ ದಿನ ಗಂಡ ಪಾದ ಪೂಜೆಗೆ ಒಪ್ಪಿಕೊಳ್ತಾರಾ.

ಇದರ ವಿಚಾರಣೆಗಾಗಿ ಬರುವ ಫೋನ್‌ ಕಾಲ್ಸ್ ನಿಲ್ಲುವುದೇ ಇಲ್ಲ.

ಪತ್ನಿ : ನೀವು ಬಹಳ ಮುಗ್ಧ ಸ್ವಭಾವದವರು ಕಣ್ರೀ, ಯಾರು ಬೇಕಾದರೂ ನಿಮ್ಮನ್ನು ಸುಲಭವಾಗಿ ಏಮಾರಿಸಬಹುದು.

ಪತಿ : ಹ್ಞೂಂ, ಅದಂತೂ ನಿಜ. ನಿಮ್ಮಪ್ಪ ತಾನೇ ಅದನ್ನು ಮೊದಲು ಪ್ರಯೋಗಿಸಿದ್ದು…..! ಸುಖವಾಗಿದ್ದ ದಂಪತಿಗಳ ಮಧ್ಯೆ ಮೊಬೈಲ್‌ ಬಿತ್ತಿದ ವಿಷ ಬೀಜ ನೋಡಿ…..

ಪತಿ : ಇದಂತೂ ತುಂಬಾ ಅತಿ ಆಯ್ತು! ಎಷ್ಟು ಸಲ ಹೇಳೋದು ನಿನಗೆ…. ಮೊಬೈಲ್‌ ನೋಡುತ್ತಾ ಅಡುಗೆ ಮಾಡಬೇಡ ಅಂತ…. ಚಪಾತಿಗೆ ಗ್ರೇವಿ ಅಂತ ಕೊಟ್ಟಿದ್ದೀಯಾ, ಅದು ಬರೀ ನೀರಲ್ಲದೆ ಮತ್ತೇನೂ ಅಲ್ಲ!

ಪತ್ನಿ : ಇದಂತೂ ಕರ್ಮಕಾಂಡ ಆಗೋಯ್ತು….. ಊಟ  ಮಾಡುವಾಗ ಆ ದರಿದ್ರ ಮೊಬೈಲ್‌ನ್ನೇ ನೋಡುತ್ತಾ ಕೂರಬೇಡಿ ಅಂತ ಬಡ್ಕೊಂಡ್ರೆ ಕೇಳಲ್ಲ. ತಟ್ಟೆ ಪಕ್ಕದಲ್ಲಿರೋ ಗ್ರೇವಿಯಲ್ಲಿ ಚಪಾತಿ ಅದ್ದುವ ಬದಲು ನೀರಿನ ಲೋಟಕ್ಕೆ ಅದ್ದಿದರೆ ಇನ್ನೇನಾಗುತ್ತೆ?

ನರೇಂದ್ರ : ನಿನಗೊಂದು ವಿಷಯ ಗೊತ್ತೇ?

ಸುರೇಂದ್ರ : ಯಾವುದರ ಬಗ್ಗೆ ಹೇಳುತ್ತಿದ್ದೀಯಾ?

ನರೇಂದ್ರ : ನಾವು ಮಾಡಿರುವ ತಪ್ಪುಗಳನ್ನು ನೆನೆದು ಅದಕ್ಕೆ ನಾವೇ ನಗುತ್ತಿದ್ದರೆ ನಮ್ಮ ಆಯುಷ್ಯ ಹೆಚ್ಚುತ್ತದಂತೆ…. ಒಳ್ಳೇದಲ್ವಾ?

ಸುರೇಂದ್ರ : ಮತ್ತೆ…. ಇನ್ನೊಂದೇನು?

ನರೇಂದ್ರ : ಅಪ್ಪಿತಪ್ಪಿ ಹೆಂಡತಿ ಮಾಡಿದ ತಪ್ಪುಗಳನ್ನು ಪಟ್ಟಿ ಮಾಡುತ್ತಾ ಗಂಡ ನಗತೊಡಗಿದನೋ ಅಂದೇ ಅವನ ಆಯುಷ್ಯ ಫಿನಿಶ್‌!

ಇಂದ್ರಿ : ಇಷ್ಟೆಲ್ಲ ವ್ಯಾಕರಣ ಮಾತಾಡ್ತೀಯಲ್ಲ, ಎಲ್ಲಿ ನಾನು ಕೇಳು ಈ ಪ್ರಶ್ನೆಗೆ ಉತ್ತರ ಹೇಳು ನೋಡೋಣ.

ಸುಂದ್ರಿ : ಏನು ಅದು ನಿನ್ನ ಪ್ರಶ್ನೆ?

ಇಂದ್ರಿ : ಏಕವಚನ, ಬಹುವಚನ, ಪ್ರವಚನ…. ಎಲ್ಲಿ ಈ ಮೂರಕ್ಕೂ ವ್ಯತ್ಯಾಸ ಹೇಳು.

ಸುಂದ್ರಿ : ಇದೇಕೋ ಪಠ್ಯ ಪುಸ್ತಕದ ವ್ಯಾಕರಣ ಇದ್ದ ಹಾಗಿಲ್ಲ. ನೀನೇ ಹೇಳಿಬಿಡು.

ಇಂದ್ರಿ : ಇದು ಪಠ್ಯದ್ದಲ್ಲ… ಸಾಂಸಾರಿಕ ವ್ಯಾಕರಣ! ಏಕವಚನ ಅಂದ್ರೆ ಗಂಡನ ಮಾತುಗಳು, ಅಂಥ ಬೆಲೆ ಬಾಳೋದಲ್ಲ ಬಿಡು. ಬಹುವಚನ ಅಂದ್ರೆ ಹೆಂಡ್ತಿ ಹೇಳೋದು… ಏಕಕ್ಕಿಂತ ಭಾರಿ ಸ್ಟ್ರಾಂಗ್‌, ಬಲು ಬೆಲೆಯುಳ್ಳದ್ದು. ಪ್ರವಚನ ಅಂದ್ರೆ…… ಅತ್ತೆಯ ಮಾತುಗಳು!

ಸುದ್ದಿ : ಎಲ್ಲೆಲ್ಲೂ ಆರ್ಥಿಕ ಹಿಂಜರಿತ (ರೆಸಿಷನ್‌) ದಾಳಿ ಇಡುತ್ತಿದೆ…. ಎಚ್ಚರ!

ಪತ್ನಿ : ನೋಡ್ರಿ, ದಿನೇದಿನೇ ದೇಶದಲ್ಲಿ ರೆಸಿಷನ್‌ ಹೆಚ್ಚಾಗುತ್ತಿದೆ, ಇರೋ ಹಣ ಬ್ಯಾಂಕಿಗೆ ಹಾಕ್ಬೇಡಿ, ಮುಳುಗಿಹೋಗುತ್ತೆ. ಬದಲು ನನ್ನ ಕೈಗೇ ಕೊಟ್ಬಿಡಿ, ಶಾಪಿಂಗ್‌ ಮಾಡ್ಕೋತೀನಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ